ಇದು ಸಂತನ ಮನಸ್ಸು – ಯಾವುದನ್ನೂ ಆಯ್ಕೆ ಮಾಡಿಕೊಳ್ಳದಿರುವುದು, ಯಾವುದನ್ನೂ ಅಪೇಕ್ಷಿಸದಿರುವುದು, ಹೀಗಾಗಬೇಕು ಹೀಗಾಗಬಾರದು ಎಂದು ಚಿಂತಿಸದಿರುವುದು… | ಓಶೋ ರಜನೀಶ್; ಕನ್ನಡಕ್ಕೆ: ಚಿದಂಬರ ನರೇಂದ್ರ
ಒಮ್ಮೆ ಝೆನ್ ಮಾಸ್ಟರ್ ಬೋಕೊಜೋ ಒಂದು ಹಳ್ಳಿಯ ರಸ್ತೆಯಲ್ಲಿ ಪ್ರಯಾಣ ಮಾಡುತ್ತಿದ್ದಾಗ ಯಾರೋ ಒಬ್ಬ ಅಚಾನಕ್ ಆಗಿ ಎದುರಾಗಿ ಮಾಸ್ಟರ್ ನ ಬೆನ್ನ ಮೇಲೆ ಜೋರಾಗಿ ಕೋಲಿನಿಂದ ಪ್ರಹಾರ ಮಾಡಿದ. ಆ ಹೊಡೆತಕ್ಕೆ ಆಯ ತಪ್ಪಿ ಬೋಕೊಜೋ ಕೆಳಗೆ ಬಿದ್ದ, ಕೋಲು ಕೂಡ ಹೊಡೆದವನ ಕೈಯಿಂದ ಜಾರಿ ಕೆಳಗೆ ಬಿತ್ತು. ಹೊಡೆದವ ಮಾತ್ರ ಅಲ್ಲಿ ನಿಲ್ಲದೇ ಜೋರಾಗಿ ಓಡಲು ಶುರು ಮಾಡಿದ. ಮಾಸ್ಟರ್ ಎದ್ದವನೇ ಆ ಕೋಲು ಕೈಗೆತ್ತಿಕೊಂಡು ಹೊಡೆದವನ ಹಿಂದೆ ಓಡತೊಡಗಿದ, “ ನಿಲ್ಲು ನಿಲ್ಲು ನಿನ್ನ ಕೋಲು ತೆಗೆದುಕೊಂಡು ಹೋಗು “ ಕೂಗತೊಡಗಿದ.
ಮಾಸ್ಟರ್ ಓಡಿ ಹೋಗಿ ಅವನನ್ನು ತಡೆದು ನಿಲ್ಲಿಸಿ ಅವನಿಗೆ ಕೋಲು ವಾಪಸ್ ಮಾಡಿದ. ಅಷ್ಟರಲ್ಲಾಗಲೇ ಅಲ್ಲಿ ಜನ ಸೇರತೊಡಗಿದ್ದರು. ಒಬ್ಬ ದಾರಿಹೋಕ ಮಾಸ್ಟರ್ ಬೋಕೊಜು ನ ಪ್ರಶ್ನೆ ಮಾಡಿದ, “ ಮಾಸ್ಟರ್ ಈ ಮನುಷ್ಯ ನಿನಗೆ ಅಷ್ಟು ಜೋರಾಗಿ ಹೊಡೆದ ಆದರೆ ನೀನು ಅವನಿಗೆ ಒಂದು ಮಾತು ಹೇಳಲಿಲ್ಲವಲ್ಲ. “
ಆಗ ಬೋಕೊಜು ಹೇಳಿದನಂತೆ, “ ಇವನು ನನ್ನ ಹೊಡೆದದ್ದು ಮಾತ್ರ ನಿಜ, ಅವ ಹೊಡೆದ ನಾನು ಹೊಡೆಸಿಕೊಂಡೆ ಇದು ಮಾತ್ರ ನಿಜ. ಇದು ಹೇಗೆಂದರೆ ನಾನು ಮರದ ಕೆಳಗೆ ಹಾಯ್ದು ಹೋಗುತ್ತಿದ್ದಾಗ ಅಥವಾ ಮರದ ಕೆಳಗೆ ಕುಳಿತಿದ್ದಾಗ, ಮರದ ರೆಂಬೆಯೊಂದು ಮುರಿದುಕೊಂಡು ನನ್ನ ಮೇಲೆ ಬಿದ್ದಿದ್ದರೆ ನಾನು ಏನು ಮಾಡಬಹುದಾಗಿತ್ತು? “
ಆಗ ನೆರೆದಿದ್ದ ಗುಂಪು ಉತ್ತರಿಸಿತು, “ ಆದರೆ ಮರದ ರೆಂಬೆ ಮತ್ತು ಮನುಷ್ಯ ಎರಡೂ ಒಂದೇ ಅಲ್ಲವಲ್ಲ. ನಾವು ರೆಂಬೆಗೆ ಬೈಯ್ಯಬಹುದೆ? ನೀನು ದುರ್ಬಲ ಮರ ಎಂದು ಮರವನ್ನು ದೂಷಿಸಬಹುದೆ? ನಾವು ಮರ ಅಥವಾ ರೆಂಬೆಗೆ ಯಾವ ಶಿಕ್ಷೆಕೊಡಬಹುದು? ಕೊಟ್ಟರೂ ಏನು ಪ್ರಯೋಜನ? ಅವಕ್ಕೆ ಬುದ್ದಿ -ಮನಸ್ಸು (mind) ಇದೆಯಾ ?
ಮಾಸ್ಟರ್ ಬೋಕೊಜೋ ಉತ್ತರಿಸಿದ, “ ನನಗೆ ಆ ರೆಂಬೆ ಈ ಮನುಷ್ಯ ಎರಡೂ ಒಂದೇ. ನನಗೆ ರೆಂಬೆಗೆ ಬೈಯ್ಯುವುದು ಸಾಧ್ಯವಿಲ್ಲ ಎಂದರೆ, ಈ ಮನುಷ್ಯನಿಗೆ ಬೈಯ್ಯುವುದು ಹೇಗೆ ಸಾಧ್ಯ? ಒಂದು ಘಟನೆ ನಡೆದುಹೋಯಿತು. ಅದೃಷ್ಟಕ್ಕೆ ನನಗೆ ಏನೂ ಆಗಲಿಲ್ಲ. ಆ ಘಟನೆಯ ಬಗ್ಗೆ ಚಿಂತಿಸಿ ಏನು ಪ್ರಯೋಜನ? ಅವನೊಳಗಿನ ಮನುಷ್ಯತ್ವಕ್ಕೆ ಕರೆ ಕೊಡುವುದನ್ನಷ್ಟೇ ನಾನು ಮಾಡಬಹುದಾದದ್ದು. ಅವನ ಪ್ರಜ್ಞೆಯನ್ನು ಎಚ್ಚರಿಸುವುದನ್ನಷ್ಟೇ ನಾನು ಮಾಡಿದ್ಜು. ಇದಕ್ಕೂ ಮೀರಿ ಆದ ಘಟನೆಯ ಬಗ್ಗೆ ಚಿಂತಿಸಿ ಫಲವಿಲ್ಲ.”
ಇದು ಸಂತನ ಮನಸ್ಸು – ಯಾವುದನ್ನೂ ಆಯ್ಕೆ ಮಾಡಿಕೊಳ್ಳದಿರುವುದು, ಯಾವುದನ್ನೂ ಅಪೇಕ್ಷಿಸದಿರುವುದು, ಹೀಗಾಗಬೇಕು ಹೀಗಾಗಬಾರದು ಎಂದು ಚಿಂತಿಸದಿರುವುದು. ಅವನ ಜೊತೆ ಏನೇ ಆದರೂ ಅವನು ಅದನ್ನು ಟೋಟ್ಯಾಲಿಟಿಯಲ್ಲಿ ಸ್ವೀಕರಿಸುತ್ತಾನೆ. ಇಂಥ ಸ್ವೀಕಾರ ಅವನಿಗೆ ಸ್ವಾತಂತ್ರ್ಯವನ್ನು ನೀಡುತ್ತದೆ, ಇಂಥ ಸ್ವೀಕಾರ ಅವನಿಗೆ ಬದುಕನ್ನ ಗ್ರಹಿಸುವ ಸಾಮರ್ಥ್ಯವನ್ನು ನೀಡುತ್ತದೆ. ಆಗಬೇಕು, ಆಗಬಾರದು, ಭಾಗ ಮಾಡುವುದು, ತೀರ್ಪು ಹೇಳುವುದು, ಖಂಡಿಸುವುದು, ಹೊಗಳುವುದು ಎಲ್ಲವೂ ದೃಷ್ಟಿ ದೋಷಗಳು.
ಲೇಖನ ಇಷ್ಟವಾಯಿತೇ? ದೇಣಿಗೆ ನೀಡಿ, ಪ್ರೋತ್ಸಾಹಿಸಿ…

