ಪರಮಹಂಸರು ಹೇಳಿದ ಮೂರು ಗೊಂಬೆಗಳ ದೃಷ್ಟಾಂತ

ರಾಮಕೃಷ್ಣ ಪರಮಹಂಸರು ಹೇಳಿದ ದೃಷ್ಟಾಂತ ಕಥೆ; ಸಂಗ್ರಹ ಮತ್ತು ಅನುವಾದ: ಚಿದಂಬರ ನರೇಂದ್ರ

ಮೂರು ಬೊಂಬೆಗಳಿದ್ದವು. ಮೊದಲನೇಯದ್ದನ್ನ ಉಪ್ಪಿನಿಂದ ಮಾಡಲಾಗಿದ್ದರೆ ಎರಡನೇಯದನ್ನ ಬಟ್ಟೆಯಿಂದ ತಯಾರಿಸಲಾಗಿತ್ತು ಹಾಗು ಮೂರನೇಯದ್ದನ್ನ ಕಲ್ಲಿನಿಂದ ಕೆತ್ತಲಾಗಿತ್ತು.

ಈ ಮೂರು ಬೊಂಬೆಗಳನ್ನ ನೀರಿನಲ್ಲಿ ಮುಳುಗಿಸಿದಾಗ, ಉಪ್ಪಿನಿಂದ ಮಾಡಲ್ಪಟ್ಟ ಮೊದಲ ಬೊಂಬೆ ನೀರಿನಲ್ಲಿ ಸಂಪೂರ್ಣವಾಗಿ ಕರಗಿಹೋಗಿ ತನ್ನ ಆಕಾರವನ್ನ ಕಳೆದುಕೊಂಡಿತು.

ಬಟ್ಟೆಯಿಂದ ತಯಾರಿಸಲ್ಪಟ್ಟ ಎರಡನೇಯ ಬೊಂಬೆ, ಬಹಳಷ್ಟು ನೀರನ್ನ ತನ್ನೊಳಗೆ ಹೀರಿಕೊಂಡಿತಾದರೂ ತನ್ನ ಆಕಾರವನ್ನ ಹಾಗೇ ಉಳಿಸಿಕೊಂಡಿತು.

ಕಲ್ಲಿನಿಂದ ಕೆತ್ತಲ್ಪಟ್ಟ ಮೂರನೇ ಬೊಂಬೆ, ನೀರಿನಿಂದ ಒದ್ದೆಯಾಯಿತೇನೋ ಹೌದು ಆದರೆ ಬೇಗ ಒಣಗಿ ಪುನಃ ಮೊದಲಿನಂತಾಯಿತು.

ಉಪ್ಪಿನ ಬೊಂಬೆ, ತನ್ನನ್ನು ತಾನು ಬ್ರಹ್ಮಾಂಡದಲ್ಲಿ ಒಂದಾಗಿಸಿಕೊಳ್ಳುವ ಮತ್ತು ಬ್ರಹ್ಮಾಂಡದ ಚೈತನ್ಯವನ್ನು ತನ್ನೊಳಗೆ ಒಟ್ಟಾಗಿ ಧರಿಸುವ ಮನುಷ್ಯನನ್ನು ಪ್ರತಿನಿಧಿಸುತ್ತದೆ. ಇವನು ಮುಕ್ತ ಮನುಷ್ಯ.

ಬಟ್ಟೆಯಿಂದ ಮಾಡಿದ ಬೊಂಬೆ, ಭಕ್ತನನ್ನ , ದೇವರ ನಿಜವಾದ ಪ್ರೇಮಿಯನ್ನ ಸಂಕೇತಿಕರಿಸುತ್ತದೆ. ಇವನು ತನ್ನ ಅಸ್ತಿತ್ವವನ್ನು ಉಳಿಸಿಕೊಳ್ಳುತ್ತಲೇ, ಜ್ಞಾನವನ್ನ, ದೈವಿ ಆನಂದವನ್ನ, ಸುತ್ತಣ ಬದುಕಿನಿಂದ ಹೀರಿಕೊಂಡು ಅನುಭವಿಸುತ್ತಾನೆ.

ಕಲ್ಲಿನಿಂದ ಮಾಡಿದ ಬೊಂಬೆ, ಲೌಕಿಕದಲ್ಲಿ ತನ್ನ ತಾನು ಕಳೆದುಕೊಂಡಿರುವ ಮನುಷ್ಯ. ಹೊರಜಗತ್ತಿಗೆ ಜ್ಞಾನಿಯಾಗಿ ಕಂಡರೂ ಅದ್ಯಾವುದು ಅವನ ಹೃದಯವನ್ನು ಮುಟ್ಟುವುದಿಲ್ಲ.

Unknown's avatar

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

Leave a Reply

This site uses Akismet to reduce spam. Learn how your comment data is processed.