ತ್ಯಜಿಸುವಿಕೆ, ಮಹಾ ಬಯಕೆಯ ಸಾಧನೆಗಾಗಿ ಮಾತ್ರ… | ಓಶೋ

ಜ್ಞಾನೋದಯವನ್ನ ಬೇರೆಲ್ಲೋ ಹುಡುಕಬೇಡಿ, ನಿಮ್ಮ ನೈಜ ಅಸ್ತಿತ್ವ ಕ್ಕೆ ಮರಳಿ ಬನ್ನಿ. ಜ್ಞಾನೋದಯ ಅಲ್ಲಿ ನಿಮಗಾಗಿ ಕಾಯುತ್ತಿದೆ. ಮುಟ್ಟುವ, ಸಾಧಿಸುವ ಎಲ್ಲ ಬಯಕೆಗಳನ್ನು ತ್ಯಜಿಸಿದ ಕ್ಷಣದಲ್ಲಿಯೇ ನಿಮಗೆ ಜ್ಞಾನದ ಸಾಕ್ಷಾತ್ಕಾರ ಆಗುವುದು… | ಓಶೋ ರಜನೀಶ್; ಕನ್ನಡಕ್ಕೆ: ಚಿದಂಬರ ನರೇಂದ್ರ

ಮೀನಿನ ಬಲೆಯ ಕೆಲಸ
ಮೀನು ಹಿಡಿಯುವುದು ಮಾತ್ರ
ಮೀನು ಸಿಕ್ಕ ಮೇಲೆ
ಬಲೆಗೆ ಏನು ಕೆಲಸ?

ಶಬ್ದ ದ ಉದ್ದೇಶವೇ
ವಿಷಯ ತಿಳಿಸುವುದು
ವಿಷಯ ತಿಳಿದ ಮೇಲೆ
ಶಬ್ದಗಳಿಗೇನು ಕೆಲಸ?

ಶಬ್ದಗಳನ್ನು ಮರೆತ ಮನುಷ್ಯ
ಎಲ್ಲಿ ಸಿಗುತ್ತಾನೆ?
ಕೊಂಚ ಮಾತಾಡಬೇಕಲ್ಲ
ಅವನೊಂದಿಗೆ.

~ ಜುವಾಂಗ್-ತ್ಸೆ


ಸಾವಿರಾರು ಬಯಕೆಗಳಿಂದ ಮತ್ತರಾಗಿರುವ ನಿಮ್ಮೆದರು ಕುಳಿತು ನಾನು ಮಾತನಾಡುತ್ತಿದ್ದೇನೆ. ನಾನು ನಿಮಗೆ ಈ ಬಯಕೆಗಳೆಲ್ಲವನ್ನೂ ಬಿಟ್ಟು ಬಿಡಲು ಹೇಳುತ್ತಿದ್ದೇನೆ. ನೀವು ಕೂಡ ಈ ಬಯಕೆಗಳ ತ್ಯಾಗಕ್ಕೆ ಸಿದ್ಧರಾಗಿರುವಿರಿ, ನಾನು ಈ ಬಯಕೆಗಳಿಗೆ ಪರ್ಯಾಯವೆಂಬಂತೆ ಬೇರೆ ಏನೋ ಒಂದನ್ನು ನಿಮಗೆ ಸೂಚಿಸಿದರೆ, ಮಾತ್ರ, ಬಹುಶಃ ಒಂದು ಮಹಾ ಬಯಕೆ. ನಾನು ನಿಮಗೆ ಒಂದು ಮಹಾ ಗುರಿಯನ್ನು ಪರ್ಯಾಯವಾಗಿ ಸೂಚಿಸಿದರೆ ನಿಮ್ಮನ್ನು ತುಂಬಿಕೊಂಡಿರುವ ಸಾವಿರಾರು ಸಣ್ಣ ಪುಟ್ಟ ಬಯಕೆಗಳನ್ನು ತ್ಯಜಿಸಲು ನೀವು ಸಿದ್ಧರಾಗಿರುವಿರಿ ಎನ್ನುವುದರಲ್ಲಿ ನನಗೆ ಯಾವ ಅನುಮಾನವಿಲ್ಲ.

ಆಸೆಗಳಿಂದ ಮುಕ್ತರಾಗಲು ನೀವು ಸಿದ್ಧ ಆದರೆ ಈ ತ್ಯಜಿಸುವಿಕೆ ಒಂದು ಮಹಾ ಬಯಕೆಯ ಸಾಧನೆಗಾಗಿ ಮಾತ್ರ. ಇಂಥ ಮಹಾ ಪರ್ಯಾಯವನ್ನ ನಾನಂತೂ ನಿಮಗೆ ಸೂಚಿಸಲಾರೆ. ಮಹಾ ಗುರಿಯ ಪರ್ಯಾಯವನ್ನು ಸೂಚಿಸುವುದೆಂದರೆ ನಿಮ್ಮನ್ನು ಇನ್ನಷ್ಟು ಮತ್ತಷ್ಟು ಗುಲಾಮಗಿರಿಗೆ ನೂಕುವುದು. ಆದ್ದರಿಂದಲೇ ಝೆನ್ ಸಾಧಕರು ಹೇಳುತ್ತಾರೆ ಜ್ಞಾನೋದಯ ಎನ್ನುವುದು ಒಂದು ದುಸ್ವಪ್ನ. ಬುದ್ದ ಆಗಲು ಪ್ರಯತ್ನ ಮಾಡಬೇಡಿ, ಹೀಗೆ ಮಾಡುವದೆಂದರೆ ರೌರವ ನರಕವನ್ನು ಬಯಸಿದಂತೆ. ಆತ್ಯಂತಿಕ ಸತ್ಯವನ್ನು ಮುಟ್ಟುವ ಬಯಕೆ ಬೇಡ, ನಿಮ್ಮ ಈ ಬಯಕೆಯೇ ನಿಮ್ಮ ಸಾಧನೆಗೆ ದೊಡ್ಡ ಅಡ್ಡಗಾಲು. ಜ್ಞಾನೋದಯದ ಬಯಕೆ, ನಿರ್ವಾಣದ ಆಸೆ, ಆತ್ಯಂತಿಕ ಸತ್ಯದ ಕುರಿತಾದ ಹಟ ಎಲ್ಲವೂ ನಿಮ್ಮ ಸಾಧನೆಯ ಹಾದಿಯ ಕಲ್ಲು ಮುಳ್ಳುಗಳೇ.

ನೀವು ನನ್ನಿಂದ ಒಂದು ಮಹಾ ಬಯಕೆಯನ್ನ ನಿರೀಕ್ಷಿಸುತ್ತಿದ್ದೀರಿ. ದಪ್ಪ ಅಕ್ಷರಗಳಲ್ಲಿ ಬರೆಯಬಹುದಾದ ಮಹಾ ಬಯಕೆ, ಈ ಆತ್ಯಂತಿಕ ಬಯಕೆಯೊಳಗೆ ನಿಮ್ಮ ಎಲ್ಲ ಇತರೆ ಬಯಕೆಗಳನ್ನು ಸುರಿದು ಮುಕ್ತರಾಗಬೇಕು ಎಂದುಕೊಂಡಿದ್ದೀರಿ. ಆದರೆ ನಾನು ನಿಮಗೆ ಸೂಚಿಸುತ್ತಿರುವುದು ಈ ಮಹಾ ಪರ್ಯಾಯವನ್ನು ಕೂಡ ಬಿಟ್ಟು ಬಿಡಲು. ಆಗ ಮಾತ್ರ ನೀವು ನಿಜದಲ್ಲಿ ಬಯಕೆಗಳಿಂದ ಮುಕ್ತರು. ಬಯಕೆಗಳಿಂದ ಮುಕ್ತರಾಗುವುದೇ ಜ್ಞಾನೋದಯ.

ಜ್ಞಾನೋದಯ ಎನ್ನುವುದು ಎಲ್ಲೊ ಒಂದು ಕಡೆ ನಿಮಗಾಗಿ ಕಾಯುತ್ತಿರುವ ಸಂಗತಿಯಲ್ಲ. ನೀವು ಈಗಾಗಲೇ ಅಲ್ಲಿದ್ದೀರಿ. ಜ್ಞಾನೋದಯ ಎಲ್ಲ ಕಡೆಯಿಂದಲೂ ನಿಮ್ಮನ್ನು ಸುತ್ತುವರೆದಿದೆ. ಅದು ನಿಮ್ಮ ಒಳಗೆ ಇದೆ, ನಿಮ್ಮ ಹೊರಗೆ ಇದೆ, ನಿಮ್ಮ ಹೃದಯದ ಪ್ರತಿ ಬಡಿತದಲ್ಲೂ ತುಂಬಿಕೊಂಡಿದೆ. ಆದರೆ ನೀವು ಅದನ್ನು ಬೇರೆ ಎಲ್ಲೋ, ಭವಿಷ್ಯದಲ್ಲಿ, ಇನ್ನಾವುದೋ ಗ್ರಹದಲ್ಲಿ ಹುಡುಕುತ್ತಿದ್ದೀರಿ.

ಜ್ಞಾನೋದಯವನ್ನ ಬೇರೆಲ್ಲೋ ಹುಡುಕಬೇಡಿ, ನಿಮ್ಮ ನೈಜ ಅಸ್ತಿತ್ವ ಕ್ಕೆ ಮರಳಿ ಬನ್ನಿ. ಜ್ಞಾನೋದಯ ಅಲ್ಲಿ ನಿಮಗಾಗಿ ಕಾಯುತ್ತಿದೆ. ಮುಟ್ಟುವ, ಸಾಧಿಸುವ ಎಲ್ಲ ಬಯಕೆಗಳನ್ನು ತ್ಯಜಿಸಿದ ಕ್ಷಣದಲ್ಲಿಯೇ ನಿಮಗೆ ಜ್ಞಾನದ ಸಾಕ್ಷಾತ್ಕಾರ ಆಗುವುದು. ಜ್ಞಾನೋದಯ ಪ್ರಯಾಣ ವಲ್ಲ, ನಿಮ್ಮ ಅಸ್ತಿತ್ವದ ತಿರುಳಿನ ಬಗ್ಗೆ ಅರಿವು ಹೊಂದುವುದು.

ಪೌರ್ವಾತ್ಯ ದೇಶಗಳಲ್ಲಿ ಮಂಗಗಳನ್ನು ಹಿಡಿಯಲು ಒಂದು ಕುತೂಹಲಕಾರಿ ಪದ್ಧತಿಯನ್ನು ಉಪಯೋಗಿಸಲಾಗುತ್ತದೆ.

ಒಂದು ತೆಂಗಿನಕಾಯಿನ್ನು ಖಾಲಿ ಮಾಡಿ ಅದನ್ನ ಮರಕ್ಕೆ ಜೋತು ಬಿಡುತ್ತಾರೆ. ಆ ತೆಂಗಿನಕಾಯಿಯಲ್ಲಿ ರಂಧ್ರ ಕೊರೆದು ಅದರಲ್ಲಿ ಒಂದಿಷ್ಟು ಅನ್ನ ತುಂಬುತ್ತಾರೆ. ತೆಂಗಿನಕಾಯಿಯಲ್ಲಿ ಕೊರೆದ ರಂಧ್ರ ಎಷ್ಟು ದೊಡ್ಡದಾಗಿರುತ್ತದೆ ಎಂದರೆ, ಒಂದು ಮಂಗದ ಕೈ ಒಳಗೆ ಹೋಗುವಷ್ಟು ಮಾತ್ರ.

ಹಸಿದ ಮಂಗ , ಜೋತು ಬಿಟ್ಟ ತೆಂಗಿನಕಾಯಿ ನೋಡಿ, ಮರ ಏರಿ , ಆ ಕೊರೆದ ರಂಧ್ರದಲ್ಲಿ ಕೈ ಹಾಕಿ , ಅದರೊಳಗಿನ ಅನ್ನವನ್ನು ತನ್ನ ಮುಷ್ಟಿಯಲ್ಲಿ ಗಟ್ಟಿಯಾಗಿ ಹಿಡಿದುಕೊಂಡು ಕೈ ಹೊರ ತೆಗೆಯಲು ಪ್ರಯತ್ನಿಸುತ್ತದೆ. ಆದರೆ ಸಾಧ್ಯವಾಗುವುದೇ ಇಲ್ಲ. ಆಗಲೇ ಮಂಗ ಸಿಕ್ಕಿಹಾಕಿಕೊಳ್ಳುತ್ತದೆ.

ತಾನು ಕೈಯಲ್ಲಿ ಹಿಡಿದುಕೊಂಡಿರುವುದೇ ತನ್ನನ್ನು ಸಿಕ್ಕಿ ಹಾಕಿಸಿದೆ ಅನ್ನೋದು ಕೊನೆಗೂ ಗೊತ್ತೇ ಆಗುವುದಿಲ್ಲ ಆ ಮಂಗನಿಗೆ.


Source
O.s.h.o.
Dang Dang Doko Dang
Talks on Zen
Chapter_8: Another Sunday

Unknown's avatar

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

Leave a Reply

This site uses Akismet to reduce spam. Learn how your comment data is processed.