ನಿಮ್ಮ ಒಪ್ಪಿಗೆ ಇಲ್ಲದೇ ನಿಮ್ಮನ್ನ ಯಾರೂ ಹರ್ಟ್ ಮಾಡುವುದು ಸಾಧ್ಯವಿಲ್ಲ. ನಮಗಾಗಿರುವುದು ನಮ್ಮನ್ನ ಹರ್ಟ್ ಮಾಡುವುದಿಲ್ಲ, ನಮಗಾಗಿರುವುದಕ್ಕೆ ನಾವು ನೀಡುವ ಪ್ರತಿಕ್ರಿಯೆ ನಮ್ಮನ್ನ ಹರ್ಟ್ ಮಾಡುತ್ತದೆ… | ಚಿದಂಬರ ನರೇಂದ್ರ
ಮಾರ್ಟಿನ್ ಲೂಥರ್ ಕಿಂಗ್ ಒಂದು ಘಟನೆಯನ್ನ ನೆನಪಿಸಿಕೊಳ್ಳುತ್ತಾರೆ…
ಅಮೇರಿಕದ ಅಧ್ಯಕ್ಷ ಅಬ್ರಹಾಂ ಲಿಂಕನ್ ಅವರ ತಂದೆ ಚಪ್ಪಲಿ, ಶೂ ತಯಾರಿಸುವ ಕೆಲಸ ಮಾಡುತ್ತಿದ್ದರು. ಚಪ್ಪಲಿ ಹೊಲಿಯುವವನ ಮಗ ಅಮರಿಕೆಯ ಅಧ್ಯಕ್ಷನಾದಾದ ಸಹಜವಾಗಿಯೇ ಕೆಲ ಸೊಕ್ಕಿನ ಬಿಳಿಯರ ಕಣ್ಣುಗಳು ಕೆಂಪಾದವು. ಅಧಿಕಾರ ವಹಿಸಿಕೊಂಡ ಮೊದಲ ದಿನ ಅಮೇರಿಕೆಯ ಸೆನೆಟ್ ನಲ್ಲಿ ಲಿಂಕನ್ ಭಾಷಣ ಮಾಡುತ್ತಿದ್ದಾಗ, ಒಬ್ಬ ಸೊಕ್ಕಿನ ಮನುಷ್ಯ ಎದ್ದು ನಿಂತು ಕೂಗಿದ,
“ಮಿಸ್ಟರ್ ಪ್ರಸಿಡೆಂಟ್ ನಿಮ್ಮ ಅಪ್ಪ ನಮ್ಮ ಫ್ಯಾಮಿಲಿಗೆ ಶೂ ತಯಾರು ಮಾಡಿಕೊಡುತ್ತಿದ್ದರು, ಇದನ್ನು ನೀವು ಮರೆಯಬೇಡಿ”.
ಸುತ್ತ ನೆರೆದಿದ್ದ ಎಲ್ಲರೂ ಅವನ ಮಾತನ್ನ ಬೆಂಬಲಿಸುವವರಂತೆ ಮೇಜು ಕುಟ್ಟಿ ಗಹಗಹಿಸಿ ನಕ್ಕರು.
ಆದರೆ ಕೆಲ ಜನ ವಿಶಿಷ್ಟರಾಗಿರುತ್ತಾರೆ, ಅವರನ್ನು ವಿಶೇಷವಾಗಿ ನಿರ್ಮಿಸಲಾಗಿರುತ್ತದೆ. ಲಿಂಕನ್ ಆ ಸೊಕ್ಕಿನ ಮನುಷ್ಯನ ಕಣ್ಣಲ್ಲಿ ಕಣ್ಣಿಟ್ಟು ನೋಡುತ್ತ ಹೇಳಿದರು,
“ಹೌದು ನನ್ನ ಅಪ್ಪ ನಿಮ್ಮ ಫ್ಯಾಮಿಲಿಗೆ ಶೂ ತಯಾರು ಮಾಡಿ ಕೊಡುತ್ತಿದ್ದ. ನಿಮ್ಮ ಫ್ಯಾಮಿಲಿ ಅಷ್ಟೇ ಅಲ್ಲ ಇಲ್ಲಿ ನೆರೆದಿರುವ ಇನ್ನೂ ಕೆಲವು ಜನರ ಫ್ಯಾಮಿಲಿಯ ಶೂ ಗಳನ್ನ ನನ್ನ ಅಪ್ಪ ತಯಾರಿಸುತ್ತಿದ್ದ. ಅವನ ಹಾಗೆ ಶೂ ತಯಾರಿಸುವವರು ಸುತ್ತ ಮುತ್ತ ಯಾರೂ ಇಲ್ಲ. ಆತ ಒಬ್ಬ ದೊಡ್ಡ ಕಲಾವಿದ, ಶೂ ತಯಾರಿಸುವ ಕೆಲಸದಲ್ಲಿ ತನ್ನ ಸಮಸ್ತವನ್ನೂ ಧಾರೆ ಎರೆಯುತ್ತಿದ್ದ. ನಾನು ನಿಮಗೆ ಕೇಳ್ತಾ ಇದ್ದೀನಿ, ಅವನ ಶೂ ಗಳ ಬಗ್ಗೆ ನಿಮ್ಮದೇನಾದರೂ ಕಂಪ್ಲೇಂಟ್ ಇದೆಯಾ? ಇದ್ದರೆ ಹೇಳಿ. ನನಗೂ ಶೂ ತಯಾರಿಸುವುದು ಗೊತ್ತು. ನಾನು ನಿಮ್ಮ ಶೂಗಳನ್ನ ತಯಾರು ಮಾಡಿಕೊಡುತ್ತೇನೆ. ಈವರೆಗೆ ನನ್ನ ಅಪ್ಪ ತಯಾರಿಸಿದ ಶೂಗಳ ಬಗ್ಗೆ ಯಾರೂ ತಕರಾರು ಮಾಡಿಲ್ಲ. ನನ್ನ ಅಪ್ಪ ಒಬ್ಬ ಜೀನಿಯಸ್ ಶೂ ತಯಾರಕ, ಅವನ ಬಗ್ಗೆ ನನಗೆ ಹೆಮ್ಮೆ ಇದೆ”.
ಸೆನೆಟ್ ನ ಜನ ಲಿಂಕನ್ ಮಾತು ಕೇಳಿ ತಲೆ ತಗ್ಗಿಸಿದರು.
ನಿಮ್ಮ ಒಪ್ಪಿಗೆ ಇಲ್ಲದೇ ನಿಮ್ಮನ್ನ ಯಾರೂ ಹರ್ಟ್ ಮಾಡುವುದು ಸಾಧ್ಯವಿಲ್ಲ. ನಮಗಾಗಿರುವುದು ನಮ್ಮನ್ನ ಹರ್ಟ್ ಮಾಡುವುದಿಲ್ಲ, ನಮಗಾಗಿರುವುದಕ್ಕೆ ನಾವು ನೀಡುವ ಪ್ರತಿಕ್ರಿಯೆ ನಮ್ಮನ್ನ ಹರ್ಟ್ ಮಾಡುತ್ತದೆ.
ಹಡಗುಗಳು ಸಮುದ್ರದಲ್ಲಿ ಮುಳುಗುವುದು ತನ್ನ ಸುತ್ತಲಿನ ನೀರಿನ ಕಾರಣಕ್ಕಲ್ಲ, ಹಡಗಿನೊಳಗೆ ನುಸುಳಿ ಸೇರಿಕೊಂಡ ನೀರಿನ ಕಾರಣಕ್ಕೆ. ನಿಮ್ಮ ಸುತ್ತ ನಡೆಯುತ್ತಿರುವುದಕ್ಕೆ ನಿಮ್ಮೊಳಗೆ ಪ್ರವೇಶ ನೀಡಿ ನಿಮ್ಮನ್ನ ಭಾರ ಮಾಡಿಕೊಳ್ಳಬೇಡಿ. ನೀವು ಖಾಲಿ ಆಗಿದ್ದುಕೊಂಡಷ್ಟು ಹೊರಗಿನದನ್ನು ಎದುರಿಸಲು ಹೆಚ್ಚು ಶಕ್ತಿಶಾಲಿಗಳಾಗುವಿರಿ.
ನೀವು ಇಷ್ಟಪಟ್ಟು ಯಾವ ಕೆಲಸ ಮಾಡಿದರೂ ಅದು ಮೈಕೆಲ್ ಎಂಜಲೋನ ಪೇಂಟಿಂಗ್ ಥರ ಇರಬೇಕು, ಬಿಥೋವನ್ ಸಂಯೋಜನೆ ಮಾಡಿದ ಸಂಗೀತದ ರೀತಿ ಇರಬೇಕು, ಶೇಕ್ಸ್ ಪಿಯರ್ ಬರೆದ ಕಾವ್ಯದ ಹಾಗೆ ಇರಬೇಕು. ವೀವು ಮಾಡಿದ ಕೆಲಸ ಹೇಗೆ ಇರಬೇಕೆಂದರೆ, ಸ್ವರ್ಗ ಮತ್ತು ಭೂಮಿಯ ಅತಿಥಿಗಳು ತಮ್ಮ ಮೂಗಿನ ಮೇಲೆ ಬೆರಳಿಟ್ಟುಕೊಂಡು ಹೇಳಬೇಕು,
“ ಓಹ್ ಇಲ್ಲೊಬ್ಬ ದೇವರು ಇದ್ದಾನೆ!”

