“ನೀವು ಬುಕ್ ಮಾಡಿರುವ ಎಲ್ಲ ಟಿಕೇಟ್ ಗಳನ್ನ ಕ್ಯಾನ್ಸಲ್ ಮಾಡಿ, ನೀವು ಎಲ್ಲಿಗೂ ಹೋಗಬೇಕಿಲ್ಲ.
ನೀವು ಹುಡುಕುತ್ತಿರುವ ವಾಸ್ತವ ಇಲ್ಲಿಯೇ ಇದೆ, ನಿಮ್ಮೊಳಗೇ ಇದೆ” ಅನ್ನುತ್ತಾರೆ ಓಶೋ. ~ ಚಿದಂಬರ ನರೇಂದ್ರ
ಲಾವೊತ್ಸೆ ಪದ್ಯವೊಂದು ಹೀಗಿದೆ…
ನೋಡಿದರೆ ಕಾಣಿಸದು
ಕೇಳಿದರೆ ಕೇಳಿಸದು
ಮುಟ್ಟಿದರೆ ನಿಲುಕದು
ಇನ್ನೂ ಮುಂದೆ ವರ್ಣಿಸುವುದು
ಆಗದ ಮಾತು
ಅಂತೆಯೇ ಇದು ಮೂರಲ್ಲ, ಒಂದು.
ತಲೆ ಮೇಲೆ ಬೆಳಕಿಲ್ಲ
ಕಾಲ ಕೆಳಗೆ ಕತ್ತಲೆಯಿಲ್ಲ
ಆರಂಭ, ಕೊನೆ, ಹೆಸರು ಒಂದೂ ಇಲ್ಲ.
ರೂಹಿಲ್ಲದ ರೂಹು
ಪ್ರತಿಬಂಬವಿಲ್ಲದ ಬಿಂಬ
ಕಾಣಿಸದಷ್ಟು ಸೂಕ್ಷ್ಮ, ಕಾಣದಷ್ಟು ಅಪಾರ
ಶುರುವಿನ ಗೆರೆಯಿಲ್ಲ, ಮುಟ್ಟುವ ದಾರವಿಲ್ಲ
ರುಚಿಯ ಬಲ್ಲವರಿಲ್ಲ, ರುಚಿ ಆದವರು ಸಾಕಷ್ಟು
ದಾರಿಯಲ್ಲಿ ಹೆಜ್ಜೆ ಹಾಕುತ್ತ ಹೋದಂತೆ
ಜೊತೆಯಾಗುತ್ತ ಹೋಗುತ್ತದೆ
‘ಸಧ್ಯ’
ಓಶೋ ಹೇಳುತ್ತಾರೆ, “ನೀವು ಬುಕ್ ಮಾಡಿರುವ ಎಲ್ಲ ಟಿಕೇಟ್ ಗಳನ್ನ ಕ್ಯಾನ್ಸಲ್ ಮಾಡಿ, ನೀವು ಎಲ್ಲಿಗೂ ಹೋಗಬೇಕಿಲ್ಲ” ಎಂದು.
ಅವರು ಹೇಳುವಂತೆ, “ಅಲ್ಲಿಗೆ” (there) ಎನ್ನುವುದು ಮೈಂಡ್ ನ ಒಂದು ಮೋಸಗಾರಿಕೆಯ ತಂತ್ರ. ಮೈಂಡ್ ಯಾವಾಗಲೂ ನಿಮ್ಮಲ್ಲಿ, ದೂರ ಇರುವ ಸಂಗತಿಗಳ ಬಗ್ಗೆ ಕೂತೂಹಲ ಹುಟ್ಟಿಸುತ್ತದೆ, ಅಲ್ಲಿಗೆ ಹೋಗಬೇಕು. ಹಾಗೆಂದರೆ ಇಲ್ಲಿಂದ, ಸಧ್ಯದಿಂದ, ವರ್ತಮಾನದಿಂದ ನೀವು ಜಾಗ ಖಾಲೀ ಮಾಡಬೇಕು. ಕೊನೆಪಕ್ಷ ನಿಮ್ಮ ಗಮನವನ್ನ ಸಧ್ಯದಿಂದ ಮುಂದೆ, ಅಲ್ಲಿಗೆ ವರ್ಗಾಯಿಸಬೇಕು. ಆದರೆ ಅಲ್ಲಿಗೆ ಹೋಗುವುದು ಯಾವತ್ತೂ ಸಾಧ್ಯವಿಲ್ಲ ನಿಮ್ಮ ಅಲ್ಲಿಗೆ ಎನ್ನುವುದು, ಪ್ರಯಾಣ ಮುಂದುವರೆದಂತೆಲ್ಲ ಶಿಫ್ಟ್ ಆಗುತ್ತಾ ಇರುತ್ತದೆ. ಇಲ್ಲಿಂದ ಅಲ್ಲಿಗೆ ಹೋಗುವ ದಾರಿಯಲ್ಲಿ ನೀವು ನಿಧಾನವಾಗಿ ಮುಂದೆ ಮುಂದೆ ನೋಡುವ ಚಟವನ್ನು ಅಂಟಿಸಿಕೊಂಡುಬಿಟ್ಟಿರುತ್ತೀರಿ. ನೀವು ಮೊದಲಿನ ನಿರ್ಧರಿತ ಜಾಗ ಮುಟ್ಟಿದಾಗ ನಿಮ್ಮ ಗೋಲ್ ಶಿಫ್ಟ ಆಗಿರುತ್ತದೆ.
ಭಾರತದಲ್ಲಿ “ದೀಪದ ಕೆಳಗೆ ಕತ್ತಲೆ” ಎನ್ನುವ ಹಳೆಯ ಗಾದೆ ಮಾತು ಇದೆ. ದೀಪ, ಸುತ್ತ ಮುತ್ತ ಬೆಳಕನ್ನು ಹರಡುತ್ತಿದೆಯೇನೋ ನಿಜ, ಆ ಎಕ್ಸ್ಯಾಕ್ಟ್ಲೀ ಆ ದೀಪದ ಕೆಳಗೆ ಕತ್ತಲೆ ಇದೆ. ಮನುಷ್ಯನ ಪರಿಸ್ಥಿತಿಯೂ ಹೀಗೇ ಆಗಿದೆ. ನಿಮಗೆ ಸುತ್ತ ಮುತ್ತ, ದೂರ ದೂರದವರೆಗೂ ನೋಡುವ ಸಾಮರ್ಥ್ಯವಿದೆ, ಆದರೆ ಇರುವ ಜಾಗದ ಬಗ್ಗೆ ನೀವು ಅಜ್ಞಾನಿಗಳು, ಸ್ವತಃ ನೀವು ಯಾರು? ಏನು? ಎನ್ನುವುದರ ಕುರಿತಾಗಿ ನಿಮಗೆ ತಿಳುವಳಿಕೆಯಿಲ್ಲ.
ಆದ್ದರಿಂದ “ನೀವು ಬುಕ್ ಮಾಡಿರುವ ಎಲ್ಲ ಟಿಕೇಟ್ ಗಳನ್ನ ಕ್ಯಾನ್ಸಲ್ ಮಾಡಿ, ನೀವು ಎಲ್ಲಿಗೂ ಹೋಗಬೇಕಿಲ್ಲ.
ನೀವು ಹುಡುಕುತ್ತಿರುವ ವಾಸ್ತವ ಇಲ್ಲಿಯೇ ಇದೆ, ನಿಮ್ಮೊಳಗೇ ಇದೆ” ಅನ್ನುತ್ತಾರೆ ಓಶೋ.
ಅಲ್ಲಿಗೆ ಮತ್ತು ಆಮೇಲೆ ಎನ್ನುವುದು ಕಾಲ್ಪನಿಕ.
ಇಲ್ಲಿ ಮತ್ತು ಈಗ ಎನ್ನುವುದು ಮಾತ್ರ ಸತ್ಯ.
ಒಮ್ಮೆ ಮುಲ್ಲಾ ನಸ್ರುದ್ದೀನ, ರೈಲು ಪ್ರಯಾಣ ಮಾಡುತ್ತಿದ್ದ. ತನ್ನ ಕಂಪಾರ್ಟಮೆಂಟ್ ಗೆ ಟಿಕೇಟ್ ಕಲೆಕ್ಟರ್ ಬರುತ್ತಿರುವುದನ್ನ ದೂರದಿಂದ ಗಮನಿಸಿದ ಮುಲ್ಲಾ, ಸಹ ಪ್ರಯಾಣಿಕರ ಜೇಬುಗಳಲ್ಲಿ, ಚೀಲಗಳಲ್ಲಿ ತನ್ನ ಟಿಕೇಟ್ ಹುಡುಕತೊಡಗಿದ.
ಮುಲ್ಲಾನ ಈ ವರ್ತನೆಯನ್ನು ನೋಡಿ ಆಶ್ಚರ್ಯಚಕಿತನಾದ ಸಹ ಪ್ರಯಾಣಿಕನೊಬ್ಬ ಪ್ರಶ್ನೆ ಮಾಡಿದ.
“ ಹಿರಿಯರೆ ನಿಮ್ಮ ಟಿಕೇಟು ನಿಮ್ಮ ಜೇಬು ಅಥವಾ ನಿಮ್ಮ ಚೀಲದಲ್ಲಿರಬೇಕಲ್ಲವೆ? ನೀವು ಅಲ್ಲಿ ಬಿಟ್ಟು ಬೇರೆಲ್ಲ ಕಡೆ ಹುಡುಕುತ್ತಿದ್ದೀರಲ್ಲ? “
“ ಹೌದು ನಾನು ಅಲ್ಲಿ ಹುಡುಕಬಹುದಿತ್ತು ಆದರೆ ಟಿಕೇಟ್ ಅಲ್ಲಿ ಸಿಗದಿದ್ದರೆ ನನ್ನ ಎಲ್ಲ ಭರವಸೆಯೂ ನಾಶವಾಗಿ ಬಿಡುತ್ತದಲ್ಲ “
ಮುಲ್ಲಾ ಉತ್ತರಿಸಿದ.
Source
Osho – Sermons in Stones – Chapter #15
Chapter title: Cancel your ticket, there’s nowhere to go!

