“ಸತ್ಯ, ಶಿವ, ಸುಂದರ ಈ ಮೂರರಲ್ಲಿ ನೀವು ಒಂದನ್ನು ಸಾಧಿಸಿಕೊಂಡರೂ ಬಾಕಿ ಎರಡು ನಿಮ್ಮನ್ನು ಹಿಂಬಾಲಿಸುತ್ತವೆ ಏಕೆಂದರೆ ಇವು ಒಂದನ್ನು ಬಿಟ್ಚು ಒಂದು ಇರುವುದು ಸಾಧ್ಯವಿಲ್ಲ” ಅನ್ನುತ್ತಾರೆ ಓಶೋ. | ಚಿದಂಬರ ನರೇಂದ್ರ
ಹೂವುಗಳ ಮೇಲೆ ಹಾರಿ ಹಾರಿ
ಸುಗಂಧಿತವಾಗಿದೆ
ಈ ಪಾತರಗಿತ್ತಿಯ ಪಕ್ಕ.
~ ಬಾಶೋ
“ಝೆನ್ ಎನ್ನುವುದು ಸೌಂದರ್ಯದ ಧರ್ಮ… religion of beauty” ಅನ್ನುತ್ತಾರೆ ಓಶೋ.
ಆತ್ಯಂತಿಕ ಸತ್ಯದ ಕುರಿತಾದ ಉಪನಿಷತ್ತಿನ ವಾಕ್ಯ ನಮಗೆ ಗೊತ್ತು, ಸತ್ಯಂ ಶಿವಂ ಸುಂದರಂ. ಮನುಷ್ಯ ತನ್ನ ಅಸ್ತಿತ್ವದ ಸತ್ಯವನ್ನು ಕಂಡುಕೊಳ್ಳುವ ಮೂಲಕ ಆತ್ಯಂತಿಕವನ್ನು ತಲುಪಬಹುದು ಇದು ಸತ್ಯಂ ಅಥವಾ,
ತನ್ನ ಅಸ್ತಿತ್ವದೊಳಗಿನ ದೈವತ್ವವನ್ನು ಗುರುತಿಸಿಕೊಳ್ಳುವ ಮೂಲಕ ಇದು ಶಿವಂ ಅಥವಾ, ತನ್ನ ಅಸ್ತಿತ್ವದ ಅಪಾರ ಚೆಲುವನ್ನು ಕಂಡುಕೊಳ್ಳುವ ಮೂಲಕ, ಇದು ಸುಂದರಂ.
ಝೆನ್ ಸೌಂದರ್ಯದ ಧರ್ಮ. ವಿಚಿತ್ರ ಆದರೂ ವಾಸ್ತವ. ಸತ್ಯ, ಶಿವ, ಸುಂದರ ಈ ಮೂರರಲ್ಲಿ ನೀವು ಒಂದನ್ನು ಸಾಧಿಸಿಕೊಂಡರೂ ಬಾಕಿ ಎರಡು ನಿಮ್ಮನ್ನು ಹಿಂಬಾಲಿಸುತ್ತವೆ ಏಕೆಂದರೆ ಇವು ಒಂದನ್ನು ಬಿಟ್ಚು ಒಂದು ಇರುವುದು ಸಾಧ್ಯವಿಲ್ಲ. ಈ ಮೂರೂ ಬೇರೆ ಬೇರೆ ಅಲ್ಲ ಒಂದೇ, ಮೂರು ದೃಷ್ಟಿಯಿಂದ ನೋಡಿದ ಒಂದೇ ಆತ್ಯಂತಿಕ.
ಚೆಲುವು ಹೃದಯದ ಬಡಿತ ಆಗುರುವುದರಿಂದ ಝೆನ್ ಹೆಚ್ಚು ಸೃಷ್ಟಿಶೀಲವಾಗಿದೆ. ಝೆನ್ ನಿಂದಾಗಿಯೇ ಅದ್ಭುತ ಕಾವ್ಯ , ಅನನ್ಯ ಪೇಂಟಿಂಗ್ ಗಳು ಸೃಷ್ಟಿಯಾಗಿವೆ. ಝೆನ್ ನಿಂದಾಗಿಯೇ ಸಾಮಾನ್ಯ ಸಂಗತಿಗಳಾಗಿದ್ದ, ಬಿಲ್ಲುಗಾರಿಕೆ, ಕತ್ತಿವರಸೆ ಧ್ಯಾನದ ಪಟ್ಟಕ್ಕೇರಿವೆ. ಝೆನ್ ಇತರ ಧರ್ಮಗಳಂತೆ non creative ಅಲ್ಲ, ಝೆನ್ ಸುತ್ತಲಿನ ಅಸ್ತಿತ್ವಕ್ಕೆ ಅಪಾರ ಸೌಂದರ್ಯವನ್ನು ಸೇರಿಸಿದೆ.
ಇದು ಓಶೋ ನೀಡುವ ವ್ಯಾಖ್ಯಾನ.
ಈ ಜೆನ್ ಕತೆ ನೋಡಿ…
ಒಬ್ಬ ಪ್ರಸಿದ್ಧ ಕಲಾವಿದನ ಬಳಿ ಯುವ ಕಲಾವಿದನೊಬ್ಬ ಕಲಿಯಲು ಬರುತ್ತಿದ್ದ. ಆ ಯುವ ಕಲಾವಿದನಿಗೆ ಕಲೆ ಅಭಿಜಾತವಾಗಿ ಒಲಿದಿತ್ತು. ಅವನ ಅಪ್ರತಿಮ ಕಲಾ ಪ್ರತಿಭೆ ಕಂಡು ಗುರುವಿಗೆ ಅಸಾಧ್ಯ ಹೊಟ್ಚೆಕಿಚ್ಚು. ಏನಾದರೊಂದು ನೆಪ ಹುಡುಕಿ ಆ ಯುವ ಕಲಾವಿದನ ಮೇಲೆ ಹರಿ ಹಾಯುತ್ತಿದ್ದ, ಚಿತ್ರ ಬರಿಯಲಿಕ್ಕಲ್ಲ, ಮನೆಗೆ ಸುಣ್ಣ ಹಚ್ಚುವುದಕ್ಕೆ ಲಾಯಕ್ಕು ನೀನು ಎಂದು ಮಾತು ಮಾತಿಗೆ ಎಲ್ಲರ ಮುಂದೆ ಅಪಮಾನ ಮಾಡುತ್ತಿದ್ದ. ಕ್ರಮೇಣ ಆ ಯುವ ಕಲಾವಿದನ ಆತ್ಮವಿಶ್ವಾಸ ಕಡಿಮೆಯಾಗತೊಡಗಿತು.
ಒಂದು ದಿನ ಗೋಲ್ಡ್ ಫಿಶ್ ಪೇಂಟ್ ಮಾಡುವ ಕೆಲಸ ಯುವಕನ ಪಾಲಿಗೆ ಬಂತು. ಆತ ಕಣ್ಣು ಮುಚ್ಚಿ ತನ್ನ ದೊಡ್ಡಪ್ಪನ ಮನೆಯಲ್ಲಿದ್ದ ಗೋಲ್ಡ್ ಫಿಶ್ ಧ್ಯಾನಿಸುತ್ತ ಚಿತ್ರ ಬರೆದು ಮುಗಿಸಿದ.
ಆ ಚಿತ್ರ ನೋಡುತ್ತಿದ್ದಂತೆಯೇ ಕೆಂಡಾಮಂಡಲನಾದ ಗುರು “ಹೀಗಾ ಚಿತ್ರ ಬರೆಯೋದು?” ಎಂದು ಶಿಷ್ಯನನ್ನು ಹೀಯಾಳಿಸುತ್ತ, ಆ ಚಿತ್ರವನ್ನು ಮುದ್ದೆ ಮಾಡಿ ಅಲ್ಲೇ ಇದ್ದ ನೀರಿನ ಕೊಳಕ್ಕೆ ಎಸೆದ.
ಅಲ್ಲಿದ್ದ ಎಲ್ಲರೂ ನೋಡ ನೋಡುತ್ತಿದ್ದಂತೆಯೇ, ಆ ಮೀನಿನ ಚಿತ್ರ ನೀರಿಗೆ ಇಳಿದು ಈಜತೊಡಗಿತು!

