“ಪ್ರೇಮವನ್ನ ನಿಮ್ಮ ಧ್ಯಾನವಾಗಿಸಿಕೊಳ್ಳಿ. ಉಸಿರನ್ನು ಹೊರಗೆ ಬಿಡುವಾಗ ಸುತ್ತಲಿನ ಅಸ್ತಿತ್ವಕ್ಕೆ ನಿಮ್ಮ ಪ್ರೇಮವನ್ನು ಧಾರೆ ಎರೆಯುವಂತೆ , ಉಸಿರನ್ನು ಒಳಗೆ ತೆಗೆದುಕೊಳ್ಳುವಾಗ ಅಸ್ತಿತ್ವ ನಿಮ್ಮೊಳಗೆ ತನ್ನ ಪ್ರೇಮವನ್ನು ತುಂಬುತ್ತಿರುವಂತೆ ಫೀಲ್ ಮಾಡಿಕೊಳ್ಳಿ. ನಿಧಾನವಾಗಿ ನಿಮಗೆ ನಿಮ್ಮ ಉಸಿರಾಟದ ಕ್ವಾಲಿಟಿ ಬದಲಾಗುತ್ತಿರುವುದು ಗಮನಕ್ಕೆ ಬರುತ್ತದೆ…” ಅನ್ನುತ್ತಾರೆ ಓಶೋ ~ ಚಿದಂಬರ ನರೇಂದ್ರ
ಬುದ್ಧಿ ಮತ್ತು ಪ್ರೇಮದ ಸಂಯೋಜನೆ
ಬೇರೆ ಬೇರೆ ಧಾತುಗಳಿಂದ .
ಬುದ್ಧಿ ಜನರ ನಡುವೆ ಗಂಟು ಹಾಕುತ್ತದೆ
ಆದರೆ ಯಾವ ಅಪಾಯಕ್ಕೂ ತೆರೆದುಕೊಳ್ಳದಂತೆ.
ಆದರೆ ಪ್ರೇಮ ಹಾಗಲ್ಲ
ಅದು ಬಿಚ್ಚುತ್ತದೆ ಸಂಬಂಧಗಳಲ್ಲಿನ ಸಿಕ್ಕುಗಳನ್ನ
ಎಲ್ಲ ಅಪಾಯಗಳನ್ನೂ ಆಹ್ವಾನಿಸುತ್ತ.
ಬುದ್ದಿಯದು
ಯಾವಾಗಲೂ ಜಾಗರೂಕತೆಯ ಸ್ವಭಾವ
ಸಲಹೆ ನೀಡುವ ಹುಕಿ
ಉನ್ಮತ್ತ ಆನಂದದ ಬಗ್ಗೆ ಸದಾ ಹಿಂಜರಿಕೆ.
ಆದರೆ ಪ್ರೇಮಕ್ಕೆ ಅಪಾರ ಉತ್ಸಾಹ
ಅಪಾಯಗಳಿಗೆ ಎದೆಯೊಡ್ಡುವ ಹುರುಪು
ಬೆಂಕಿಯಲ್ಲಿ ಹಾರಿ ಬಂಗಾರವಾಗುವ ಉತ್ಕಟತೆ.
ಬುದ್ಧಿಯನ್ನು ಒಡೆಯುವುದು ಕಠಿಣ
ಆದರೆ ಪ್ರೇಮ ನಿರಾಯಾಸವಾಗಿ
ತನ್ನನ್ನು ತಾನು ಒಡೆದುಕೊಂಡು
ಅವಶೇಷವಾಗಬಲ್ಲದು.
ನಿಮಗೆ ಗೊತ್ತಿದೆ
ನಿಧಿ ಅಡಗಿರುವುದೆ ಅವಶೇಷಗಳಡಿಯಲ್ಲಿ
ಒಡೆದ ಹೃದಯ
ತನ್ನೊಳಗೆ ಬಚ್ಚಿಟ್ಟುಕೊಂಡಿದೆ
ಅಪಾರ ಸಂಪತ್ತು.
~ ಶಮ್ಸ್ ತಬ್ರೀಝಿ
ಪ್ರೇಮ ಸದಾ ಹೊಸತು, ಸದಾ ತಾಜಾ. ಅದು ಹಳತಾಗುವುದು ಸಾಧ್ಯವಿಲ್ಲ, ಏಕೆಂದರೆ ಅದು ಯಾವತ್ತೂ, ಸಂಗ್ರಹಿಸುವುದಿಲ್ಲ, ಏನನ್ನೂ ಕೂಡಿಡುವುದಿಲ್ಲ.
ಪ್ರೇಮಕ್ಕೆ ಇತಿಹಾಸ ಎನ್ನುವುದು ಯಾವುದು ಇಲ್ಲ, ಅದು ಇಬ್ಬನಿಯ ಹನಿಯಂತೆ ಸದಾ ಹೊಸತು, ತಾಜಾ. ಪ್ರೇಮ ಆಯಾ ಗಳಿಗೆಯಲ್ಲಿ ಬದುಕುವಂಥದು, ಅದಕ್ಕೆ ಮುಂದುವರಿಕೆ ಇಲ್ಲ, ಅದಕ್ಕೆ ಸಂಪ್ರದಾಯಗಳಿಲ್ಲ. ಪ್ರೇಮ ಪ್ರತಿ ಕ್ಷಣ ಸಾಯುತ್ತದೆ, ಪ್ರತಿ ಕ್ಷಣ ಹುಟ್ಟುತ್ತದೆ. ಪ್ರೇಮ ಉಸಿರಾಟದ ಥರ, ಉಚ್ವಾಸ, ನಿಶ್ವಾಸದ ಥರ, ನಿರಂತರವಾಗಿ ನಡೆಯುತ್ತಲೇ ಇರುವ ಪ್ರತ್ರಿಯೆ. ಉಸಿರನ್ನ ಕೂಡಿಡಲಿಕ್ಕಾಗುವುದಿಲ್ಲ, ಸಂಗ್ರಹಿಸುವುದು ಸಾಧ್ಯವಿಲ್ಲ, ಅದು ನಿರಂತರವಾಗಿ ನಾಶವಾಗುತ್ತ , ಹುಟ್ಟುತ್ತಿರುವ ಸಂಗತಿ – ಅನ್ನುವುದು ಓಶೋ ಮಾತು.
“ಉಸಿರನ್ನ ಕೂಡಿರುವ ಪ್ರಯತ್ನ ಮಾಡುತ್ತೀರಾದರೆ, ನೀವು ಸತ್ತು ಹೋಗುತ್ತೀರಿ. ಉಸಿರನ್ನ ಕೂಡಿರುವ ಪ್ರಯತ್ನ ಮಾಡಿದಾಗಲೆಲ್ಲ, ಅದು ಹಳಸಿ ಹೋಗುತ್ತದೆ, ತನ್ನ ವೈವಿಧ್ಯತೆಯನ್ನ, ತನ್ನ ಜೀವ ಶಕ್ತಿಯನ್ನ, ತನ್ನ ಬದುಕುವ ಗುಣವನ್ನ ಕಳೆದುಕೊಳ್ಳುತ್ತದೆ. ಪ್ರೇಮ ಕೂಡ ಥೇಟ್ ಇದೇ ಥರ, ಅದು ಉಸಿರಾಡುತ್ತದೆ, ಪ್ರತಿ ಕ್ಷಣ ತನ್ನನ್ನು ತಾನು ಹೊಸತಾಗಿಸಿಕೊಳ್ಳುತ್ತಿರುತ್ತದೆ. ಆದ್ದರಿಂದ ಪ್ರೀತಿಸುವುದನ್ನ ನಿಲ್ಲಿಸುವುದೆಂದರೆ, ಉಸಿರಾಟವನ್ನು ನಿಲ್ಲಿಸಿದಂತೆ, ಬದುಕು ತನ್ನ ಅರ್ಥವನ್ನು ಕಳೆದುಕೊಂಡಂತೆ. ಜನ ಅನುಭವಿಸುತ್ತಿರುವುದು ಈ ಸಮಸ್ಯೆಯನ್ನೇ. ಮೈಂಡ್ ಎಷ್ಟು ಪರಿಣಾಮಕಾರಿ ಎಂದರೆ ಅದು ಹೃದಯಕ್ಕೆ ಪ್ರೇಮದ ಸ್ವಾಮಿತ್ವವನ್ನು ಹೊಂದುವ ಆದೇಶ ನೀಡುತ್ತದೆ. ಆದರೆ ಹೃದಯಕ್ಕೆ ಯಾವುದರ ಮೇಲೂ ಹತೋಟಿ ಸಾಧಿಸುವುದು ಗೊತ್ತಿಲ್ಲ, ಮೈಂಡ್ ಹೃದಯವನ್ನು ಕಲುಷಿತಗೊಳಿಸುತ್ತದೆ, ವಿಷಮಯವಾಗಿಸುತ್ತದೆ.
ಆದ್ದರಿಂದ ಈ ಬಗ್ಗೆ ಕಾಳಜಿ ವಹಿಸಿ… ಅಸ್ತಿತ್ವದೊಂದಿಗೆ ಸದಾ ಪ್ರೀತಿಯಲ್ಲಿರಿ. ಅಸ್ತಿತ್ವದೊಂದಿಗಿನ ನಿಮ್ಮ ಪ್ರೇಮ ಉಸಿರಾಟದಂತಿರಬೇಕು, ಉಸಿರನ್ನು ಒಳಗೆ ಎಳೆದುಕೊಳ್ಳುತ್ತ, ಹೊರಗೆ ಬಿಡುತ್ತ ಬದುಕನ್ನ ಸದಾ ಹೊಸತಾಗಿಸಿಕೊಳ್ಳುತ್ತ, ನಿಧಾನವಾಗಿ ಪ್ರತಿ ಉಸಿರಿನೊಂದಿಗೆ ಪ್ರೇಮದ ಮಾಂತ್ರಿಕತೆಯನ್ನ ಕಟ್ಟಿಕೊಳ್ಳುತ್ತ.
ಪ್ರೇಮವನ್ನ ನಿಮ್ಮ ಧ್ಯಾನವಾಗಿಸಿಕೊಳ್ಳಿ. ಉಸಿರನ್ನು ಹೊರಗೆ ಬಿಡುವಾಗ ಸುತ್ತಲಿನ ಅಸ್ತಿತ್ವಕ್ಕೆ ನಿಮ್ಮ ಪ್ರೇಮವನ್ನು ಧಾರೆ ಎರೆಯುವಂತೆ , ಉಸಿರನ್ನು ಒಳಗೆ ತೆಗೆದುಕೊಳ್ಳುವಾಗ ಅಸ್ತಿತ್ವ ನಿಮ್ಮೊಳಗೆ ತನ್ನ ಪ್ರೇಮವನ್ನು ತುಂಬುತ್ತಿರುವಂತೆ ಫೀಲ್ ಮಾಡಿಕೊಳ್ಳಿ. ನಿಧಾನವಾಗಿ ನಿಮಗೆ ನಿಮ್ಮ ಉಸಿರಾಟದ ಕ್ವಾಲಿಟಿ ಬದಲಾಗುತ್ತಿರುವುದು ಗಮನಕ್ಕೆ ಬರುತ್ತದೆ. ಮತ್ತು ಬಹುಬೇಗ ನಿಮ್ಮ ಉಸಿರಾಟ ನಿಮಗೆ ಹಿಂದೆ ಎಂದೂ ಗೊತ್ತಿರದಂಥ ಕ್ವಾಲಿಟಿಯನ್ನ ಪಡೆದುಕೊಳ್ಳುತ್ತದೆ. ಆದ್ದರಿಂದಲೇ ನಾವು ಉಸಿರನ್ನ ಭಾರತದಲ್ಲಿ ‘ಪ್ರಾಣ’ ಎಂದು ಗುರುತಿಸುತ್ತೇವೆ. ಅದು ಕೇವಲ ಉಸಿರಲ್ಲ, ನಮ್ಮ ಜೀವಶಕ್ತಿ, ನಮ್ಮ ಬದುಕು” ಅನ್ನುತ್ತಾರೆ ಓಶೋ.
ಒಬ್ಬ ಝೆನ್ ಮಾಸ್ಟರ್ ನದಿಯ ದಂಡೆಯ ಮೇಲೆ ಧ್ಯಾನ ಮಗ್ನನಾಗಿದ್ದಾಗ ಯುವಕನೊಬ್ಬ ಅವನ ಹತ್ತಿರ ಬಂದು ಕೇಳಿಕೊಂಡ.
ಯುವಕ : ಮಾಸ್ಟರ್, ನನ್ನನ್ನು ಶಿಷ್ಯನಾಗಿ ಸ್ವೀಕರಿಸಿ
ಮಾಸ್ಟರ್ : ಯಾಕೆ? ಏನು ವಿಷಯ?
ಯುವಕ : ನಾನು ದೇವರನ್ನು ಹುಡುಕಬೇಕು
ಈ ಮಾತನ್ನು ಕೇಳುತ್ತಿದ್ದಂತೆಯೇ, ಮಾಸ್ಟರ್ ತನ್ನ ಜಾಗದಿಂದ ಕೆಳಗೆ ಜಿಗಿದು, ಯುವಕನ ಅಂಗಿಯ ಕಾಲರ್ ಹಿಡಿದು, ಅವನನ್ನು ದರದರನೇ ಎಳೆದುಕೊಂಡು ನದಿಯ ಹತ್ತಿರ ಬಂದು, ಅವನ ತಲೆಯನ್ನು ನದಿಯಲ್ಲಿ ಮುಳುಗಿಸಿ ಹಾಗೇ ಹಿಡಿದುಕೊಂಡ.
ಕೆಲ ನಿಮಿಷಗಳಾಗುತ್ತಿದ್ದಂತೆಯೇ, ಯುವಕನಿಗೆ ಉಸಿರುಗಟ್ಟತೊಡಗಿತು, ಅವ ಒದ್ದಾಡತೊಡಗಿದ.
ಆಗ ಮಾಸ್ಟರ್, ಯುವಕನ ಮುಖವನ್ನು ನೀರಿನಿಂದ ಹೊರ ತೆಗೆದ. ಯುವಕ ಏದುಸಿರು ಬಿಡುತ್ತ ಜೋರು ಜೋರಾಗಿ ಕೆಮ್ಮತೊಡಗಿದ.
ಮಾಸ್ಟರ್ : ಈಗ ಹೇಳು, ನೀರಿನಲ್ಲಿ ನಿನ್ನ ಮುಖ ಮುಳುಗಿದ್ದಾಗ, ನಿನಗೇನು ಬೇಕೇ ಬೇಕು ಅನಿಸಿತ್ತು?
ಯುವಕ : ಉಸಿರು, ಉಸಿರು ಬೇಕನಿಸಿತ್ತು ಮಾಸ್ಟರ್.
ಮಾಸ್ಟರ್ : ಹಾಗಾದರೆ ಈಗ ವಾಪಸ್ ಹೋಗು, ಯಾವಾಗ ನಿನಗೆ ದೇವರ ಅವಶ್ಯಕತೆ ಉಸಿರಿನಷ್ಟೇ ಮುಖ್ಯ ಅನಿಸುತ್ತದೆಯೋ, ಆಗ ಬಾ. ದೇವರ ಬಗ್ಗೆ ಆಗ ಮಾತಾಡೋಣ.
Source:
~ Osho, The Open Door

