ನಮಗೆ ಜಾತಿಯಿಲ್ಲ, ಜಾತಿ ಸಂಘಟನೆಯಲ್ಲಿ ನಾವಿಲ್ಲ…

ನಾರಾಯಣ ಗುರುಗಳು ಡಾ. ಪಲ್ಪು ಅವರಿಗೆ ಬರೆದ ಪತ್ರ, ಮತ್ತು ‘ಪ್ರಬುದ್ಧ ಕೇರಳಂ’ಗೆ ನೀಡಿದ ಪ್ರಕಟಣೆಗಳನ್ನಿಲ್ಲಿ ಅನುವಾದಿಸಲು ಪ್ರಯತ್ನಿಸಿದ್ದೇನೆ… | ಎನ್.ಎ.ಎಂ.ಇಸ್ಮಾಯಿಲ್

ಅಧ್ಯಾತ್ಮವನ್ನು ಶೋಷಿತರ ವಿಮೋಚನೆಯ ಮಾರ್ಗವನ್ನಾಗಿ ಪರಿವರ್ತಿಸಿದ ಕ್ರಾಂತಿಕಾರಿ ಸಂನ್ಯಾಸಿಯೆಂಬ ಹೆಗ್ಗಳಿಕೆ ನಾರಾಯಣ ಗುರುಗಳಿಗೇ ಸಲ್ಲಬೇಕು. ತಾವೇ ಹುಟ್ಟು ಹಾಕಿದ ಸಂಘಟನೆ ಸಂಕುಚಿತಗೊಳ್ಳುತ್ತಿದೆ ಅನ್ನಿಸಿದಾಗ ಅದರಿಂದ ದೂರ ನಿಲ್ಲುತ್ತೇನೆಂದು ಬಹಿರಂಗವಾಗಿಯೇ ಸಾರಿದರು. 1916ರಲ್ಲಿ ನಾರಾಯಣ ಗುರುಗಳು ‘ಪ್ರಬುದ್ಧ ಕೇರಳಂ’ ಪತ್ರಿಕೆಗೆ ನೀಡಿದ ಪ್ರಕಟಣೆ ಮತ್ತು ಅದೇ ವರ್ಷ ಶ್ರೀನಾರಾಯಣ ಧರ್ಮಪರಿಪಾಲನ ಯೋಗಂನ (ಎಸ್ಎನ್‌ಡಿಪಿ) ಮುಖಂಡ ಡಾ.ಪಲ್ಪು ಅವರಿಗೆ ಬರೆದ ಪತ್ರಗಳೆರಡೂ ಇದನ್ನೇ ಹೇಳುತ್ತವೆ. ಎಸ್‌ಎನ್‌ಡಿಪಿಯ ಸ್ಥಾಪನೆಯ ಸಂದರ್ಭದಲ್ಲೇ ಅದು ಕೇವಲ ಈಳವ ಜಾತಿಗೆ ಸೀಮಿತಗೊಳ್ಳದೆ ಮನುಷ್ಯಜಾತಿಯನ್ನೇ ಒಳಗೊಳ್ಳುವ ಸಂಘಟನೆಯಾಗಬೇಕು ಎಂಬ ಆಶಯವನ್ನು ವ್ಯಕ್ತಪಡಿಸಿದ್ದರು. ಇಷ್ಟು ದೊಡ್ಡ ವ್ಯಾಪ್ತಿಯ ಸಂಘಟನೆ ಪ್ರಾಯೋಗಿಕವಾಗಿ ಸಾಧ್ಯವಿಲ್ಲ ಎಂಬ ಅಭಿಪ್ರಾಯ ಸ್ಥಾಪಕ ತಂಡದಲ್ಲಿ ಇದ್ದುದರಿಂದ ಅದು ಈಳವರ ಸಾಮಾಜಿಕ, ಆರ್ಥಿಕ, ಬೌದ್ಧಿಕ ಮತ್ತು ರಾಜಕೀಯ ಉನ್ನತಿಗೆ ಶ್ರಮಿಸುವ ಸಂಘಟನೆಯಾಗಿಯೇ ಆರಂಭವಾಯಿತು. ಕ್ರಮೇಣ ಇದು ವ್ಯಾಪ್ತಿಯನ್ನು ವಿಸ್ತರಿಸಿಕೊಳ್ಳುತ್ತದೆಯೆಂಬ ನಿರೀಕ್ಷೆ ಗುರುಗಳಿಗಿತ್ತೇನೋ. ಆದರೆ 1916ರಲ್ಲಿ ಅವರು ಡಾ. ಪಲ್ಪು ಅವರಿಗೆ ಪತ್ರ ನಿರಾಶೆಯನ್ನು ಧ್ವನಿಸುತ್ತದೆ. ಈ ಪತ್ರದ ನಂತರವೂ ಅವರು ಎಸ್‌ಎನ್‌ಡಿಪಿಯನ್ನೇನೂ ದೂರವಿಡಲಿಲ್ಲ. ಸಮಾಧಿಗೆ ಒಂದು ವರ್ಷ ಮೊದಲೂ ಅದರ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಡಾ. ಪಲ್ಪು ಅವರಿಗೆ ಬರೆದ ಪತ್ರ, ಅದೇ ವರ್ಷ ‘ಪ್ರಬುದ್ಧ ಕೇರಳಂ’ಗೆ ನೀಡಿದ ಪ್ರಕಟಣೆಗಳನ್ನಿಲ್ಲಿ ಅನುವಾದಿಸಲು ಪ್ರಯತ್ನಿಸಿದ್ದೇನೆ.

***
ಡಾ.ಪಲ್ಪು ಅವರಿಗೆ 1916 ಮೇ 2ರಂದು ಬರೆದ ಪತ್ರ

ನನ್ನ ಪ್ರೀತಿಯ ಡಾಕ್ಟರ್ ಅವರಿಗೆ
ಯೋಗಂನ ನಿರ್ಣಯಗಳನ್ನೆಲ್ಲಾ ನಮ್ಮ ಗಮನಕ್ಕೆ ತರದೆಯೇ ಅಂಗೀಕರಿಸುತ್ತಿರುವುದರಿಂದಲೂ ಯೋಗಂಗೆ ಅನುಕೂಲಕರವೆನಿಸುವ ಯಾವೊಂದು ಸಂಗತಿಯೂ ನಮ್ಮ ದೃಷ್ಟಿಕೋನದವಲ್ಲವಾಗಿರುವುದರಿಂದಲೂ ಯೋಗಂನ ಜಾತಿ ಪ್ರೇಮ ಹೆಚ್ಚುತ್ತಲೇ ಇರುವುದರಿಂದಲೂ ಈ ಹಿಂದೆಯೇ ಮಾನಸಿಕವಾಗಿ ದೂರವಾಗಿದ್ದಂತೆಯೇ ಈಗ ಮಾತಿನಿಂದಲೂ ಕೃತಿಯಿಂದಲೂ ಯೋಗಂ ಅನ್ನು ಬಿಟ್ಟಿದ್ದೇನೆ.
-ನಾರಾಯಣ ಗುರು

ಪ್ರಬುದ್ಧ ಕೇರಳಂ ಪತ್ರಿಕೆಗೆ ನೀಡಿದ ಪ್ರಕಟಣೆ

ನಾವು ಜಾತಿಭೇದವನ್ನು ತ್ಯಜಿಸಿ ಈಗ ಹಲವಾರು ಸಂವತ್ಸರಗಳು ಕಳೆದಿವೆ. ಹಾಗಿದ್ದರೂ ಕೆಲ ವರ್ಗದವರು ನಮ್ಮನ್ನು ಅವರದೇ ವರ್ಗಕ್ಕೆ ಸೇರಿದನವೆಂದು ಭಾವಿಸಿ ಮುಂದುವರೆಯುತ್ತಿದ್ದಾರೆ. ಇದು ನಮ್ಮ ವಾಸ್ತವ ನಿಲುವಿಗೆ ವಿರುದ್ಧವಾದ ಭಾವವನ್ನು ಮೂಡಿಸುವುದಕ್ಕೆ ಕಾರಣವಾಗಿದೆ ಎಂದು ನಮಗೆ ತಿಳಿದುಬಂದಿದೆ. ನಾವು ಯಾವುದೇ ಒಂದು ಜಾತಿಗೋ ಅಥವಾ ಮತಕ್ಕೋ ಸ ಸೇರಿದವರಲ್ಲ. ನಮ್ಮ ಶಿಷ್ಯವರ್ಗದಲ್ಲೂ ಈ ಬಗೆಯ ನಿಲುವುಳ್ಳವರಷ್ಟೇ ನಮ್ಮ ಅನುಯಾಯಿಗಳಾಗಿರಬೇಕೆಂಬುದು ನಮ್ಮ ನಿಲುವು. ಅದೇ ಕಾರಣದಿಂದ ಈ ನಿಲುವುಳ್ಳವರನ್ನಷ್ಟೇ ಆಲುವಾ ಅದ್ವೈತಾಶ್ರಮಕ್ಕೆ ಶಿಷ್ಯರನ್ನಾಗಿ ಸೇರಿಸಿಕೊಳ್ಳಲಾಗಿದೆ. ಮುಂದೆಯೂ ಅಂಥವರನ್ನಷ್ಟೇ ಶಿಷ್ಯರನ್ನಾಗಿ ಸ್ವೀಕರಿಸುವಂಥ ವ್ಯವಸ್ಥೆಯನ್ನು ರೂಪಿಸಲಾಗಿದೆ. ಈ ವಾಸ್ತವವನ್ನು ಜನರಿಗೆ ತಿಳಿಸಲು ಈ ಪ್ರಕಟಣೆಯನ್ನು ನೀಡಲಾಗಿದೆ.
-ನಾರಾಯಣ ಗುರು

Unknown's avatar

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

Leave a Reply

This site uses Akismet to reduce spam. Learn how your comment data is processed.