ಹಾಯ್ಕುಗಳನ್ನ ಕೇವಲ ಓದಬಾರದು, ಅವನ್ನ ಕಾಣಬೇಕು. ಸುಮ್ಮನೇ ಮಹಾನದಿ ಹಸಿಯಾವೋನ, ನಿಶಬ್ದ ರಾತ್ರಿಗಳನ್ನ, ಮೀನುಗಾರರ ಹಾಡುಗಳನ್ನ ವಿಜ್ಯುವಲೈಜ್ ಮಾಡಿಕೊಳ್ಳಿ, ಪ್ರತಿ ರಾತ್ರಿಯ ಹಾಡಿನ ನಂತರ ಮೌನ ಆಳವಾಗುತ್ತ ಹೋಗುತ್ತದೆ… | ಓಶೋ ರಜನೀಶ್; ಕನ್ನಡಕ್ಕೆ: ಚಿದಂಬರ ನರೇಂದ್ರ
ಓದು ಮತ್ತು
ತೀವ್ರ ತರಬೇತಿಗಳ ನಡುವೆ
ಬಹುತೇಕ ಕಳೆದುಕೊಂಡುಬಿಟ್ಟಿರುವೆ
ನನ್ನ ನನ್ನತನವನ್ನ,
ಆದರೆ ನನಗೆ ಬದುಕಿನಲ್ಲಿ ಅತ್ಯಂತ
ಮೌಲಿಕವಾದದ್ದು
ಮೀನುಗಾರರ ಹಾಡುಗಳು ಮಾತ್ರ.
ಈ ಹಾಡುಗಳಲ್ಲಿ
ಸೂರ್ಯಸ್ತವಿದೆ, ಮಳೆಯಿದೆ,
ಮೋಡಗಳಿವೆ, ಚಂದ್ರನಿದ್ದಾನೆ.
ಪ್ರತಿರಾತ್ರಿ ಮಾರ್ದನಿಗೊಳ್ಳುವ ಹಾಡುಗಳಲ್ಲಿ
ಶಬ್ದಗಳಲ್ಲಿ ಹಿಡಿದಿಡಲಾಗದ ಸೌಂದರ್ಯವಿದೆ.
ಇಕ್ಯೂ ಅತ್ಯಂತ ಪ್ರೀತಿ ಪಾತ್ರನಾದ ಹೈಕು ಕವಿ. ಅವನ ಪದ್ಯಗಳನ್ನು ಗಮನಿಸಿದರೆ, ಆತ ಯಾಕೆ ಇಷ್ಟು ಜನರ ಪ್ರೀತಿ ಗಳಿಸಿದ ಎನ್ನುವುದು ನಿಮ್ಮ ಅನುಭವಕ್ಕೆ ಖಂಡಿತ ಬರುತ್ತದೆ. ಇಕ್ಯೂ ಮಹಾನ್ ಕನಸುಗಾರನಲ್ಲ ನೆಲಕ್ಕೆ ತೀರ ಹತ್ತಿರವಾದ ಕವಿ.
ಓದು ಮತ್ತು
ತೀವ್ರ ತರಬೇತಿಗಳ ನಡುವೆ
ಬಹುತೇಕ ಕಳೆದುಕೊಂಡುಬಿಟ್ಟಿರುವೆ
ನನ್ನ ನನ್ನತನವನ್ನ
ಆದರೆ ನನಗೆ ಬದುಕಿನಲ್ಲಿ ಅತ್ಯಂತ
ಮೌಲಿಕವಾದದ್ದು
ಮೀನುಗಾರರ ಹಾಡುಗಳು ಮಾತ್ರ
ಹಸಿಯಾವೋ ನದಿಯ ದಂಡೆಯ ಮೇಲೆ ಮೀನುಗಾರರ ಹಾಡುಗಳು ಕಿವಿಯ ಮೇಲೆ ಬಿದ್ದಾಗ…… ಇಕ್ಯೂ ಹೇಳುತ್ತಾನೆ, ಹಸಿಯಾವೋ ನದಿ ತೀರದ ಮೀನುಗಾರರ ಹಾಡುಗಳಿಗಿಂತ ಹೆಚ್ಚು ಬೆಲೆ ಬಾಳುವಂಥದು ಬೇರೆ ಯಾವುದೂ ಇಲ್ಲ. ಈ ಹಾಡುಗಳು ಯಾವ ಪವಿತ್ರ ಗ್ರಂಥಗಳಿಂತಲೂ ನನಗೆ ಹೆಚ್ಚು ಮುಖ್ಯವಾದವು ಏಕೆಂದರೆ ಈ ಹಾಡುಗಳಲ್ಲಿ ಸಹಜತೆ ಇದೆ, ನೈಜತೆ ಇದೆ.
ಈ ಹಾಡುಗಳಲ್ಲಿ
ಸೂರ್ಯಸ್ತವಿದೆ, ಮಳೆಯಿದೆ,
ಮೋಡಗಳಿವೆ, ಚಂದ್ರನಿದ್ದಾನೆ.
ಪ್ರತಿರಾತ್ರಿ ಮಾರ್ದನಿಗೊಳ್ಳುವ ಹಾಡುಗಳಲ್ಲಿ
ಶಬ್ದಗಳಲ್ಲಿ ಹಿಡಿದಿಡಲಾಗದ ಸೌಂದರ್ಯವಿದೆ.
ಹಾಯ್ಕುಗಳನ್ನ ಕೇವಲ ಓದಬಾರದು, ಅವನ್ನ ಕಾಣಬೇಕು. ಸುಮ್ಮನೇ ಮಹಾನದಿ ಹಸಿಯಾವೋನ, ನಿಶಬ್ದ ರಾತ್ರಿಗಳನ್ನ, ಮೀನುಗಾರರ ಹಾಡುಗಳನ್ನ ವಿಜ್ಯುವಲೈಜ್ ಮಾಡಿಕೊಳ್ಳಿ, ಪ್ರತಿ ರಾತ್ರಿಯ ಹಾಡಿನ ನಂತರ ಮೌನ ಆಳವಾಗುತ್ತ ಹೋಗುತ್ತದೆ.
ಈ ಹಾಡುಗಳು ಸಾಮಾನ್ಯ ಹಾಡುಗಳಲ್ಲ, ಈ ಹಾಡುಗಳಲ್ಲಿ ಚಿತ್ರಗಳನ್ನ ಚಿತ್ರಿಸಲಾಗಿದೆ. ಈ ಪದ್ಯಗಳಿಗೆ ಬಣ್ಣ ಇದೆ, ಆಕಾರ ಇದೆ, ಈ ಪದ್ಯಗಳನ್ನ ಬಹುತೇಕ ನೀವು ಮುಟ್ಟಬಹುದು. ಈ ಪದ್ಯಗಳನ್ನ ಓದುವಾಗ ನೀವು ಮೀನುಗಾರರ ಹಾಡುಗಳನ್ನ ಕೇಳಬಹುದು, ಸಮುದ್ರದ ಅಲೆಗಳನ್ನ ಅನುಭವಿಸಬಹುದು, ಸೂರ್ಯೋದಯ ಸೂರ್ಯಾಸ್ತಗಳನ್ನ ಆನಂದಿಸಬಹುದು, ಮೋಡ- ಮಳೆ ನಿಮ್ಮ ಅಂತರಂಗಕ್ಕೆ ತಾಕಬಹುದು. ಈ ಪದ್ಯಗಳನ್ನ ಪೇಂಟಿಂಗ್ ಅನ್ನುವುದೇ ಸೂಕ್ತ.
ಸಾಮಾನ್ಯ ಪದ್ಯಗಳಿಗೂ ಮತ್ತು ಹಾಯ್ಕುಗಳಿಗೂ ಇರುವ ವ್ಯತ್ಯಾಸ ಇದೇ. ಸಾಮಾನ್ಯ ಪದ್ಯ ಒಂದು ಶಬ್ದಗಳ ಸಮೂಹವಾದರೆ ಹಾಯ್ಕು ಒಂದು ಅಪರೂಪದ ವಿದ್ಯಮಾನ. ಅದು ಶಬ್ದಗಳಿಂದ ಮಾಡಿದ ಪೇಂಟಿಂಗ್, ಹಾಗಾಗಿ ಇಲ್ಲಿ ಶಬ್ದಗಳು ಜೀವಂತವಾಗಿವೆ.

