ಬುದ್ಧ ಒಬ್ಬ ಅನನ್ಯ ವ್ಯಕ್ತಿ. ಅವನನ್ನು ಅನುಸರಿಸುವುದೆಂದರೆ ನಾವೂ ಅವನ ಹಾಗೆ ಅನನ್ಯ ಆಗಬೇಕು… ~ ಓಶೋ | ಕನ್ನಡಕ್ಕೆ: ಚಿದಂಬರ ನರೇಂದ್ರ
ಝೆನ್ ಮಾಸ್ಟರ್ ಬೊಕುಜು ನ ಗುರು ಸುತ್ತಮುತ್ತ ತುಂಬ ಪ್ರಸಿದ್ಧ ವ್ಯಕ್ತಿಯಾಗಿದ್ದ. ಒಮ್ಮೆ ಯಾರೋ ಒಬ್ಬರು ಬೊಕುಜುನ ಪ್ರಶ್ನೆ ಮಾಡಿದರು, “ನೀನು ನಿಜವಾಗಿ ನಿನ್ನ ಗುರುವನ್ನ ಅನುಸರಿಸುತ್ತೀಯಾ?”
“ಹೌದು, ನಾನು ನನ್ನ ಗುರುವನ್ನ ಅನುಸರಿಸುತ್ತೇನೆ” ಬೊಕುಜು ಉತ್ತರಿಸಿದ.
ಬೊಕುಜು ನ ಉತ್ತರ ಕೇಳಿ ಆ ವ್ಯಕ್ತಿಗೆ ಕಸಿವಿಸಿ ಆಯಿತು ಏಕೆಂದರೆ, ಬೊಕುಜು ತನ್ನ ಮಾಸ್ಟರ್ ನ ಒಂದು ಚೂರೂ ಅನುಸರಿಸುವುದಿಲ್ಲ ಎನ್ನುವುದು ಎಲ್ಲರಿಗೂ ಗೊತ್ತಿತ್ತು.
“ನೀನು ನನಗೆ ಸುಳ್ಳು ಹೇಳುತ್ತಿದ್ದೀಯ? ನೀನು ನಿನ್ನ ಮಾಸ್ಟರ್ ನ ಕೊಂಚವೂ ಅನುಸರಿಸುವುದಿಲ್ಲ ಎನ್ನುವುದು ಎಲ್ಲರಿಗೂ ಗೊತ್ತು, ಆದರೂ ನೀನು ಹೀಗೆ ಸುಳ್ಳು ಹೇಳುವ ಉದ್ದೇಶವೇನು?” ಆ ವ್ಯಕ್ತಿ ಮತ್ತೆ ಬೊಕುಜು ನ ಪ್ರಶ್ನೆ ಮಾಡಿದ.
“ನನ್ನ ಮಾಸ್ಟರ್ ಯಾವತ್ತೂ ತನ್ನ ಮಾಸ್ಟರ್ ನ ಫಾಲೋ ಮಾಡಲಿಲ್ಲ. ಅವನು ತನ್ನಂತೆಯೇ ಇದ್ದ. ನಾನು ನನ್ನ ಗುರುವಿನಿಂದ ಇದನ್ನೇ ಕಲಿತದ್ದು. ಅದಕ್ಕೆ ಹೇಳಿದೆ ನಾನು ನನ್ನ ಗುರುವನ್ನ ಫಾಲೋ ಮಾಡುತ್ತೇನೆ ಎಂದು”. ಬೊಕುಜು ಉತ್ತರಿಸಿದ.
ಬುದ್ಧನನ್ನು ನಾವು ಅನುಸರಿಸಬೇಕಾದದ್ದು ಹೀಗೆ. ಬುದ್ಧ ಒಬ್ಬ ಅನನ್ಯ ವ್ಯಕ್ತಿ. ಅವನನ್ನು ಅನುಸರಿಸುವುದೆಂದರೆ ನಾವೂ ಅವನ ಹಾಗೆ ಅನನ್ಯ ಆಗಬೇಕು.
ಬುದ್ಧ ಎಂದೂ ಯಾರನ್ನೂ ಅನುಸರಿಸಲಿಲ್ಲ. ಯಾರನ್ನಾದರೂ, ಯಾವುದನ್ನಾದರೂ ಅನುಸರಿಸುವುದನ್ನ ಬಿಟ್ಟ ಕ್ಷಣದಲ್ಲಿಯೇ ಬುದ್ಧನಿಗೆ ಜ್ಞಾನೋದಯವಾಗಿತ್ತು. ಅವನು ನಿಜದಲ್ಲಿ ತನ್ನಂತೆಯೇ ಆದಾಗ, ಎಲ್ಲ ದಾರಿಗಳನ್ನ, ಎಲ್ಲ ಕಲಿಕೆಯನ್ನ, ಎಲ್ಲ ಸಿದ್ಧಾಂತಗಳನ್ನ ಸಂಪೂರ್ಣವಾಗಿ ತ್ಯಜಿಸಿದಾಗಲೇ ಜ್ಞಾನೋದಯಕ್ಕೆ ಪಾತ್ರನಾದ. ನೀವು ಬುದ್ಧನ ಕಲಿಕೆಯನ್ನ ಅನುಸರಿಸುತ್ತಿರುವಾದರೆ ನೀವು ಅವನಿಂದ ದೂರ ಹೋಗುತ್ತಿದ್ದೀರಿ, ಇದು ದ್ವಂದ್ವ ಅಲ್ಲ, ಹಾಗೆ ಅನಿಸುತ್ತದೆ ಅಷ್ಟೇ. ನಿರ್ಜೀವ ಆಚರಣೆಗಳ ಮೂಲಕ ನೀವು ಅವನನ್ನು ಹಿಂಬಾಲಿಸುತ್ತೀರಾದರೆ, ಅವನನ್ನು ನಕಲು ಮಾಡುತ್ತೀರಾದರೆ ನೀವು ಅವನಿಗೆ ಬೆನ್ನು ಮಾಡುತ್ತಿದ್ದೀರಿ ಎಂದೇ ಅರ್ಥ. ಬುದ್ಧ ಎಂದೂ ಯಾರನ್ನೂ ಅನುಸರಿಸಲಿಲ್ಲ, ಆಗ ಮಾತ್ರ ಅವನಿಗೆ ನಿರ್ವಾಣ ಸಾಧ್ಯವಾಯಿತು. ಬುದ್ಧನನ್ನು ಅರಿತುಕೊಳ್ಳಿ, ಕುರುಡಾಗಿ ಅನುಸರಿಸಬೇಡಿ, ಆಗ ಒಂದು ಸೂಕ್ಷ್ಮ ಅನುಸಂಧಾನ ಸಾಧ್ಯವಾಗುತ್ತದೆ, ಈ ಬದಲಾವಣೆ ಅಂತರಂಗಕ್ಕೆ ಸಂಬಂಧಿಸಿದ್ದು, ಇದು ನಕಲು ಅಲ್ಲ.
ಅನುಕರಿಸುವದು, ನಕಲು ಮಾಡುವುದು ಎಂಥ ವ್ಯರ್ಥ ಪ್ರಕ್ರಿಯೆ ಎನ್ನುವುದನ್ನ ತೋರಿಸಿಕೋಡುವ ಒಂದು ಸುಂದರ ಝೆನ್ ಕಥೆ ಇದೆ.
ಒಮ್ಮೆ ಒಂದು ಆಶ್ರಮದಲ್ಲಿ, ಪ್ರತೀ ಸಂಜೆ ಅಧ್ಯಾತ್ಮಿಕ ಗುರುಗಳು ತಮ್ಮ ಶಿಷ್ಯರೊಂದಿಗೆ ಧ್ಯಾನಕ್ಕೆ ಕೂರುತ್ತಿದ್ದಂತೆಯೇ, ಅವರೇ ಸಾಕಿಕೊಂಡಿದ್ದ ಬೆಕ್ಕೊಂದು ತುಂಬಾ ಸದ್ದು ಮಾಡುತ್ತಾ, ಓಡಾಡುತ್ತ, ಧ್ಯಾನಕ್ಕೆ ಅಡಚಣಿ ಉಂಟು ಮಾಡುತ್ತಿತ್ತು.
ಇದರಿಂದ ಬೇಸತ್ತ ಗುರುಗಳು ಆ ಬೆಕ್ಕನ್ನು ಹೊರಗೆ ಕಂಬಕ್ಕೆ ಕಟ್ಟಿ ಹಾಕುವಂತೆ ಶಿಷ್ಯರಿಗೆ ಆಜ್ಞಾಪಿಸಿದರು.
ಆನಂತರ ಪ್ರತೀ ಸಂಜೆ ಧ್ಯಾನದ ಸಮಯಕ್ಕೆ ಸರಿಯಾಗಿ ಬೆಕ್ಕನ್ನು ಹೊರಗೆ ಕಂಬಕ್ಕೆ ಕಟ್ಟಿ ಹಾಕಲಾಗುತ್ತಿತ್ತು.
ಕೆಲ ವರ್ಷಗಳಾದ ಮೇಲೆ ಗುರುಗಳು ತೀರಿ ಹೋದರು. ಆದರೂ ಬೆಕ್ಕನ್ನು ಪ್ರತೀ ಸಂಜೆ ಕಟ್ಟಿ ಹಾಕುವ ಪರಿಪಾಠ ಮುಂದುವರೆಯಿತು.
ಕೊನೆಗೊಮ್ಮೆ ಬೆಕ್ಕೂ ತೀರಿಕೊಂಡಿತು. ಆಮೇಲಿಂದ ಶಿಷ್ಯರು ಇನ್ನೊಂದು ಬೆಕ್ಕನ್ನು ತಂದು ಪ್ರತೀ ಸಂಜೆ ಧ್ಯಾನದ ಸಮಯಕ್ಕೆ ಕಂಬಕ್ಕೆ ಕಟ್ಟಿ ಹಾಕತೊಡಗಿದರು.
ಕೆಲ ಶತಮಾನಗಳ ನಂತರ , ಆ ಆಶ್ರಮದ ಮುಂದಿನ ಪೀಳಿಗೆಯ ವಿದ್ವಾಂಸರು, ಧ್ಯಾನ ಮಾಡುವಾಗ ಬೆಕ್ಕನ್ನು ಕಂಬಕ್ಕೆ ಕಟ್ಟಿ ಹಾಕುವ ಸಂಪ್ರದಾಯದ ಧಾರ್ಮಿಕ ಮಹತ್ವದ ಬಗ್ಗೆ ಧರ್ಮಶಾಸ್ತ್ರಗಳನ್ನು ರಚಿಸಿದರು.

