ಸಾವು ತುಂಬ ಸುಂದರ ಏಕೆಂದರೆ ಸಾವಿನಂಥದು ಇನ್ನೊಂದು ಇಲ್ಲವೇ ಇಲ್ಲ – ಎಂಥ ಮೌನ, ಎಷ್ಟು ಆರಾಮದಾಯಕ, ಎಷ್ಟು ನಿಶಾಂತ, ಎಷ್ಟು ಅವಿಚಲಿತ. ಆದರೆ ನಮಗೆ ಸಾವಿನ ಕುರಿತು ಹೆದರಿಕೆ… ~ ಓಶೋ ರಜನೀಶ್ | ಕನ್ನಡಕ್ಕೆ: ಚಿದಂಬರ ನರೇಂದ್ರ
ನಾನು ಸತ್ತ ದಿನ
ನನ್ನ ಹೆಣವನ್ನು ಸ್ಮಶಾನಕ್ಕೆ
ಹೊತ್ತುಕೊಂಡು ಹೋಗುವಾಗ
ಕಣ್ಣೀರು ಹಾಕಬೇಡಿ.
ನಮ್ಮನ್ನೆಲ್ಲ ಬಿಟ್ಟುಹೋದ
ಎಂದು ದುಃಖಿಸಬೇಡಿ.
ಬಿಟ್ಟುಹೋಗುವುದಕ್ಕೂ
ಸಾವಿಗೂ
ಯಾವುದೇ ಸಂಬಂಧವಿಲ್ಲ.
ಸಂಜೆ ಸೂರ್ಯ ಮುಳುಗುತ್ತಾನೆ
ಬೆಳೆಗಾಗುತ್ತಲೇ ಚಂದ್ರ ಮರೆಯಾಗುತ್ತಾನೆ
ಎಂದರೆ
ಅವರು ನಮ್ಮನ್ನಗಲಿದರು
ಎಂದು ಅರ್ಥವೆ?
ಸಾವು ಎಂದರೆ ಮಿಲನ.
ಗೋರಿ, ಸೆರೆಮನೆಯಂತೆ
ಹೊಸ ಹುಟ್ಟಿನ ಜಾಗ.
ಬಾವಿಯಲ್ಲಿ ಕೊಡ ಮುಳುಗಿದಂತೆ
ದೇಹ, ಮಣ್ಣಿನಲ್ಲಿ ನಾಟಿಯಾಗುತ್ತದೆ.
ಒಳಗೆ ಹೋದದ್ದೆಲ್ಲ
ಹೊಸ ಚೆಲುವಿನೊಂದಿಗೆ ಹೊರ ಬರುತ್ತದೆ.
ನಿನ್ನ ಬಾಯಿ
ಇಲ್ಲಿ ಮುಚ್ಚುತ್ತಿದ್ದಂತೆಯೇ
ಅಲ್ಲಿ ಹೊಸ ಖುಶಿಯಿಂದ ಚೀರುತ್ತದೆ.
– ರೂಮಿ
ಸಾವನ್ನು ಎದುರು ನೋಡ್ತಾ ಇರೋ ಝೆನ್ ಮಾಸ್ಟರ್, ತನ್ನ ಶಿಷ್ಯರನ್ನು ಎದುರು ಕೂರಿಸಿಕೊಂಡು ಒಂದು ಕೊನೆಯ ಮಾತು ಹೇಳೋದು ಝೆನ್’ಲ್ಲಿ ಒಂದು ಬಹು ಮುಖ್ಯ ಸಂಪ್ರದಾಯ. ಹೀಗೆ ಝೆನ್ ಮಾಸ್ಟರ್’ಗಳು ಹೇಳಿದ ಕೊನೆಯ ಮಾತುಗಳನ್ನ, ಪದ್ಯಗಳನ್ನ, ಝೆನ್ ವಿದ್ಯಾರ್ಥಿಗಳು ತುಂಬ ಆಸಕ್ತಿಯಿಂದ ಅಧ್ಯಯನ ಮಾಡುತ್ತಾರೆ.
ಝೆನ್ ಮಾಸ್ಟರ್ ಬಾಂಕಿ ಸಾವಿನ ಹಾಸಿಗೆಯಲ್ಲಿದ್ದ. ಅವನ ಶಿಷ್ಯರೆಲ್ಲ ಬಾಂಕಿಯ ಸುತ್ತ ನೆರೆದಿದ್ದರು. ಸಾವಿಗೂ ಮೊದಲು ಕೊನೆಯದಾಗಿ ಒಂದು ಜ್ಞಾನದ ಮಾತು ಹೇಳುವಂತೆ ಹಿರಿಯ ಶಿಷ್ಯ, ಮಾಸ್ಟರ್ ಬಾಂಕಿಯನ್ನು ಕೇಳಿಕೊಂಡ.
ಒಂದು ನಿಮಿಷ ಕಣ್ಣು ಮುಚ್ಚಿಕೊಂಡು ಧ್ಯಾನ ಮಾಡಿದ ಬಾಂಕಿ ಕೊನೆಯದಾಗಿ ಮಾತನಾಡಿದ,
“ ಸಾಯಲು ನನಗೆ ಭಯವಾಗುತ್ತಿದೆ “
ಈ ಮಾತು ಹೇಳಿತ್ತಿದ್ದಂತೆಯೇ ಬಾಂಕಿ, ಕೊನೆಯ ಉಸಿರೆಳೆದ.
ಈ ಮಾತು ಕೇಳುತ್ತಿದ್ದಂತೆಯೇ ಸುತ್ತ ಸೇರಿದ್ದ ಶಿಷ್ಯರಿಗೆಲ್ಲ ಆಶ್ಚರ್ಯ, ಆಘಾತ ಆಯಿತು. ಆಗ ಅಲ್ಲಿಗೆ ಬಂದ ಇನ್ನೊಬ್ಬ ಝೆನ್ ಮಾಸ್ಟರ್ ಗೆ, ಶಿಷ್ಯರು ಪ್ರಶ್ನೆ ಮಾಡಿದರು.
“ಮಾಸ್ಟರ್ ಬಾಂಕಿಗೆ ಜ್ಞಾನೋದಯವಾಗಿದ್ದರೆ, ಅವನು ಈ ಥರ ಉತ್ತರ ಕೊಡುತ್ತಿರಲಿಲ್ಲ ಅಲ್ಲವೆ? “
ಮಾಸ್ಟರ್ ಗದ್ಗತಿತನಾಗಿ ಉತ್ತರ ಕೊಟ್ಟ.
“ ಬಾಂಕಿಯ ಉತ್ತರ ಕೇಳಿದ ಮೇಲೆ ನನಗಂತೂ ಒಂದು ವಿಷಯ ಸ್ಪಷ್ಚವಾಯಿತು, ಬಾಂಕಿಗೆ ನಿಜವಾಗಿಯೂ ಜ್ಞಾನೋದಯವಾಗಿತ್ತು. ಏಕೆಂದರೆ ಝೆನ್’ಲ್ಲಿ ಎಲ್ಲಕ್ಕಿಂತಲೂ ಶ್ರೇಷ್ಠ ಜ್ಞಾನವೆಂದರೆ ಅದು ಪ್ರಾಮಾಣಿಕತೆ”
ಸಾವು ತುಂಬ ಸುಂದರ. ಏಕೆಂದರೆ ಸಾವಿನಂಥದು ಇನ್ನೊಂದು ಇಲ್ಲವೇ ಇಲ್ಲ – ಎಂಥ ಮೌನ, ಎಷ್ಟು ಆರಾಮದಾಯಕ, ಎಷ್ಟು ನಿಶಾಂತ, ಎಷ್ಟು ಅವಿಚಲಿತ. ಆದರೆ ನಮಗೆ ಸಾವಿನ ಕುರಿತು ಹೆದರಿಕೆ. ಯಾಕೆ ನಮಗೆ ಸಾವು ಎಂದರೆ ಭಯ? ನಾವು ಸಾವಿಗೆ ಅಂಜುತ್ತೇವೆಯಾದರೂ ಅದಕ್ಕೆ ಕಾರಣ ಸಾವಲ್ಲ, ಏಕೆಂದರೆ ಸಾವಿನ ಬಗ್ಗೆ ನಮಗೆ ಏನೂ ಗೊತ್ತಿಲ್ಲ. ಯಾವುದಕ್ಕೆ ನೀವು ಎಂದೂ ಎದುರಾಗಿಲ್ಲವೋ ಅದನ್ನು ಕುರಿತಾದ ಭಯ ಇರುವುದು ಹೇಗೆ ಸಾಧ್ಯ? ಯಾವುದರ ಬಗ್ಗೆ ನಿಮಗೆ ಏನೂ ಗೊತ್ತಿಲ್ಲವೋ ಅದು ಹೇಗೆ ನಿಮ್ಮ ಭಯದ ಕಾರಣವಾಗುವುದು ಸಾಧ್ಯ? ಸಾವಿನ ಬಗ್ಗೆಯೇ ನಿಮಗೆ ಭಯ ಇರುವುದಾದರೆ ಅದರ ಬಗ್ಗೆ ನಿಮಗೆ ಸ್ವಲ್ಪವಾದರೂ ಗೊತ್ತಿರಬೇಕು. ನಿಜವಾಗಿ ನೋಡಿದರೆ ನಿಮ್ಮ ಭಯ ಸಾವಿನ ಕುರಿತಾದುದಲ್ಲ, ಆ ಕಾರಣವೇ ಬೇರೆ. ನಿಮ್ಮ ಭಯದ ನಿಜವಾದ ಕಾರಣ ಬದುಕು, ನೀವು ಬದುಕನ್ನು ಪೂರ್ತಿಯಾಗಿ ಅನುಭವಿಸಿಲ್ಲ ಆದ್ದರಿಂದಲೇ ಈ ಬದುಕು ತೀರಿ ಹೋಗುತ್ತಿದೆಯಲ್ಲ ಎನ್ನುವ ಭಯ ನಿಮ್ಮದು.
ನಾವು ಇರುವವರೆಗೆ ಸಾವು ಬರುವುದಿಲ್ಲ, ಸಾವು ಬಂದಾಗ ನಾವು ಇರುವುದಿಲ್ಲ, ಹೀಗಿರುವ ಸಾವು ಯಾಕೆ ನಮ್ಮೊಳಗಿನ ಭಯಕ್ಕೆ ಕಾರಣವಾಗಿದೆ? ಸಾವು ನಮ್ಮ ಅಂಜಿಕೆಗೆ ಯಾಕೆ ಕಾರಣವೆಂದರೆ ನಾವು ಇನ್ನೂ ಬದುಕನ್ನ ಪೂರ್ತಿಯಾಗಿ ಜೀವಿಸಿಲ್ಲದಿರುವುದು. ನಾನು ಇನ್ನೂ ಪೂರ್ತಿಯಾಗಿ ಬದುಕಿಲ್ಲ, ಹೀಗಿರುವಾಗ ಸಾವು ಸಂಭವಿಸಿದರೆ ಮುಂದೇನು? ನಮ್ಮ ಭಯಕ್ಕೆ ಕಾರಣವಾಗಿರುವುದು ಈ ಅತೃಪ್ತ ಭಾವ. ಯಾರು ಬದುಕನ್ನು ನಿಜವಾಗಿ ಅನುಭವಿಸಿಲ್ಲವೋ ಅವರನ್ನು ಮಾತ್ರ ಸಾವು ಕಾಡುವುದು. ನಿಮ್ಮ ಬದುಕು ಜೀವಂತಿಕೆಯಿಂದ ತುಂಬಿಕೊಂಡಿದೆಯೆಂದರೆ ನಿಮಗೆ ಜೀವಂತಿಕೆಯ ಬಗ್ಗೆ ಗೊತ್ತು, ಸಾವಿನ ಬಗ್ಗೆಯೂ ನಿಮಗೆ ಕುತೂಹಲ. ಹಾಗಾಗಿ ಸಾವು ಎದುರಾದರೆ ಅದನ್ನು ಸ್ವಾಗತಿಸಲು ನೀವು ಸಿದ್ಧ. ಆಗ ಸಾವಿನ ಬಗ್ಗೆ ಯಾವ ಭಯ ಇಲ್ಲ, ಇರುವುದು ಕುತೂಹಲ ಮಾತ್ರ. ನಿಮಗೆ ಬದುಕಿನ ಬಗ್ಗೆ ಗೊತ್ತು, ಈಗ ಸಾವಿನ ಬಗ್ಗೆ ತಿಳಿದುಕೊಳ್ಳಲು ಉತ್ಸುಕರಾಗಿದ್ದೀರಿ. ನಮಗೆ ಬದುಕಿನ ಬಗ್ಗೆಯೇ ಭಯ, ಹಾಗಾಗಿಯೇ ನಾವು ಬದುಕನ್ನ ಅದರ ಆಳಕ್ಕಿಳಿದು ಅನುಭವಿಸಿಲ್ಲ. ಸಾವಿನ ಕುರಿತಾದ ನಮ್ಮ ಭಯಕ್ಕೆ ಇದೇ ಕಾರಣ.

