“ಎಲ್ಲ ಆತಂಕಗಳಿರೋದೇ ನಾಳಿನ ಕಲ್ಪನೆಯಲ್ಲಿ. ಈ ಕ್ಷಣ ಮಾತ್ರ ಆತಂಕದಿಂದ ಮುಕ್ತವಾಗಿದೆ” ಅನ್ನುತ್ತಾರೆ ಓಶೋ | ಚಿದಂಬರ ನರೇಂದ್ರ
ಬದುಕಿನಲ್ಲಿ ಏನೇ ಘಟಿಸಿದರೂ,
ಎಂಥ ಸಂಕಟದ ಸಮಯಗಳು ಎದುರಾದರೂ,
ದಯವಿಟ್ಟು
ಹತಾಶೆಯ ಮನೆ ಇರುವ ವಠಾರಕ್ಕೆ ಕಾಲಿಡಬೇಡ.
ಎಲ್ಲ ಬಾಗಿಲುಗಳು
ಸಂಪೂರ್ಣವಾಗಿ ಮುಚ್ಚಿದ್ದರೂ,
ಭಗವಂತ
ಕೇವಲ ನಿನಗಾಗಿ ಎಂದೇ
ಹೊಸ ದಾರಿಯೊಂದನ್ನು ಹುಟ್ಟು ಹಾಕುತ್ತಾನೆ.
ಅವನ ಅಪಾರ ಕರುಣೆಯನ್ನು ಸ್ಮರಿಸು !
ಎಲ್ಲ ಮನಸ್ಸಿನಂತೆ ನಡೆಯುತ್ತಿರುವಾಗ
ಕೃತಜ್ಞತೆಗಳನ್ನು ಒಪ್ಪಿಸುವುದು ಸುಲಭ ಸಾಧ್ಯ.
ಆದರೆ ತನಗೆ
ಕೊಡಲಾಗಿರುವುದರ ಬಗ್ಗೆ ಮಾತ್ರ ಅಲ್ಲ
ನಿರಾಕರಿಸಿದ್ದರ ಬಗ್ಗೆ ಕೂಡ
ಸೂಫಿ ಕೃತಜ್ಞ.
~ ಶಮ್ಸ್ ತಬ್ರೀಝಿ
ಓಶೋ ಒಂದು ಕತೆ ಹೇಳುತ್ತಾರೆ.
ಒಮ್ಮೆ ಜೀಸಸ್ ತಮ್ಮ ಶಿಷ್ಯರನ್ನು ಕೇಳಿದರಂತೆ…
“ಬಯಲಲ್ಲಿ ಅರಳಿರುವ ಲಿಲ್ಲಿ ಹೂವುಗಳು ಕಾಣಿಸುತ್ತಿವೆಯಾ? ಅವುಗಳ ಚೆಲುವು ಎಂಥದು? ಅವುಗಳ ಚೆಲುವಿನ ರಹಸ್ಯ ಏನು? ಪಾಪದ ಲಿಲ್ಲಿ ಹೂವುಗಳು, ಏನು ಅವುಗಳ ಸೌಂದರ್ಯದ ಕಾರಣ? ಆ ಹೂಗಳಲ್ಲಿನ ಸುಗಂಧ ಎಲ್ಲಿಂದ ಬಂತು? ಚಕ್ರವರ್ತಿ ಸೊಲೋಮನ್ ತನ್ನ ಎಲ್ಲ ನೈಭವದಲ್ಲಿ ಕೂಡ ಈ ಹಾದಿ ಬದಿಯ ಹೂಗಳ ಚೆಲುವಿಗೆ ಸಮಾನನಾಗಲಾರ. ಇಂಥ ಚೆಲುವನ್ನು ಹೂವುಗಳಲ್ಲಿ ಇಟ್ಟವರು ಯಾರು?”
ಈ ಎಲ್ಲದರ ರಹಸ್ಯ ಇಷ್ಟು ಮಾತ್ರ : ಈ ಹೂವುಗಳಿಗೆ ಹಿಂದೆ ಆಗಿ ಹೋದದ್ದರ ಬಗ್ಗೆ ಸಂಭ್ರಮವಿಲ್ಲ, ಕಳವಳವಿಲ್ಲ. ನಾಳೆ ಬರುವುದರ ಬಗಿಗೆ ಯಾವ ನಿರೀಕ್ಷೆ ಇಲ್ಲ , ಉತ್ಸುಕತೆ ಇಲ್ಲ, ಭೀತಿ ಇಲ್ಲ. ಈ ಹೂಗಳಿಗೆ ನಿನ್ನೆಯ ಬಗ್ಗೆ ಚಿಂತೆ ಇಲ್ಲ, ನಾಳೆಯ ಬಗ್ಗೆ ಆತಂಕಗಳಿಲ್ಲ, ಅವು ಸುಮ್ಮನೇ ಈ ಕ್ಷಣವನ್ನು ಸಂಭ್ರಮಿಸುತ್ತಿವೆ. “ಆದ್ದರಿಂದ ನಾಳೆಯ ಬಗ್ಗೆ ಆಲೋಚನೆ ಮಾಡಬೇಡಿ” ಅನ್ನುತ್ತಾರೆ ಜೀಸಸ್.
ಓಶೋ ಹೇಳುವಂತೆ ಎಲ್ಲ ಆತಂಕಗಳಿರೋದೇ ನಾಳಿನ ಕಲ್ಪನೆಯಲ್ಲಿ. ಈ ಕ್ಷಣ ಮಾತ್ರ ಆತಂಕದಿಂದ ಮುಕ್ತವಾಗಿದೆ. ಎಲ್ಲಿ ಆತಂಕ ಇಲ್ಲವೋ, ಎಲ್ಲಿ ನಿರೀಕ್ಷೆಗಳಿಲ್ಸವೋ, ಎಲ್ಲಿ ಚಿಂತೆಗಳಿಲ್ಲವೂ, ಅಲ್ಲಿ ಬುದ್ಧಿ – ಮನಸ್ಸು (mind) ಗಳಿಗೆ ಅವಕಾಶವಿಲ್ಲ. ಮೈಂಡ್ ನ ಅನುಪಸ್ಥಿತಿಯಲ್ಲಿ ಮಾತ್ರ ದೇವರ ಉಪಸ್ಥಿತಿ ಸಾಧ್ಯ . ಮೈಂಡ್ ನಾಶ ಆದಾಗ ಮಾತ್ರ ದೈವದ ಅನುಭವವಾಗುತ್ತದೆ.
ನಸ್ರುದ್ದೀನ್ ನ ಹೆಂಡತಿ ತುಂಬ ಬೇಸರದಲ್ಲಿರುವವನಂತೆ ಕಂಡುಬಂದ ಗಂಡನನ್ನು ಪ್ರೀತಿಯಿಂದ ವಿಚಾರಿಸಿದಳು.
“ ತುಂಬಾ ಚಿಂತೆಯಲ್ಲಿರುವವನಂತೆ ಕಾಣುತ್ತೀ, ಯಾಕೆ ಏನಾಯ್ತು ? “
“ ನೋಡು, ನನಗೆ ಎಷ್ಟು ಚಿಂತೆಗಳಿವೆಯೆಂದರೆ, ಇವತ್ತು ಏನಾದರೂ ಅನಾಹುತವಾದರೆ ಅದರ ಬಗ್ಗೆ ಚಿಂತೆ ಮಾಡಲು ಇನ್ನೂ ಒಂದು ತಿಂಗಳು ಸಮಯವಿಲ್ಲ . ನನ್ನ ಕಾಡುತ್ತಿರುವ ಚಿಂತೆ ಇದು “
ನಸ್ರುದ್ದೀನ್ ಚಿಂತಾಕ್ರಾಂತನಾಗಿ ಉತ್ತರಿಸಿದ.

