ಏನು ಮಾತ್ತನಾಡುತ್ತಿದ್ದೇವೆ ಎನ್ನುವುದು ಗೊತ್ತಿರದೇ ನಾವು ಸುಮ್ಮನೇ ಮಾತನಾಡುತ್ತಲೇ ಇರುತ್ತೇವೆ. ಎಲ್ಲವನ್ನೂ ಮಾತ್ತುಗಳಲ್ಲಿ ಕಟ್ಟಿ ಹಾಕುವುದನ್ನ ನಿಲ್ಲಿಸಿ, ಆಗ ಮಾತ್ರ ನಿಮ್ಮ ಭಾವನೆಗಳನ್ನು ಆಳವಾಗಿಸಿಕೊಳ್ಳಬಹುದು… ~ ಓಶೋ ರಜನೀಶ್; ಕನ್ನಡಕ್ಕೆ: ಚಿದಂಬರ ನರೇಂದ್ರ
ನಾನು ಯುನಿವರ್ಸಿಟಿಯಲ್ಲಿ ಕೆಲಸ ಮಾಡುತ್ತಿದ್ದಾಗ ನನ್ನ ಜೊತೆ ಕೆಲಸ ಮಾಡುತ್ತಿದ್ದ ಲೇಡಿ ಪ್ರೊಫೆಸರ್ ಒಬ್ಬರು ನೆನಪಾಗುತ್ತಿದ್ದಾರೆ. ಆಕೆ ಸದಾ ಏನೋ ಒಂದು ಮಾತನಾಡುತ್ತಲೇ ಇರುತ್ತಿದ್ದರು. ಯಾವ ಸ್ಥಿತಿಯಲ್ಲೂ ಅವರಿಗೆ ಸುಮ್ಮನೇ ಇರುವುದು ಸಾಧ್ಯವಾಗುತ್ತಿರಲಿಲ್ಲ. ಒಂದು ದಿನ ಸೂರ್ಯಾಸ್ತವಾಗುತ್ತಿತ್ತು, ನಾನು ಕಾಲೇಜಿನ ಅಂಗಳದಲ್ಲಿ ನಿಂತು ಸೂರ್ಯ ಮುಳುಗುವ ಚಂದವನ್ನು ಗಮನಿಸುತ್ತಿದ್ದೆ. ಅವತ್ತು ಸೂರ್ಯಾಸ್ತ ಭಯಂಕರ ಸುಂದರವಾಗಿ ಕಾಣಿಸುತ್ತಿತ್ತು.
ನನ್ನ ಪಕ್ಕ ನಿಂತಿದ್ದ ಲೇಡಿ ಪ್ರೊಫೆಸರ್ ಏನೋ ಹೇಳುತ್ತಿದ್ದರು. ನಾನು ಅವರಿಗೆ ಹೇಳಿದೆ, “ ಮೇಡಂ ನೋಡಿ ಇವತ್ತಿನ ಸೂರ್ಯಾಸ್ತ ಎಷ್ಟು ಸುಂದರವಾಗಿದೆ”. ಒಲ್ಲದ ಮನಸ್ಸಿನಿಂದ ಸೂರ್ಯಾಸ್ತ ನೋಡತೊಡಗಿದ ಅವರು ಒಂದು ನಿಮಿಷದ ನಂತರ ಮತ್ತೆ ಮಾತನಾಡಿದರು, “ ಸೂರ್ಯಾಸ್ತ ಏನೋ ಚೆನ್ನಾಗಿದೆ ಆದರೆ ಎಡಭಾಗದ ನೇರಳೆ ಬಣ್ಣ ಇನ್ನೊಂಚೂರು ಗಾಢವಾಗಿದ್ದರೆ ಸೂರ್ಯಾಸ್ತ ಇನ್ನೂ ಚೆನ್ನಾಗಿ ಕಾಣುತ್ತಿತ್ತು”. ಅದು ಪೇಂಟಿಂಗ್ ಅಲ್ಲ ನಿಜವಾದ ಸೂರ್ಯಾಸ್ತ ಎನ್ನುವುದನ್ನ ಗಮನಿಸದೇ ಅವರು ಸೂರ್ಯಾಸ್ತದ ವಿಮರ್ಶೆ ಮಾಡುತ್ತಲೇ ಹೋದರು.
ನಾವು ಏನು ಮಾತ್ತನಾಡುತ್ತಿದ್ದೇವೆ ಎನ್ನುವುದು ಗೊತ್ತಿರದೇ ನಾವು ಸುಮ್ಮನೇ ಮಾತನಾಡುತ್ತಲೇ ಇರುತ್ತೇವೆ. ಎಲ್ಲವನ್ನೂ ಮಾತ್ತುಗಳಲ್ಲಿ ಕಟ್ಟಿ ಹಾಕುವುದನ್ನ ನಿಲ್ಲಿಸಿ, ಆಗ ಮಾತ್ರ ನಿಮ್ಮ ಭಾವನೆಗಳನ್ನು ಆಳವಾಗಿಸಿಕೊಳ್ಳಬಹುದು.
ಸಂವೇದನೆಗಳನ್ನು ಶಾರ್ಪ್ ಮಾಡಿಕೊಳ್ಳಿ. ನೀವು ಏನೋ ಒಂದನ್ನು ಮುಟ್ಟಿದಾಗ, ಅಥವಾ ಕೇಳಿದಾಗ, ಅಥವಾ ಸೇವಿಸಿದಾಗ, ಅಥವಾ ನೀವು ಸ್ನಾನ ಮಾಡುವಾಗ ನಿಮ್ಮ ಇಂದ್ರಿಯಗಳನ್ನು ತೆರೆದಿಟ್ಟು ಎಲ್ಲವನ್ನೂ ಅನುಭವಿಸಿ, ಅವುಗಳ ಬಗ್ಗೆ ಆಲೋಚನೆ ಮಾಡಬೇಡಿ, ಅನುಭವಿಸಿ.
ನೀವು ಸ್ನಾನಕ್ಕಾಗಿ ಶಾವರ್ ಕೆಳಗೆ ನಿಂತಿದ್ದೀರಿ. ನಿಮ್ಮ ಮೇಲೆ ಜಿನುಗುತ್ತಿರುವ ನೀರಿನ ತಂಪನ್ನು ಅನುಭವಿಸಿ.
ತಂಪು ನೀರಿನ ಬಗ್ಗೆ ಆಲೋಚನೆ ಮಾಡಲು ಶುರು ಮಾಡಬೇಡಿ, ನೀರು ಬಹಳ ಕೋಲ್ಡ್ ಆಗಿದೆ, ಇದು ದೇಹಕ್ಕೆ ಒಳ್ಳೆಯದು ಅಥವಾ ಕೆಟ್ಟದ್ದು ಇತ್ಯಾದಿಯಾಗಿ ಏನೂ ಹೇಳಿಕೊಳ್ಳಬೇಡಿ. ಆಲೋಚನೆಗಳಿಗೆ ಮಾತಿನ ರೂಪ ನೀಡುತ್ತ ಕುಳಿತುಕೊಳ್ಳಬೇಡಿ. ನೀವು ವರ್ಬಲೈಜ್ ಮಾಡಲು ಶುರು ಮಾಡುತ್ತಿದ್ದಂತೆಯೇ ಫೀಲಿಂಗ್ಸ್ ಗಳನ್ನ ಮಿಸ್ ಮಾಡಿಕೊಳ್ಳುತ್ತೀರಿ. ಮಾತು ಹುಟ್ಟಿದ್ದ ಕೂಡಲೇ ಮೈಂಡ್ ತನ್ನ ಕೆಲಸ ಆರಂಭಿಸುತ್ತದೆ. ಮಾತನಾಡಿಕೊಳ್ಳಲು ಹೋಗಬೇಡಿ, ಸುಮ್ಮನೇ ನಿಮ್ಮ ಮೇಲೆ ಬೀಳುತ್ತಿರುವ ನೀರ ಹನಿಗಳನ್ನು ಅನುಭವಿಸಿ. ಆದರೆ ನಮ್ಮ ಮೈಂಡ್ ಸುಮ್ಮನಿರುವುದಲ್ಲ ಆಗಲೇ ತನ್ನ ವಿಮರ್ಶೆ ಶುರು ಮಾಡಿಬಿಟ್ಟಿರುತ್ತದೆ. ಸಾಧ್ಯ ಆದಷ್ಟು ಮಾತುಗಳಲ್ಲಿ ಕಟ್ಟಿಕೊಂಡಿರುವುದನ್ನ ಬಿಟ್ಟು ನೇರವಾಗಿ ಅನುಭವಕ್ಕೆ ತೆರೆದುಕೊಳ್ಳಿ.
ತನ್ನ ಗೆಳತಿಯರೆಲ್ಲ ಬಿಟ್ಚು ಹೋದರೆಂದು, ತನ್ನ ಜೊತೆ ಮಾತನಾಡುವವರು ಯಾರೂ ಇಲ್ಲವಂದು ನಸ್ರುದ್ದೀನ್ ನ ಹೆಂಡತಿ ಬೇಸರದಲ್ಲಿದ್ದಳು.
“ ನನ್ನ ಮಾತು ಕೇಳು ಒಂದು ತಿಂಗಳು ಏಕಾಂತದಲ್ಲಿರು, ಸ್ವತಃ ನಿನ್ನ ಜೊತೆ ಕಾಲ ಕಳೆ ಆಗ ನಿನ್ನ ಬೇಸರ ಕಡಿಮೆಯಾಗಬಹುದು “
ನಸ್ರುದ್ದೀನ್ ಹೆಂಡತಿಗೆ ಸಲಹೆ ನೀಡಿದ.
“ ಏನು ! ಒಂದು ತಿಂಗಳು ನಾನು ಒಬ್ಬಳೇ ಇರಬೇಕಾ ?
ಸಾಧ್ಯವಿಲ್ಲ ನನಗೆ ಬೋರ್ ಆಗತ್ತೆ “
ನಸ್ರುದ್ದೀನ್ ನ ಹೆಂಡತಿ ಏಕಾಂತವನ್ನು ನಿರಾಕರಿಸಿದಳು.
“ ನೋಡು ನಿನ್ನ ಸಹವಾಸವೇ ನಿನಗೆ ಬೋರ್ ಅನಿಸುವಾಗ, ನಿನ್ನ ಗೆಳತಿಯರಿಗೆ ಹೇಗೆ ನೀನು ಇಂಟರೆಸ್ಟಿಂಗ್ ಆಗಿರುವುದು ಸಾಧ್ಯ? “
ನಸ್ರುದ್ದೀನ್ ಹೆಂಡತಿಗೆ ಅವಳ ಸಮಸ್ಯೆಯ ಕಾರಣ ವಿವರಿಸಿದ.

