ಧ್ಯಾನವೆಂದರೆ ಸಾಕ್ಷಿಯಾಗುವುದು… | ಓಶೋ ವ್ಯಾಖ್ಯಾನ

ಧ್ಯಾನ ಎನ್ನುವುದು ಹಸ್ತಕ್ಷೇಪದಿಂದ ಹೊರತಾದದ್ದು. ನಿಜ, ಧ್ಯಾನ ಇಲ್ಲವಾದಾಗ ನೀವು ಪ್ರತಿಕ್ಷಣ ಪ್ರತಿಯೊಂದರಲ್ಲೂ ಹಸ್ತಕ್ಷೇಪ ಮಾಡುತ್ತಿರುತ್ತೀರಿ. ಧ್ಯಾನ ಹಸ್ತಕ್ಷೇಪದ ಆಚೆಗಿನದು, ಅದು ನಿಮ್ಮನ್ನು ಕೇವಲ ಸಾಕ್ಷಿಯಾಗಿಸುತ್ತದೆ… ~ ಓಶೋ ರಜನೀಶ್; ಕನ್ನಡಕ್ಕೆ: ಚಿದಂಬರ ನರೇಂದ್ರ

ಮಹರ್ಷಿ ರಮಣರು ತೀರಿಕೊಂಡಿದ್ದು ಕ್ಯಾನ್ಸರ್ ನಿಂದಾಗಿ. ಕ್ಯಾನ್ಸರ್ ಚಿಕಿತ್ಸೆಗೆ ಒಳಪಡುವಂತೆ ರಮಣರನ್ನು ಮನವೊಲಿಸಲು ಅವರ ಶಿಷ್ಯರು ಬಹಳ ಪ್ರಯತ್ನಪಟ್ಟರು. “ನಿಮಗೆ ಖುಶಿಯಾಗುತ್ತದೆಯಾದರೆ ಚಿಕಿತ್ಸೆ ಕೊಡಿಸಿ ಆದರೆ ಚಿಕಿತ್ಸೆ ನನಗೇನು ಬೇಕಾಗಿಲ್ಲ” ಮಹರ್ಷಿ ರಮಣರು ಖಡಾಖಂಡಿತವಾಗಿ ಹೇಳಿಬಿಟ್ಟರು. ರಮಣರ ಮಾತು ಕೇಳಿ ಡಾಕ್ಟರ್ ಗಳಿಗೆ ಆಶ್ಚರ್ಯವಾಯಿತು. ರಮಣರ ಇಡೀ ದೇಹ ತೀವ್ರ ನೋವಿನಿಂದ ಯಾತನೆಗೆ ಒಳಗಾಗಿತ್ತು ಆದರೆ ಅವರ ಕಣ್ಣುಗಳಲ್ಲಿ ನೋವಿನ ಯಾವ ಸೂಚನೆಯೂ ಕಾಣಿಸುತ್ತಿರಲಿಲ್ಲ. ಅವರ ದೇಹ ಯಾತನೆಗೆ ಒಳಗಾಗಿತ್ತೆೇ ವಿನಃ ರಮಣರು ಮಾತ್ರ ಖುಶಿಯಿಂದಲೇ ಇದ್ದರು.

ದೇಹ, ಕರ್ಮದ ಒಂದು ಭಾಗ, ಕಾರಣ-ಪರಿಣಾಮಗಳ (cause & effect) ಯಾಂತ್ರಿಕ ವೃತ್ತಕ್ಕೆ ಸಂಬಂಧಿಸಿದ್ದು. ಆದರೆ ಪ್ರಜ್ಞೆ ಇವುಗಳಿಂದ ಹೊರತಾದಂಥದು, ಇವುಗಳನ್ನು ಮೀರುವಂಥದು. ರಮಣರು ತಮ್ಮ ದೇಹವನ್ನು ಕಿತ್ತು ತಿನ್ನುತ್ತಿದ್ದ ಕ್ಯಾನ್ಸರ್ ಗೆ ಕೇವಲ ಸಾಕ್ಷಿಯಾಗಿದ್ದರು. ಈ ಯಾವುದರಲ್ಲೂ ರಮಣರು ಹಸ್ತಕ್ಷೇಪ ಮಾಡುತ್ತಿರಲಿಲ್ಲ ಅವರು ಕೇವಲ ಆಗುತ್ತಿರುವುದಕ್ಕೆ ಸಾಕ್ಷಿಯಾಗಿದ್ದರು. ತಮ್ಮ ದೇಹ ಅನುಭವಿಸುತ್ತಿರುವುದನ್ನ ರಮಣರು ದೂರ ನಿಂತು ವೀಕ್ಷಿಸುತ್ತಿದ್ದರು, ಅವರು ಈ ವಿಷವೃತ್ತದ ಭಾಗವಾಗಿರಲಿಲ್ಲ, ಕ್ಯಾನ್ಸರ್ ನೊಂದಿಗೆ ಅವರು ತಮ್ಮನ್ನು ತಾವು ಗುರುತಿಸಿಕೊಳ್ಳಲಿಲ್ಲ.

ಧ್ಯಾನ ಎನ್ನುವುದು ಹಸ್ತಕ್ಷೇಪದಿಂದ ಹೊರತಾದದ್ದು. ನಿಜ, ಧ್ಯಾನ ಇಲ್ಲವಾದಾಗ ನೀವು ಪ್ರತಿಕ್ಷಣ ಪ್ರತಿಯೊಂದರಲ್ಲೂ ಹಸ್ತಕ್ಷೇಪ ಮಾಡುತ್ತಿರುತ್ತೀರಿ. ಧ್ಯಾನ ಹಸ್ತಕ್ಷೇಪದ ಆಚೆಗಿನದು, ಅದು ನಿಮ್ಮನ್ನು ಕೇವಲ ಸಾಕ್ಷಿಯಾಗಿಸುತ್ತದೆ. ಆಗ ನೀವು ಬೆಟ್ಟದ ತುದಿಯಲ್ಲಿ ಕುಳಿತಿರುವ ವೀಕ್ಷಕನಂತೆ, ಬೆಟ್ಟದ ಕೆಳಗಿನ ಕಣಿವೆಯಲ್ಲಿ ಎಲ್ಲ ನಡೆಯುತ್ತಿರುತ್ತದೆ, ಆದರೆ ನೀವು ಮಾತ್ರ ಯಾವುದಕ್ಕೂ ಸಂಬಂಧಿಸಿದವರಲ್ಲ, ನೀವು ಕೇವಲ ಸಾಕ್ಷಿಮಾತ್ರ. ನಡೆಯುತ್ತಿರುವುದೆಲ್ಲ ಯಾರೋ ಇನ್ನೊಬ್ಬರ ಜೊತೆ ನಡೆಯುತ್ತಿರುವಂತೆ, ಅಥವಾ ಕನಸಿನಲ್ಲಿ ಸಂಭವಿಸುತ್ತಿರುವಂತೆ, ಅಥವಾ ಫಿಲ್ಮನ ಪರದೆಯ ಮೇಲೆ ಘಟಿಸುತ್ತಿರುವಂತೆ. ನೀವು ಯಾವುದರಲ್ಲೂ ಹಸ್ತಕ್ಷೇಪ ಮಾಡುತ್ತಿಲ್ಲ. ನೀವು ಈ ಯಾವ ನಾಟಕದ ಭಾಗವಾಗಿಲ್ಲ, ಈ ಎಲ್ಲದರಿಂದ ನೀವು ಹೊರಗೆ ಬಂದಿರುವಿರಿ. ಈಗ ನೀವು ನಟ ಅಲ್ಲ ಕೇವಲ ವೀಕ್ಷಕ ಮಾತ್ರ, ಧ್ಯಾನ ಸಾಧ್ಯ ಮಾಡುವುದು ಈ ಬದಲಾವಣೆಯನ್ನೇ.

ನೀವು ಕೇವಲ ಸಾಕ್ಷಿಯಾಗಿರುವಾಗ, ದೇಹ ತಾನು ಏನಾಗಬೇಕೆಂದಿದೆಯೋ ಅದನ್ನು ತಾನು ಪೂರ್ಣಗೊಳಿಸಿಕೊಳ್ಳುತ್ತದೆ. ನಿಮ್ಮ ದೇಹದ ಯಾತನೆಗೆ ನಿಮ್ಮ ಹಲವಾರು ಕರ್ಮಗಳು ಕಾರಣವಾಗಿರುವಾಗ, ಮತ್ತು ನೀವು ಈಗ ಕೇವಲ ಸಾಕ್ಷಿಯಾಗಿರುವುದರಿಂದ, ನೀವು ಮತ್ತೆ ಮತ್ತೆ ಹುಟ್ಟುವುದಿಲ್ಲ, ತನ್ನ ಹಲವಾರು ಜನ್ಮಗಳ ಯಾತನೆಯನ್ನ ನಿಮ್ಮ ದೇಹ ಈ ಜನ್ಮದಲ್ಲಿಯೇ ಅನುಭವಿಸಬೇಕು. ಆದ್ದರಿಂದಲೇ ಬಹುತೇಕ ಜ್ಞಾನೋದಯವನ್ನು ಹೊಂದಿದ ಜನ ತಮ್ಮ ಬದುಕಿನ ಕೊನೆಯಲ್ಲಿ ತೀವ್ರ ದೈಹಿಕ ಯಾತನೆಗೆ ಗುರಿಯಾಗುತ್ತಾರೆ ಏಕೆಂದರೆ ಅವರಿಗೆ ಮುಂದಿನ ಜನ್ಮವೆನ್ನುವುದು , ಭವಿಷ್ಯವೆನ್ನುವುದು ಯಾವುದೂ ಇಲ್ಲ. ಇದು ಅವರ ಕೊನೆಯ ದೇಹ, ಆದ್ದರಿಂದ ಎಲ್ಲ ಕರ್ಮಗಳನ್ನು ಈ ದೇಹವೇ ಅನುಭವಿಸಬೇಕು, ಜೀವನ ಚಕ್ರ ಇಲ್ಲಿಗೇ ಪೂರ್ಣಗೊಳ್ಳಬೇಕು, ಕೊನೆಯಾಗಿಬಿಡಬೇಕು.

Unknown's avatar

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

Leave a Reply

This site uses Akismet to reduce spam. Learn how your comment data is processed.