ಸೌಂದರ್ಯ ಯಾವ ವ್ಯಕ್ತಿಯಲ್ಲೂ ಇಲ್ಲ, ಯಾವ ವಸ್ತುವಿನಲ್ಲೂ ಇಲ್ಲ. ಸೌಂದರ್ಯ ಎನ್ನುವುದು ಕೇವಲ ಪ್ರೊಜೆಕ್ಷನ್ ಮಾತ್ರ…| ಓಶೋ / A Bird on the Wing; ಕನ್ನಡಕ್ಕೆ : ಚಿದಂಬರ ನರೇಂದ್ರ
‘ಚೆಲುವು’ ಎಂದು ತೀರ್ಮಾನಿಸಿದಾಗಲೇ
ಹುಟ್ಟಿಕೊಂಡದ್ದು ಕುರೂಪ.
‘ಒಳ್ಳೆಯದು’ ಎಂದು ಹೆಸರಿಟ್ಟಾಗಲೇ
ಕೆಡುಕಿನ ನಾಮಕರಣ ಕೂಡ.
ಇರುವುದು ಮತ್ತು ಇರದಿರುವುದು
ಹುಟ್ಟಿಸುತ್ತವೆ ಒಂದನ್ನೊಂದು.
ಸರಳ ಮತ್ತು ಸಂಕೀರ್ಣ, ಆಸರೆ ಒಂದಕ್ಕೊಂದು.
ದೂರ – ಸಮೀಪ
ವ್ಯಾಖ್ಯಾನ ಮಾಡುತ್ತವೆ, ಒಂದು ಇನ್ನೊಂದನ್ನು.
ಆಳ ಮತ್ತು ಎತ್ತರ
ಸವಾರಿ ಮಾಡುತ್ತವೆ, ಒಂದರ ಮೇಲೊಂದು.
ಭೂತ ಮತ್ತು ಭವಿಷ್ಯ
ಹಿಂಬಾಲಿಸುತ್ತವೆ, ಒಂದನ್ನೊಂದು.
ಆದ್ದರಿಂದಲೇ ಸಂತನ ಕೆಲಸದಲ್ಲಿ
ದುಡಿಮೆ ಇಲ್ಲ,
ಕಲಿಸುವಿಕೆಯಲ್ಲಿ ಮಾತಿಲ್ಲ.
ತೊಟ್ಟಿಲು ತೂಗುವಲ್ಲಿ ಇರುವಷ್ಟೇ ನಿಷ್ಠೆ
ಹೆಣ ಹೊರುವಲ್ಲಿಯೂ,
ತಾಯಿಯಾಗಲೊಲ್ಲ, ಕವಿಯಾಗಲೊಲ್ಲ,
ಬೀಜ ಬಿತ್ತಿ, ಪಾತಿ ಮಾಡಿ, ನೀರು ಉಣಿಸಿ
ಸುಮ್ಮನಾಗುತ್ತಾನೆ.
ಅಂತೆಯೇ ತಾವೋ ಅನನ್ಯ, ಅವಿನಾಶಿ.
~ ಲಾವೋತ್ಸೇ
********************
ನಿಮ್ಮ ಪ್ರೇಮದ ಶುರುವಾತಿನಲ್ಲಿ, ನಿಮಗೆ ನಿಮ್ಮ ಪ್ರೇಮಿ ಈ ಲೋಕದವಳಲ್ಲ ಯಾವುದೋ ಗಂಧರ್ವ ಲೋಕದ ಅಪ್ಸರೆಯಂತೆ ಕಾಣುತ್ತಿರುತ್ತಾಳೆ. ಅವಳ ಪ್ರತಿಯೊಂದು ಹಾವ ಭಾವ , ನಡೆ ನುಡಿ ಎಲ್ಲವೂ ನಿಮಗೆ ಅತ್ಯಾಪ್ತವಾಗಿರುತ್ತದೆ, ಎಲ್ಲವೂ ವಿಶೇಷ ಅನಿಸುತ್ತಿರುತ್ತದೆ. ಆದರೆ ಪರಿಚಯ ಹೆಚ್ಚಾದಂತೆ ಆಕೆ ನಿಮಗೆ ಸಾಧಾರಣ ಅನಿಸತೊಡಗುತ್ತಾಳೆ, ನೀವು ಅವಳಲ್ಲಿ ಈ ಜಗತ್ತಿನ ಎಲ್ಲ ಕೊರತೆಗಳನ್ನು ಗುರುತಿಸತೊಡಗುತ್ತೀರಿ. ಮೋಸಹೋದ ಭಾವ ಈಗ ನಿಮ್ಮನ್ನು ಕಾಡಲು ಶುರುಮಾಡುತ್ತದೆ. ಆದರೆ ನಿಮ್ಮನ್ನು ಬೇರೆ ಯಾರೂ ಮೋಸ ಮಾಡಲಿಲ್ಲ, ಮೋಸ ಎನ್ನುವುದು ಏನಾದರೂ ಇದ್ದರೆ ಅದು ನಿಮ್ಮ ಮೈಂಡ್ ನ ಕೈವಾಡ. ನಿಮ್ಮ ಬಯಕೆಗಳಿಗೆ ನೀರೆರೆಯಲು ನಿಮ್ಮ ಮೈಂಡ್ ಅವಳ ಮೇಲೆ ಸೌಂದರ್ಯವನ್ನು ಪ್ರೊಜೆಕ್ಟ್ ಮಾಡಿತ್ತು,
ಸೌಂದರ್ಯ ಯಾವ ವ್ಯಕ್ತಿಯಲ್ಲೂ ಇಲ್ಲ, ಯಾವ ವಸ್ತುವಿನಲ್ಲೂ ಇಲ್ಲ. ಸೌಂದರ್ಯ ಎನ್ನುವುದು ಕೇವಲ ಪ್ರೊಜೆಕ್ಷನ್ ಮಾತ್ರ. ಸೌಂದರ್ಯ ವಸ್ತುನಿಷ್ಠವಾದದ್ದಲ್ಲ, ಅದು ಯಾವಾಗಲೂ ವ್ಯಕ್ತಿಗತವಾದದ್ದು. ಒಂದು ದಿನ ಒಬ್ಬರು ನಿಮಗೆ ಅತೀ ಸುಂದರರಾಗಿ ಕಾಣುತ್ತಾರೆ ಆದರೆ ಅದೇ ವ್ಯಕ್ತಿ ಇನ್ನೊಂದು ದಿನ ನಿಮಗೆ ಕುರೂಪಿ ಅನಿಸುತ್ತಾರೆ. ಸೌಂದರ್ಯವೇ ಆಗಲಿ ಅಥವಾ ಕುರೂಪಿತನವೇ ಆಗಲಿ ಆ ವ್ಯಕ್ತಿಯಲ್ಲಿಲ್ಲ, ಅದನ್ನ ಪ್ರೊಜೆಕ್ಟ್ ಮಾಡುತ್ತಿರುವವರು ನೀವು, ಆ ವ್ಯಕ್ತಿ ನಿಮಗೆ ಕೇವಲ ನೀವು ಪ್ರೊಜೆಕ್ಟ್ ಮಾಡಿದ್ದನ್ನು ನಿಮಗೆ ತೋರಿಸುವ ಸ್ಕ್ರೀನ್ ನಂತೆ.
ಸೌಂದರ್ಯ ಮತ್ತು ಕುರೂಪಿತನವನ್ನು ಪ್ರೊಜೆಕ್ಟ್ ಮಾಡುತ್ತಿರುವುದು ಹಾಗು ಒಳ್ಳೆಯತನ ಹಾಗು ಕೆಟ್ಟತನವನ್ನ ಪ್ರೊಜೆಕ್ಟ್ ಮಾಡುತ್ತಿರುವುದು ಬೇರೆ ಯಾರೂ ಅಲ್ಲ ಅದು ನಿಮ್ಮ ಮೈಂಡ್ ಎನ್ನುವ ತಿಳುವಳಿಕೆ ನಿಮ್ಮಲ್ಲಿ ಗಟ್ಟಿಯಾದಾಗ ನೀವು ಪ್ರೊಜೆಕ್ಟ್ ಮಾಡುವುದನ್ನು ನಿಲ್ಲಿಸುತ್ತೀರಿ. ಆಗ ನಿಮಗೆ ಮೊದಲಬಾರಿಗೆ ವಸ್ತುನಿಷ್ಠ ಸತ್ಯ ಎಂದರೆ ಏನು ಎನ್ನುವುದು ಗೊತ್ತಾಗುತ್ತದೆ. ಒಳ್ಳೆಯದು, ಕೆಟ್ಟದ್ದು, ಚೆಲುವು, ಕುರೂಪ ಯಾವುದು ನಿಜವಲ್ಲ. ಪ್ರೊಜೆಕ್ಟ್ ಮಾಡುವುದನ್ನ ನೀವು ನಿಲ್ಲಿಸಿದಾಗ ನಿಮ್ಮ ವ್ಯಾಖ್ಯಾನಗಳೂ ನಿಂತು ಹೋಗುತ್ತವೆ.
ಒಮ್ಮೆ ನಸ್ರುದ್ದೀನ್ ಹಾಸ್ಪಿಟಲ್ ಮೇಲೆ ಕೇಸ್ ಹಾಕಿದ.
“ ಆಪರೇಶನ್ ಆದಮೇಲೆ ಹೆಂಡತಿಗೆ ನನ್ನ ಮೇಲೆ ಇಂಟರೆಸ್ಟ್ ಕಡಿಮೆಯಾಗಿದೆ, ಇದಕ್ಕಾಗಿ ಆಸ್ಪತ್ರೆ ನನಗೆ ಪರಿಹಾರ ಕೊಡಬೇಕು “
ಹಾಸ್ಪಿಟಲ್ ನ ವಕೀಲ ಸ್ಪಷ್ಚನೆ ನೀಡಿದ.
“ ನಾವು ಮಾಡಿದ್ದು ಕ್ಯಾಟ್ರ್ಯಾಕ್ಟ್ ಆಪರೇಶನ್, ಈಗ ನಿನ್ನ ಹೆಂಡತಿಗೆ ಈಗ ಎಲ್ಲ ಸ್ಪಷ್ಚವಾಗಿ ಕಾಣಿಸುತ್ತಿದೆ “

