ಆತ್ಮಕ್ಕೆ ಏನೂ ತಿಳಿಯುವುದಿಲ್ಲ, ಅದು ಸ್ವತಃ ತಾನೇ ಒಂದು ತಿಳುವಳಿಕೆ. ಆತ್ಮ ಅಸ್ತಿತ್ವದಲ್ಲಿದೆ, ಅದು ಪ್ರೀತಿಸುತ್ತದೆ, ಅದಕ್ಕೆ ತಿಳುವಳಿಕೆ ಇದೆ ಎಂದು ಅಂದುಕೊಳ್ಳುವುದೆಲ್ಲ ಬಹಳ ತಪ್ಪು… | ರಾಜಯೋಗದಿಂದ; ಕನ್ನಡಕ್ಕೆ: ಚಿದಂಬರ ನರೇಂದ್ರ
ಒಮ್ಮೆ ಸ್ವರ್ಗದ ಅಧಿಪತಿ ಇಂದ್ರ ಹಂದಿಯಾಗಿ ಬದಲಾವಣೆ ಹೊಂದಿದ. ಕೆಸರಲ್ಲಿ ಉರಳಾಡುತ್ತ ತನ್ನ ಹಂದಿರೂಪಿ ಹೆಂಡತಿ ಮಕ್ಕಳೊಡನೆ ಸುಖವಾಗಿ ಇದ್ದ.
ಇಂದ್ರನ ಸ್ಥಿತಿ ನೋಡಲಾರದೇ ದೇವತೆಗಳು ಅವನ ಹತ್ತಿರ ಬಂದು ಪ್ರಶ್ನೆ ಮಾಡಿದರು, “ ನೀನು ಸ್ವರ್ಗದ ದೊರೆ, ಅಲ್ಲಿ ನೀನು ಹೇಳಿದ್ದನ್ನು ಕೇಳಲು ಎಲ್ಲ ದೇವತೆಗಳು ಸಿದ್ಧರಿರುತ್ತಾರೆ. ಆದರೆ ನೀನ್ಯಾಕೆ ಈ ಕೊಳಚೆಯಲ್ಲಿ ಸಂಸಾರ ನಡೆಸುತ್ತಿದ್ದೀಯ?”.
“ ಇಲ್ಲ ಇಲ್ಲ, ಇಲ್ಲಿ ನಾನು ಆರಾಮಾಗಿದ್ದೀನಿ ನನ್ನ ಸುಂದರ ಹೆಣ್ಣು ಹಂದಿ ಮತ್ತು ಪುಟ್ಟ ಪುಟ್ಟ ಹಂದಿಮರಿಗಳೊಂದಿಗೆ. ನನಗೆ ಸ್ವರ್ಗದ ಪರಿವೆ ಇಲ್ಲ”. ಇಂದ್ರ ಉತ್ತರಿಸಿದ.
ಪಾಪ ದೇವತೆಗಳಿಗೆ ಇಂದ್ರನಿಗೆ ಏನು ಹೇಳುವುದೆಂದು ಗೊತ್ತಾಗಲಿಲ್ಲ.
ಸ್ವಲ್ಪ ಸಮಯದ ನಂತರ ದೇವತೆಗಳು ಇಂದ್ರನ ಸುತ್ತ ಇದ್ದ ಎಲ್ಲ ಹಂದಿಗಳನ್ನು ಒಂದೊಂದಾಗಿ ಕೊಲ್ಲುತ್ತ ಬಂದರು.
ಎಲ್ಲ ಹಂದಿಗಳು ಸತ್ತು ಹೋದಾಗ ಇಂದ್ರ ದುಃಖದಿಂದ ಶೋಕಿಸತೊಡಗಿದ.
ಆಗ ದೇವತೆಗಳು ಇಂದ್ರನ ಹಂದಿ ಶರೀರವನ್ನು ಸುಲಿಯತೊಡಗಿದರು. ಒಳಗಿಂದ ಹೊರಬಂದ ಇಂದ್ರ ಜೋರಾಗಿ ನಗತೊಡಗಿದ. ಆಗ ಅವನಿಗೆ ತಾನು ಕನಸು ಕಾಣುತ್ತಿರುವುದು ಮತ್ತು ಹಂದಿಯ ಜನ್ಮವೇ ಏಕೈಕವೆಂದು ನಂಬಿದ್ದು, ಹಾಗು ಸಮಸ್ತ ಬದುಕೂ ಹಂದಿಯ ಜನ್ಮ ತಾಳಬೇಕು ಎಂದುಕೊಂಡಿದ್ದು ನೆನಪಾಗಿ ನಗು ಇನ್ನೂ ಹೆಚ್ಚಾಯಿತು.
ಯಾವಾಗ ಪುರುಷ (atman, self) ತನ್ನನ್ನು ತಾನು ಪ್ರಕೃತಿಯೊಂದಿಗೆ ಗುರುತಿಕೊಳ್ಳುತ್ತದೆಯೋ ಆಗ ಅದು, ತಾನು ಪರಿಶುದ್ಧ, ಅನಂತ (pure & infinite) ಎನ್ನುವುದನ್ನ ಮರೆತುಬಿಡುತ್ತದೆ.
ಪುರುಷ ಪ್ರೀತಿಸುವುದಿಲ್ಲ, ಅದು ಸ್ವತಃ ತಾನೇ ಪ್ರೀತಿ. ಅದು ಅಸ್ತಿತ್ವದಲ್ಲಿ ಇಲ್ಲ, ಅದು ತಾನೇ ಒಂದು ಅಸ್ತಿತ್ವ.
ಆತ್ಮಕ್ಕೆ ಏನೂ ತಿಳಿಯುವುದಿಲ್ಲ, ಅದು ಸ್ವತಃ ತಾನೇ ಒಂದು ತಿಳುವಳಿಕೆ. ಆತ್ಮ ಅಸ್ತಿತ್ವದಲ್ಲಿದೆ, ಅದು ಪ್ರೀತಿಸುತ್ತದೆ, ಅದಕ್ಕೆ ತಿಳುವಳಿಕೆ ಇದೆ ಎಂದು ಅಂದುಕೊಳ್ಳುವುದೆಲ್ಲ ಬಹಳ ತಪ್ಪು.
ಪ್ರೀತಿ, ಅಸ್ತಿತ್ವ ಮತ್ತು ತಿಳುವಳಿಕೆ ಪುರುಷದ ಗುಣಲಕ್ಷಣಗಳಲ್ಲ ಅವು, ಪುರುಷದ ತಿರುಳು (essence).
ಯಾವಾಗ ಅವು ಯಾವುದೋ ಒಂದರ ಮೇಲೆ ರಿಫ್ಲೆಕ್ಟ್ ಆಗುತ್ತವೆಯೇ ಆಗ ಅವನ್ನು ಆ ಸಂಗತಿಯ ಗುಣಲಕ್ಷಣಗಳು ಎಂದು ಹೇಳಬಹುದು.
ಹಾಗಾಗಿ ಅವು ಪುರುಷದ ಗುಣಗಳಲ್ಲ, ಅದರ ತಿರುಳು, ಯಾವುದಕ್ಕೆ ಹುಟ್ಟು ಸಾವಿಲ್ಲವೋ, ಯಾವುದು ಅನಂತವೋ, ಯಾವುದು ಸ್ವತಃ ಅದರ ವೈಭವದಲ್ಲಿ ತನ್ನನ್ನು ತಾನು ನಿರ್ಮಿಸಿಕೊಂಡಿದೆಯೋ ಆ ಪುರುಷದ ಸಾರ.
ಅದು ಎಷ್ಟು ಭ್ರಷ್ಟಗೊಂಡಿದೆಯೆಂದು ಅನಿಸುತ್ತದೆಯೆಂದರೆ, ನೀನು ಹಂದಿಯಲ್ಲ ಎಂದು ಹೇಳಿದರೆ ಜಗಳಕ್ಕೆ ಬರುತ್ತದೆ, ಕಚ್ಚಲು ಮುಂದಾಗುತ್ತದೆ.
ನಮ್ಮೊಡನೆ ಆಗುತ್ತಿರುವುದು ಇದೇ ಈ ಮಾಯೆಯಲ್ಲಿ, ಈ ಕನಸಿನ ಜಗತ್ತಿನಲ್ಲಿ, ಎಲ್ಲಿ ಎಲ್ಲವೂ ದುಗುಡ, ದುಃಖ, ಅಳುವಿನಿಂದ ತುಂಬಿಕೊಂಡಿದೆಯೋ , ಎಲ್ಲಿ ಕೆಲವು ಬಂಗಾರದ ಗುಂಡುಗಳನ್ನು (golden balls) ಉರುಳಿಸಿದಾಗ, ಇಡೀ ಜಗತ್ತು ಆ ಗುಂಡುಗಳಿಗಾಗಿ ಕಚ್ಚಾಟ ಮುಂದುವರೆಸುತ್ತದೆ.
ನಿಮ್ಮನ್ನು ಯಾವ ನಿಯಮಗಳಿಂದಲೂ ಬಂಧಿಸಲಾಗಿಲ್ಲ, ಪ್ರಕೃತಿ ನಿಮಗಾಗಿ ಎಂದು, ಯಾವ ಬಂಧನವನ್ನೂ ಸೃಷ್ಟಿ ಮಾಡಿಲ್ಲ.
ಯೋಗಿ ಹೇಳುವುದು ಇದನ್ನೇ,
ಇದನ್ನು ಅರ್ಥಮಾಡಿಕೊಳ್ಳುವಷ್ಟು ಸಂಯಮ ನಿಮ್ಮೊಳಗಿರಲಿ.
Raja Yoga – The Complete Works of Swami Vivekananda

