ಬದುಕಿಗಾಗಿ ಅಲೆಕ್ಸಾಂಡರ್ ತನ್ನ ಸಾಮ್ರಾಜ್ಯವನ್ನೇ ಕೊಟ್ಟುಬಿಡಬಲ್ಲ. ಆದರೆ ನಿಮ್ಮ ಬಳಿ ಬದುಕು ಇದೆ, ಈ ಕುರಿತಾಗಿ ಯಾವತ್ತಾದರೂ ಕೃತಜ್ಞರಾಗಿದ್ದೀರಾ? ಸಾಮ್ರಾಜ್ಯವನ್ನೇ ಕೊಟ್ಟು ಕೊಂಡುಕೊಳ್ಳಬಲ್ಲ ಉಚಿತ ನೀರು ನಿಮ್ಮ ಬಳಿ ಇದೆ, ಇದಕ್ಕಾಗಿ ಯಾವತ್ತಾದರೂ ಥ್ಯಾಂಕ್ಸ್ ಹೇಳಿದ್ದೀರಾ? | ಓಶೋ ರಜನೀಶ್; ಕನ್ನಡಕ್ಕೆ: ಚಿದಂಬರ ನರೇಂದ್ರ
“ನೀನು ಕಟ್ಟಿರುವ ಈ ಮಹಾ ಸಾಮ್ರಾಜ್ಯದಿಂದ ಯಾವ ಪ್ರಯೋಜನವೂ ಇಲ್ಲ. ಇದನ್ನ ನಾನು ಒಂದು ವ್ಯರ್ಥ ಪ್ರಯತ್ನ ಎಂದು ಪರಿಗಣಿಸುತ್ತೇನೆ”.
ಫಕೀರನೊಬ್ಬ ಚಕ್ರವರ್ತಿ ಅಲೆಕ್ಸಾಂಡರ್ ನಿಗೆ ಹೇಳಿದ.
ಫಕೀರನ ಮಾತು ಕೇಳಿ ಅಲೆಕ್ಸಾಂಡರ್ ನ ಸಿಟ್ಟು ನೆತ್ತಿಗೇರಿತು. “ನೀನು ನನ್ನ ಜೀವಮಾನದ ಪ್ರಯತ್ನಗಳನ್ನ ಅಲ್ಲಗಳೆದು ಅಪಮಾನ ಮಾಡಿರುವಿ. ಯಾಕೆ ನನ್ನ ಸಾಮ್ರಾಜ್ಯಕ್ಕೆ ಬೆಲೆ ಇಲ್ಲ ಎನ್ನುವುದಕ್ಕೆ ಸರಿಯಾದ ಕಾರಣ ಕೊಡದಿದ್ದರೆ ನಿನ್ನ ತಲೆ ಕತ್ತರಿಸುತ್ತೇನೆ”. ಅಲೆಕ್ಸಾಂಡರ್ ಸಿಟ್ಟಿನಿಂದ ಫಕೀರನಿಗೆ ಹೇಳಿದ.
ಫಕೀರ ಹೇಳಿದ, “ಒಂದು ಸ್ಥಿತಿಯನ್ನ ಕಲ್ಪನೆ ಮಾಡಿಕೋ. ನೀನು ಒಂದು ಮಹಾ ಮರುಭೂಮಿಯಲ್ಲಿ ಕಳೆದುಹೋಗಿರುವಿ. ನಿನಗೆ ತೀವ್ರ ಬಾಯಾರಿಕೆ ಆಗಿದೆ. ಎರಡು ಗುಟುಕು ನೀರು ಸಿಗದಿದ್ದರೆ ನಿಮ್ಮ ಪ್ರಾಣ ಹೋಗುವ ಪರಿಸ್ಥಿತಿ. ಆಗ ನಾನು ಅಲ್ಲಿ ಬರುತ್ತೇನೆ. ನನ್ನ ಬಳಿ ಒಂದು ಬಿಂದಿಗೆ ತುಂಬ ಕುಡಿಯುವ ನೀರು ಇದೆ. ಆದರೆ ಒಂದು ಲೋಟ ನೀರಿಗೆ ನಾನು ನಿನ್ನ ಅರ್ಧ ಸಾಮ್ರಾಜ್ಯವನ್ನು ಕೇಳುತ್ತೇನೆ. ಆಗ ನೀನು ಏನು ಮಾಡುತ್ತೀ?”
“ಮರುಭೂಮಿಯಲ್ಲಿ ಬಾಯಾರಿಕೆಯಿಂದ ಪ್ರಾಣ ಹೋಗುತ್ತಿದೆಯಾದರೆ ನೀರಿಗಾಗಿ ನಾನು ಅರ್ಧ ಏನು ಪೂರ್ಣ ಸಾಮ್ರಾಜ್ಯವನ್ನು ಬೇಕಾದರೆ ಕೊಟ್ಟುಬಿಡಬಲ್ಲೆ”. ಅಲೆಕ್ಸಾಂಡರ್ ಫಕೀರನಿಗೆ ಹೇಳಿದ.
“ಹಾಗಾದರೆ ವಿಷಯ ಇಷ್ಟೇ, ನಿನ್ನ ಸಾಮ್ರಾಜ್ಯದ ಬೆಲೆ ಒಂದು ಗ್ಲಾಸ್ ನೀರು ಮಾತ್ರ.” ಫಕೀರ ಹೇಳಿದ.
ಬದುಕಿಗಾಗಿ ಅಲೆಕ್ಸಾಂಡರ್ ತನ್ನ ಸಾಮ್ರಾಜ್ಯವನ್ನೇ ಕೊಟ್ಟುಬಿಡಬಲ್ಲ. ಆದರೆ ನಿಮ್ಮ ಬಳಿ ಬದುಕು ಇದೆ, ಈ ಕುರಿತಾಗಿ ಯಾವತ್ತಾದರೂ ಕೃತಜ್ಞರಾಗಿದ್ದೀರಾ? ಸಾಮ್ರಾಜ್ಯವನ್ನೇ ಕೊಟ್ಟು ಕೊಂಡುಕೊಳ್ಳಬಲ್ಲ ಉಚಿತ ನೀರು ನಿಮ್ಮ ಬಳಿ ಇದೆ, ಇದಕ್ಕಾಗಿ ಯಾವತ್ತಾದರೂ ಥ್ಯಾಂಕ್ಸ್ ಹೇಳಿದ್ದೀರಾ?
ಯೋಚಿಸಿ ನಿಮ್ಮ ಬಳಿ ಏನೆಲ್ಲ ಇದೆ, ನಿಮ್ಮ ಹೃದಯದಲ್ಲಿ ಪ್ರೀತಿಯ ಸಾಧ್ಯತೆ ಇದೆ, ಇದಕ್ಕಾಗಿ ಥ್ಯಾಂಕ್ಸ್ ಹೇಳಿದ್ದೀರಾ? ನಿಮ್ಮ ಗಂಟಲಿಗೆ ಹಾಡು ಹಾಡುವ ಸಾಧ್ಯತೆ ಇದೆ ಈ ಕುರಿತಾಗಿ ಯಾವತ್ತಾದರೂ ಧನ್ಯತೆಯನ್ನು ಅನುಭವಿಸಿದ್ದೀರಾ? ಕಣ್ಣು ತೆರೆದರೆ ಸಾಕು ಜಗತ್ತಿನ ಅಪರಿಮಿತ ಸೌಂದರ್ಯ ನೋಡುವ ಅದೃಷ್ಟ ನಿಮಗಿದೆ ಈ ಬಗ್ಗೆ ಕೃತಜ್ಞರಾಗಿದ್ದೀರಾ? ಒಬ್ಬ ಕುರುಡನನ್ನು ಕೇಳಿ ನೋಡಿ, ದೃಷ್ಟಿ ಹೊಂದುವುದಕ್ಕಾಗಿ ಏನೆಲ್ಲ ಕೊಡಲು ಸಿದ್ಧನಾಗಿದ್ದೀಯ ಎಂದು. ಆತನ ಉತ್ತರ ನಿಮಗೆ ಆಶ್ಚರ್ಯ ತರಬಹುದು.
ಇಂಥ ದೃಷ್ಟಿಯನ್ನು ನೀವು ಹೊಂದಿರುವ ಕುರಿತು ನಿಮಗೆ ನಿಮ್ಮ ಬಗ್ಗೆ ಗೌರವ ಇದೆಯಾ?
ಅಸ್ತಿತ್ವ ನಿಮಗೆ ಏನೆಲ್ಲ ಅಮೂಲ್ಯವಾದುದನ್ನ ದಯಪಾಲಿಸಿದೆ ಆದರೆ ಈ ಯಾವುದರ ಬಗ್ಗೆಯೂ ನಿನಗೆ ಹೆಮ್ಮೆ, ಗೌರವ, ಕೃತಜ್ಞತೆ ಇಲ್ಲ.

