ಯಾವಾಗಲೂ ಝೆನ್ ನಿಮ್ಮನ್ನು ಎಚ್ಚರಿಸಲು ಪ್ರಯತ್ನ ಮಾಡುತ್ತದೆ, ಇದರ ಹೊರತಾಗಿ ಅದಕ್ಕೆ ಬೇರೆ ಯಾವ ಸಮಾಧಾನಕರ ಆಯ್ಕೆಗಳಿಲ್ಲ. ಮಹಾ ಮಹಾ ಸಂಗತಿಗಳು ಇರುವುದಿಲ್ಲ ಅಂತ ಅಲ್ಲ ಆದರೆ ಝೆನ್ ಗೆ ಅವುಗಳ ಬಗ್ಗೆ ಮಾತನಾಡುತ್ತ ಸಮಯ ವ್ಯರ್ಥ ಮಾಡುವುದು ಇಷ್ಟವಿಲ್ಲ… ~ ಓಶೋ ರಜನೀಶ್; ಕನ್ನಡಕ್ಕೆ: ಚಿದಂಬರ ನರೇಂದ್ರ
ಝೆನ್ ವಿದ್ಯಾರ್ಥಿ, ಮಾಸ್ಟರ್ ನ ಎದುರು ಪ್ರಶ್ನೆಗಳ ಸುರಿಮಳೆ ಸುರಿಸಿದ.
“ ಮಾಸ್ಟರ್ ಆತ್ಮ ಅವಿನಾಶಿಯೆ? ಆತ್ಮಕ್ಕೆ ಸಾವಿಲ್ಲವೆ? ದೈಹಿಕ ಸಾವಿನಿಂದ ತಪ್ಪಿಸಿಕೊಳ್ಳಬಹುದೆ? ಅಥವಾ ನಮ್ಮ ವಿನಾಶ ಶತಸಿದ್ಧವೆ? ನಾವು ಮತ್ತೆ ಹುಟ್ಟಿ ಬರುತ್ತೇವೆಯಾ? ನಮ್ಮ ಆತ್ಮ ಚೂರು ಚೂರಾಗಿ ಮತ್ತೆ ರೀ ಸೈಕಲ್ ಆಗುತ್ತದೆಯಾ? ಅಥವಾ ಇಡಿಯಾಗಿ ಇನ್ನೊಂದು ಜೈವಿಕ ದೇಹವನ್ನು ಪ್ರವೇಶ ಮಾಡುತ್ತದೆಯಾ? ಆಗ ನಾವು ನಮ್ಮ ನೆನಪುಗಳನ್ನ ಉಳಿಸಿಕೊಂಡಿರುತ್ತೇವೆಯಾ ಅಥವಾ ಇಲ್ಲವಾ? ಪುನರ್ಜನ್ಮದ ಸಿದ್ಧಾಂತ ನಿಜವೋ ಸುಳ್ಳೊ? ಅಥವಾ ಕ್ರಿಶ್ಚಿಯನ್ ರೀತಿಯ ಸರ್ವೈವಲ್ ಹೆಚ್ಚು ಸರಿಯಾ? ಹೌದಾದರೆ, ನಮ್ಮ ದೈಹಿಕ ಪುನರುತ್ಥಾನವಾಗುತ್ತದೆಯಾ? ಅಥವಾ ನಮ್ಮ ಆತ್ಮ ಪ್ಲೆಟಾನಿಕ ಆಧ್ಯಾತ್ಮಿಕ ವಲಯವನ್ನು ಪ್ರವೇಶ ಮಾಡುತ್ತದೆಯಾ? “
“ನಿನ್ನ ತಿಂಡಿ ತಣ್ಣಗಾಗುತ್ತಿದೆ ನೋಡು” ಮಾಸ್ಟರ್ ಉತ್ತರಿಸಿದರು.
ಇದು ಝೆನ್ ನ ರೀತಿ. ನಿಮ್ಮನ್ನ ನೀವು ಈಗ ಇರುವಲ್ಲಿಗೆ ಕರೆದುಕೊಂಡು ಬರುವುದು. ಯಾವ ಸ್ವರ್ಗಕ್ಕಿಂತಲೂ ಈಗ ನಮ್ಮ ಮುಂದಿರುವ ತಿಂಡಿ ತಿನ್ನುವುದು ಬಹಳ ಮುಖ್ಯ. ದೇವರ ಕುರಿತಾದ ಯಾವ ಪರಿಕಲ್ಪನೆಗಿಂತೂ ನಮ್ಮ ಎದುರಿಗಿನ ತಟ್ಟೆಯಲ್ಲಿರುವ ತಿಂಡಿ ಮುಖ್ಯ. ಆತ್ಮ, ಪುನರ್ಜನ್ಮ, ಪುನರುತ್ಥಾನ ಮುಂತಾದ ಎಲ್ಲ ನಾನ್ಸೆನ್ಸ್ ಗಳಿಗಿಂತ ಮುಂಜಾನೆಯ ಬಿಸಿ ಬಿಸಿ ತಿಂಡಿ ಮುಖ್ಯ. ಏಕೆಂದರೆ ತಿಂಡಿ ಈ ಕ್ಷಣ ನಿಮ್ಮ ಮುಂದಿದೆ. ಝೆನ್ ಗೆ ತಕ್ಷಣದ್ದು ಆತ್ಯಂತಿಕ, ಈ ಕ್ಷಣ ಎನ್ನುವುದು ಮಾತ್ರ ಶಾಶ್ವತ ಮತ್ತು ಈ ಕ್ಷಣಕ್ಕೆ ಮಾತ್ರ ನಮ್ಮ ಅರಿವು ತೆರೆದುಕೊಂಡಿರಬೇಕು.
ಹಾಗಾಗಿ ಝೆನ್ ಎನ್ನುವುದು ಒಂದು ಕಲಿಕೆ ಅಲ್ಲ, ಅದು ನಿಮ್ಮ ಕನಸುವ ಮನಸ್ಸನ್ನು ಡಿಸ್ಟರ್ಬ್ ಮಾಡುವ ಒಂದು ವಿಧಾನ, ತಕ್ಷಣ ನಿಮ್ಮ ಸುತ್ತ ನಿಮ್ಮನ್ನು ಎಚ್ಚರಿಸುವ ಸ್ಥಿತಿಯನ್ನು ಸೃಷ್ಟಿ ಮಾಡುವ ಸಂಗತಿ, ನಿಮ್ಮನ್ನು ಆರಾಮಾಗಿ ಮಲಗಲು ಬಿಡದಂಥ ತಲ್ಲಣವನ್ನು ನಿಮ್ಮೊಳಗೆ ಉಂಟುಮಾಡುವ ಪ್ರಕ್ರಿಯೆ.
ಇದು ಝೆನ್ ನ ಚೆಲುವು ಮತ್ತು ಇದು, ಝೆನ್ ಈ ಜಗತ್ತಿನಲ್ಲಿ ಸಾಧ್ಯವಾಗಿಸಿರುವ ರೆವಲ್ಯೂಷನ್. ಯಾವಾಗಲೂ ಝೆನ್ ನಿಮ್ಮನ್ನು ಎಚ್ಚರಿಸಲು ಪ್ರಯತ್ನ ಮಾಡುತ್ತದೆ, ಇದರ ಹೊರತಾಗಿ ಅದಕ್ಕೆ ಬೇರೆ ಯಾವ ಸಮಾಧಾನಕರ ಆಯ್ಕೆಗಳಿಲ್ಲ. ಮಹಾ ಮಹಾ ಸಂಗತಿಗಳು ಇರುವುದಿಲ್ಲ ಅಂತ ಅಲ್ಲ ಆದರೆ ಝೆನ್ ಗೆ ಅವುಗಳ ಬಗ್ಗೆ ಮಾತನಾಡುತ್ತ ಸಮಯ ವ್ಯರ್ಥ ಮಾಡುವುದು ಇಷ್ಟವಿಲ್ಲ.
ಝೆನ್ ನಂಬಿಕೆಯ ವ್ಯವಸ್ಥೆಯಲ್ಲ ಅದು ಒಂದು ಎಚ್ಚರಿಸುವ ವಿಧಾನ.
ಒಮ್ಮೆ ಇಬ್ಬರು ಝೆನ್ ಸನ್ಯಾಸಿಗಳು, ತಮ್ಮ ಮಾಸ್ಟರ್ ಹೇಳಿದ ಒಂದು ಮಾತಿನ ಬಗ್ಗೆ ವಾದ ಮಾಡುತ್ತಿದ್ದರು. ಒಬ್ಬ , ಮಾಸ್ಟರ್ ಮಾತು ಸರಿ ಎಂದೂ, ಇನ್ನೊಬ್ಬ ತಪ್ಪು ಎಂದು. ಒಮ್ಮತಕ್ಕೆ ಬರಲು ಸಾಧ್ಯವಾಗದ ಕಾರಣ, ಇಬ್ಬರೂ ಮಾಸ್ಟರ್ ಹತ್ತಿರ ಬಂದು ತಮ್ಮ ವಾದಗಳಿಗೆ ಸಮರ್ಥನೆ ಕೊಟ್ಟರು.
ಮೊದಲ ಸನ್ಯಾಸಿ, ಮಾಸ್ಟರ್ ಮಾತು ಯಾಕೆ ಸರಿ ಅಂತ ವಾದ ಮಂಡಿಸಿದ. ಸ್ವಲ್ಪ ಹೊತ್ತು ಯೋಚಿಸಿದ ಮಾಸ್ಟರ್ “ ನೀನು ಹೇಳಿದ್ದು ಸರಿ “ ಎಂದು ಗೋಣು ಹಾಕಿದ.
ಆಮೇಲೆ ಎರಡನೇ ಸನ್ಯಾಸಿ, ವಾದ ಮಾಡಿದ. ಮಾಸ್ಟರ್ ಮಾತು ಯಾಕೆ ತಪ್ಪು ಎಂಬುದನ್ನ ವಿವರವಾಗಿ ಚರ್ಚಿಸಿದ. ಮಾಸ್ಟರ್ ಮತ್ತೆ ಯೋಚನೆ ಮಾಡಿ ಹೇಳಿದ, “ ನೀನು ಹೇಳೋದೂ ಸರಿ”
ಈ ವಾದ ವಿವಾದವನ್ನು ನೋಡುತ್ತಿದ್ದ ಕಿರಿಯ ಸನ್ಯಾಸಿ ಕುತೂಹಲದಿಂದ ಕೇಳಿದ, “ ಇದು ಹೇಗೆ ಮಾಸ್ಟರ್, ಇಬ್ಬರಿಗೂ ನೀವು ಸರಿ ಎಂದು ಹೇಳಿದಿರಿ? ಯಾರೋ ಒಬ್ಬರದು ತಪ್ಪು ಇರಲೇಬೇಕಲ್ವಾ? “
ಮಾಸ್ಟರ್ ಮತ್ತೆ ಧ್ಯಾನ ಮಗ್ನನಾಗಿ ಯೋಚಿಸಿ ಕಿರಿಯ ಸನ್ಯಾಸಿಗೆ ಉತ್ತರಿಸಿದ.
“ ಹೌದು, ನೀನು ಹೇಳೋದೂ ಸರಿನೇ “

