“ಅಸ್ತಿತ್ವಕ್ಕೆ ನಿಮಗಿಂತಲೂ ಹೆಚ್ಚಿನ ಜಾಣತನವಿದೆ, ಅದು ನಿಮ್ಮ ಪ್ರಗತಿಗೆ ಅವಶ್ಯಕವಾದದ್ದನ್ನು ನಿಮಗೆ ಕರುಣಿಸುತ್ತದೆ. So ಅಸ್ತಿತ್ವದ ವಿವೇಕದಲ್ಲಿ ನಂಬಿಕೆಯನ್ನಿಡಿ” ಅನ್ನುತ್ತಾರೆ ಓಶೋ. | ಚಿದಂಬರ ನರೇಂದ್ರ
ಭಗವಂತ
ಸದಾ ನಮ್ಮ ಕೆಲಸದಲ್ಲಿಯೇ ಮಗ್ನ.
ಮನುಷ್ಯನ ವಿಕಾಸ ಯಾವತ್ತಿದ್ದರೂ
ಪ್ರಗತಿಯಲ್ಲಿರುವ ಪ್ರಕ್ರಿಯೆ.
ಕೆಲಸ ನಿಧಾನವಾಗಿರಬಹುದು
ಆದರೆ ಮುಂದುವರೆಯುತ್ತಿದೆ ನಿರಂತರವಾಗಿ.
ಪ್ರತಿಯೊಬ್ಬ ಮನುಷ್ಯನೂ
ಪೂರ್ಣವಾಗಲು
ಕಾಯುತ್ತಿರುವ, ತಹತಹಿಸುತ್ತಿರುವ
ಅಪೂರ್ಣ ಕಲಾಕೃತಿಗಳು.
ಭಗವಂತ
ಪ್ರತೀ ಮನುಷ್ಯನನ್ನು
ಪ್ರತ್ಯೇಕ ಕಲಾಕೃತಿಯಂತೆ
ಅನನ್ಯವಾಗಿ ಚಿತ್ರಿಸುತ್ತಾನೆ.
ಮನುಷ್ಯತ್ವ
ಒಂದು ಸೂಕ್ಷ್ಮ ಕಲಾಪ್ರಕಾರ,
ಪ್ರತೀ ಚುಕ್ಕೆಯೂ
ಪೂರ್ಣ ಚಿತ್ರದ ಅತ್ಯಂತ ಮುಖ್ಯ ಭಾಗ.
~ ಶಮ್ಸ್ ತಬ್ರೀಝಿ
**********************
ಓಶೋ ಹೇಳುತ್ತಾರೆ,
ಒಂದೇ ಮನಸ್ಥಿತಿಯಲ್ಲಿರುವ ಭ್ರಮಾತ್ಮಕ ಐಡಿಯಾ ನನ್ನ ಸುತ್ತ ಸುಳಿಯುವುದೂ ಬೇಡ ಏಕೆಂದರೆ, ಅಂಥದೊಂದು ಸ್ಥಿತಿ ಸಾಧ್ಯವಾಗುವುದು ಸತ್ತ ಸ್ಥಿತಿಯಲ್ಲಿ ಮಾತ್ರ. ನೀವು ಜೀವಂತ ಇರುವಿರಾದರೆ ವಾತಾವರಣ ಬದಲಾಗುತ್ತಲೇ ಇರುತ್ತದೆ, ಋತುಗಳು ಬದಲಾಗುತ್ತಲೇ ಇರುತ್ತವೆ ; ಮತ್ತು ಚಳಿಯಿಂದ, ಬಿಸಿಲಿನಿಂದ, ಮಳೆಯಿಂದ ಕಲಿಯುವುದು ಅನಿವಾರ್ಯವಾಗುತ್ತದೆ.
ಈ ಎಲ್ಲ ಋತುಗಳನ್ನು ನೀವು, ನಿಮ್ಮ ಹೃದಯದಲ್ಲಿ ಕುಣಿತವನ್ನಿಟ್ಟುಕೊಂಡು ದಾಟಬೇಕಾಗುತ್ತದೆ, ಅಸ್ತಿತ್ವ ಯಾವತ್ತೂ ನಿಮ್ಮ ವಿರೋಧದಲ್ಲಿ ಇರುವುದಲ್ಲ ಎನ್ನುವುದನ್ನು ಪರಿಪೂರ್ಣವಾಗಿ ಮನದಟ್ಟು ಮಾಡಿಕೊಂಡು.
ಅಸ್ತಿತ್ವ ನಿಮಗೆ ಏನನ್ನಾದರೂ ದಯಪಾಲಿಸಬಹುದು, ನಿಮ್ಮ ಪಾಲಿಗೆ ಬಂದಿದ್ದು ಕಹಿ ಇದ್ದರೆ, ಅದು ನಿಮಗೆ ಔಷಧಿಯೇ. ಮೊದಮೊದಲು ಅಂಥ ಸ್ಥಿತಿ ನಿಮಗೆ ರುಚಿ ಅನ್ನಿಸದೇ ಹೋಗಬಹುದು ಆದರೆ ಕೊನೆಗೆ, ಒಂದೇ ಮನಸ್ಥಿತಿ ಸಾಧ್ಯಮಾಡದ ಅಪರೂಪವನ್ನು ಅದು ನಿಮಗೆ ದಯಪಾಲಿಸಿದೆ ಎನ್ನುವುದು ನಿಮಗೆ ವಿದಿತವಾಗುವುದು.
ಆದ್ದರಿಂದ, “ನಿಮ್ಮ ಪಾಲಿಗೆ ಬಂದಿದ್ದೆಲ್ಲ ನಿಮಗೆ ಅನುಕೂಲಕರವಾಗಿಯೇ ಪರಿಣಮಿಸಲಿದೆ, so take it easy. ಈ ಸ್ಥಿತಿ ನಿಮ್ಮೊಡನೆ ಯಾವತ್ತೂ ಇರಲಾರದೂ, ಈ ಸ್ಥಿತಿಯೂ ಮುಂದೊಮ್ಮೆ ಬದಲಾಗುತ್ತದೆ. ಆದರೆ ಸ್ಥಿತಿಯನ್ನು ಬದಲಾಯಿಸುವ ಪ್ರಯತ್ನಕ್ಕೆ ನೀವು ಕೈಹಾಕಬೇಡಿ, ಆ ಕೆಲಸವನ್ನು ಅಸ್ತಿತ್ವಕ್ಕೆ ಬಿಡಿ.
ಇದನ್ನೇ ನಾನು ವಿಶ್ವಾಸ ಎಂದು ಕರೆಯುವುದು. ಅಸ್ತಿತ್ವಕ್ಕೆ ನಿಮಗಿಂತಲೂ ಹೆಚ್ಚಿನ ಜಾಣತನವಿದೆ, ಅದು ನಿಮ್ಮ ಪ್ರಗತಿಗೆ ಅವಶ್ಯಕವಾದದ್ದನ್ನು ನಿಮಗೆ ಕರುಣಿಸುತ್ತದೆ. So ಅಸ್ತಿತ್ವದ ವಿವೇಕದಲ್ಲಿ ನಂಬಿಕೆಯನ್ನಿಡಿ.” ಅನ್ನುತ್ತಾರೆ ಓಶೋ.
ಒಂದಾನೊಂದು ಕಾಲದಲ್ಲಿ ಒಂದು ಪುಟ್ಟ ಹಕ್ಕಿ ಇತ್ತು. ಚಳಿಗಾಲ ಹತ್ತಿರವಾಗುತ್ತಿದ್ದಂತೆಯೇ ಆ ಹಕ್ಕಿಯ ಗೆಳಯರೆಲ್ಲ ದಕ್ಷಿಣಕ್ಕೆ ಹಾರಿ ಹೋಗುವ ತೀರ್ಮಾನ ಮಾಡಿದರು. ಗೆಳೆಯರು ಎಷ್ಟು ತಿಳಿ ಹೇಳಿದರೂ ಆ ಪುಟ್ಟ ಹಕ್ಕಿ ಅವರೊಡನೆ ದಕ್ಷಿಣಕ್ಕೆ ಹೋಗಲು ಒಪ್ಪಲಿಲ್ಲ. ಕೊನೆಗೆ ನಿರುಪಾಯರಾದ ಬೇರೆಲ್ಲ ಹಕ್ಕಿಗಳು, ಪುಟ್ಚ ಹಕ್ಕಿಯನ್ನು ಅಲ್ಲೇ ಬಿಟ್ಟು ತಮ್ಮ ಪಾಡಿಗೆ ತಾವು ದಕ್ಷಿಣ ದಿಕ್ಕಿನತ್ತ ಹೊರಟು ಹೋದರು.
ಕೆಲವೇ ದಿನಗಳಲ್ಲಿ ಚಳಗಾಲದ ಆಗಮನವಾಯಿತು. ಈ ಬಾರಿಯಂತೂ ಕೊರೆಯುವ ಚಳಿ. ಪುಟ್ಟ ಹಕ್ಕಿ, ಚಳಿಗೆ ನಡುಗತೊಡಗಿತು. ಹಕ್ಕಿಗೆ ತನ್ನ ತಪ್ಪಿನ ಅರಿವಾಗಿ ಅದು ತಾನೂ ದಕ್ಷಿಣಕ್ಕೆ ಹಾರಿ ಹೋಗಬೇಕೆಂದು ತೀರ್ಮಾನಿಸಿ ಬೆಚ್ಚಗಿನ ಜಾಗ ಹುಡುಕುತ್ತ ಹಾರತೊಡಗಿತು. ಆದರೆ ಈಗಾಗಲೇ ತುಂಬ ತಡವಾಗಿ ಹೋಗಿತ್ತು. ಹಕ್ಕಿಯ ರೆಕ್ಕೆಗಳ ಮೇಲೆ ಹಿಮ ಬೀಳತೊಡಗಿತು. ಕೊನೆಗೆ ಚಳಿ ಸಹಿಸಲಸಾಧ್ಯವಾಗಿ ಆ ಹಕ್ಕಿ ಹುಲ್ಲುಗಾವಲೊಂದರಲ್ಲಿ ಕುಸಿದು ಬಿತ್ತು. ತನ್ನ ಸಾವು ಇನ್ನು ಖಚಿತ ಎಂದು ಮನಸ್ಸಿನಲ್ಲಿ ಅಂದುಕೊಳ್ಳುತ್ತಾ ಹಕ್ಕಿ ಅಸಹಾಯಕವಾಗಿ ನೆಲದ ಮೇಲೇ ಬಿದ್ದು ಒದ್ದಾಡತೊಡಗಿತು.
ಹೀಗಿರುವಾಗಲೇ ಅಲ್ಲೇ ಹುಲ್ಲು ಮೇಯುತ್ತಿದ್ದ ಆಕಳೊಂದು ಹಕ್ಕಿಯ ಹತ್ತಿರ ಬಂದು ಅದರ ಮೇಲೆ ಸಗಣಿ ಹಾಕಿತು. ಮೊದಲು ಮೂಗು ಮುಚ್ಚಿಕೊಂಡ ಹಕ್ಕಿ ಆಮೇಲೆ ಸಗಣಿಯ ಶಾಖಕ್ಕೆ ಬೆಚ್ಚಗಾಗಿ ಬಿಸಿಯಾಗತೊಡಗಿತು. ಹಕ್ಕಿಗೆ ಇನ್ನು ತಾನು ಬದುಕಬಹುದು ಎಂದು ಅನಿಸತೊಡಗಿ ಅದು ಖುಶಿಯಿಂದ ಹಾಡತೊಡಗಿತು.
ಆಗ ಅಲ್ಲೇ ಹಾಯ್ದು ಹೋಗುತ್ತಿದ್ದ ಬೆಕ್ಕೊಂದು
ಹಕ್ಕಿಯ ಹಾಡಿನ ಸುಳಿವು ಹಿಡಿದು ಆ ಸಗಣಿಯ ಹತ್ತಿರ ಬಂದು, ಸೆಗಣಿ ಕೆದಕಿ ಹಕ್ಕಿಯನ್ನು ಹೊರ ತೆಗೆದು ಬಾಯಿಗೆ ಹಾಕಿಕೊಂಡು ಬಿಟ್ಟಿತು.
ಈ ಕತೆಯ ಮೂರು ನೀತಿಗಳು ಹೀಗಿವೆ.
1. ನಿಮ್ಮ ಮೇಲೆ ಸೆಗಣಿ ಹಾಕುವ ಎಲ್ಲರೂ ನಿಮ್ಮ ವೈರಿಗಳಲ್ಲ.
2. ಸೆಗಣಿಯಿಂದ ನಿಮ್ಮನ್ನು ಹೊರ ತೆಗೆಯುವ ಎಲ್ಲರೂ ನಿಮ್ಮ ಗೆಳೆಯರಾಗಿರುವುದಿಲ್ಲ.
3. ಸೆಗಣಿಯಲ್ಲಿ ನೀವು ಖುಶಿಯಾಗಿರುವಾಗ ಬಾಯಿ ಮುಚ್ಚಿಕೊಂಡಿರಿ, ಹಾಡಲು ಹೋಗಬೇಡಿ
Source: —Ôshö—
The New Dawn
Ch #2: Sanity is just boring
am in Chuang Tzu Auditorium
[_via Bodhisattva Shree Amithaba
Subhuti _]

