ಥಿಂಕ್ ಮಾಡುವುದನ್ನು ನಿಲ್ಲಿಸಿದಾಗಲೇ ನೀವು ನಿಜವಾದ ‘ನೀವು’. ಥಿಂಕ್ ಮಾಡುವುದನ್ನ ನಿಲ್ಲಿಸಿದ ಕ್ಷಣದಲ್ಲಿ ಒಳಗಿನ ಗೈಡ್ ಜಾಗೃತವಾಗುತ್ತಾನೆ. ಇಷ್ಟು ದಿನ ನಿಮ್ಮ ತರ್ಕ ಬುದ್ಧಿ ನಿಮ್ಮ ದಾರಿ ತಪ್ಪಿಸಿದೆ, ನಿಮ್ಮ ಒಳಗಿನ ಮಾರ್ಗದರ್ಶಕನನ್ನು ನಂಬಂದಂತೆ ಮಾಡಿದೆ… ~ ಓಶೋ ರಜನೀಶ್; ಕನ್ನಡಕ್ಕೆ: ಚಿದಂಬರ ನರೇಂದ್ರ
ಹಿಂದೆ, ನನಗೊಬ್ಬ ಶಿಷ್ಯನಿದ್ದ.
ರಾತ್ರಿಯಾಯಿತೆಂದರೆ ಸಾಕು
ಭಯ ಮತ್ತು ಆತಂಕದಿಂದ ನಡುಗುತ್ತಿದ್ದ.
ಮರುದಿನ ಬೆಳಿಗ್ಗೆ ನೋಡಿದರೆ
ದೆವ್ವವೊಂದರಿಂದ ಮಾನಭಂಗಗೊಂಡವನಂತೆ
ಬಿಳಚಿಕೊಂಡಿರುತ್ತಿದ್ದ.
ನಂತರ ನನ್ನ ಮಮತೆಗೆ
ಅವನ ಮೇಲೆ ಕರುಣೆ ಬಂತು,
ನನ್ನ ದಿವ್ಯ ಖಡ್ಗದಿಂದ
ಅವನಿಗೊಂದು ಚೂರಿ ತಯಾರಿಸಲಾಯಿತು.
ಅಮೇಲಿಂದ ನನಗೆ
ಅವನ ಮೇಲೆ ಅಭಿಮಾನ ಹೆಚ್ಚಾಗಿದೆ
ಈಗ ಅವನು ನನ್ನ ಪಟ್ಟ ಶಿಷ್ಯ.
ಈಗ ಆತ ತನ್ನ ಭಯವನ್ನೆಲ್ಲ ಕಳೆದುಕೊಂಡುಬಿಟ್ಟಿದ್ದಾನೆ.
ಅಷ್ಟೇ ಅಲ್ಲ, ರಾತ್ರಿಯಾಯಿತೆಂದರೆ ತಾನೇ
ಸಮಸ್ಯೆಗಳನ್ನು ಹುಡುಕಿಕೊಂಡು ಹೊರಟುಬಿಡುತ್ತಾನೆ.
– ಹಾಫಿಜ್
***********************
ಕ್ಯಾಸ್ತಾನೆಡಾ ನ (Castaneda) ಪುಸ್ತಕ ಓದುತ್ತಿದ್ದೆ. ಅವನ ಮಾಸ್ಟರ್ ಡಾನ್ ಜುಆನ್ ಕ್ಯಾಸ್ತಾನೆಡಾ ಗೆ ಒಂದು ಸುಂದರ ಪ್ರಯೋಗ ಮಾಡಲು ಹೇಳಿದ. ಇದು ಬಹಳ ಪುರಾತನ ಪ್ರಯೋಗ.
ಒಂದು ಕಗ್ಗತ್ತಲ ರಾತ್ರಿ, ಒಂದು ಚೂರೂ ಬೆಳಕು ಇಲ್ಲದ ಅಪಾಯಕಾರಿ ಬೆಟ್ಟ ಗುಡ್ಡಗಳ ದಾರಿಯಲ್ಲಿ ಕ್ಯಾಸ್ತಾನೆಡಾ ನ ಮಾಸ್ಟರ್ ಹೇಳಿದ, “ನಿನ್ನ ಒಳಗಿನ ಗೈಡ್ ಮೇಲೆ ಭಾರ ಹಾಕಿ ಸುಮ್ಮನೇ ಓಡಲು ಶುರು ಮಾಡು”. ಅದು ಅಪಾಯಕಾರಿ ಬೆಟ್ಟ ಗುಡ್ಡಗಳು, ಕಣಿವೆ ಕಂದರಗಳು, ಗಿಡ ಮರಗಳು ತುಂಬಿಕೊಂಡಂಥ ಅಜ್ಞಾತ ದಾರಿ. ಒಂದೇ ಒಂದು ಸಣ್ಣ ತಪ್ಪು ಆದರೂ ಪ್ರಾಣ ಹೋಗುವಂಥ ಪರಿಸ್ಥಿತಿ. ಬೆಳಕಿನ ಹೊತ್ತಿನಲ್ಲೂ ಜಾಗರೂಕತೆಯಿಂದ ನಡೆಯಬೇಕಾಗಿದ್ದ ದಾರಿಯಲ್ಲಿ ಕಗ್ಗತ್ತಲಲ್ಲಿ ಓಡುವಂತೆ ಹೇಳುತ್ತಿದ್ದಾನೆ ಮಾಸ್ಟರ್.
ಕ್ಯಾಸ್ತಾನೆಡಾ ಗೆ ದಾರಿಯಲ್ಲಿ ಏನೂ ಕಾಣಿಸುತ್ತಿಲ್ಲ. ಆದರೆ ಮಾಸ್ಟರ್, ನಡೆಯಬೇಡ ಓಡು ಎಂದು ಹೇಳುತ್ತಿದ್ದಾನೆ. ಮಾಸ್ಟರ್ ಮಾತನ್ನು ನಂಬುವುದು ಅವನಿಗೆ ಸಾಧ್ಯವಾಗುತ್ತಿಲ್ಲ, ಇದು ಒಂದು ಆತ್ಮಹತ್ಯಾತ್ಮಕ ಪ್ರಯತ್ನ. ಅವನಿಗೆ ಭಯ ಶುರುವಾಯಿತು. ಆದರೆ ಮಾಸ್ಟರ್ ಓಡಲು ಶುರು ಮಾಡಿದ. ಕಾಡು ಮೃಗದಂತೆ ಓಡಿದ ಮಾಸ್ಟರ್ ಒಂದು ಸುತ್ತು ಹಾಕಿ ವಾಪಸ್ ಬಂದ. ಕ್ಯಾಸ್ತಾನೆಡಾ ಗೆ ಏನೂ ತೋಚುತ್ತಿಲ್ಲ, ಮಾಸ್ಟರ್ ಮಾತ್ರ ತನಗೆ ದಾರಿ ಸ್ಪಷ್ಟ ಕಾಣುತ್ತಿದೆ ಎಂಬಂತೆ ಓಡುತ್ತಿದ್ದಾನೆ. ಈ ವಯಸ್ಸಾದ ಮುದುಕ ಓಡುತ್ತಿದ್ದಾನೆಂದರೆ ನನಗೆ ಯಾಕೆ ಸಾಧ್ಯವಿಲ್ಲ ಎಂದು ಕ್ಯಾಸ್ತಾನೆಡಾ ಧೈರ್ಯ ಒಟ್ಟು ಮಾಡಿ ಓಡಲು ಶುರು ಮಾಡಿದ, ನಿಧಾನವಾಗಿ ಅವನ ಒಳಗಿನ ಬೆಳಕು ದಾರಿ ತೋರಿಸುತ್ತಿರುವಂತೆ ಅವನಿಗೆ ಅನಿಸತೊಡಗಿತು, ನಂತರ ಕ್ಯಾಸ್ತಾನೆಡಾ ಜೋರಾಗಿ ಓಡತೊಡಗಿದ.
ಥಿಂಕ್ ಮಾಡುವುದನ್ನು ನಿಲ್ಲಿಸಿದಾಗಲೇ ನೀವು ನಿಜವಾದ ‘ನೀವು’. ಥಿಂಕ್ ಮಾಡುವುದನ್ನ ನಿಲ್ಲಿಸಿದ ಕ್ಷಣದಲ್ಲಿ ಒಳಗಿನ ಗೈಡ್ ಜಾಗೃತವಾಗುತ್ತಾನೆ. ಇಷ್ಟು ದಿನ ನಿಮ್ಮ ತರ್ಕ ಬುದ್ಧಿ ನಿಮ್ಮ ದಾರಿ ತಪ್ಪಿಸಿದೆ, ನಿಮ್ಮ ಒಳಗಿನ ಮಾರ್ಗದರ್ಶಕನನ್ನು ನಂಬಂದಂತೆ ಮಾಡಿದೆ.
ಮೊದಲು ನೀವು ನಿಮ್ಮ ತರ್ಕ ಬುದ್ಧಿಯನ್ನು ಒಪ್ಪಿಸಬೇಕು. ಒಳಗಿನ ಗೈಡ್ go ahead ಎಂದು ಹೇಳುತ್ತಿರುವಾಗಲೂ ನೀವು ನಿಮ್ಮ ತರ್ಕವನ್ನು ಕನ್ವಿನ್ಸ್ ಮಾಡುತ್ತ ಕುಳಿತುಕೊಳ್ಳುತ್ತೀರಾದರೆ, ಅದ್ಭುತ ಅವಕಾಶಗಳು ತಪ್ಪಿ ಹೋಗುತ್ತವೆ. ಅವಕಾಶಗಳು ಬಹಳ ಹೊತ್ತು ಕಾಯುವುದಿಲ್ಲ, ನಿಮ್ಮ ಬುದ್ಧಿಗೆ ಕನ್ವಿನ್ಸ್ ಆಗದೇ ಹೋದರೆ ಅವಕಾಶಗಳು ಮಿಸ್ ಆಗುತ್ತವೆ. ನೀವು ಲೆಕ್ಕ ಹಾಕುತ್ತ, ವಿಶ್ಲೇಷಣೆ ಮಾಡುತ್ತ, ಆಲೋಚನೆ ಮಾಡುತ್ತ ಕುಳಿತಷ್ಟು ಹೊತ್ತು ಕಾಯುವುದು ಅವಕಾಶಗಳಿಗೆ ಸಾಧ್ಯವಾಗುವುದಿಲ್ಲ.
ಬದುಕು ನಿಮಗಾಗಿ ಕಾಯುತ್ತ ಕೂಡುವುದಿಲ್ಲ ಅದನ್ನು ಆಯಾ ಕ್ಷಣಗಳಲ್ಲಿಯೇ ಬದುಕಬೇಕು.
ಝೆನ್ ಮಾಸ್ಟರ್ ನ ಆಶ್ರಮದಲ್ಲಿ ಝೆನ್ ಅಭ್ಯಾಸ ಮಾಡುತ್ತಿದ್ದ ಒಬ್ಬ ಯುವ ಸನ್ಯಾಸಿ ತನ್ನ ಕಲಿಕೆಯ ಅವಧಿ ಮುಗಿಯುತ್ತಿದ್ದಂತೆಯೇ ದೇಶಾಂತರ ಹೊರಟು ಬಿಟ್ಟ. ಸುತ್ತಾಟದಲ್ಲಿ ತಾನು ಕಂಡದ್ದನ್ನ ಮತ್ತು ತನ್ನ ಅಧ್ಯಾತ್ಮ ಕಲಿಕೆಯ ಪ್ರಗತಿಯನ್ನು ಪತ್ರದ ಮೂಲಕ ಮಾಸ್ಟರ್ ಗೆ ತಿಳಿಸಬೇಕೆಂದು ಬಯಸಿದ.
ಆಶ್ರಮ ಬಿಟ್ಟು ಒಂದು ತಿಂಗಳಾದ ಮೇಲೆ ಮಾಸ್ಟರ್ ಗೆ ಮೊದಲ ಪತ್ರ ಬರೆದ “ ಮಾಸ್ಟರ್, ನನ್ನ ಪ್ರಜ್ಞೆ ವಿಸ್ತಾರಗೊಳ್ಳುತ್ತಿದೆ, ಬ್ರಹ್ಮಾಂಡದೊಂದಿಗೆ ಒಂದಾಗುತ್ತಿರುವ ಹಾಗೆ ಅನುಭವವಾಗುತ್ತಿದೆ “
ಪತ್ರ ಓದುತ್ತಿದ್ದಂತೆಯೇ ಮಾಸ್ಟರ್, ಪತ್ರ ಬಿಸಾಕಿ ಬಿಟ್ಟ.
ಎರಡನೇ ಪತ್ರದಲ್ಲಿ ಶಿಷ್ಯ ಹೀಗೆ ಬರೆದಿದ್ದ, “ ಸಮಸ್ತ ಚರಾಚರಗಳಲ್ಲಿ ಹುದುಗಿರುವ ದೈವಿಕತೆಯನ್ನು ನಾನು ಕಂಡುಕೊಂಡೆ “
ಪತ್ರ ಓದಿ ಮಾಸ್ಟರ್ ಗೆ ತೀವ್ರ ಹತಾಶೆಯಾಯಿತು.
ಒಂದು ತಿಂಗಳ ನಂತರ ಮತ್ತೆ ಪತ್ರ ಬಂತು
“ ಪ್ರಕೃತಿಯ ರಹಸ್ಯ ನನ್ನ ದಿವ್ಯ ದೃಷ್ಟಿಗೆ ಗೋಚರವಾಯಿತು “
ಪತ್ರ ಓದಿ ಮಾಸ್ಟರ್, ಆಕಳಿಸಿದ.
ಎರಡು ತಿಂಗಳ ನಂತರ ಬಂದ ಪತ್ರದಲ್ಲಿ ಹೀಗೆ ಬರೆದಿತ್ತು “ ಯಾರೂ ಹುಟ್ಟಿಲ್ಲ, ಯಾರೂ ಬದುಕುತ್ತಿಲ್ಲ, ಯಾರೂ ಸಾಯುವುದೂ ಇಲ್ಲ, ಏಕೆಂದರೆ ಆತ್ಮ ಒಂದು ಭ್ರಮೆ”
ಮಾಸ್ಟರ್ ಗೆ ಎಷ್ಟು ನಿರಾಶೆಯಾಯಿತೆಂದರೆ ಛೇ ಎನ್ನುತ್ತ ಗಾಳಿಯಲ್ಲಿ ತನ್ನ ಕೈ ತೂರಿದ.
ಹೀಗೇ ಒಂದು ವರ್ಷ ಕಳೆಯಿತು, ಶಿಷ್ಯನಿಂದ ಪತ್ರಗಳು ಬರುತ್ತಲೇ ಇದ್ದವು. ಮಾಸ್ಟರ್ ಗೆ ಸಮಾಧಾನವಾಗಲಿಲ್ಲ, ಶಿಷ್ಯನ ಕರ್ತವ್ಯಗಳನ್ನು ನೆನಪಿಸುತ್ತ, ಅವನ ಅಧ್ಯಾತ್ಮದ ಹಾದಿಯಲ್ಲಿನ ಸಮಸ್ಯೆಗಳನ್ನು ವಿವರಿಸಿ ಮಾಸ್ಟರ್ ಪತ್ರ ಬರೆದ.
ಶಿಷ್ಯ ತಿರುಗಿ ಉತ್ತರ ಬರೆದ “ ನಿಮ್ಮ ತಿಳುವಳಿಕೆ ಯಾರಿಗೆ ಬೇಕು? “
ಈ ಉತ್ತರ ಓದುತ್ತಿದ್ದಂತೆಯೇ, ಮಾಸ್ಟರ್ ಮುಖದಲ್ಲಿ ತೃಪ್ತಿ ಕಾಣಿಸಿಕೊಂಡಿತು.
“ ಓಹ್! ಕೊನೆಗೂ ತಿಳಿದುಕೊಂಡುಬಿಟ್ಟ”

