ಪ್ರಾರ್ಥನೆ ಮಾಡಬೇಕು ಎಂದು ಯಾವತ್ತೂ ನನ್ನ ಕೇಳಬೇಡಿ. ಪ್ರಾರ್ಥನೆಯ ಭಾವ ಪ್ರವಾಹ ನಿಮ್ಮೊಳಗಿಂದ ತುಂಬಿ ಬರಲಿ, ನೀವು ಕೇವಲ ಆ ಪ್ರವಾಹದಲ್ಲಿ ಒಂದಾಗಿ, ಅದು ಕರೆದುಕೊಂಡು ಹೋದಲ್ಲಿಗೆ ಹೋಗಿ… ~ ಓಶೋ ರಜನೀಶ್; ಕನ್ನಡಕ್ಕೆ: ಚಿದಂಬರ ನರೇಂದ್ರ
ಪ್ರತೀ ಓದುಗನೂ
ವಿಶ್ಲೇಷಣೆ ಮಾಡುತ್ತಾನೆ
ಪವಿತ್ರ ಗ್ರಂಥಗಳನ್ನು
ತನ್ನ ಸಾಮರ್ಥ್ಯಕ್ಕನುಗುಣವಾಗಿ
ಪವಿತ್ರ ಗ್ರಂಥದ ಪುಟಗಳನ್ನು
ತೆರೆಯುತ್ತಿದ್ದಂತೆಯೇ,
ನಮ್ಮನ್ನು ಸ್ವಾಗತಿಸುತ್ತವೆ
ನಾಲ್ಕು ಹಂತದ ಒಳನೋಟಗಳು
ಮೊದಲನೇಯದೇ,
ಹೊರಗಿನ ಸಾಮಾನ್ಯ ಅರ್ಥ,
ಬಹುತೇಕ ಎಲ್ಲರೂ ಇಷ್ಟಕ್ಕೇ ಸಂತೃಪ್ತರು.
ಎರಡನೇಯದು ಒಳ ಅರ್ಥ,
ಬುದ್ಧಿಗೆ ತಾಕುವಂಥದು.
ಮೂರನೇಯದು ಈ ಒಳ ಅರ್ಥದ
ಹೊಟ್ಟೆಯಲ್ಲಿರುವಂಥದು, ಕರುಳಿನಂಥದು.
ನಾಲ್ಕನೇಯದು
ಎಷ್ಟು ಆಳದಲ್ಲಿದೆಯೆಂದರೆ
ಯಾವ ಮಾತಿಗೂ ನಿಲುಕುವುದಿಲ್ಲ
ವರ್ಣಿಸಲೂ ಆಗದು.
ಯಾವುದನ್ನ
ಹೇಳಲಿಕ್ಕೆ ಆಗುವುದಿಲ್ಲವೋ
ಅದನ್ನು ಆಚರಿಸುವುದೇ ಧರ್ಮ,
ಅಂತೆಯೇ ಪ್ರೇಮಕ್ಕೆ ಧರ್ಮದ ಉಪಾಧಿ.
~ ಶಮ್ಸ್ ತಬ್ರೀಝಿ
ನಾನು ಕೆಲ ದಿನಗಳ ಕಾಲ ಒಂದು ಮನೆಯಲ್ಲಿ ಅತಿಥಿಯಾಗಿದ್ದೆ. ಆ ಮನೆಯ ಹುಡುಗಿಯೊಬ್ಬಳು ತನ್ನ ಶಾಲೆಯಲ್ಲಿ ಭಾಷಣ ಸ್ಪರ್ಧೆಯಲ್ಲಿ ಭಾಗವಹಿಸಿದ್ದಳು. “ನೀವು ಎಷ್ಟು ಚಂದ ಮಾತನಾಡುತ್ತೀರಿ, ನನಗೆ ಕೇವಲ ಮೂರು ನಿಮಿಷ ಭಾಷಣ ಮಾಡಲಿಕ್ಕಿದೆ, ಭಾಷಣ ಮಾಡಲು ಸಹಾಯ ಮಾಡಿ. ನೀವು ಸಹಾಯ ಮಾಡಿದ್ದಾದರೆ ಸ್ಪರ್ಧೆಯಲ್ಲಿ ನಾನು ಖಂಡಿತ ಗೆಲ್ಲುತ್ತೇನೆ” ಆ ಹುಡುಗಿ ನನಗೆ ದುಂಬಾಲು ಬಿದ್ದಳು.
ಮೂರು ನಿಮಿಷದ ಭಾಷಣಕ್ಕಾಗಿ ನಾನು ಅವಳನ್ನು ತಯಾರು ಮಾಡಿದೆ. ಭಾಷಣದ ವಾಕ್ಯಗಳು ಮರೆಯದಂತೆ ಮೇಲಿಂದಮೇಲೆ ಬಾಯಿಪಾಠ ಮಾಡುವಂತೆ ಅವಳನ್ನು ಒತ್ತಾಯಿಸಿದೆ. “ಸಹೋದರ ಸಹೋದರಿಯರಿಗೆ ನಾನೇನಾದರು ತಪ್ಪು ಮಾತನಾಡಿದರೆ ನನ್ನನ್ನು ಕ್ಷಮೆ ಮಾಡಿ ” ಎನ್ನುವ ಸಾಲನ್ನು ಮೊದಲು ಹೇಳುವಂತೆ ಹೇಳಿದೆ. ಆ ಮನೆಯ ಕುಟುಂಬ ನನ್ನನ್ನೂ ಭಾಷಣ ಸ್ಪರ್ಧೆ ನೋಡಲು ಕರೆದುಕೊಂಡು ಹೋದರು. ಹುಡುಗಿಯ ಮುಖದಲ್ಲಿ ಆತ್ಮವಿಶ್ವಾಸ ತುಂಬಿ ತುಳುಕುತ್ತಿತ್ತು. ಸಭೆಯಲ್ಲಿ ನನ್ನ ಮುಖ ಕಂಡು ಆಕೆಗೆ ಖುಶಿ ಆಯಿತು. ಆಕೆ ನನ್ನ ಮುಖ ನೋಡುತ್ತಲೇ ತನ್ನ ಭಾಷಣ ಆರಂಭಿಸಿದಳು, “ ಸಹೋದರ ಸಹೋದರಿಯರೆ ನಾನೇನಾದರೂ ಕ್ಷಮೆ ಮಾತಾಡಿದರೆ ನನ್ನನ್ನು ತಪ್ಪು ಮಾಡಿ ”.
ಏನು ಮಾಡುವುದು, ಗಿಳಿಯಂತೆ ಬಾಯಿಪಾಠ ಮಾಡಿದರೆ ಹೀಗೇ ಆಗುತ್ತದೆ. ಪ್ರಾರ್ಥನೆಯಲ್ಲೂ ಹೀಗೇ ಆಗುತ್ತದೆ., ನೀವು ಎಡವಿ ಬೀಳುತ್ತೀರಿ. ನೀವು ಪ್ರಾರ್ಥನೆಗಳು, ಭಕ್ತಿಗೀತೆಗಳು ಎಲ್ಲವನ್ನೂ ಬಾಯಿಪಾಠ ಮಾಡಿದ್ದೀರಿ, ಎಲ್ಲವನ್ನೂ ನಟನೆಯಂತೆ ಒಪ್ಪಿಸುತ್ತೀರಿ, ಈ ಯಾವುದೂ ನಿಜವಲ್ಲ.
ಆದ್ದರಿಂದ ಹೇಗೆ ಪ್ರಾರ್ಥನೆ ಮಾಡಬೇಕು ಎಂದು ಯಾವತ್ತೂ ನನ್ನ ಕೇಳಬೇಡಿ. ಪ್ರಾರ್ಥನೆಯ ಭಾವ ಪ್ರವಾಹ ನಿಮ್ಮೊಳಗಿಂದ ತುಂಬಿ ಬರಲಿ, ನೀವು ಕೇವಲ ಆ ಪ್ರವಾಹದಲ್ಲಿ ಒಂದಾಗಿ, ಅದು ಕರೆದುಕೊಂಡು ಹೋದಲ್ಲಿಗೆ ಹೋಗಿ. ನಮಗೆ ನಗಲು ಭಯ, ಅಳಲು ಭಯ, ಕುಣಿಯಲು ಭಯ. ಭಾವನೆಗಳು ನಮ್ಮನ್ನು ಏನು ಮಾಡಿಸುತ್ತವೆಯೋ ಎನ್ನುವ ಹೆದರಿಕೆ ನಮ್ಮದು. ನಾವು ಸಂಪೂರ್ಣವಾಗಿ ಒಣಗಿ ಹೋಗಿದ್ದೇವೆ. ನಮ್ಮ ಇಡೀ ಮನುಷ್ಯತ್ವ, ಮಿಥ್ಯೆ, ಟೊಳ್ಳು ಮತ್ತು ಬೂಟಾಟಿಕೆಯಾಗಿದೆ.
ಪ್ರಾರ್ಥನೆಯಿರುವುದು ಪದಗಳಲ್ಲಿ ಅಲ್ಲ, ಬದುಕಿನ ಪ್ರತಿಧ್ವನಿಯಲ್ಲಿ.
ಪದಗಳ ಹಿಂದೆ ಬೀಳಬೇಡಿ. ನಿಮ್ಮ ಮೈಂಡ್ ನ ಜಾಣತನ ಎಂತಹದ್ದು ಎಂದರೆ ಅದು ನಿಮ್ಮ ಪದಗಳನ್ನು ಮಿಥ್ಯೆಯಾಗಿಸುತ್ತದೆ. ದಾರಿಯಲ್ಲಿ ನಿಮಗೆ ಯಾರಾದರೂ ಎದುರಾದರೆ ತಕ್ಷಣ ನೀವು ಮುಗುಳ್ನಗುತ್ತೀರಿ. ಈ ನಗು ನಿಮ್ಮ ಒಳಗಿನಿಂದ ಬಂದದ್ದಲ್ಲ, ಈ ನಗುವನ್ನು ನಿಮ್ಮ ಮೈಂಡ್, ಔಪಚಾರಿಕತೆಗಾಗಿ ನಿಮ್ಮ ತುಟಿಯ ಮೇಲೆ ಅಂಟಿಸಿದೆ. ಪ್ರಾರ್ಥನೆ ಹೀಗಾಗಬಾರದು. ಅದು ನಿಮ್ಮ ಒಳಗಿನಿಂದ ಬರಬೇಕು, ಅದು ಪದಗಳಾಗಬೇಕಿಲ್ಲ, ನಗು, ಅಳು, ಕುಣಿತ ಯಾವುದೇ ಭಾವ ಆಗಬಹುದು. ಅದನ್ನು ನೀವು ಪೂರ್ಣ ಅನುಭವಿಸಬೇಕು ಮಾತ್ರ.
ಒಂದು ದಿನ ನಸ್ರುದ್ದೀನ್, ಪಾದ್ರಿಯೊಬ್ಬರ ಮನೆ ಬಾಗಿಲು ತಟ್ಟಿದ.
“ ಫಾದರ್, ಮನೆಯಲ್ಲಿದೀರಾ ? ಬ್ಯುಸಿ ನಾ ? “
“ ಹಾಗೇನಿಲ್ಲ ಒಳಗೆ ಬಾ ನಸ್ರುದ್ದೀನ್, ಇವತ್ತು ಚರ್ಚ್ ಲ್ಲಿ ಹೇಳಬೇಕಾಗಿರುವ ಮಾತುಗಳನ್ನ ಪ್ರ್ಯಾಕ್ಟೀಸ್ ಮಾಡುತ್ತಿದ್ದೆ. “ ಪಾದ್ರಿ ಮನೆಯೊಳಗಿನಿಂದಲೇ ಉತ್ತರಿಸಿದರು.
“ ಓಹ್, ನೀವು ಪ್ರ್ಯಾಕ್ಚೀಸ್ ಮಾಡಿ ಉಪದೇಶ ಹೇಳುತ್ತೀರಿ, ಆದರೆ ನಾವು ನಿಮ್ಮ ಉಪದೇಶ ಕೇಳಿ ಪ್ರ್ಯಾಕ್ಟೀಸ್ ಮಾಡಬೇಕು ಅಲ್ವಾ ? “
ನಸ್ರುದ್ದೀನ್, ತಮಾಷೆ ಮಾಡಿದ

