ಬದುಕಿನ ಅತ್ಯಂತ ರುಚಿಕಟ್ಟಾದ ಅನುಭವಗಳಲ್ಲಿ ಒಂದು, ಸಾಧನೆ ಮಾಡಿದ ಮಹಾನ್ ವ್ಯಕ್ತಿಗಳ ಬಗ್ಗೆ ಮಾತನಾಡುವುದು ಮತ್ತು ಅವರ ಕುರಿತಾದ ಕತೆಗಳನ್ನು ಹೇಳಿಕೊಳ್ಳುವುದು. ಇದುವೇ ಸತ್ಸಂಗ … ~ ಓಶೋ ರಜನೀಶ್; ಕನ್ನಡಕ್ಕೆ: ಚಿದಂಬರ ನರೇಂದ್ರ
ಒಂದು ಸಂಜೆ, ಕೋಸೊವೋ (Hassidim) ನ ಹಲವಾರು ರಬ್ಬಿ ಶಿಷ್ಯರು ಅವನ ಓದುವ ಕೋಣೆಯಲ್ಲಿ ಒಂದೆಡೆ ಸೇರಿಕೊಂಡು ಒಬ್ಬರಿಗೊಬ್ಬರು ಹಳೆಯ ಪುರಾತನ ಮಾಸ್ಟರ್ ಗಳ (zaddikim) ಕುರಿತಾದ ಕತೆಗಳನ್ನು ಹೇಳಿಕೊಳ್ಳುತ್ತಿದ್ದರು. ವಿಶೇಷವಾಗಿ ಬಾಲ ಶೇಮ್ ತೋವ್ (THE BAAL SHEM TOV) ನ ಕತೆಗಳನ್ನ. ಬಾಲ ಶೇಮ್ ತೋವ್ ಹಸ್ಸಿದಿಸಂ ನ ಮೂಲ ಸಂಸ್ಥಾಪಕ – ಈ ಭೂಮಿಯ ಮೇಲೆ ನಡೆದಾಡಿದ ಅತ್ಯಂತ ಶ್ರೇಷ್ಠ ಆತ್ಮಗಳಲ್ಲಿ ಅವನೂ ಒಬ್ಬ. ಮತ್ತು ಈ ಕತೆ ಕೇಳುವುದು ಹಾಗು ಹೇಳುವುದು ಮಧುರ ಅನುಭವವಾಗಿದ್ದರಿಂದ ಈ ಕೂಟ ಮಧ್ಯರಾತ್ರಿಯನ್ನು ದಾಟಿ ಮುಂದುವರೆಯಿತು.
ಹೌದು ಇಂತಹದು ಬಹಳ ಸುಂದರ, ಬದುಕಿನ ಅತ್ಯಂತ ರುಚಿಕಟ್ಟಾದ ಅನುಭವಗಳಲ್ಲಿ ಒಂದು, ಸಾಧನೆ ಮಾಡಿದ ಮಹಾನ್ ವ್ಯಕ್ತಿಗಳ ಬಗ್ಗೆ ಮಾತನಾಡುವುದು ಮತ್ತು ಅವರ ಕುರಿತಾದ ಕತೆಗಳನ್ನು ಹೇಳಿಕೊಳ್ಳುವುದು.
ಇದನ್ನೇ ನಾವು ಪೌರಸ್ತ್ಯರು ಸತ್ಸಂಗ ಎಂದು ಹೇಳುವುದು. ದೇವರ ಬಗ್ಗೆ, ದೈವಿಕ ವ್ಯಕ್ತಿಗಳ ಬಗ್ಗೆ, ಜ್ಞಾನೋದಯವನ್ನು ಸಾಧಿಸಿದ ಮನುಷ್ಯರ ಬಗ್ಗೆ ಮಾತನಾಡುವುದು, ನಮ್ಮ ಹೃದಯವನ್ನು ಕಲಕಿದ ಅವರ ಕುರಿತಾದ ಘಟನೆಗಳನ್ನ, ದೃಷ್ಟಾಂತಗಳನ್ನ, ಕತೆಗಳನ್ನ, ನಿಮಗೆ ಹಾಡಲು ಸಾಧ್ಯವಾದ ಹಾಡುಗಳನ್ನ, ನಿಮ್ಮ ಸುತ್ತಲೂ ಅಜ್ಞಾತವಾಗಿರುವುದರ ಅರಿವು ಮಾಡಿಸುವ, ದೇವರ ಕುರಿತಾದ ಬಯಕೆಗಳನ್ನ ತುಡಿತಗಳನ್ನ ತುಂಬಿಕೊಳ್ಳುವ, ಮತ್ತು ಹಿಂದಿನಿಂದಲೂ ಮನುಷ್ಯ ಅನುಭವಿಸುತ್ತ ಬಂದಿರುವ ಅತಿ ಮಾನುಷತ್ವವನ್ನ (super human) ನೀವೂ ಅನುಭವಿಸಬಹುದು ಎಂಬ ಭಾವ ಹುಟ್ಟಿಸುವುದನ್ನ ಹಂಚಿಕೊಳ್ಳುವುದು.
ಮತ್ತು ಹಸ್ಸಿದಿಸಂ ನಲ್ಲಿಯ ಅತ್ಯಂತ ಮೂಲಭೂತ ಸಂಗತಿಗಳಲ್ಲೊಂದು ಎಂದರೆ, ಮಾಸ್ಟರ್ ಗಳ ಬಗ್ಗೆ ಮಾತನಾಡುವುದು, ಆನಂದ ಪಡುವುದು, ಮತ್ತು ಆ ಮಾತುಗಳ ಮೂಲಕ ಆಹ್ಲಾದ ಮತ್ತು ಬೆಳವಣಿಗೆಯನ್ನು ಹೊಂದುವುದು. ಸೂಫಿಯಿಸಂ ಮತ್ತು ಝೆನ್ ನಲ್ಲಿ ಕೂಡ ಇದು ಉಂಟು. ಎಲ್ಲ ಹಳೆಯ ಕತೆಗಳು……. ಈ ಕತೆಗಳು ಕಾಲ ಕಳೆದಂತೆ ಹೆಚ್ಚು ಹೆಚ್ಚು ಸಂಗತಿಗಳನ್ನು ಕೂಡಿಕೊಳ್ಳುತ್ತ, ಹೆಚ್ಚು ಹೆಚ್ಚು ಪರಿಪಕ್ವಗೊಳ್ಳುತ್ತ ಹೋಗುತ್ತವೆ. ಇಲ್ಲಿಯ ಕಾಳಜಿ ಐತಿಹಾಸಿಕ ಸಂಗತಿಗಳ ಬಗ್ಗೆ ಅಲ್ಲ, ಹೆಚ್ಚು ಕಾಳಜಿ ಇರುವುದು ದೈವಿಕ ಅನುಭವಗಳ ಸಂಭವಿಸಿದ ಅವಶ್ಯಕ ವಿದ್ಯಮಾನಗಳ ಬಗ್ಗೆ.
ಹೀಗೆ ಎಲ್ಲ ಮಾತನಾಡುತ್ತ ಅರ್ಧ ರಾತ್ರಿ ಕಳೆದು ಹೋಗಿತ್ತು……
ಅವರೊಳಗೊಬ್ಬ ಬಾಲ ಶೇಮ್ ತೋವ್ ಕುರಿತಾದ ಇನ್ನೊಂದು ಕತೆ ಹೇಳಿದ. ಕತೆ ಮುಗಿಯುತ್ತಿದ್ದಂತೆಯೇ ಇನ್ನೊಬ್ಬ ತನ್ನ ಹೃದಯಾಂತರಾಳದಿಂದ ನಿಟ್ಟುಸಿರಿಟ್ಟು ತನಗೆ ತಾನೆ ಹೇಳಿಕೊಂಡ, “ಓಹ್ ಇಂಥ ಜನ ಈಗ ಎಲ್ಲಿ?”
ಅದೇ ಗಳಿಗೆಯಲ್ಲಿ, ರಬ್ಬಿಗಳ ಕೋಣೆಗೆ ಬಂದ ಸೇರುತ್ತಿದ್ದ ಕಟ್ಟಿಗೆಯ ಮೆಟ್ಟಲುಗಳಿಂದ ಹೆಜ್ಜೆಯ ಸಪ್ಪಳ ಕೇಳಿಬಂತು. ಕೋಣೆಯ ಬಾಗಿಲು ತೆರೆದುಕೊಂಡಿತು. ಪ್ರತಿದಿನ ಸಂಜೆಯ ಹೊತ್ತಿಗೆ ಧರಿಸುತ್ತಿದ್ದ ಜ್ಯಾಕೆಟ್ ನಲ್ಲಿ ಕಾಣಿಸಿಕೊಂಡ ಅವ, ಮೃದುವಾಗಿ ಹೇಳಿದ, “ಹುಚ್ಚರುಗಳಾ, ಅಂಥವನು ಪ್ರತೀ ಪೀಳಿಗೆಯಲ್ಲೂ ಇರುತ್ತಾನೆ ”. ಇಷ್ಟು ಹೇಳಿ ಅವನು ಬಾಗಿಲು ಮುಚ್ಚಿಕೊಂಡು ಮೆಟ್ಟಿಲು ಹತ್ತಿ ಹೊರಟು ಬಿಟ್ಟ.
ಎಲ್ಲ ಶಿಷ್ಯರು ಮೌನದಲ್ಲಿ ಕುಳಿತುಕೊಂಡರು.

