ನೀವು ಒಬ್ಬ ವ್ಯಕ್ತಿಯನ್ನ ಒಂದೇ ಉದ್ದೇಶದಿಂದ ಕೇಳಬೇಕು ; ಅವನಿಗೆ ಅಥವಾ ಅವಳಿಗೆ ಸಹಾಯ ಮಾಡಲು, ಅವರ ಭಾರಹೃದಯವನ್ನು ಹಗುರಗೊಳಿಸಲು. ಅವರ ಗ್ರಹಿಕೆ ತಪ್ಪಾಗಿದ್ದರೂ, ಅವರ ತಿಳುವಳಿಕೆಯಲ್ಲಿ ಕಹಿ ಇದ್ದರೂ ನೀವು ಮಾತ್ರ ಅಂತಃಕರಣದಿಂದ ಯಾವ ಪೂರ್ವಾಗ್ರಹಗಳಿಲ್ಲದೆ ಅವರು ಹೇಳುತ್ತಿರುವುದನ್ನ ಕೇಳಬೇಕು… ~ Thích Nhất Hạnh | ಕನ್ನಡಕ್ಕೆ: ಚಿದಂಬರ ನರೇಂದ್ರ
ನಿಜದ ಮನುಷ್ಯರು ಬಲ್ಲ
ರಸವಿದ್ಯೆಯ ಬಗ್ಗೆ ಗಮನ ಹರಿಸು.
ನಿನಗೆ ದಯಪಾಲಿಸಲಾಗಿರುವ ಕಷ್ಟಗಳನ್ನು
ಒಮ್ಮೆ ಒಪ್ಪಿಕೊಂಡುಬಿಟ್ಟೆಯಾದರೆ
ಹೊಸ ಬಾಗಿಲೊಂದು
ತೆರೆದುಕೊಳ್ಳುತ್ತದೆ ತಾನೇ ತಾನಾಗಿ .
ಕಠಿಣ ಪರಿಸ್ಥಿತಿಗಳನ್ನು,
ಪರಿಚಿತ ಗೆಳೆಯನೊಬ್ಬನನು ಅಪ್ಪಿಕೊಳ್ಳುವಂತೆ
ಸ್ವಾಗತಿಸು ತೋಳು ಚಾಚಿ,
ಅವನು ತನ್ನ ಜೊತೆಗೆ ತಂದ ಯಾತನೆಗಳ
ಪಕ್ಕೆ ಹಿಂಡಿ ತಮಾಷೆ ಮಾಡು.
ದುಃಖಗಳು,
ಚಿಂದಿ ಬಟ್ಟೆಯ ಕೌದಿಯ ಹಾಗೆ
ಕಳಚಿಟ್ಟು ಬಿಡಬೇಕು ಬೇಕಾದಾಗ ಹೊದ್ದು.
ಈ ಕಳಚುವಿಕೆ ಮತ್ತು
ಅದರ ಕೆಳಗಿನ ಬೆತ್ತಲೆ ದೇಹಗಳೇ
ಸಂಕಟದ ನಂತರ
ಒದಗಿ ಬರುವ ಅಮೃತದ ಹನಿಗಳು
~ ರೂಮಿ
**************************
ನಿಮ್ಮ ಕ್ರಿಯಾತ್ಮಕ ಕೇಳುವಿಕೆ ಒಬ್ಬ ವ್ಯಕ್ತಿಯನ್ನು ಅವನ ಸಂಕಟಗಳಿಂದ ಮುಕ್ತ ಮಾಡಬಲ್ಲದು.
ಆಳವಾದ ಕೇಳುವಿಕೆಗೆ ಎಂಥ ಶಕ್ತಿಯಿದೆ ಎಂದರೆ, ಅದು ಇನ್ನೊಬ್ಬ ವ್ಯಕ್ತಿಯನ್ನು ಅವನ ಯಾತನೆಗಳಿಂದ ಬಿಡುಗಡೆಗೊಳಿಸಬಲ್ಲದು. ಅದನ್ನ ಅಂತಃಕರಣದ ಕೇಳುವಿಕೆ ಎನ್ನಬಹುದು.
ನೀವು ಒಬ್ಬ ವ್ಯಕ್ತಿಯನ್ನ ಒಂದೇ ಉದ್ದೇಶದಿಂದ ಕೇಳಬೇಕು ; ಅವನಿಗೆ ಅಥವಾ ಅವಳಿಗೆ ಸಹಾಯ ಮಾಡಲು, ಅವರ ಭಾರಹೃದಯವನ್ನು ಹಗುರಗೊಳಿಸಲು. ಅವರ ಗ್ರಹಿಕೆ ತಪ್ಪಾಗಿದ್ದರೂ, ಅವರ ತಿಳುವಳಿಕೆಯಲ್ಲಿ ಕಹಿ ಇದ್ದರೂ ನೀವು ಮಾತ್ರ ಅಂತಃಕರಣದಿಂದ ಯಾವ ಪೂರ್ವಾಗ್ರಹಗಳಿಲ್ಲದೆ ಅವರು ಹೇಳುತ್ತಿರುವುದನ್ನ ಕೇಳಬೇಕು.
ಏಕೆಂದರೆ ನಿಮಗೆ ಗೊತ್ತಿದೆ ಇಂಥ ಕೇಳುವಿಕೆಯಿಂದ ನೀವು ಅವರಿಗೆ ಕಡಿಮೆ ಯಾತನೆಪಡಲು ಅವಕಾಶ ಮಾಡಿಕೊಡುತ್ತೀರಿ. ಅವರು ಹೇಳುತ್ತಿರುವುದನ್ನ ಸುಮ್ಮನೇ ಕೇಳಿ, ಅವರ ತಪ್ಪುಗಳನ್ನ ತಿದ್ದಲು, ಅವರ ತಿಳುವಳಿಕೆಯಲ್ಲಿನ, ಸ್ವಭಾವದಲ್ಲಿನ ದೋಷಗಳನ್ನು ತಿದ್ದಲು ಮುಂದಾಗ ಬೇಡಿ. ಅದಕ್ಕಾಗಿ ಇನ್ನೊಂದು ಅವಕಾಶಕ್ಕೆ ಎದುರು ನೋಡಿ. ಈಗ ಮಾತ್ರ ಸುಮ್ಮನೇ ಅವರು ಹೇಳುತ್ತಿರುವುದನ್ನ ಕೇಳಿ.
ಈಗ ನೀವು ಅವರನ್ನು ಅಡ್ಡಪಡಿಸಬೇಡಿ, ಅವರೊಂದಿಗೆ ವಾದಕ್ಕೆ ಇಳಿಯಬೇಡಿ, ಅವರಿಗೆ ನೀತಿ, ನೈತಿಕತೆ, ಲೋಕ ಜ್ಞಾನದ ಪಾಠ ಹೇಳಲು ಮುಂದಾಗಬೇಡಿ. ನೀವು ಹಾಗೆ ಮಾಡಿದ್ದಾದರೆ ಅವರು ಅವಕಾಶವಂಚಿತರಾಗುತ್ತಾರೆ. ಈಗ ನೀವು ಅವರು ಹೇಳುತ್ತಿರುವುದನ್ನ ಸುಮ್ಮನೇ ಸಹಾನುಭೂತಿಯಿಂದ ಅವರಿಗೆ ಸಹಾಯ ಮಾಡುವ ಏಕೈಕ ಉದ್ದೇಶದಿಂದ ಕೇಳಿ.
ಒಂದು ಗಂಟೆ ಹೀಗೆ ನೀವು ಅವರು ಹೇಳುತ್ತಿರುವುದನ್ನ ಸುಮ್ಮನ್ನೇ ಕೇಳುವಿರಾದರೆ, ಅದೇ ಅವರಲ್ಲಿ ಬದಲಾವಣೆಯನ್ನ, ಅವರ ಆತಂಕಕ್ಕೆ ಉಪಶಮನವನ್ನ ಸಾಧ್ಯಮಾಡುವುದು.
ಒಂದು ದಿನ ಇಬ್ಬರು ಝೆನ್ ಸನ್ಯಾಸಿಗಳು, ತಮ್ಮ ಮಾಸ್ಟರ್ ಹೇಳಿದ ಒಂದು ಮಾತಿನ ಬಗ್ಗೆ ವಾದ ಮಾಡುತ್ತಿದ್ದರು. ಒಬ್ಬ , ಮಾಸ್ಟರ್ ಮಾತು ಸರಿ ಎಂದೂ, ಇನ್ನೊಬ್ಬ ತಪ್ಪು ಎಂದು. ಒಮ್ಮತಕ್ಕೆ ಬರಲು ಸಾಧ್ಯವಾಗದ ಕಾರಣ, ಇಬ್ಬರೂ ಮಾಸ್ಟರ್ ಹತ್ತಿರ ಬಂದು ತಮ್ಮ ವಾದಗಳಿಗೆ ಸಮರ್ಥನೆ ಕೊಟ್ಟರು.
ಮೊದಲ ಸನ್ಯಾಸಿ, ಮಾಸ್ಟರ್ ಮಾತು ಯಾಕೆ ಸರಿ ಅಂತ ವಾದ ಮಂಡಿಸಿದ. ಸ್ವಲ್ಪ ಹೊತ್ತು ಯೋಚಿಸಿದ ಮಾಸ್ಟರ್ “ ನೀನು ಹೇಳಿದ್ದು ಸರಿ “ ಎಂದು ಗೋಣು ಹಾಕಿದ.
ಆಮೇಲೆ ಎರಡನೇ ಸನ್ಯಾಸಿ, ವಾದ ಮಾಡಿದ. ಮಾಸ್ಟರ್ ಮಾತು ಯಾಕೆ ತಪ್ಪು ಎಂಬುದನ್ನ ವಿವರವಾಗಿ ಚರ್ಚಿಸಿದ. ಮಾಸ್ಟರ್ ಮತ್ತೆ ಯೋಚನೆ ಮಾಡಿ ಹೇಳಿದ, “ ನೀನು ಹೇಳೋದೂ ಸರಿ”
ಈ ವಾದ ವಿವಾದವನ್ನು ನೋಡುತ್ತಿದ್ದ ಕಿರಿಯ ಸನ್ಯಾಸಿ ಕುತೂಹಲದಿಂದ ಕೇಳಿದ, “ ಇದು ಹೇಗೆ ಮಾಸ್ಟರ್, ಇಬ್ಬರಿಗೂ ನೀವು ಸರಿ ಎಂದು ಹೇಳಿದಿರಿ? ಯಾರೋ ಒಬ್ಬರದು ತಪ್ಪು ಇರಲೇಬೇಕಲ್ವಾ? “
ಮಾಸ್ಟರ್ ಮತ್ತೆ ಧ್ಯಾನ ಮಗ್ನನಾಗಿ ಯೋಚಿಸಿ ಕಿರಿಯ ಸನ್ಯಾಸಿಗೆ ಉತ್ತರಿಸಿದ.
“ ಹೌದು, ನೀನು ಹೇಳೋದೂ ಸರಿನೇ “

