ಧರ್ಮ ಎನ್ನುವುದು ಕಾವ್ಯದಂತೆ, ಇಲ್ಲಿ ರೂಪಕಗಳ ಭಾಷೆಯಲ್ಲಿಯೇ ಮಾತನಾಡಬೇಕಾಗುತ್ತದೆ. ಆದರೆ ಧರ್ಮವನ್ನು ಪಾಲಿಸುವವರು ಅಗಾಧ ನಂಬಿಕೆಯಲ್ಲಿದ್ದಾರೆ ಆದ್ದರಿಂದ ಇಮ್ಯಾಜಿನೇಶನ್ ನ ಬಲಿಪಶುಗಳಾಗಿದ್ದಾರೆ, ಇದರ ಬಗ್ಗೆ ತೀವ್ರ ಎಚ್ಚರಿಕೆಯನ್ನ ಕಾಯ್ದುಕೊಳ್ಳಬೇಕು… | ಓಶೋ ರಜನೀಶ್; ಕನ್ನಡಕ್ಕೆ: ಚಿದಂಬರ ನರೇಂದ್ರ
ಮನುಷ್ಯನ ಈ ಅಸ್ತಿತ್ವ
ಅತಿಥಿಗಳ ಒಂದು ತಂಗುದಾಣ
ಪ್ರತೀ ಮುಂಜಾನೆ
ಹೊಸ ಹೊಸ ಆಗಮನ.
ಆನಂದ, ದುಗುಡ, ಸ್ವಾರ್ಥ,
ಆಗಾಗ್ಗೆ ಪ್ರಕಟವಾಗುವ
ಕೊಂಚ ತಾತ್ಕಾಲಿಕ ಅರಿವು ಎಲ್ಲವೂ
ಕರೆಯದೇ
ಬಂದು ಹೋಗುವ ಅತಿಥಿಗಳು.
ಎಲ್ಲರನ್ವೂ ಸ್ವಾಗತಿಸಿ, ಸತ್ಕರಿಸಿ ಮತ್ತು
ಬಿಳ್ಕೊಟ್ಟುಬಿಡಿ.
~ ರೂಮಿ
***
ಝೆನ್ ಮಾಸ್ಟರ್ ಲಿನ್ ಚಿ, ಬೆಟ್ಟದ ಮೇಲಿನ ತನ್ನ ಆಶ್ರಮದ ಎದುರಿಗಿನ ಬಂಡೆಯ ಮೇಲೆ ಒಬ್ಬರೇ ಕುಳಿತಿದ್ದರು. ಆಗ ಅಲ್ಲಿ ಬಂದ ಯಾರೋ ಒಬ್ಬರು ಮಾಸ್ಟರ್ ಲಿನ್ ಚಿ ಯನ್ನು ಪ್ರಶ್ನೆ ಮಾಡಿದರು, “ಮಾಸ್ಟರ್ ಜ್ಞಾನೋದಯ ಆದ ಮೇಲೆ ವ್ಯಕ್ತಿಯೊಬ್ಬ ಹೇಗೆ ವ್ಯವಹರಿಸುತ್ತಾನೆ ?”
“ನಾನು ಒಬ್ಬನೇ ಬಂಡೆಯ ಮೇಲೆ ಕುಳಿತುಕೊಳ್ಳುತ್ತೇನೆ, ಮೋಡಗಳು ನನ್ನ ದಾಟಿಹೋಗುವುದನ್ನ ಗಮನಿಸುತ್ತೇನೆ, ಋತುಗಳು ನನ್ನ ದಾಟಿಹೋಗುವುದನ್ನ ಗಮನಿಸುತ್ತೇನೆ, ನನ್ನ ಭೇಟಿ ಮಾಡಲು ಜನ ಬಂದು ಹೋಗುತ್ತಾರೆ, ನಾನು ಅವರನ್ನು ಗಮನಿಸುತ್ತೇನೆ. ಈ ಬಂಡೆಯ ಮೇಲೆ ಕುಳಿತುಕೊಂಡು ನನ್ನ ಸುತ್ತ ನಡೆಯುವ ಎಲ್ಲಕ್ಕೂ ನಾನು ಸಾಕ್ಷಿಯಾಗುತ್ತೇನೆ”. ಮಾಸ್ಟರ್ ಲಿನ್ ಚಿ ಉತ್ತರಿಸಿದರು.
ಕೊನೆಗೂ ಉಳಿಯುವುದು ಸಾಕ್ಷಿ ಮತ್ತು ಪ್ರಜ್ಞೆ, ಎಲ್ಲವನ್ನೂ ಗಮನಿಸುತ್ತ ಹೋಗುವುದು. ಎಲ್ಲ ಅನುಭವಗಳೂ ಮರೆಯಾಗುತ್ತವೆ ಆದರೆ ಅನುಭವಗಳ ಹಿನ್ನೆಲೆ ಮಾತ್ರ ನಿಮ್ಮೊಂದಿಗೆ ಉಳಿದುಕೊಳ್ಳುತ್ತದೆ. ಇದನ್ನ ನೆನಪಿನಲ್ಲಿಡಿ, ನೀವು ನನ್ನ ನಂಬುತ್ತೀರಿ ಆದ್ದರಿಂದ ನಾನು ರೂಪಕಗಳ ಭಾಷೆಯಲ್ಲಿ ಮಾತನಾಡುತ್ತೇನೆ. ಆಗ ಇಲ್ಲಿ ಕಲ್ಪನೆಗೆ ಅವಕಾಶವಿದೆ. ”Imaginazione” (imagination): ಈ ಕಾಯಿಲೆಯ ಬಗ್ಗೆ ಸ್ವಲ್ಪ ಎಚ್ಚರವಿರಲಿ.
ಕಲ್ಪನೆಗೆ ಅವಕಾಶ ಮಾಡಿಕೊಟ್ಟರೆ ನೀವು ಎಲ್ಲ ಬಗೆಯ ಸಂಗತಿಗಳನ್ನ ಇಮ್ಯಾಜಿನ್ ಮಾಡಿಕೊಳ್ಳಬಹುದು : ಕುಂಡಲಿನಿ ಮೇಲೆ ಏರುತ್ತಿರುವುದನ್ನ, ಚಕ್ರಗಳು ಓಪನ್ ಆಗುತ್ತಿರುವುದನ್ನ ; ಯಾವುದೇ ಬಗೆಯ ಸಂಗತಿಗಳು ನಿಮ್ಮ ಕಲ್ಪನೆಯ ಪರಿಧಿಯಲ್ಲಿ ಬರಬಹುದು. ಮತ್ತು ಸಂಗತಿಗಳು ನಿಮ್ಮೊಂದಿಗೆ ಘಟಿಸುತ್ತವೆ ಮತ್ತು ಇವು ಸುಂದರ ಕೂಡ. ಆದರೆ ನಿಜವಲ್ಲ. ಆದ್ದರಿಂದ ನೀವು ಯಾರನ್ನಾದರು ನಂಬುತ್ತಿರುವಿರಾದರೆ, ಈ ನಂಬಿಕೆಯಲ್ಲಿಯೇ ಇರುವ ಇಮ್ಯಾಜಿನೇಶನ್ ಕುರಿತಾಗಿ ನಿಮಗೆ ಅರಿವು ಇರಬೇಕು.
ನಂಬಿಕೆ ಇರಲಿ ಆದರೆ, ಇಮ್ಯಾಜಿನೇಶನ್ ಗೆ ಬಲಿಪಶು ಆಗಬೇಡಿ. ಇಲ್ಲಿ ಹೇಳಲಾಗುತ್ತಿರುವುದೆಲ್ಲ ರೂಪಕಗಳ ಭಾಷೆಯಲ್ಲಿ. ಯಾವಾಗಲೂ ನೆನಪಿನಲ್ಲಿರಲಿ, ಎಲ್ಲ ಅನುಭವಗಳೂ ಇಮ್ಯಾಜಿನೇಶನ್ ಗಳೇ : ಎಲ್ಲ ಎಂದರೆ ಎಲ್ಲ ಅನುಭವಗಳು, ಯಾವುದೇ ಕಂಡಿಷನ್ ಇಲ್ಲದೆಯೇ. ಕೇವಲ ಅನುಭವಿಸುವವ ಮಾತ್ರ ನಿಜ.
So ನೀವು ಏನನ್ನೇ ಅನುಭವಿಸಿದರೂ, ಅದಕ್ಕೆ ಅಷ್ಟಾಗಿ ಮಹತ್ವ ನೀಡಲು ಹೋಗಬೇಡಿ, ಅದರ ಕುರಿತು ಕೊಚ್ಚಿಕೊಳ್ಳುವ ಪ್ರಯತ್ನ ಮಾಡಬೇಡಿ. ಇಷ್ಟು ಮಾತ್ರ ನೆನಪಿನಲ್ಲಿಡಿ, ಅನುಭವಿಸುತ್ತಿರುವ ಎಲ್ಲವೂ ಭ್ರಮೆಯ ಒಂದು ಭಾಗ ಆದರೆ ಅನುಭವಿಸುವವ ಮಾತ್ರ ಸತ್ಯ. ಸಾಕ್ಷಿಯಾಗುವುದಕ್ಕೆ ಮಹತ್ವ ನೀಡಿ, ಆದರೆ ಅನುಭವಗಳಿಗೆ ಬೇಡ. ಅವು ಎಷ್ಟೇ ಸುಂದರವಿರಲಿ, ಎಲ್ಲ ಅನುಭವಗಳೂ ಕನಸುಗಳಂತೆಯೇ ಮತ್ತು ನಾವು ಹೋಗಬೇಕಾಗಿರುವುದು ಇಂಥ ಕನಸುಗಳನ್ನ ಮೀರಿ.
So ಧರ್ಮ ಎನ್ನುವುದು ಕಾವ್ಯದಂತೆ, ಇಲ್ಲಿ ರೂಪಕಗಳ ಭಾಷೆಯಲ್ಲಿಯೇ ಮಾತನಾಡಬೇಕಾಗುತ್ತದೆ. ಆದರೆ ಧರ್ಮವನ್ನು ಪಾಲಿಸುವವರು ಅಗಾಧ ನಂಬಿಕೆಯಲ್ಲಿದ್ದಾರೆ ಆದ್ದರಿಂದ ಇಮ್ಯಾಜಿನೇಶನ್ ನ ಬಲಿಪಶುಗಳಾಗಿದ್ದಾರೆ, ಇದರ ಬಗ್ಗೆ ತೀವ್ರ ಎಚ್ಚರಿಕೆಯನ್ನ ಕಾಯ್ದುಕೊಳ್ಳಬೇಕು. ನಂಬಿ, ರೂಪಕಗಳನ್ನು ಕೇಳಿ, ಆದರೆ ಅವು ಕೇವಲ ರೂಪಕಗಳು ಎನ್ನುವುದು ನಿಮ್ಮ ಎಚ್ಚರದಲ್ಲಿರಲಿ. ನಂಬಿ – ಹಲವಾರು ಸಂಗತಿಗಳು ಸಂಭವಿಸಲು ಶುರು ಮಾಡುತ್ತವೆ, ಆದರೆ ನೆನಪಿರಲಿ : ನಿಮ್ಮ ಹೊರತಾಗಿ ಬಾಕಿ ಎಲ್ಲವೂ ಇಮ್ಯಾಜಿನೇಶನ್.
ಕೊನೆಗೆ ನೀವು ಯಾವ ಹಂತವನ್ನು ತಲುಪಬೇಕೆಂದರೆ ಎಲ್ಲ ಅನುಭವಗಳೂ ಮರೆಯಾಗಿ ಕೇವಲ ಅನುಭವಿಸುವವ ಮಾತ್ರ ತನ್ನ ಜಾಗದಲ್ಲಿ ಮೌನವಾಗಿ ಉಳಿದುಕೊಳ್ಳಬೇಕು : ಅಲ್ಲಿ ಯಾವ ವಸ್ತುವಿಲ್ಲ, ವಿಶೇಷವಿಲ್ಲ, ಯಾವ ಬೆಳಕು ಇಲ್ಲ, ಯಾವ ಹೂವು ಇಲ್ಲ, ಯಾವ ಅರಳುವಿಕೆ ಇಲ್ಲ, ಯಾವುದೂ ಇಲ್ಲ, ಏನೂ ಇಲ್ಲ.

