ಒಂದು ದಿನ ನಿದ್ರೆ ಆಗಮಿಸಿದೆ ಆದರೆ ನೀವು ಎಚ್ಚರವಾಗಿಯೇ ಇದ್ದೀರಿ. ಆ ಕ್ಷಣದಲ್ಲಿಯೇ ನಿಮಗೆ ನಿಮ್ಮ ಪ್ರಜ್ಞಾರಹಿತ ಸ್ಥಿತಿಯ ಬಗ್ಗೆ ಅರಿವು ಸಾಧ್ಯವಾಗುತ್ತದೆ. ಒಮ್ಮೆ ನಿಮಗೆ ನಿಮ್ಮ ಪ್ರಜ್ಞಾರಹಿತ ಸ್ಥಿತಿಯ ಬಗ್ಗೆ ಅರಿವು ಸಾಧ್ಯವಾದರೆ, ಆಮೇಲೆ ನೀವು ನಿದ್ರೆಯಲ್ಲಿಯೂ ಪ್ರಜ್ಞೆಯನ್ನು ಹೊಂದಿರುತ್ತೀರಿ… ~ ಓಶೋ ರಜನೀಶ್; ಕನ್ನಡಕ್ಕೆ: ಚಿದಂಬರ ನರೇಂದ್ರ
ಜುವಾಂಗ್-ತ್ಸೆ ಗೆ ಒಂದು ಕನಸು ಬಿತ್ತು
ಕನಸಲ್ಲಿ ಅವನು
ಬಣ್ಣ ಬಣ್ಣದ ಚಿಟ್ಟೆಯಾಗಿದ್ದ.
ಥಟ್ಟನೆ ಎದ್ದು ನೋಡಿಕೊಂಡಾಗ ಮಾತ್ರ
ಹಾಸಿಗೆಯಲ್ಲಿ
ಅದೇ ಮನುಷ್ಯ ಪ್ರಾಣಿ.
ನಾನು ಚಿಟ್ಟೆಯ ಕನಸು ಕಾಣುತ್ತಿರುವ
ಮನುಷ್ಯ ಪ್ರಾಣಿಯೋ?, ಅಥವಾ
ಮನುಷ್ಯನ ಕನಸು ಕಾಣುತ್ತಿರುವ
ಚಿಟ್ಟೆಯೋ?
ಶುರುವಾಯ್ತು ಗೊಂದಲ ಜುವಾಂಗ್-ತ್ಸೆ ಗೆ.
ನಿದ್ರೆಯೊಳಗೆ ನೀವು ಜಾರುವ ಕ್ಷಣವೇ ಪ್ರಜ್ಞಾರಹಿತ ಸ್ಥಿತಿಯನ್ನು ಎದುರುಗೊಳ್ಳುವ ಸ್ಥಿತಿಯೂ ಹೌದು. ಈ ಕ್ಷಣದಲ್ಲಿ ನೀವು ನಿದ್ರೆಯಿಂದ ಹೊರತಾಗುವಿರಾದರೆ ಅದು ನಿಜವಾದ ಪ್ರಜ್ಞಾರಹಿತ ಸ್ಥಿತಿ, ಏಕೆಂದರೆ ಅದು ಗಡಿ ರೇಖೆ. ಯಾವ ರೇಖೆಯನ್ನು ದಾಟಿ ನೀವು ನಿದ್ರೆಯನ್ನು ಪ್ರವೇಶಿಸುವಿರೋ ಆ ರೇಖೆಯೇ ನೀವು ಪ್ರಜ್ಞಾರಹಿತ ಸ್ಥಿತಿಯೊಂದಿಗೆ ಮುಖಾಮುಖಿಯಾಗುವ ಜಾಗ.
ಪ್ರತಿದಿನವೂ ನೀವು ನಿದ್ರೆ ಮಾಡುತ್ತೀರಿ ಆದರೆ ಯಾವತ್ತೂ ನೀವು ನಿದ್ರೆಯೊಂದಿಗೆ ಮುಖಾಮುಖಿಯಾಗಿಲ್ಲ. ಯಾವತ್ತೂ ನೀವು ನಿದ್ರೆಯನ್ನು ನೋಡಿಲ್ಲ : ಅದು ಏನು? ಅದು ಹೇಗಿರುತ್ತದೆ? ಹೇಗೆ ಅದರೊಳಗೆ ಪ್ರವೇಶ ಮಾಡುತ್ತೇವೆ? ನಿಮಗೆ ಈ ಯಾವುದರ ಬಗ್ಗೆಯೂ ಗೊತ್ತಿಲ್ಲ. ನೀವು ಪ್ರತಿದಿನ ನಿದ್ರೆಯೊಳಗೆ ಜಾರುತ್ತೀರಿ ಮತ್ತು ನಿದ್ರೆಯಿಂದ ಎದ್ದು ಹೊರಬರುತ್ತೀರಿ ಆದರೆ, ಯಾವತ್ತೂ ನಿದ್ರೆ ಆಗಮಿಸಿ ನಿಮ್ಮ ಮೈಂಡ್ ನ ಆವರಿಸಿಕೊಳ್ಳುವ ಕ್ಷಣವನ್ನು ನೀವು ಅನುಭವಿಸಿಲ್ಲ, ಇದೆಲ್ಲ ಹೇಗೆ ಸಂಭವಿಸುತ್ತದೆ ಎನ್ನುವುದು ನಿಮಗೆ ಗೊತ್ತಿಲ್ಲ.
ಹಾಗಾದರೆ ಇದನ್ನು ಟ್ರೈ ಮಾಡಿ. ಮೂರು ತಿಂಗಳು ಸತತ ಪ್ರಯತ್ನ ಮಾಡುವಿರಾದರೆ, ನಂತರ ಥಟ್ಟನೇ ಒಂದು ದಿನ, ನೀವು ನಿಮ್ಮ ಪೂರ್ತಿ ತಿಳುವಳಿಕೆಯೊಂದಿಗೆ ನಿದ್ರೆಯನ್ನು ಪ್ರವೇಶ ಮಾಡುವಿರಿ : ಹಾಸಿಗೆಯ ಮೇಲೆ ಮೈಚಾಚಿಕೊಂಡು ಒರಗಿಕೊಳ್ಳಿ, ಕಣ್ಣು ಮುಚ್ಚಿಕೊಳ್ಳಿ, ಮತ್ತು ನೆನಪಿನಲ್ಲಿಡಿ, ನಿದ್ರೆ ಬರುತ್ತಿದೆ ಎನ್ನುವುದನ್ನ, ನಿದ್ರೆ ಬರುವಾಗ ನೀವು ಎಚ್ಚರವಾಗಿರಬೇಕೆನ್ನುವುದನ್ನ.
ಇದು ಪ್ರಯಾಸಕರ ಆದರೆ, ಪ್ರಜ್ಞಾರಹಿತ ಸ್ಥಿತಿಯನ್ನು ಪ್ರಜ್ಞಾಪೂರ್ವಕವಾಗಿ ಪ್ರವೇಶಿಸುವುದಕ್ಕೆ ಇದು ಸಹಾಯ ಮಾಡುತ್ತದೆ. ಇದು ಒಂದು ದಿನದಲ್ಲಿ ಆಗುವಂಥದಲ್ಲ, ಎರಡು ದಿನದಲ್ಲಿ ಆಗುವಂಥದಲ್ಲ , ಸತತ ಪ್ರಯತ್ನ ಮಾಡುವಿರಾದರೆ, ನಿದ್ರೆ ಬರುತ್ತದೆ ಮತ್ತು ಅದನ್ನು ಪೂರ್ಣತಿಳುವಳಿಕೆ ಇಲ್ಲದೆ ನನ್ನ ಆವರಿಸಿಕೊಳ್ಳಲು ಬಿಡಲಾರೆ ಎನ್ನುವುದನ್ನ ಸದಾ ನೆನಪಿನಲ್ಲಿಟ್ಟುಕೊಳ್ಳುವಿರಾದರೆ, ಇಂಥದೊಂದು ಕ್ಷಣದೊಂದಿಗೆ ನೀವು ಮುಖಾಮುಖಿಯಾಗಬಹುದು.
ಒಂದು ದಿನ ನಿದ್ರೆ ಆಗಮಿಸಿದೆ ಆದರೆ ನೀವು ಎಚ್ಚರವಾಗಿಯೇ ಇದ್ದೀರಿ. ಆ ಕ್ಷಣದಲ್ಲಿಯೇ ನಿಮಗೆ ನಿಮ್ಮ ಪ್ರಜ್ಞಾರಹಿತ ಸ್ಥಿತಿಯ ಬಗ್ಗೆ ಅರಿವು ಸಾಧ್ಯವಾಗುತ್ತದೆ. ಒಮ್ಮೆ ನಿಮಗೆ ನಿಮ್ಮ ಪ್ರಜ್ಞಾರಹಿತ ಸ್ಥಿತಿಯ ಬಗ್ಗೆ ಅರಿವು ಸಾಧ್ಯವಾದರೆ, ಆಮೇಲೆ ನೀವು ನಿದ್ರೆಯಲ್ಲಿಯೂ ಪ್ರಜ್ಞೆಯನ್ನು ಹೊಂದಿರುತ್ತೀರಿ. ನಿದ್ರೆಯೊಳಗಿದ್ದಾಗಲೂ ಎಚ್ಚರವಾಗಿರುತ್ತೀರಿ. ಆಗ ನಿಮ್ಮೊಳಗಿನ ಕೇಂದ್ರ ಎಚ್ಚರವಾಗಿದ್ದುಕೊಂಡು ಎಲ್ಲವನ್ನೂ ತಿಳಿದುಕೊಳ್ಳುತ್ತಿರುತ್ತದೆ. ಸುತ್ತಲೂ ನಿದ್ರೆ ಆವರಿಸಿಕೊಂಡಿರುತ್ತದೆ ಆದರೆ ಕೇಂದ್ರ ಮಾತ್ರ ಪ್ರಜ್ಞೆಯ ಸ್ಥಿತಿಯಲ್ಲಿರುತ್ತದೆ. ಯಾವಾಗ ಕೇಂದ್ರ ಪ್ರಜ್ಞೆಯ ಸ್ಥಿತಿಯಲ್ಲಿರುತ್ತದೋ ಆಗ ಕನಸುಗಳು ಅಸಾಧ್ಯವಾಗುತ್ತ ಹೋಗುತ್ತವೆ. ಆಗ ನೀವು ಇನ್ನೊಂದು ಅರ್ಥದಲ್ಲಿ ನಿದ್ರೆಯಲ್ಲಿರುವಿರಿ, ಮತ್ತು ನೀವು ಇನ್ನೊಂದು ಅರ್ಥದಲ್ಲಿ ನಿದ್ರೆಯಿಂದ ಹೊರಗೆ ಬರುವಿರಿ. ಈ ಮುಖಾಮುಖಿಯಿಂದ ನಿದ್ರೆಗೆ ಒಂದು ವಿಶೇಷ ಕ್ವಾಲಿಟಿ ಲಭ್ಯವಾಗುತ್ತದೆ.
ಒಂದು ದಿನ ನಸ್ರುದ್ದೀನ್ ನ ಹೆಂಡತಿ ಗಂಡನ ಎದುರು ದೂರು ಸಲ್ಲಿಸಿದಳು,
“ನಿನ್ನೆ ನಿದ್ರೆಯಲ್ಲಿ ನೀನು ನನ್ನ ಸಿಕ್ಕಾಪಟ್ಟೆ ಬಯ್ಯುತ್ತಿದ್ದೆ”.
“ಸುಳ್ಳು” ನಸ್ರುದ್ದೀನ್, ಹೆಂಡತಿಯ ಮಾತಿಗೆ ಆಕ್ಷೇಪ ವ್ಯಕ್ತಪಡಿಸಿದ.
“ಎಲ್ಲ ರಿಕಾರ್ಡ್ ಮಾಡಿದೀನಿ, ಕೇಳಿಸಲಾ?” ಹಂಡತಿ ಸವಾಲು ಹಾಕಿದಳು.
“ನಾನು ನಿದ್ರೆಯಲ್ಲಿದ್ದದ್ದು ಸುಳ್ಳು” ನಸ್ರುದ್ದೀನ್ ಸಮಜಾಯಿಷಿ ಕೊಟ್ಟ.
~ ಓಶೋ

