ಮಲ್ಲಿಬಾಯಿ ಅಪರೂಪದ ಹೆಣ್ಣುಮಗಳು. ಅವಳಂತ ತೀಕ್ಷ್ಣ ಬಂಡಾಯಕಾರ್ತಿಯನ್ನ ಈ ಜಗತ್ತಿನಲ್ಲಿ ನಾನು ಬೇರೆಲ್ಲೂ ನೋಡಿಲ್ಲ. ಮಲ್ಲಿಬಾಯಿ ತನ್ನ ಈ ಜನ್ಮದಲ್ಲಿಯೇ ಭಿಕ್ಕುವಾದಳು. ತನ್ನ ಬಟ್ಟೆಗಳನ್ನೆಲ್ಲ ಕಳಚಿ ಬೆತ್ತಲಾಗಿ, ಜೈನ ಸಮೂಹದೆದರು ಘೋಷಿಸಿದಳು… | ಓಶೋ ರಜನೀಶ್; ಕನ್ನಡಕ್ಕೆ: ಚಿದಂಬರ ನರೇಂದ್ರ
ಜೈನರ ಇತಿಹಾಸವನ್ನು ಗಮನಿಸುತ್ತ ಬಂದರೆ ನಮಗೆ ಅಲ್ಲಿ ಒಬ್ಬಳು ಅಪರೂಪದ ಬಂಡಾಯಕಾರ್ತಿ ಕಾಣ ಸಿಗುತ್ತಾಳೆ. ಅಪರಿಮಿತ ಧೈರ್ಯಶಾಲಿ, ಅಪಾರ ಜ್ಞಾನಿಯಾಗಿದ್ದ ಅವಳು ಸಮಾಜದ ಕಟ್ಟುಪಾಡುಗಳ ವಿರುದ್ಧ ಬಂಡೆದ್ದವಳು, ಅವಳೇ ಮಲ್ಲಿಬಾಯಿ. ಜೈನ ಹೆಣ್ಣುಮಕ್ಕಳಿಗೆ ಈ ಜನ್ಮದಲ್ಲಿ ಭಿಕ್ಕು ಆಗುವ ಅವಕಾಶವಿಲ್ಲ, ಈ ಜನ್ಮದಲ್ಲಿ ಆಕೆ ಕೇವಲ ಸನ್ಯಾಸಿನಿಯಾಗಬಹುದು. ಈ ಜನ್ಮದಲ್ಲಿ ಸನ್ಯಾಸಿನಿಯಾದವರು ಮಾತ್ರ ಮುಂದಿನ ಜನ್ಮದಲ್ಲಿ ಭಿಕ್ಕು ಆಗಬಹುದು. “ಇದೆಲ್ಲ ಗಂಡಸರ ಸೃಷ್ಟಿ” ಎಂದು ಮಲ್ಲಿಬಾಯಿ ಇಂಥ ಸಂಪ್ರದಾಯಗಳನ್ನು ತಿರಸ್ಕರಿಸಿದಳು. ಜೈನ ಸನ್ಯಾಸಿನಿಯರಿಗೆ ಈ ಜನ್ಮದಲ್ಲಿ ಬೆತ್ತಲೆಯಾಗುವ ಅವಕಾಶವಿಲ್ಲ, ಮುಂದಿನ ಜನ್ಮದಲ್ಲಿ ಆಕೆ ಭಿಕ್ಕು ಆದಾಗ ಮಾತ್ರ ಆಕೆಗೆ ಬೆತ್ತಲಾಗುವ ಅವಕಾಶ.
ಆದರೆ ಮಲ್ಲಿಬಾಯಿ ಅಪರೂಪದ ಹೆಣ್ಣುಮಗಳು. ಅವಳಂತ ತೀಕ್ಷ್ಣ ಬಂಡಾಯಕಾರ್ತಿಯನ್ನ ಈ ಜಗತ್ತಿನಲ್ಲಿ ನಾನು ಬೇರೆಲ್ಲೂ ನೋಡಿಲ್ಲ. ಮಲ್ಲಿಬಾಯಿ ತನ್ನ ಈ ಜನ್ಮದಲ್ಲಿಯೇ ಭಿಕ್ಕುವಾದಳು. ತನ್ನ ಬಟ್ಟೆಗಳನ್ನೆಲ್ಲ ಕಳಚಿ ಬೆತ್ತಲಾಗಿ, ಜೈನ ಸಮೂಹದೆದರು ಘೋಷಿಸಿದಳು, “ ನಾನು ಭಿಕ್ಕು, ನಾನು ಮುಕ್ತಿಯ ಮಾರ್ಗದತ್ತ ಮುನ್ನಡೆಯುತ್ತೇನೆ, ನಿಮ್ಮ ಶಾಸ್ತ್ರಗಳು ಏನು ಹೇಳುತ್ತವೆ ಎನ್ನುವುದು ನನಗೆ ಬೇಕಾಗಿಲ್ಲ” ಮಲ್ಲಿಬಾಯಿ ತೀವ್ರಸಾಧನೆಯಲ್ಲಿ ತನ್ನನ್ನು ತಾನು ತೊಡಗಿಸಿಕೊಂಡು, ಶಾಸ್ತ್ರಗಳಲ್ಲಿ ತೀರ್ಥಂಕರರಾಗಲು ಬೇಕಾಗುವ ಎಲ್ಲ ಅವಶ್ಯಕತೆಗಳನ್ನು ಪೂರೈಸಿದಳು. ಜೈನರಿಗೆ ಆಕೆಯನ್ನು ತೀರ್ಥಂಕರ ಎಂದು ಒಪ್ಪದೇ ಬೇರೆ ದಾರಿಯೇ ಇರಲಿಲ್ಲ.
ಆದರೆ ಜೈನ ಪುರೋಹಿತಶಾಯಿ ಮಲ್ಲಿಬಾಯಿ ತೀರಿಕೊಂಡ ಮೇಲೆ ಒಂದು ತಂತ್ರ ಮಾಡಿತು. ಬಾಯಿ ಎನ್ನುವುದು ಸ್ತ್ರೀ ಸೂಚಕ ಪದ, ಅದನ್ನ ಅವರು ನಾಥ ಎನ್ನುವ ಪುರುಷ ಸೂಚಕ ಪದ ಬಳಸಿ ಬದಲಾಯಿಸಿಬಿಟ್ಟರು. ಹೀಗೆ ಮಲ್ಲಿಬಾಯಿ ಎನ್ನುವ ಸ್ತ್ರೀ ತೀರ್ಥಂಕರಳ ಹೆಸರು ಮಲ್ಲಿನಾಥ ಎನ್ನುವ ಪುರುಷ ಸೂಚಕ ಹೆಸರಿನೊಂದಿಗೆ ಇತಿಹಾಸವನ್ನು ಸೇರಿಬಿಟ್ಟಿತು. ಈಗ ನೀವು ಜೈನ ತೀರ್ಥಂಕರರ ಇತಿಹಾಸವನ್ನು ಗಮನಿಸುವಿರಾದರೆ ಇಪ್ಪತ್ನಾಲ್ಕು ತೀರ್ಥಂಕರರಲ್ಲಿ ನಿಮಗೆ ಒಂದೂ ಹೆಣ್ಣು ಹೆಸರು ಸಿಗುವುದಿಲ್ಲ, ಏಕೆಂದರೆ ಅಲ್ಲಿ ಈಗ ತೀರ್ಥಂಕರ ಮಲ್ಲಿಬಾಯಿ, ಮಲ್ಲಿನಾಥ ತೀರ್ಥಂಕರನಾಗಿ ಬದಲಾಗಿಬಿಟ್ಟಿದೆ. ಹೀಗೆ ಮಾಡುವ ಜೈನ ಪುರೋಹಿತ ಶಾಹಿ ಇಡೀ ಜಗತ್ತಿಗೆ ಮೋಸ ಮಾಡಿಬಿಟ್ಟಿದೆ. ಆದರೆ ಒಬ್ಬಳು ಹೆಣ್ಣು ಮಗಳು ಸಾಧನೆ ಮಾಡಿ ತೋರಿಸಿದ್ದಾಳೆ, ಮತ್ತು ಒಬ್ಬಳು ಹೆಣ್ಣು ಮಗಳ ಸಾಕ್ಷಿ ಎಲ್ಲ ಹೆಣ್ಣುಮಕ್ಕಳಿಗೂ ಅನ್ವಯವಾಗುತ್ತದೆ. ಜೈನ ಪುರೋಹಿತರ ಮೋಸ ಇನ್ನೂ ಮುಂದುವರೆಯಿತು, ಅವರು ಆಕೆಯ ಹೆಸರನ್ನಷ್ಟೇ ಬದಲಾಯಿಸಲಿಲ್ಲ, ಅವರು ಆಕೆಯ ವಿಗ್ರಹವನ್ನೂ ಬದಲಾಯಿಸಿಬಿಟ್ಟರು. ಜೈನ ಮಂದಿರಗಳಲ್ಲಿ ಇಂದು ಕಾಣ ಸಿಗುವುದು ಗಂಡು ಮಲ್ಲಿನಾಥನ ವಿಗ್ರಹ. ಹೀಗೆ ಜೈನ ಪುರೋಹಿತಶಾಹಿಯ ಇತಿಹಾಸ ಇಪ್ಪತ್ನಾಲ್ಕು ತೀರ್ಥಂಕರರೂ ಗಂಡಸರು ಎಂದು ಸಿದ್ಧಮಾಡಿಬಿಟ್ಟಿತು.
ನಾನು ಜೈನ ಮಂದಿರಕ್ಕೆ ಹೋದಾಗಲೆಲ್ಲ ಮಲ್ಲಿಬಾಯಿ ಯಾರು ಎಂದು ಅಲ್ಲಿನ ಪುರೋಹಿತರನ್ನು ಕೇಳುತ್ತಿದ್ದೆ, ಅವರು ಅಪ್ರತಿಭರಾಗಿ ತೊದಲುತ್ತ ನೀವು ಜೈನರಾ? ಎಂದು ನನ್ನ ಪ್ರಶ್ನೆ ಮಾಡುತ್ತಿದ್ದರು. ಇಪ್ಪತ್ನಾಲ್ಕು ತಿರ್ಥಂಕರರ ವಿಗ್ರಹಗಳಲ್ಲಿ ಮಲ್ಲಿಬಾಯಿ ಯಾರು ತೋರಿಸಿ ಎಂದಾಗ ಅವರು ಒಂದು ಗಂಡು ವಿಗ್ರಹ ತೋರಿಸುತ್ತಿದ್ದರು. ವಿಗ್ರಹದ ಗಂಡು ಲಿಂಗ ತೋರಿಸಿ ಇದು ಗಂಡಸಿನ ವಿಗ್ರಹ ಅಲ್ಲವೆ ಎಂದು ನಾನು ಮತ್ತೆ ಪ್ರಶ್ನೆ ಮಾಡಿದಾಗ ಅವರು ತಡಬಡಾಯಿಸಿಬಿಡುತ್ತಿದ್ದರು. ಮುಂದೆ ಅವರು ನನಗೆ ಮಂದಿರದೊಳಗೆ ಪ್ರವೇಶವನ್ನೇ ನಿರಾಕರಿಸಿಬಿಟ್ಟರು.
ಇದು ಗಂಡುಕೋಮುವಾದಿ ಜಗತ್ತು. ಹಿಂದೂ ಗಳ ಹತ್ತು ಅವತಾರಗಳೂ ಗಂಡಸರು, ಈ ಗಂಡಸರಷ್ಟೇ ಪ್ರಬಲ ಹೆಣ್ಣು ಸಾಧಕರು ಇರಲಿಲ್ಲ ಅಂತ ಅಲ್ಲ, ಆದರೆ ಗಂಡು ಜಗತ್ತು ಹೆಣ್ಣನ್ನು ಅವತಾರ ಶ್ರೇಣಿಯಲ್ಲಿ ಒಪ್ಪಿಕೊಳ್ಳಲು ಸಿದ್ಧವಿರಲಿಲ್ಲ.
ØshØ / From Unconsciousness ~to~ Consciousness / Talk 6

