ಲೌಕಿಕರು ಅಲೌಕಿಕ ಅನುಭೂತಿ ಪಡೆಯಲು ಟೋರಿಯ ಮೂಲಕ ಹಾದುಹೋಗಬೇಕು ಅನ್ನುತ್ತೆ ಶಿಂಟೋ. ಲೌಕಿಕ – ಅಲೌಕಿಕಗಳ ನಡುವೆ ಅಂಥ ವ್ಯತ್ಯಾಸವೇನಿಲ್ಲ. ವ್ಯತ್ಯಾಸ ಇರುವುದು ಅವೆರಡಕ್ಕೂ ಪ್ರತಿಕ್ರಿಯಿಸುವ ನಮ್ಮ ಪ್ರಜ್ಞೆಯಲ್ಲಿ. ಟೋರಿ ಈ ಪ್ರಜ್ಞೆಯನ್ನು ಎಚ್ಚರಿಸುವ ಸೂಜಿಗಣ್ಣು… ~ ಚೇತನಾ ತೀರ್ಥಹಳ್ಳಿ
ಬಯಲಲ್ಲೂ ದಾರಿ ಮೂಡುವುದು,
ಬಯಲ ತುಂಬ ನಡೆಯಲಾಗದು ಅನ್ನುವ ಕಾರಣಕ್ಕೆ. ಬಯಲ ತುಂಬ ನಡೆಯುತ್ತ ಹೋದರೆ ಇದ್ದಲ್ಲೇ ಉಳಿಯುವೆವು, ಕಾಲೂ ಸೋಲುವುದು.
ನಡಿಗೆ ನಮ್ಮನ್ನು ಗುರಿ ಮುಟ್ಟಿಸಲೇಬೇಕೆಂದಿಲ್ಲ, ಹೊಸ ಜಾಗಗಳನ್ನು ಹಾಯಿಸಿದರೆ ಸಾಕು.
ಹೊಸತುಗಳ ಬೆರಗೇ ಆಯಾ ಹೊತ್ತಿನ ಗುರಿಗಳು.
ಚಿತ್ರದ ಹುಡುಗಿ ಟೋರಿ ಬಿಡಿಸ್ತಾ ಇದ್ದಾಳೆ.
ಟೋರಿ… ಗೋಡೆಗಳಿಲ್ಲದ ಬಾಗಿಲು. ಟೋರಿ, ಬಯಲಿಗಿಟ್ಟ ಬಾಗಿಲು.
ಬಯಲಿದೆ ಎಂದು ಕಾಲು ಕಂಡಲ್ಲೆಲ್ಲ ಅಲೆಯದಿರಲಿ, ಅಲೆಯುತ್ತ ಕಳೆದುಹೋಗದಿರಲೆಂದು ಇಟ್ಟ ಬಾಗಿಲು, ಟೋರಿ.
ಲೌಕಿಕರು ಅಲೌಕಿಕ ಅನುಭೂತಿ ಪಡೆಯಲು ಟೋರಿಯ ಮೂಲಕ ಹಾದುಹೋಗಬೇಕು ಅನ್ನುತ್ತೆ ಶಿಂಟೋ.
ಲೌಕಿಕ – ಅಲೌಕಿಕಗಳ ನಡುವೆ ಅಂಥ ವ್ಯತ್ಯಾಸವೇನಿಲ್ಲ. ವ್ಯತ್ಯಾಸ ಇರುವುದು ಅವೆರಡಕ್ಕೂ ಪ್ರತಿಕ್ರಿಯಿಸುವ ನಮ್ಮ ಪ್ರಜ್ಞೆಯಲ್ಲಿ.
ಟೋರಿ ಈ ಪ್ರಜ್ಞೆಯನ್ನು ಎಚ್ಚರಿಸುವ ಸೂಜಿಗಣ್ಣು.
ಕೈಯಲ್ಲಿ ಸೂಜಿ ಇದೆ. ದಾರವನ್ನು ಗಾಳಿಯಲ್ಲಿ ಆಡಿಸಿದರೆ ಬಟ್ಟೆ ಹೊಲಿಯಲಾಗದು.
ದಾರ, ಸೂಜಿಗಣ್ಣು ಹೊಕ್ಕರಷ್ಟೇ ಹೊಲಿಗೆ.
ಟೋರಿ ಮುಖ್ಯವಾಗುವುದು ಈ ಕಾರಣಕ್ಕೇ.
ತಿಂಗಳು ಮುಗಿಯುತ್ತ ಬಂತು. ಹಡದಿಗಳು ನೂರೆಂಟು…
ನೆನ್ನೆ ಯಾರೋ EMI ಬಗ್ಗೆ ಮಾತಾಡ್ತಿದ್ದರು.
ಪಟ್ಟಿಗಳು ಉದ್ದವಿರುವಾಗ ಯಾರಿಗೆ ಬೇಕು ಅಧ್ಯಾತ್ಮ?
ಪಟ್ಟಿಗಳು ಉದ್ದವಿರುವಾಗಲೇ ಬೇಕು ಅಧ್ಯಾತ್ಮ;
ಹತಾಶೆಯನ್ನು ನಿರ್ಲಿಪ್ತಿಯಾಗಿ ಬದಲಿಸಿಕೊಳ್ಳಲಿಕ್ಕೆ.
ವೈಫಲ್ಯವನ್ನು ವೈರಾಗ್ಯವಾಗಿಸಿಕೊಂಡರೆ ಎದೆ ಭಾರ ಕಡಿಮೆ.
ಇದು ಮೋಸವಲ್ಲವೆ?
ಖಂಡಿತವಾಗಿಯೂ ಅಲ್ಲ, ಟೋರಿಯ ಸೂಜಿಗಣ್ಣು ಹೊಕ್ಕರೆ.
ಅಂದರೆ, ದಿನದ ಬದುಕನ್ನು ಪ್ರಜ್ಞಾವಂತಿಕೆಯಿಂದ ಕಂಡರೆ, ಸ್ವೀಕರಿಸಿದರೆ…
ಅಧ್ಯಾತ್ಮ ಅಂದರೆ ಮತ್ತೇನಲ್ಲ;
ಹಾಸಿಗೆ ಇದ್ದಷ್ಟು ಕಾಲು ಚಾಚುವುದು.
ಉಪ್ಪು ತಿಂದರೆ ನೀರು ಕುಡಿಯುವುದು.
ತಾಳಿದಷ್ಟೂ ಬಾಳುವುದು…
ಟೋರಿ,
ಇಂಥಾ ಬಾಯಿಪಾಠದ ಗಾದೆಗಳನ್ನು ಅರಿವಾಗಿ ಹೊಮ್ಮಿಸುವ ಬಾಗಿಲು.

