ನಾವು ಹುಟ್ಟುವುದು ಧ್ಯಾನಿಗಳಾಗಿಯೇ ಆದರೆ ನಮ್ಮ ಮೈಂಡ್ ನಮ್ಮನ್ನು ತನ್ನ ದಾರಿಯಲ್ಲಿ ಎಳೆದುಕೊಂಡು ಹೋಗಿಬಿಡುತ್ತದೆ. ಒಂದು ಸಮಾಜದಲ್ಲಿ ಬದುಕಲು ಈ ಎಲ್ಲವೂ ಅವಶ್ಯಕ ಆದರೆ ನಾವು ನಮ್ಮ ಸಹಜ ಸ್ಥಿತಿಯನ್ನ ಮರೆಯಬಾರದು… ~ ಓಶೋ ರಜನೀಶ್; ಕನ್ನಡಕ್ಕೆ: ಚಿದಂಬರ ನರೇಂದ್ರ
ಮೀನಿನ ಬಲೆಯ ಕೆಲಸ
ಮೀನು ಹಿಡಿಯುವುದು ಮಾತ್ರ
ಮೀನು ಸಿಕ್ಕ ಮೇಲೆ
ಬಲೆಗೆ ಏನು ಕೆಲಸ?
ಶಬ್ದ ದ ಉದ್ದೇಶವೇ
ವಿಷಯ ತಿಳಿಸುವುದು
ವಿಷಯ ತಿಳಿದ ಮೇಲೆ
ಶಬ್ದಗಳಿಗೇನು ಕೆಲಸ?
ಶಬ್ದಗಳನ್ನು ಮರೆತ ಮನುಷ್ಯ
ಎಲ್ಲಿ ಸಿಗುತ್ತಾನೆ?
ಕೊಂಚ ಮಾತಾಡಬೇಕಲ್ಲ
ಅವನೊಂದಿಗೆ.
~ ಜುವಾಂಗ್-ತ್ಸೆ
***
ಧ್ಯಾನ ನಮ್ಮ ಸಹಜ ಸ್ಥಿತಿ – ಆದರೆ ಈ ಸ್ಥಿತಿಯನ್ನ ನಾವು ಕಳೆದುಕೊಂಡುಬಿಟ್ಟಿದ್ದೇವೆ. ಇದು ಸ್ವರ್ಗವನ್ನು ಕಳೆದುಕೊಂಡಂತೆ ಆದರೆ, ಕಳೆದುಕೊಂಡದ್ದನ್ನು ಮರಳಿ ಪಡೆಯಬಹುದು.
ಮಕ್ಕಳ ಕಣ್ಣುಗಳನ್ನ ಸ್ವಲ್ಪ ಗಮನವಿಟ್ಟು ನೋಡಿ, ಆ ಕಣ್ಣುಗಳಲ್ಲಿ ನಿಮಗೆ ಅಪಾರ ಮೌನ ಮತ್ತು ಮುಗ್ಧತೆ ಕಾಣಸಿಗುತ್ತದೆ. ಪ್ರತಿ ಮಗುವೂ ಧ್ಯಾನ ಸ್ಥಿತಿಯೊಂದಿಗೆ ಹುಟ್ಟಿ ಬರುತ್ತದೆ ಆದರೆ ಅದಕ್ಕೆ ನಾವು ಹೇಗೆ ಆಲೋಚಿಸುವುದು, ಹೇಗೆ ಲೆಕ್ಕ ಹಾಕುವುದು, ಹೇಗೆ ತರ್ಕ ಮಾಡುವುದು, ಹೇಗೆ ವಾದ ಮಾಡುವುದು ಈ ಮುಂತಾದವನ್ನೆಲ್ಲ ಕಲಿಸುತ್ತೇವೆ. ಅದಕ್ಕೆ ಶಬ್ದಗಳನ್ನ, ಭಾಷೆಯನ್ನ, ಪರಿಕಲ್ಪನೆಗಳನ್ನ ಹೇಳಿಕೊಡಬೇಕಾಗುತ್ತದೆ. ನಾವು ಹೀಗೆ ಮಾಡಿದಾಗ ಮಗು ನಿಧಾನವಾಗಿ ತನ್ನ ಮುಗ್ಧತೆಯನ್ನ ಕಳೆದುಕೊಳ್ಳುತ್ತ ಹೋಗುತ್ತದೆ. ಅದು ಸಮಾಜದ ನಡಾವಳಿಕೆಗಳಿಂದಾಗಿ ಕಲುಷಿತಗೊಳ್ಳುತ್ತ ಹೋಗುತ್ತದೆ. ಹೀಗೆ ಬೆಳೆಯುತ್ತ ಬೆಳೆಯುತ್ತ ಮಗು ಹೆಚ್ಚು ಹೆಚ್ಚು ಒಂದು ಎಫೀಷಿಯೆಂಟ್ ಮೆಕ್ಯಾನಿಸಂ ಆಗುತ್ತ ಕಡಿಮೆ ಕಡಿಮೆ ಮನುಷ್ಯನಾಗುತ್ತ ಹೋಗುತ್ತದೆ.
ಈಗ ನಾವು ಮಾಡಬೇಕಿರುವುದು ಕಳೆದುಕೊಂಡಿರುವ ನಮ್ಮ ಆ ಜಾಗೆಯನ್ನು ಮತ್ತು ಪಡೆದುಕೊಳ್ಳುವುದು. ಇದು ನಿಮ್ಮ ಪರಿಚಯದ ಜಾಗ, ನೀವು ಧ್ಯಾನ ಮಾಡುತ್ತ ಮತ್ತೊಮ್ಮೆ ಆ ಜಾಗೆಯನ್ನ ನೋಡತೊಡಗಿದಾಗ ನಿಮಗೆ ಆಶ್ಚರ್ಯವಾಗುತ್ತದೆ, ಮೊದಲು ನೋಡಿದ ಜಾಗಕ್ಕೆ ಹಲವು ವರ್ಷಗಳ ನಂತರ ಮತ್ತೆ ಬಂದಾಗ ಎಲ್ಲ ನೆನಪಾಗುವಂತೆ. ನಿಮ್ಮ ಅಚ್ಚರಿ, ಈ ಮರಳಿ ಮನೆಗೆ ಬಂದ ಅನುಭವ ನೈಜವಾದದ್ದು : ಇದು ನಿಮ್ಮ ಪರಿಚಯದ ಜಾಗ, ಯಾವುದೋ ವಿಸ್ಮೃತಿಗೆ ಒಳಗಾಗಿ ಎಲ್ಲ ಮರೆತುಹೋಗಿತ್ತು ಅಷ್ಟೇ. ಕಸದ ತೊಟ್ಟಿಯಲ್ಲಿ ಕಳೆದು ಹೋಗಿದ್ದ ಅಪರೂಪದ ವಜ್ರವೊಂದು ನಿಮಗೆ ಮರಳಿ ಸಿಕ್ಕಿದೆ, ಅದು ನಿಮ್ಮದೇ ವಜ್ರ.
ಹಾಗೆ ನಿಜವಾಗಿ ನೋಡಿದರೆ ಅದು ಎಲ್ಲೂ ಕಳೆದು ಹೋಗಿರಲಿಲ್ಲ, ನೀವು ಎಲ್ಲೋ ಇಟ್ಟು ಮರೆತಿದ್ದಿರಿ ಅಷ್ಟೇ. ನಾವು ಹುಟ್ಟುವುದು ಧ್ಯಾನಿಗಳಾಗಿಯೇ ಆದರೆ ನಮ್ಮ ಮೈಂಡ್ ನಮ್ಮನ್ನು ತನ್ನ ದಾರಿಯಲ್ಲಿ ಎಳೆದುಕೊಂಡು ಹೋಗಿಬಿಡುತ್ತದೆ. ಒಂದು ಸಮಾಜದಲ್ಲಿ ಬದುಕಲು ಈ ಎಲ್ಲವೂ ಅವಶ್ಯಕ ಆದರೆ ನಾವು ನಮ್ಮ ಸಹಜ ಸ್ಥಿತಿಯನ್ನ ಮರೆಯಬಾರದು. ಧ್ಯಾನ ನಮಗೆ ಈ ಮರು ನೆನಪನ್ನು ಸಾಧ್ಯ ಮಾಡುತ್ತದೆ, ನಮ್ಮ ಸಹಜ ಸ್ಥಿತಿಯೊಂದಿಗೆ ಒಂದಾಗಿಸುತ್ತದೆ. ಬದುಕಿನ ಸದ್ದುಗದ್ದಲದಲ್ಲಿ ನಮ್ಮ ಸಹಜ ಸ್ಥಿತಿ ಎಲ್ಲೋ ಭೂಮಿಯ ಆಳದಲ್ಲಿ ಗುಪ್ತವಾಗಿ ಹರಿಯುತ್ತಿರುವ ಸರಸ್ವತಿಯಂತೆ ಮರೆಯಾಗಿ ಹೋಗಿತ್ತು. ಧ್ಯಾನ ನೆಲವನ್ನು ಮತ್ತೆ ಅಗೆದು ಆ ಗುಪ್ತಪ್ರವಾಹದೊಡನೆ ಮತ್ತೆ ನಮ್ಮನ್ನು ಸೇರಿಸುತ್ತದೆ. ಮತ್ತು ಬದುಕಿನ ಅತ್ಯಂತ ಆನಂದದ ಕ್ಷಣವೆಂದರೆ ಈ ಗುಪ್ತ ಪ್ರವಾಹವನ್ನ ಮತ್ತೆ ಕಂಡುಕೊಳ್ಳುವುದು.
**********
ಮಾಸ್ಟರ್ ಜೋಶು ಝೆನ್ ಕಲಿಯಲು ಶುರು ಮಾಡಿದ್ದು ಅರವತ್ತನೇ ವಯಸ್ಸಿನಲ್ಲಿ. ಜ್ಞಾನೋದಯವಾದಾಗ ಅವನಿಗೆ ಬರೊಬ್ಬರಿ ಎಂಭತ್ತು ವರ್ಷ ವಯಸ್ಸು. ತನ್ನ ನೂರಾ ಇಪ್ಪತ್ತನೇ ವಯಸ್ಸಿನವರೆಗೆ ಆತ ಝೆನ್ ಪಾಠ ಮಾಡಿದ.
ಒಮ್ಮೆ ಒಬ್ಬ ಶಿಷ್ಯ, ಜೋಶುನಿಗೆ ಪ್ರಶ್ನೆ ಮಾಡಿದ.
“ ನನ್ನ ಮನಸ್ಸು ಖಾಲಿಯಾಗಿದೆಯಲ್ಲ, ಏನು ತಾನೇ ಮಾಡಲಿ ಇನ್ನು? “
“ಮನಸ್ಸಲ್ಲಿರೋದನ್ನ ಹೊರ ಹಾಕು “
ಜೋಶು ಉತ್ತರಿಸಿದ.
“ ಆದರೆ ನನ್ನ ಮನಸ್ಸು ಖಾಲಿ, ಏನನ್ನ ಹೊರ ಹಾಕಲಿ? “ ಶಿಷ್ಯ ಮತ್ತೆ ಪ್ರಶ್ನೆ ಮಾಡಿದ.
“ ಹೌದಾ, ಹಾಗಾದರೆ ಆ ಖಾಲಿಯನ್ನೇ ಹೊತ್ತು ನಡೆ “
ಜೋಶು ಕಣ್ಣು ಮಿಟುಕಿಸಿದ.

