ನಗು ಎನ್ನುವುದು ನಿಮ್ಮೊಳಗಿನ ಸರಣಿ ತಾರ್ಕಿಕ ನಿರೀಕ್ಷೆಗಳನ್ನು ಮೀರುವ ಪ್ರಕ್ರಿಯೆ. ನೀವು ಏನನ್ನ ನಿರೀಕ್ಷಿಸುತ್ತಿದ್ದೀರೋ ಅದು ಘಟಸಿಬಿಟ್ಟರೆ ನಿಮಗೆ ನಗು ಬರುವುದಿಲ್ಲ! ~ ಓಶೋ ರಜನೀಶ್; ಕನ್ನಡಕ್ಕೆ: ಚಿದಂಬರ ನರೇಂದ್ರ
ಶೂನ್ಯ ಇರುವಲ್ಲೇ
ಮಜಾ ಶುರುವಾಗೋದು.
ಬೇರೆ ಕಡೆ ಎಲ್ಲಾ
ಬರೀ ಎಣಿಸೋದೆ ಅಗ್ಹೋಯ್ತು !
– ಹಾಫಿಜ್
***
ನಗು ಒಂದು ರಹಸ್ಯಮಯ ಸಂಗತಿ. ಯಾರಾದರೂ ನಗುವಿನ ಬಗ್ಗೆ ಮಾತನಾಡುವುದನ್ನ ಕೇಳುವುದಕ್ಕಿಂತ ನಗುವನ್ನ ಸ್ವತಃ ಅನುಭವಿಸುವುದು ಒಳ್ಳೆಯದು. ಆದರೆ ನಗು ಎಂದರೇನು? ಎನ್ನುವ ವಿಷಯವನ್ನು ಅರಿತುಕೊಳ್ಳುವ ಕುತೂಹಲವಂತೂ ಎಲ್ಲರಿಗೂ ಇದ್ದೇ ಇರುತ್ತದೆ.
ನಗು ನಿಮ್ಮೊಳಗಿನ ಅತ್ಯಂತ ಅರಿವಿನ ಅಂಶ.
ಎಮ್ಮೆಗಳು ನಗಲಾರವು. ನಗುವ ಎಮ್ಮೆಯನ್ನೇನಾದರೂ ನೋಡಿಬಿಟ್ಟರೆ ಹುಚ್ಚರಾಗಿಬಿಡುತ್ತೀರಿ ನೀವು. ಯಾವ ಪ್ರಾಣಿಯೂ ನಗುವುದಿಲ್ಲ. ನಗುವಿಗೆ ಬೇಕಾದದ್ದು ಅತ್ಯಂತ ಸೂಕ್ಷ್ಮ ಅರಿವು. ನೀವು ನಗುತ್ತಿದ್ದೀರಿ ಎಂದರೆ ಪರಿಸ್ಥಿತಿಯ ಹಾಸ್ಯಾಸ್ಪದತೆ ನಿಮಗೆ ಅರ್ಥವಾಗುತ್ತಿದೆ.
ಜೋಕ್ ಎಂದರೇನು? ಜೋಕ್ ಎಂದರೆ ಅತ್ಯಂತ ಜಾಣತನದಿಂದ ಜೋಡಿಸಲಾಗಿರುವ ಸರಣಿ ಅಂಶಗಳು. ಜೋಕ್ ನಿಮ್ಮನ್ನು ಒಂದು ನಿರ್ದಿಷ್ಟ ತರ್ಕಬದ್ಧ ದಾರಿಯಲ್ಲಿ ಮುನ್ನಡೆಸುತ್ತದೆ. ಮುಂದೆ ಹೀಗೆ ಆಗುತ್ತದೆ, ಮುಂದೆ ನಾವು ಇದನ್ನು ಎದುರುನೋಡಬಹುದು ಎಂದೆಲ್ಲ ನೀವು ಊಹೆ ಮಾಡಲು ಶುರುಮಾಡುತ್ತೀರಿ. ಆದರೆ ಒಂದು ಅಕಸ್ಮಾತ್ ತಿರುವಿನಲ್ಲಿ ನೀವು ಎಣಸಿದ ಸಂಗತಿಗಿಂತ ಸಂಪೂರ್ಣ ವಿಭಿನ್ನವಾದ ಸಂಗತಿಯೊಂದು ನಡೆದುಹೋಗುತ್ತದೆ. ಆಗ ನೀವು ನಗಲು ಶುರು ಮಾಡುತ್ತೀರಿ.
ನಗು ಎನ್ನುವುದು ನಿಮ್ಮೊಳಗಿನ ಸರಣಿ ತಾರ್ಕಿಕ ನಿರೀಕ್ಷೆಗಳನ್ನು ಮೀರುವ ಪ್ರಕ್ರಿಯೆ. ನೀವು ಏನನ್ನ ನಿರೀಕ್ಷಿಸುತ್ತಿದ್ದೀರೋ ಅದು ಘಟಸಿಬಿಟ್ಟರೆ ನಿಮಗೆ ನಗು ಬರುವುದಿಲ್ಲ. ಎಲ್ಲ ನಿರೀಕ್ಷೆಯಂತೆಯೇ ನಡೆಯುತ್ತ ಹೋಗಿ ಕೊನೆಗೆ ಒಂದು ವಿಚಿತ್ರ ತಿರುವಿನಲ್ಲಿ ಅನಿರೀಕ್ಷಿತವಾದದ್ದು ಸಂಭವಿಸಿಬಿಟ್ಟರೆ, ನೀವು ನಿಮ್ಮ ತರ್ಕ, ಕಾರಣ, ಬುದ್ಧಿವಂತಿಕೆ, ಮೈಂಡ್ ಎಲ್ಲವನ್ನೂ ಮರೆತುಬಿಟ್ಟು ಹಾರ್ದಿಕವಾಗಿ ನಕ್ಕುಬಿಡುತ್ತೀರಿ.
ನಗು, ನಿಮಗೆ no mind ಸ್ಥಿತಿಯನ್ನ ಸಾಧ್ಯಮಾಡುವ ಅತ್ಯಂತ ಸಾಮಾನ್ಯ ಅನುಭವ. ಹಾಗಾಗಿ ಧ್ಯಾನ ಮಾತ್ರ ಸಾಧ್ಯಮಾಡಬಲ್ಲ ಶೂನ್ಯದ (no mind), ಮೀರುವಿಕೆಯ (transcendence) ಹೊಳಹುಗಳನ್ನು ನಿಮಗೆ ಪರಿಚಯಿಸಲು ನಾನು ಜೋಕ್ ಗಳನ್ನು ಬಳಸುತ್ತೇನೆ. ಮಾನವ ಇತಿಹಾಸದಲ್ಲಿ ಬಹುಶಃ, ಧ್ಯಾನಕ್ಕೆ ನಿಮ್ಮನ್ನು ಸಿದ್ಧಮಾಡಲು ಪೂರ್ವ ಸಿದ್ಧತೆಯೆಂಬಂತೆ ಜೋಕ್ ಗಳನ್ನು ಬಳಸುವ ಮೊದಲ ಮನುಷ್ಯ ನಾನೇ ಇರಬೇಕು.
ಒಮ್ಮೆ ಮುಲ್ಲಾ ನಸ್ರುದ್ದೀನ ವಿದ್ವಾಂಸರೊಬ್ಬರಿಗೆ ಒಂದು ಚರ್ಚೆಗಾಗಿ ಸಮಯ ಕೊಟ್ಟಿದ್ದ. ಆದರೆ ಮರೆತು ಯಾವದೋ ಕೆಲಸಕ್ಕೆಂದು ಬೇರೆ ಊರಿಗೆ ಹೋಗಿ ಬಿಟ್ಟ.
ನಿಗದಿ ಮಾಡಿದ ಸಮಯಕ್ಕೆ ಸರಿಯಾಗಿ ವಿದ್ವಾಂಸರು ಮುಲ್ಲಾನ ಮನೆಗೆ ಆಗಮಿಸಿದರು. ಆದರೆ ಮನೆಯ ಬಾಗಿಲಿಗೆ ಬೀಗ ಹಾಕಿರುವುದನ್ನು ಕಂಡು ಮನೆಯ ಬಾಗಿಲಲ್ಲಿ ಸ್ವಲ್ಪ ಹೊತ್ತು ಕಾದರು. ಆದರೂ ಮುಲ್ಲಾ ವಾಪಸ್ ಬರುವ ಸೂಚನೆ ಕಾಣದಿದ್ದಾಗ ಸಿಟ್ಟಿನಿಂದ ಮನೆಯ ಬಾಗಿಲ ಮೇಲೆ ‘ಮೂರ್ಖ’ ಎಂದು ಸುಣ್ಣದಿಂದ ಬರೆದು ವಾಪಸ್ ಹೋಗಿಬಿಟ್ಟರು.
ಸಂಜೆ ಮನೆಗೆ ವಾಪಸ್ ಬಂದ ನಸ್ರುದ್ದೀನ ಮನೆಯ ಬಾಗಿಲ ಮೇಲೆ ಬರೆದದ್ದನ್ನು ಓದಿದ. ಆಗ ಅವನಿಗೆ ತಾನು ವಿದ್ವಾಂಸರಿಗೆ ಚರ್ಚೆಗೆಂದು ಸಮಯ ಕೊಟ್ಟಿದ್ದು ನೆನಪಾಯಿತು.
ಕೂಡಲೇ ಮುಲ್ಲಾ ಓಡುತ್ತ ವಿದ್ವಾಂಸರ ಮನೆಗೆ ಹೋದ. ಇವನನ್ನು ಕಂಡ ಕೂಡಲೆ ವಿದ್ವಾಂಸರ ಸಿಟ್ಟು ನೆತ್ತಿಗೇರಿತು. ಅವರು ಬಾಯಿಗೆ ಬಂದ ಹಾಗೆ ಮುಲ್ಲಾನನ್ನು ಬೈಯ್ಯಲು ಶುರುಮಾಡಿದರು.
ಅವರನ್ನು ಸಮಾಧಾನ ಮಾಡುತ್ತ ಮುಲ್ಲಾ ಮಾತನಾಡಿದ,
“ ಸ್ವಾಮಿ ದಯವಿಟ್ಟು ಕ್ಷಮಿಸಿ, ನನಗೆ ಮರೆತು ಹೋಗಿತ್ತು. ಸಂಜೆ ಮನೆಗೆ ಬಂದಾಗ ಯಾರೋ ನನ್ನ ಮನೆಯ ಬಾಗಿಲ ಮೇಲೆ ನಿಮ್ಮ ಹೆಸರು ಬರೆದಿದ್ದರು, ಕೂಡಲೇ ಓಡಿ ಬಂದೆ”

