ಗೆಲುವಿರಲಿ, ಸೋಲಿರಲಿ ಬದುಕಿನಲ್ಲಿ ಎಲ್ಲವನ್ನೂ ಸಮನಾಗಿ ನೋಡಲು ಬಹಳ ಧೈರ್ಯ ಬೇಕು. ಜನರ ಹೊಗಳಿಕೆಗೆ, ಅವಹೇಳನಕ್ಕೆ ಸಮಚಿತ್ತದಿಂದ ಪ್ರತಿಕ್ರಿಯೆ ನೀಡುವುದು ಒಬ್ಬ ಧೈರ್ಯವಂತನಿಗೆ ಮಾತ್ರ ಸಾಧ್ಯ… ~ ಓಶೋ ರಜನೀಶ್; ಕನ್ನಡಕ್ಕೆ: ಚಿದಂಬರ ನರೇಂದ್ರ
ನಾನು ಶಾಲಾ ಬಾಲಕನಾಗಿದ್ದಾಗ ನಮ್ಮ ಊರಿನಲ್ಲಿ ನಡೆದ ಜಿಲ್ಲಾ ಮಟ್ಟದ ಕುಸ್ತಿ ಸ್ಪರ್ಧೆಯ ಘಟನೆ ನನ್ನ ನೆನಪಲ್ಲಿ ಉಳಿದುಬಿಟ್ಟಿದೆ.
ನಮ್ಮ ಭಾಗದಲ್ಲಿ ಅತ್ಯಂತ ಪ್ರಸಿದ್ಧನಾಗಿದ್ದ ಒಬ್ಬ ಕುಸ್ತಿಪಟುವನ್ನ ಅನಾಮಿಕ ಕುಸ್ತಿಪಟುವೊಬ್ಬ ಕುಸ್ತಿ ಸ್ಪರ್ಧೆಯಲ್ಲಿ ಸೋಲಿಸಿಬಿಟ್ಟಿದ್ದ.
ಪ್ರಸಿದ್ಧ ಕುಸ್ತಿಪಟುವನ್ನ ಇಡೀ ಊರಿನ ಜನ ಆಡಿಕೊಂಡು ನಕ್ಕರು. ಬಗೆಬಗೆಯ ವ್ಯಂಗ್ಯದ ಮಾತುಗಳಿಂದ ಚುಚ್ಚಿದರು. ಸೋತ ಅವಮಾನದಲ್ಲಿ ಅವನು ಕುಗ್ಗಿಹೋಗುತ್ತಾನೆ ಎಂದು ನಿರೀಕ್ಷಿಸಿದ್ದ ಜನರಿಗೆ ಅಲ್ಲೊಂದು ಆಶ್ಚರ್ಯ ಕಾಯ್ದಿತ್ತು. ನನಗೆ ಕೂಡ ಇದೊಂದು ಸಖೇದಾಶ್ಚರ್ಯದ ವಿಷಯವಾಗಿತ್ತು. ಸೋತ ಕುಸ್ತಿಪಟು, ಜೋರಾಗಿ ಚಪ್ಪಾಳೆ ಬಾರಿಸುತ್ತ, ನಗುತ್ತ ತನ್ನ ಸೋಲನ್ನು ಸಂಭ್ರಮಿಸತೊಡಗಿದ. ಅವನ ಸುತ್ತ ಅವನನ್ನು ಮೂದಲಿಸುತ್ತಿದ್ದ ಜನರು ಒಮ್ಮೆಲೇ ಮಾತುಹೊರಡದೇ ದಂಗು ಬಂಡಿದವರಂತೆ ನಿಂತುಬಿಟ್ಟರು. ಯಾಕೆ ಹಾಗೆ ಮಾಡಿದ ಆ ಕುಸ್ತಿಪಟು? ಏನಾಗಿತ್ತು ಅವನಿಗೆ?
ಆ ಕುಸ್ತಿಪಟು ನಮ್ಮ ಮನೆಯ ಹತ್ತಿರದ ದೇವಸ್ಥಾನದಲ್ಲಿ ಇರುತ್ತಿದ್ದ. ನಂತರ ನಾನು ಅವನ ಬಳಿಗೆ ಹೋಗಿ ಹೇಳಿದೆ, “ಇದು ವಿಚಿತ್ರ ಆದರೆ ನನಗೆ ಬಹಳ ಇಷ್ಟವಾಯಿತು. ಇದು ತುಂಬಾ ಅನಿರೀಕ್ಷಿತ”.
“ಹೌದು ಇದು ನನಗೂ ಅನಿರೀಕ್ಷಿತ. ಒಬ್ಬ ಸಾಮಾನ್ಯ ಮನುಷ್ಯ ನನ್ನನ್ನು ಸೋಲಿಸುತ್ತಾನೆ ಎನ್ನುವುದನ್ನ ನಾನು ಕನಸು ಮನಸಿನಲ್ಲೂ ಎಣಿಸಿರಲ್ಲಿ. ಸಿಕ್ಕಾಪಟ್ಟೆ ಆಶ್ಚರ್ಯವಾಯಿತು. ಒಂದು ಕ್ಷಣ ಬೇಸರವಾಯಿತಾದರೂ ನಂತರ ಇಡೀ ಘಟನೆಯೇ ಹಾಸ್ಯಾಸ್ಪದ ಅನ್ನಿಸಿತು. ಅದಕ್ಕೇ ಅಷ್ಟು ಜೋರಾಗಿ ನಗು ಬಂತು.” ಕುಸ್ತಿಪಟು ಉತ್ತರಿಸಿದ.
ಈಗಲೂ ಆ ಕುಸ್ತಿಪಟುವಿನ ಚೆಹರೆ ನನ್ನ ನೆನಪಲ್ಲಿ ಗಟ್ಟಿಯಾಗಿ ಉಳಿದಿದೆ. ಅಂದು ಅವನು ಜೋರಾಗಿ ಚಪ್ಪಾಳೆ ಬಾರಿಸುತ್ತ ನಕ್ಕಿದ್ದು ಮತ್ತು ಅವನನ್ನು ಮೂದಲಿಸುತ್ತಿದ್ದ ಜನ ಅವನ ಈ ಅವತಾರ ನೋಡಿ ಮಾತುಹೊರಡದವರಂತೆ ಸುಮ್ಮನಾಗಿಬಿಟ್ಟದ್ದು ಎಲ್ಲ ಕಣ್ಣಿಗೆ ಕಟ್ಟಿದಂತಿದೆ. ಈ ಮನುಷ್ಯ ಇಡೀ ಗುಂಪಿನ ವ್ಯಂಗ್ಯವನ್ನು ತನ್ನ ಒಂದೇ ಒಂದು ಕ್ರಿಯೆಯಿಂದ ಸೋಲಿಸಿಬಿಟ್ಟಿದ್ದ. ದೊಡ್ಡ ಧೈರ್ಯ ಬೇಕು ಹೀಗೆ ಮಾಡಲು.
ನನಗಂತೂ ಅವತ್ತು ಕುಸ್ತಿಸ್ಪರ್ಧೆಯಲ್ಲಿ ಅವನೇ ಗೆದ್ದದ್ದು. ಈ ಮಾತನ್ನ ಅವನಿಗೆ ಹೇಳಿದೆ ನಾನು, “ ನಾನು ಚಿಕ್ಕ ಹುಡುಗ ಹೆಚ್ಚೇನೂ ಹೇಳಲಾರೆ ಆದರೆ ನನ್ನ ಹೀರೋ ನೀನೇ, ನಿನ್ನ ನಾನು ಯಾವತ್ತೂ ಮರೆಯುವುದಿಲ್ಲ”.
ಇಪ್ಪತ್ತು ವರ್ಷಗಳ ನಂತರ ನಾನು ಮರಳಿ ಆ ಊರಿಗೆ ಹೋದಾಗ ಅವನು ನನ್ನ ನೋಡಲು ಬಂದ. ಅವನಿಗೂ ಆಗ ಬಹಳ ವಯಸ್ಸಾಗಿತ್ತು. ಅವನು ಹೇಳಿದ, “ನನ್ನ ನೆನಪಿದೆಯಾ ನಿನಗೆ? ನನಗಂತೂ ನಿನ್ನ ಮರೆಯುವುದು ಸಾಧ್ಯವೇ ಇಲ್ಲ. ಅಂದು ನಾನು ಸೋತಾಗ ಒಬ್ಬ ಪುಟ್ಟ ಹುಡುಗ ನನ್ನ ಬಳಿ ಬಂದು ನನ್ನ ನಿಜವಾದ ವಿನ್ನರ್ ನೀನೇ ಎಂದು ಹೇಳಿದ್ದು ನೆನಪಿದೆ ನನಗೆ. ಇಡೀ ಗುಂಪಿನ ಅವಹೇಳನವನ್ನು ಸುಮ್ಮನಾಗಿಸಿದವನೇ ನನ್ನ ಹೀರೋ ಎಂದು ಹೇಳಿದ ಒಬ್ಬ ಪುಟ್ಟ ಹುಡುಗನ ಚೆಹರೆಯನ್ನು ಹೇಗೆ ಮರೆಯಲಿ”.
ಗೆಲುವಿರಲಿ, ಸೋಲಿರಲಿ ಬದುಕಿನಲ್ಲಿ ಎಲ್ಲವನ್ನೂ ಸಮನಾಗಿ ನೋಡಲು ಬಹಳ ಧೈರ್ಯ ಬೇಕು. ಜನರ ಹೊಗಳಿಕೆಗೆ, ಅವಹೇಳನಕ್ಕೆ ಸಮಚಿತ್ತದಿಂದ ಪ್ರತಿಕ್ರಿಯೆ ನೀಡುವುದು ಒಬ್ಬ ಧೈರ್ಯವಂತನಿಗೆ ಮಾತ್ರ ಸಾಧ್ಯ. ಈ ಎಲ್ಲವೂ ಸ್ಥಿರವಾಗಿ ಇರುವಂತವು ಅಲ್ಲ ಬಂದು ಹೋಗುವಂತವು ಎನ್ನುವ ತಿಳುವಳಿಕೆ ಮಾತ್ರ ಇಂಥ ಧೈರ್ಯವನ್ನು ಸಾಧ್ಯ ಮಾಡುತ್ತದೆ.

