ಪೂರ್ಣ ಸ್ವಾತಂತ್ರ್ಯವನ್ನು ಆಳದಲ್ಲಿ ಅನುಭವಿಸುತ್ತಿರುವಾಗ ಮಾತ್ರ ನೀವು ಹಿಪೊಕ್ರೇಟ್ ಗಳಾಗುವುದಿಲ್ಲ… | ಓಶೋ ರಜನೀಶ್; ಕನ್ನಡಕ್ಕೆ: ಚಿದಂಬರ ನರೇಂದ್ರ
ಜಿಬ್ರಾನ್ ನ ಒಂದು ಕಥೆ ಇದೆ
ಒಂದು ರಾತ್ರಿ ನೆರೆ ಹೊರೆಯಲ್ಲಿ ಆದ ದೊಡ್ಡ ಸದ್ದಿನಿಂದಾಗಿ ತಾಯಿ ಮಗಳು ಇಬ್ಬರಿಗೂ ಎಚ್ಚರವಾಯಿತು. ತಾಯಿ ಮಗಳು ಇಬ್ಬರೂ ನಿದ್ರಾ ಸಂಚಾರಿಗಳು. ಸದ್ದಿಗೂ ಮೊದಲು ಇಬ್ಬರೂ ಒಂದು ಗಾರ್ಡನ್ ಲ್ಲಿ ನಿದ್ದೆಯಲ್ಲಿ ವಾಕ್ ಮಾಡುತ್ತಿದ್ದರು.
ನಿದ್ದೆಯಲ್ಲಿ ತಾಯಿ ಮಗಳಿಗೆ ಬಯ್ಯುತ್ತಿದ್ದಳು, “ನಿನ್ನಿಂದಾಗಿ ನಾನು ನನ್ನ ಹರೆಯವನ್ನು ಕಳೆದುಕೊಂಡೆ, ನಿನ್ನಿಂದಾಗಿ ನನ್ನ ಬದುಕು ನಾಶವಾಯಿತು. ಇಂದು ಯಾರೇ ಮನೆಗೆ ಬಂದರೂ ಅವರು ನಿನ್ನನ್ನು ನೋಡುತ್ತಾರೆಯೇ ಹೊರತು ಯಾರೂ ನನ್ನ ನೋಡುವುದಿಲ್ಲ”. ಸುಂದರಿ ಮಗಳು ಹರೆಯಕ್ಕೆ ಬಂದಾಗ ಎಲ್ಲ ತಾಯಂದಿರು ಅನುಭವಿಸುವ ಆಳ ಅಸೂಯೆ ಇದು. ಆದರೆ ಈ ಅಸೂಯೆಯನ್ನು ಅವರು ಒಳಗೊಳಗೇ ಅನುಭವಿಸುತ್ತಾರೆ ಹೊರಗೆ ತೋರಗೊಡುವುದಿಲ್ಲ.
ತಾಯಿಯ ಮಾತು ಕೇಳಿ ಮಗಳೂ ಸಿಟ್ಟಿಗೆದ್ದಳು, “ನಿನ್ನಿಂದಾಗಿ ನನಗೆ ಬದುಕನ್ನು ಆನಂದಿಸಲು ಸಾಧ್ಯವಾಗುತ್ತಿಲ್ಲ, ನನ್ನ ಬದುಕಿಗೆ ನೀನು ಅಡ್ಡಗಾಲಾಗಿದ್ದೀಯ. ನನಗೆ ಪ್ರೇಮಿಸಲು ಬಿಡುವುದಿಲ್ಲ, ಬದುಕಿನ ಎಲ್ಲ ಖುಶಿಗಳನ್ನ ಅನುಭವಿಸಲು ಬಿಡುವುದಿಲ್ಲ. ನಿನ್ನಿಂದಾಗಿ ನನಗೆ ಸ್ವಾತಂತ್ರ್ಯವೇ ಇಲ್ಲ”.
ತಾಯಿ ಮಗಳು ನಿದ್ರಾ ಸಂಚಾರ ಮಾಡುತ್ತಲೇ ಹೀಗೆ ಜಗಳವಾಡುತ್ತಿದ್ದಾಗ ಆದ ದೊಡ್ಡ ಸದ್ದಿನಿಂದಾಗಿ ಇಬ್ಬರಿಗೂ ಎಚ್ಚರವಾಯಿತು. ಎಚ್ಚರವಾದ ಕೂಡಲೇ ತಾಯಿ ಮಗಳನ್ನು ಕುರಿತು ಅಕ್ಕರೆಯ ಮಾತನಾಡಿದಳು, “ಮಗಳೇ ಇಂಥ ಚಳಿಯಲ್ಲಿ ಯಾಕೆ ಹೊರಗೆ ಓಡಾಡುತ್ತಿದ್ದೀಯ, ಶೀತ ಆಗುತ್ತದೆ, ಒಳಗೆ ಬಾ”. ಮಗಳೂ ತಾಯಿಯ ಬಗ್ಗೆ ಅಂತಃಕರಣದ ಮಾತು ಆಡಿದಳು, “ಅಮ್ಮ ನಿನಗೆ ಮೊದಲೇ ಹುಶಾರಿಲ್ಲ, ಚಳಿಯಲ್ಲಿ ಓಡಾಡಿದರೆ ಜ್ವರ ಹೆಚ್ಚಾಗುವುದಿಲ್ಲವೆ, ಒಳಗೆ ಬಾ, ಬೆಚ್ಚಗೆ ಹೊದ್ದು ಮಲಗು ಬಾ”.
ನಿದ್ದೆಯಲ್ಲಿದ್ದಾಗ ಮನದ ಮಾತು ಮಾತನಾಡುತ್ತಿದ್ದ ತಾಯಿ ಮಗಳು ಎಚ್ಚರವಾಗುತ್ತಿದ್ದಂತೆಯೇ ಹಿಪೊಕ್ರೇಟ್ ಗಳಾದರು, ಬಣ್ಣದ ಮಾತು ಆಡಲು ಶುರು ಮಾಡಿದರು.
ಅಪ್ರಜ್ಞಾವಸ್ಥೆಯಲ್ಲಿ ಮಾತ್ರ ನೀವು ಸಾಚಾ, ಪ್ರಜ್ಞಾವಸ್ಥೆಗೆ ಬರುತ್ತಿದ್ದಂತೆಯೇ ನೀವು ಹಿಪೋಕ್ರೆಟ್ ಗಳು. ಸವಾಲು ಇರುವುದೇ ಪ್ರಜ್ಞಾವಸ್ಥೆಯಲ್ಲಿ ನಾವು ನಮ್ಮ ಹಾಗೆ ಇರುವುದು, ನಮ್ಮ ಮನದ ಮಾತಿನಂತೆ ನಡೆಯುವುದು, ಎಲ್ಲ ಬೂಟಾಟಿಕೆಗಳಿಂದ ಹೊರತಾಗುವುದು.
ಎಚ್ಚರವಾಗಿದ್ದಾಗ ನಿಮ್ಮ ತಾಯಿ, ತಂದೆ, ಸೋದರಿ, ಸೋದರ ರ ಬಗ್ಗೆ ನಿಮ್ಮ ಅಭಿಪ್ರಾಯಗಳೇನು? ಹಿಂದೇನಾಯಿತು, ಯಾರಿಗೆ ಯಾರು ಏನಂದರು, ಏನು ಮಾಡಿದರು, ಎಲ್ಲ ಮಿಕ್ಸ್ ಮಾಡಲು ಹೋಗಬೇಡಿ, ನಿಮ್ಮ ಮೂಲ ನಡೆ ನುಡಿಯನ್ನ ಪಾಲಿಶ್ ಮಾಡಲು ಹೋಗಬೇಡಿ. ಅವರ ಬಗ್ಗೆ ಇರುವ ನಿಮ್ಮ ನಿಜವಾದ ಅಭಿಪ್ರಾಯಗಳನ್ನು ಅವರಿಗೆ ಹೇಳುವುದು ನಿಮಗೆ ಸಾಧ್ಯವಾಗುವುದಾದರೆ, ನೀವು ಸ್ವಾತಂತ್ರ್ಯವನ್ನು ಸಾಧಿಸಿರುವಿರಿ ಎನ್ನುತ್ತಾನೆ ಪತಂಜಲಿ.
ಪೂರ್ಣ ಸ್ವಾತಂತ್ರ್ಯವನ್ನು ಆಳದಲ್ಲಿ ಅನುಭವಿಸುತ್ತಿರುವಾಗ ಮಾತ್ರ ನೀವು ಹಿಪೊಕ್ರೇಟ್ ಗಳಾಗುವುದಿಲ್ಲ. ಆಗ ನೀವು ನೈಜ, ಮತ್ತು ಅಥೆಂಟಿಕ್, ಯಾವ ತೋರಿಕೆಯೂ ನಿಮ್ಮ ಸುತ್ತ ಇಲ್ಲ. ನೀವು ಅಥೆಂಟಿಕ್ ಆದಾಗ ದೊಡ್ಡ ಕಲ್ಲುಬಂಡೆಯಂತೆ ಧೃಡವಾಗುವಿರಿ, ಯಾವ ಗೊಂದಲಗಳೂ ನಿಮ್ಮನ್ನು ಅಲ್ಲಾಡಿಸುವುದು ಸಾಧ್ಯವಾಗುವುದಿಲ್ಲ. ಆಗ ನೀವು ಖಡ್ಗದ ಹಾಗೆ ಹರಿತವಾಗುತ್ತೀರಿ. ಸರಿ ತಪ್ಪುಗಳನ್ನ ಖಚಿತವಾಗಿ ಗುರುತಿಸುತ್ತ ಬೇರೆ ಬೇರೆ ಮಾಡುತ್ತೀರಿ. ಇಂಥ ಸ್ಪಷ್ಟತೆ ನಿಮ್ಮನ್ನು ಧ್ಯಾನದತ್ತ ಕರೆದೊಯ್ಯುತ್ತದೆ. ಮತ್ತು ಇಂಥ ಸ್ಪಷ್ಟತೆ ನಿಮ್ಮ ಮೀರುವಿಕೆಗೆ ಚಿಮ್ಮುಹಲಗೆಯಂತೆ ಸಹಾಯ ಮಾಡುತ್ತದೆ.

