ಮನುಷ್ಯನ ಸ್ವಭಾವವೇ ಹೀಗೆ. ಅವನು ಯಾವುದನ್ನೂ ಸುಮ್ಮನೇ ಅನುಭವಿಸಲಾರ. ಎಲ್ಲಕ್ಕೂ ಅವನಿಗೆ ಕಾರಣಗಳು ಬೇಕು. ಅವನು ಸುಖವನ್ನು ಕಾರಣ ಗೊತ್ತಾಗದೆ ಅನುಭವಿಸಲಾರ ಹಾಗೆಯೇ ದುಃಖವನ್ನ ಕೂಡ…~ ಓಶೋ ರಜನೀಶ್; ಕನ್ನಡಕ್ಕೆ: ಚಿದಂಬರ ನರೇಂದ್ರ
‘ಕಾರಣ’
ದಯವಿಟ್ಟು ಜಾಗ ಖಾಲಿ ಮಾಡು
ನಿನಗಿಲ್ಲಿ ಜಾಗ ಇಲ್ಲವೇ ಇಲ್ಲ.
ಉಹೂಂ, ನೀನು ಒಂದೇ ಒಂದು ಕೊದಲಿನಷ್ಟು
ಸೂಕ್ಷ್ಮವಾಗುತ್ತೇನೆಂದರೂ
ನಾನು ಒಪ್ಪುವುದಿಲ್ಲ.
ಮುಂಜಾನೆ ಆಗುತ್ತದೆ ನಿಜ
ಆದರೆ
ನಿನ್ನ ಕೈಯಲ್ಲಿರುವ
ಮೇಣದ ಬತ್ತಿಯನ್ನು ನೋಡಿ
ಸೂರ್ಯ
ಬಿದ್ದು ಬಿದ್ದು ನಗುತ್ತಾನೆ.
ನನಗೆ ಅಪಮಾನವಾಗುತ್ತದೆ.
– ರೂಮಿ
***************
ಒಬ್ಬ ಮನುಷ್ಯನಿಗೆ ಪ್ರತಿಯೊಂದರ ಬಗ್ಗೆಯೂ ಅತೃಪ್ತಿ. ಅದು ಯಾಕೆ ಹೀಗೆ ಇದು ಯಾಕೆ ಹೀಗೆ ಅಂತ ನೂರೆಂಟು ಪ್ರಶ್ನೆಗಳು. ಅವನ ಜೀವನದಲ್ಲಿ ಖುಶಿ ಎನ್ನುವುದೇ ಇರಲಿಲ್ಲ. ಸದಾ ದುಃಖದಿಂದ ತುಂಬಿರುತ್ತಿದ್ದ. ಅವನಿಗೆ ಯಾವುದರ ಬಗ್ಗೆಯೂ ಸಮಾಧನವೇ ಇರಲಿಲ್ಲ. ಮನೋವೈದ್ಯರನ್ನು ಕಾಣುವಂತೆ ಅವನಿಗೆ ಸಲಹೆ ನೀಡಲಾಯಿತು.
ಆ ಮನುಷ್ಯನನ್ನು ಪೂರ್ತಿಯಾಗಿ ತಪಾಸಣೆ ಮಾಡಿದ ವೈದ್ಯರು, ಅವನಿಗೆ ಹಿಮಾಲಯದಲ್ಲಿ ಹೋಗಿ ನೆಲೆಸುವಂತೆ ಸಲಹೆ ನೀಡಿದರು.
ಆ ಮನುಷ್ಯ ಹಿಮಾಲಯಕ್ಕೆ ಹೋಗಿ ಅಲ್ಲಿ ಮನೆ ಮಾಡಿಕೊಂಡು ಇರಲಾರಂಭಿಸಿದ. ಅಲ್ಲಿ ಅವನ ಮನಸ್ಸಿಗೆ ಶಾಂತಿ ಸಿಕ್ಕಿತು. ಇಷ್ಟು ದಿನಗಳಿಂದ ಆಗದಿದ್ದ ಸುಖದ ಅನುಭವ ಆಗತೊಡಗಿತು. ಅವನಿಗೆ ಸಿಕ್ಕಾಪಟ್ಟೆ ಖುಶಿಯಾಯಿತು. ಕೂಡಲೇ ಅವನು ತನ್ನ ಮನೋವೈದ್ಯರಿಗೆ ಟೆಲಿಗ್ರಾಂ ಮಾಡಿದ
“I am feeling very happy here. But Why?”
ಮನುಷ್ಯನ ಸ್ವಭಾವವೇ ಹೀಗೆ. ಅವನು ಯಾವುದನ್ನೂ ಸುಮ್ಮನೇ ಅನುಭವಿಸಲಾರ. ಎಲ್ಲಕ್ಕೂ ಅವನಿಗೆ ಕಾರಣಗಳು ಬೇಕು. ಅವನು ಸುಖವನ್ನು ಕಾರಣ ಗೊತ್ತಾಗದೆ ಅನುಭವಿಸಲಾರ ಹಾಗೆಯೇ ದುಃಖವನ್ನ ಕೂಡ. ಕಾರಣಗಳು ಗೊತ್ತಾಗದೇ ಹೋದರೆ ಅವನು ಹುಚ್ಚನಂತಾಗುತ್ತಾನೆ. ಕಾರಣಗಳ ರಹಸ್ಯವನ್ನು ಬೇಧಿಸುವುದೇ ಅವನ ಜೀವನದ ಉದ್ದೇಶವಾಗಿಬಿಟ್ಟಿದೆ. ಮನುಷ್ಯನಿಗೆ ತನ್ನ ಬಳಿ ಇದ್ದುದರ ಬಗ್ಗೆ ಸಂತೋಷ ಇಲ್ಲ, ಇಲ್ಲದಿರುವುದರ ಬಗ್ಗೆ ಕಳವಳ.
ಒಂದು ದಿನ ಪರ ಊರಿನಿಂದ ಬಂದಿದ್ದ ಒಬ್ಬ ಮನುಷ್ಯ ಮುಲ್ಲಾ ನಸ್ರುದ್ದೀನ್ ಜೊತೆ ಮಾತನಾಡುತ್ತಿದ್ದ,
“ ನಾನು ದೊಡ್ಡ ಶ್ರೀಮಂತ ಆದರೆ ತುಂಬ ದುಃಖ ಮತ್ತು ಶೋಚನೀಯ ಪರಿಸ್ಥಿತಿಯಲ್ಲಿರುವ ಮನುಷ್ಯ. ಈ ಹಣ ಹಿಡಿದುಕೊಂಡು ಸುಖ ಮತ್ತು ಸಂತೋಷ ಹುಡುಕುತ್ತಾ ಊರೂರು ಅಲೆಯುತ್ತಿದ್ದೇನೆ ಆದರೆ ಯಾವ ಪ್ರಯೋಜನವೂ ಆಗಿಲ್ಲ.”
ಆ ಮನುಷ್ಯ ಇನ್ನೂ ಮಾತು ಮುಗಿಸಿರಲಿಲ್ಲ, ನಸ್ರುದ್ದೀನ್ ಆ ಮನುಷ್ಯನ ಕೈಯ್ಯಲಿದ್ದ ಹಣದ ಗಂಟು ಕಸಿದುಕೊಂಡು ಓಡತೊಡಗಿದ. ಆ ಮನುಷ್ಯ, ನಸ್ರುದ್ದೀನ್ ನ ಹಿಂದೆ ಕಳ್ಳ ಕಳ್ಳ ಎಂದು ಕೂಗುತ್ತ ಬೆನ್ನುಹತ್ತಿದ.
ಸ್ವಲ್ಪ ದೂರ ಹೋದ ಮೇಲೆ ನಸ್ರುದ್ದೀನ್ ಹಣದ ಗಂಟನ್ನು ರಸ್ತೆಯ ಮೇಲೆ ಎಸೆದು, ಅಲ್ಲಿಯೇ ಮರದ ಹಿಂದೆ ಅಡಗಿಕೊಂಡು ಆ ಮನುಷ್ಯನನ್ನು ಗಮನಿಸತೊಡಗಿದ.
ರಸ್ತೆಗುಂಟ ಓಡಿಬಂದ ಮನುಷ್ಯ, ರಸ್ತೆಯ ಮೇಲೆ ಅನಾಥವಾಗಿ ಬಿದ್ದಿದ್ದ ಹಣದ ಗಂಟು ಕಂಡು ಸಂತೋಷಭರಿತನಾದ. ಅವನ ಕಣ್ಣುಗಳಿಂದ ಆನಂದಭಾಷ್ಪ ಹರಿಯತೊಡಗಿತ್ತು. ಹಣದ ಗಂಟು ಸಿಕ್ಕ ಖುಶಿಯಲ್ಲಿ ಆ ಮನುಷ್ಯ ಸಂತೋಷದಿಂದ ಕುಣಿಯತೊಡಗಿದ.
ಇದನ್ನೆಲ್ಲ ಅಡಗಿಕೊಂಡು ನೋಡುತ್ತಿದ್ದ ನಸ್ರುದ್ದೀನ್ ಮನಸ್ಸಿನಲ್ಲೇ ಅಂದುಕೊಂಡ,
“ ಮನುಷ್ಯನ ದುಃಖವನ್ನು ನೀಗಿಸಲು ಇದೂ ಒಂದು ವಿಧಾನ”
Source -Osho, The Empty Boat

