ಅಪರಿಚಿತದ ಕುರಿತಾದ ಭಯ, ಪರಿಚಿತತೆ ಒದಗಿಸುವ ಸುರಕ್ಷತಾಭಾವ, ಅಪರಿಚಿತತೆಯಲ್ಲಿ ಎದುರಾಗುವ ಅನಿರೀಕ್ಷಿತತೆ, ಅಸುರಕ್ಷತೆ ಎಲ್ಲವೂ ಪ್ರೇಮದ ಯಾತನೆಗೆ ಕಾರಣಗಳು… | ಓಶೋ ರಜನೀಶ್; ಕನ್ನಡಕ್ಕೆ: ಚಿದಂಬರ ನರೇಂದ್ರ
ಪ್ರೇಮದ ದಾರಿ
ಒಳಗೊಳಗಿನ ವಾದ ವಿವಾದವಲ್ಲ.
ಇಲ್ಲಿ ಬಾಗಿಲು ಎಂದರೆ ಅನಾಹುತ.
ಆಕಾಶದಲ್ಲಿ ಹಕ್ಕಿಗಳು
ಅಪರೂಪದ ಬಿಡುಗಡೆಯ ವೃತ್ತಗಳನ್ನು
ಬರೆಯುತ್ತವೆ.
ಯಾವ ಶಾಲೆಯಲ್ಲಿ ಕಲಿಸುತ್ತಾರೆ
ಇದನ್ನೆಲ್ಲಾ?
ಅವು ಧೊಪ್ಪಂತ ಬೀಳುತ್ತವೆ
ಬೀಳುವಾಗಲೇ
ಅವುಗಳಿಗೆ ರೆಕ್ಕೆ ಮೂಡುತ್ತವೆ.
– ರೂಮಿ
******************
ಯಾಕೆ ಪ್ರೇಮ ಇಷ್ಟು ಯಾತನಾಮಯ?
ಪ್ರೇಮ ಯಾತನಾದಾಯಕ ಏಕೆಂದರೆ ಅದು ಆನಂದಕ್ಕೆ ದಾರಿಯೊಂದನ್ನು ಸಿದ್ಧಮಾಡುತ್ತಿರುತ್ತದೆ. ಪ್ರೇಮ ಯಾತನಾಮಯ ಏಕೆಂದರೆ ಅದು ಬದಲಾಯಿಸುತ್ತದೆ, ರೂಪಾಂತರಗೊಳಿಸುತ್ತದೆ.
ಪ್ರತಿಯೊಂದು ಬದಲಾವಣೆಯೂ ಯಾತನೆಯನ್ನು ಉಂಟುಮಾಡುವಂಥದು ಏಕೆಂದರೆ ಇಲ್ಲಿ ಹಳೆಯದನ್ನು ಬಿಟ್ಟು ಹೊಸದನ್ನು ಕಟ್ಟಿಕೊಳ್ಳಬೇಕಾಗಿರುತ್ತದೆ.
ನಮಗೆ ಹಳೆಯದು ಎಂದರೆ ಆಪ್ತ, ಪರಿಚಿತ, ಸುರಕ್ಷಿತ ಆದರೆ ಹೊಸದು ಸಂಪೂರ್ಣವಾಗಿ ಅಪರಿಚಿತ. ಹೊಸ ದಾರಿಯ ಯಾವ ನಕ್ಷೆಯೂ ನಮಗೆ ಲಭ್ಯವಿಲ್ಲ, ಹೆಜ್ಜೆ ಹೆಜ್ಜೆಗೂ ಸವಾಲುಗಳು ಎದುರಾಗುವ ಆತಂಕ. ಹೊಸದರ ಬಗ್ಗೆ ಮೈಂಡ್ ಉಪಯೋಗಕ್ಕೆ ಬಾರದು ಆದರೆ ಹಳೆಯದರ ವಿಷಯದಲ್ಲಿ ಮಾತ್ರ ಮೈಂಡ್ ಬಹಳ ಕೌಶಲ್ಯಪೂರ್ಣ.
ಹೊಸದರ ವಿಷಯದಲ್ಲಿ ಮೈಂಡ್ ಅನುಪಯೋಗಿ ಆಗಿರುವುದರಿಂದ ರಕ್ಷಣೆಗೆ ಯಾರೂ ಇಲ್ಲ, ಹಾಗಾಗಿ ಭಯದ ಹುಟ್ಟು. ಹಳೆಯದನ್ನು ಬಿಡುವುದೆಂದರೆ ಆರಾಮವನ್ನು ತ್ಯಜಿಸುವುದು, ಸವಲತ್ತುಗಳನ್ನು ಬಿಟ್ಟುಬಿಡುವುದು, ಸುರಕ್ಷತೆಯ ಜಗತ್ತನ್ನು ಬಿಡುವುದು, ಹಾಗಾಗಿ ಯಾತನೆಯ ಹುಟ್ಟು.
ಮಗು ತನ್ನ ತಾಯಿಯ ಗರ್ಭದಿಂದ ಹೊರಗೆ ಬಂದಾಗ ಅನುಭವಿಸುವ ಯಾತನೆಯಂಥದೇ ಇದೂ ಕೂಡ. ಮೊಟ್ಟೆಯೊಡೆದು ಹಕ್ಕಿ ಹೊರಬಂದಾಗ ಅನುಭವಿಸುವ ಯಾತನೆಯೂ ಈ ರೀತಿಯದೇ. ಮೊದಲ ಬಾರಿ ಹಕ್ಕಿ ತನ್ನ ರೆಕ್ಕೆಗಳ ಸಹಾಯದಿಂದ ಹಾರಲು ಪ್ರಯತ್ನಿಸುವಾಗ ಅನುಭವಿಸುವ ನೋವು ಕೂಡ ಇಂಥಹದೇ.
ಅಪರಿಚಿತದ ಕುರಿತಾದ ಭಯ, ಪರಿಚಿತತೆ ಒದಗಿಸುವ ಸುರಕ್ಷತಾಭಾವ, ಅಪರಿಚಿತತೆಯಲ್ಲಿ ಎದುರಾಗುವ ಅನಿರೀಕ್ಷಿತತೆ, ಅಸುರಕ್ಷತೆ ಎಲ್ಲವೂ ಪ್ರೇಮದ ಯಾತನೆಗೆ ಕಾರಣಗಳು.
ಪ್ರೇಮ ಬದಲಾವಣೆಯನ್ನು ಬಯಸುತ್ತದೆ, ಈ ಬದಲಾವಣೆ self ನಿಂದ no-self ನ ದಾರಿಯಲ್ಲಿ. ಇದು ಸಂಕಟದ ಹಾದಿ. ಆದರೆ ಸಂಕಟದ ಹೊರತಾಗಿ ಆನಂದ ಸಾಧ್ಯವಿಲ್ಲ. ಬಂಗಾರ ಶುದ್ಧವಾಗಬೇಕಾದರೆ ಅದು ಬೆಂಕಿಯನ್ನು ಹಾಯಲೇಬೇಕು.
ಒಂದು ದಿನ ಸುಝೂಕಿ ರೋಶಿ ಅವರ ಶಿಷ್ಯೆ, ಅವರ ಹತ್ತಿರ ಬಂದು ತನ್ನ ಮನಸ್ಸಿನ ತಳಮಳವನ್ನು ನಿವೇದಿಸಿಕೊಂಡಳು.
“ ಮಾಸ್ಟರ್, ಯಾಕೋ ಗೊತ್ತಿಲ್ಲ ನಿಮ್ಮ ಮೇಲೆ ನನಗೆ ವಿಪರೀತ ಪ್ರೇಮ ಉಕ್ಕಿ ಬರುತ್ತಿದೆ. ಕೂತಲ್ಲಿ, ನಿಂತಲ್ಲಿ ಸದಾ ನಿಮ್ಮ ಯೋಚನೆ. ಇದು ತಪ್ಪೋ ಸರಿಯೋ ಗೊತ್ತಿಲ್ಲ, ತುಂಬ ಗೊಂದಲವಾಗುತ್ತಿದೆ.”
ಮಾಸ್ಟರ್ ರೋಶಿ ಉತ್ತರಿಸಿದರು, “ ಹುಡುಗಿ, ಇದು ತಪ್ಪು ಒಪ್ಪಿನ ಪ್ರಶ್ನೆ ಅಲ್ಲ. ನಿನ್ನ ಗುರುವಿನ ಬಗ್ಗೆ ಯಾವ ಭಾವನೆ ಹೊಂದಲೂ ನೀನು ಸ್ವತಂತ್ರಳು. ಭಾವನೆಗಳನ್ನು ಹತ್ತಿಕ್ಕಬೇಡ, ಮುಕ್ತವಾಗಿ ವ್ಯಕ್ತಪಡಿಸು “
ಹುಡುಗಿ ಆಶ್ಚರ್ಯಚಕಿತಳಾಗಿ ಮಾಸ್ಟರ್ ರೋಶಿಯನ್ನೇ ನೋಡತೊಡಗಿದಳು “
ಮಾಸ್ಟರ್ ರೋಶಿ ಅವಳ ತಲೆ ಮೇಲೆ ಕೈಯಿಟ್ಟು ಹೇಳಿದರು.
“ ಹೆದರಬೇಡ ಹುಡುಗಿ, ನನ್ನ ಹತ್ತಿರ ಇಬ್ಬರಿಗೂ ಸಾಕಾಗುವಷ್ಟು ಶಿಸ್ತು ಇದೆ.”
The Secret
CHAPTER 2. A CHANCE TO POUR MY GRACE INTO YOU
Osho

