ದೇವರ ಹತ್ತಿರ, ಸತ್ಯದ ಬಳಿ ಯಾವ ವಕೀಲರೂ ಇಲ್ಲ. ಪ್ರೇಮದ ಪರವಾಗಿ ಯಾವ ವಾದವೂ ಇಲ್ಲ… ~ ಓಶೋ ರಜನೀಶ್; ಕನ್ನಡಕ್ಕೆ: ಚಿದಂಬರ ನರೇಂದ್ರ
ಯಾವಾಗಲೂ ನೆನಪಿನಲ್ಲಿರಲಿ, ಯಾವುದು ನಿಜವಾಗಿಯೂ ಅಪ್ಪಟ ಸತ್ಯವೋ ಅದು ಎಲ್ಲ ವಾದಗಳಿಂದ ಹೊರತಾದುದು. ಹಾಗೆಯೇ ಮಿಥ್ಯೆ ಎಲ್ಲ ವಾದಗಳನ್ನು ತನ್ನ ತೆಕ್ಕೆಯಲ್ಲಿ ತುಂಬಿಕೊಂಡಿರುತ್ತದೆ.
ಈ ಪ್ರಸಿದ್ಧ ಕಥೆಯನ್ನ ನೀವು ಕೇಳಿರಬಹುದು.
ಸ್ವರ್ಗ ಮತ್ತು ನರಕದ ನಡುವೆ ಒಂದು ದೊಡ್ಡ ಗೋಡೆಯಿತ್ತು ಮತ್ತು ಅದು ಅಲ್ಲಲ್ಲಿ ಶಿಥಿಲವಾಗಿತ್ತು. ಶತಮಾನಗಳಿಂದ ಗೋಡೆಯ ರಿಪೇರಿಯಾಗಿರಲಿಲ್ಲ. ಗೋಡೆಯನ್ನು ಹಾಳು ಮಾಡಿರುವುದು ನರಕದ ಜನ ಆದ್ದರಿಂದ ಸೈತಾನ ಗೋಡೆಯನ್ನು ರಿಪೇರಿ ಮಾಡಿಸಬೇಕು ಎಂದು ದೇವರು ಬಯಸಿದರೆ, ಅದು ಸ್ವರ್ಗದ ಜನರ ಕೆಲಸ, ದೇವರು ಗೋಡೆಯ ರಿಪೇರಿ ಮಾಡಿಸಬೇಕು ಎನ್ನುವುದು ಸೈತಾನನ ವಾದ. ಎಲ್ಲ ನೆರೆಹೊರೆಯವರ ಸಾಮಾನ್ಯ ಸಮಸ್ಯೆಯಿದು.
ಗೋಡೆ ರಿಪೇರಿ ಯಾರು ಮಾಡಿಸಬೇಕು ಎನ್ನುವುದರ ಕುರಿತು ದೇವರು ಮತ್ತು ಸೈತಾನನ ನಡುವೆ ಜೋರು ಜಗಳ ಶುರುವಾಗುತ್ತದೆ. ಮಾತಿನ ಭರದಲ್ಲಿ ದೇವರು, “ ಗೋಡೆ ರಿಪೇರಿಗೆ ನೀನು ಒಪ್ಪದಿದ್ದರೆ ನಿನ್ನ ಮೇಲೆ ಕೋರ್ಟಿನಲ್ಲಿ ಕೇಸ್ ಹಾಕುತ್ತೇನೆ” ಎಂದು ಬೆದರಿಕೆ ಹಾಕುತ್ತಾನೆ.
“ಎಲ್ಲಿ ಬೇಕಾದಲ್ಲಿ ಕೇಸ್ ಹಾಕು. ಆದರೆ ವಕೀಲರನ್ನು ಎಲ್ಲಿಂದ ತರುತ್ತೀಯಾ? ಎಲ್ಲ ವಕೀಲರು ನನ್ನ ನರಕದಲ್ಲಿದ್ದಾರೆ “ ಸೈತಾನ ಜೋರಾಗಿ ನಕ್ಕುಬಿಡುತ್ತಾನೆ.
ದೇವರ ಹತ್ತಿರ, ಸತ್ಯದ ಬಳಿ ಯಾವ ವಕೀಲರೂ ಇಲ್ಲ. ಪ್ರೇಮದ ಪರವಾಗಿ ಯಾವ ವಾದವೂ ಇಲ್ಲ. ಧ್ಯಾನದ ವಿಷಯವಾಗಿ ಜನರನ್ನು ಒಪ್ಪಿಸುವಂಥದ್ದು ಏನೂ ಇಲ್ಲ. ಮತ್ತು ಈ ಯಾವ ವಿಷಯದಲ್ಲಾದರೂ ಜನರನ್ನ ಒಪ್ಪಿಸಲು ನೀವು ಪ್ರಯತ್ನ ಮಾಡುತ್ತಿರುವುರಾದರೆ ನೀವು ಆಗಲೇ ತಪ್ಪು ದಾರಿಯಲ್ಲಿರುವಿರಿ.
ನಸ್ರುದ್ದೀನ್ ದಂಪತಿಗಳ ವಿವಾಹ ವಿಚ್ಛೇದನ ಕೇಸ್ ವಹಿಸಿಕೊಂಡಿದ್ದ ವಕೀಲ, ನಸ್ರುದ್ದೀನ್ ನ ಹೆಂಡತಿಯ ಜೊತೆ ಮೊದಲ ಸುತ್ತಿನ ಮಾತುಕತೆಯ ನಂತರ ನಸ್ರುದ್ದೀನ್ ನನ್ನು ಭೇಟಿಯಾಗಿ ವಿಷಯ ತಿಳಿಸಿದ,
“ ಇಬ್ಬರಿಗೂ ಅನ್ಯಾಯವಾಗದಂತೆ ಒಂದು ಒಪ್ಪಂದಕ್ಕೆ ಬರಲು ನಿನ್ನ ಹೆಂಡತಿಯನ್ನು ಒಪ್ಪಿಸುವಲ್ಲಿ ನಾನು ಯಶಸ್ವಿಯಾಗಿದ್ದೇನೆ “
“ ಇಬ್ಬರಿಗೂ ಅನ್ಯಾಯವಾಗದ ಹಾಗೆ ? ಹೀಗಾದರೆ ನಾನೇ ಒಪ್ಪಿಸುತ್ತಿದ್ದೆ ನನ್ನ ಹೆಂಡತಿಯನ್ನು, ನಿನಗೆ ಯಾಕೆ ಈ ಕೇಸ್ ಕೊಟ್ಟಿದ್ದು. “
ನಸ್ರುದ್ದೀನ್, ವಕೀಲನನ್ನು ತರಾಟೆಗೆ ತೆಗೆದುಕೊಂಡ.
-As told by Osho in Dharshan Dairy: The 99 Names of Nothingness

