ನೀವು ನಿಧಾನವಾಗಿ ಪ್ರಯಾಣ ಮಾಡುವಾಗ ನೀವು ನಿಮ್ಮೊಳಗೆ ಇರುವ ನಿಮ್ಮ ಗುರಿಯನ್ನು ಫೀಲ್ ಮಾಡಬಹುದು. ಆದರೆ ಅವಸರ ಮಾಡುತ್ತಿರುವಾಗ ನೀವು ಟೆನ್ಸ್ ಆಗಿರುತ್ತೀರಿ, ಆಗ ನಿಮ್ಮೊಳಗೇ ಇರುವ ನಿಮ್ಮ ಗುರಿ ನಿಮ್ಮ ಅನುಭವಕ್ಕೆ ಬರುವುದಿಲ್ಲ... |ಓಶೋ ರಜನೀಶ್; ಕನ್ನಡಕ್ಕೆ: ಚಿದಂಬರ ನರೇಂದ್ರ
ತಾವೋ ಮಾತಿಗೆ ನಿಲುಕುವುದಿಲ್ಲ
ಮಾತಿಗೆ ನಿಲುಕುವುದು ತಾವೋ ಅಲ್ಲ.
ಆದ್ದರಿಂದ ಸಂತನಿಗೆ,
ಮಾತಿನ ಹುಕಿಯಿಲ್ಲ,, ಮುಟ್ಟುವ ಬಯಕೆಯಿಲ್ಲ,
ಅಲೆಯುವ ಮನಸ್ಸಿಲ್ಲ, ಇರಿಯುವ ಛಲವಿಲ್ಲ.
ಅವನಿಗೆ
ಸಿಕ್ಕು ಬಿಡಿಸುವುದು ಇಷ್ಟ,
ಮೈ ಮನಸ್ಸು ಹದಗೊಳಿಸುವುದರಲ್ಲಿ ಆಸಕ್ತಿ,
ಧೂಳು ನೆಲೆಗೊಳಿಸುವಲ್ಲಿ ತನ್ಮಯತೆ
ಇದು ಸಹಜ ಸ್ಥಿತಿ.
ಆಗ
ಪ್ರೇಮ, ತಿರಸ್ಕಾರ ಕಾಡುವುದಿಲ್ಲ
ಲಾಭ, ನಷ್ಟ ಬಾಧಿಸುವುದಿಲ್ಲ
ಮಾನ, ಅಪಮಾನ ಆಟ ಆಡಿಸುವುದಿಲ್ಲ.
ಸತತವಾಗಿ ತನ್ನನ್ನು ತಾನು ಹಂಚಿಕೊಳ್ಳುವುದರಿಂದ
ತಾವೋ, ಸದಾ ಹೊಚ್ಚ ಹೊಸತು.
~ ಲಾವೋತ್ಸೇ
******************
ಒಮ್ಮೆ ಇಬ್ಬರು ಸನ್ಯಾಸಿಗಳು ಪ್ರಯಾಣ ಮಾಡುತ್ತಿದ್ದರು. ಅವರು ಒಂದು ನದಿಯನ್ನು ದೋಣಿಯಲ್ಲಿ ದಾಟಿ ಹೋಗುತ್ತಿರುವಾಗ, ದೋಣಿಯವ ಅವರನ್ನು ಎಚ್ಚರಿಸಿದ. “ಎಲ್ಲಿಗೆ ಹೋಗುತ್ತಿದ್ದೀರಿ? ಈ ಕಣಿವೆಯಾಚೆಯ ಶಹರಕ್ಕೆ ಹೋಗುತ್ತಿದ್ದೀರಾದರೆ ಸ್ವಲ್ಪ ನಿಧಾನವಾಗಿ ಹೋಗಿ”.
“ನಾವು ನಿಧಾನವಾಗಿ ಹೋದರೆ, ಶಹರವನ್ನು ಮುಟ್ಟುವುದು ಸಾಧ್ಯವಾಗಲಿಕ್ಕಿಲ್ಲ. ಸೂರ್ಯಾಸ್ತದ ನಂತರ ಶಹರದ ಮುಖ್ಯದ್ವಾರವನನ್ನ ಮುಚ್ಚಿಬಿಡುತ್ತಾರಂತೆ. ನಮಗೆ ಒಂದೆರಡು ಗಂಟೆ ಮಾತ್ರ ಉಳಿದಿದೆ ಮತ್ತು ಶಹರ ಇನ್ನೂ ಬಹಳ ದೂರ ಇದೆ. ತಡವಾಗಿ ಹೋಗಿಬಿಟ್ಟರೆ ನಾವು ಮುಖ್ಯದ್ವಾರದ ಹೊರಗೆ ಕಾಯಬೇಕಾಗುತ್ತದೆ. ಮತ್ತು ಆ ಜಾಗದಲ್ಲಿ ಕಾಡು ಮೃಗಗಳ ಭೀತಿ ಇದೆ. ಹಾಗಾಗಿ ನಾವು ಬೇಗ ಬೇಗ ಹೋಗಲೇಬೇಕು” ಸನ್ಯಾಸಿಗಳು ತಮ್ಮ ಸಮಸ್ಯೆ ಹೇಳಿಕೊಂಡರು.
“ಆದರೆ ಈ ಜಾಗದಲ್ಲಿ ನನ್ನ ಅನುಭವ ಏನೆಂದರೆ ಯಾರು ನಿಧಾನವಾಗಿ ಪ್ರಯಾಣ ಮಾಡುತ್ತಾರೋ ಅವರು ಸುರಕ್ಷಿತವಾಗಿ ಸರಿಯಾದ ಸಮಯಕ್ಕೆ ಶಹರ ತಲಪುತ್ತಾರೆ” ದೋಣಿಯವ ಮತ್ತೆ ಎಚ್ಚರಿಸಿದ. ದೋಣಿಯವನಿಗೆ ಈ ಜಾಗದ ಅನುಭವ ಇದೆ. ಅವ ಹೇಳುವ ಮಾತು ನಿಜ ಇರಬೇಕು ಎಂದುಕೊಂಡು ಯುವ ಸನ್ಯಾಸಿ ವಿಧಾನವಾಗಿ, ತನಗೆ ಎಲ್ಲೂ ಹೋಗುವುದು ಇಲ್ಲ ಎನ್ನುವಂತೆ ಸುತ್ತಲಿನ ವಾತಾವರಣವನ್ನು ಆನಂದಿಸುತ್ತ ನಡೆಯತೊಡಗಿದ.
ಆದರೆ ವಯಸ್ಸಾದ ಸನ್ಯಾಸಿ ದೋಣಿಯವನ ಮಾತು ಕೇಳಲಿಲ್ಲ. ಸನ್ಯಾಸಿ ತನ್ನ ಬೆನ್ನ ಮೇಲೆ ಶಾಸ್ತ್ರಗಳ ಹೊರೆಯನ್ನ ಹೊತ್ತುಕೊಂಡಿದ್ದ. ಎಲ್ಲಿ ಶಹರದ ಮುಖ್ಯದ್ವಾರ ಮುಚ್ಚಿಬಿಡುತ್ತಾರೋ ಎಂದು ಅವ ಓಡತೊಡಗಿದ. ರಸ್ತೆ ಕಠಿಣವಾಗಿದ್ದರಿಂದ ವಯಸ್ಸಾದ ಸನ್ಯಾಸಿ ಎಡವಿ ಬಿದ್ದು ಕಾಲು ಮುರಿದುಕೊಂಡ. ಅವನ ಕಾಲಿನಿಂದ ರಕ್ತ ಹರಿಯತೊಡಗಿತು. ಅವನ ಹಿಂದೆಯೇ ಬಂದ ದೋಣಿಯವ ಸನ್ಯಾಸಿಗೆ ಹೇಳಿದ, “ಈ ಜಾಗದ ಬಗ್ಗೆ ನಿಮಗೆ ಎಚ್ಚರಿಸಿದ್ದೆ. ಯಾರು ನಿಧಾನವಾಗಿ ನಡೆಯುತ್ತಾರೋ ಅವರು ತಲುಪುತ್ತಾರೆ. ಯಾರು ಅವಸರ ಮಾಡುತ್ತಾರೋ ಅವರು ಒಂದಿಲ್ಲ ಒಂದು ಕಡೆ ಎಡವಿ ಬೀಳುತ್ತಾರೆ. ಈ ಭಾಗದ ಪ್ರಯಾಣ ತುಂಬ ಅಪಾಯಕಾರಿ. ಈ ರಸ್ತೆ ತುಂಬ ಕಡಿದಾಗಿದೆ ಮತ್ತು ನೀವು ವಯಸ್ಸಾದ ಮನುಷ್ಯ, ನಿಮಗೆ ನಾನು ಎಚ್ಚರಿಸಿದ್ದೆ”.
ಇದು ಕೋರಿಯನ್ ಝೆನ್ ಕತೆ. ನಮ್ಮ ಬದುಕು ಕೂಡ ಹೀಗೆಯೇ. ನಿಧಾನವಾಗಿ, ಸಹನೆಯಿಂದ ಪ್ರಯಾಣ ಮಾಡಿ. ಅವಸರ ಮಾಡಬೇಡಿ, ಗುರಿ ಎಲ್ಲೋ ಹೊರಗೆ ದೂರ ಇಲ್ಲ, ಗುರಿ ಇರುವುದು ಒಳಗೆ ನಿಮ್ಮೊಳಗೆಯೇ.
ನೀವು ನಿಧಾನವಾಗಿ ಪ್ರಯಾಣ ಮಾಡುವಾಗ ನೀವು ನಿಮ್ಮೊಳಗೆ ಇರುವ ನಿಮ್ಮ ಗುರಿಯನ್ನು ಫೀಲ್ ಮಾಡಬಹುದು. ಆದರೆ ಅವಸರ ಮಾಡುತ್ತಿರುವಾಗ ನೀವು ಟೆನ್ಸ್ ಆಗಿರುತ್ತೀರಿ, ಆಗ ನಿಮ್ಮೊಳಗೇ ಇರುವ ನಿಮ್ಮ ಗುರಿ ನಿಮ್ಮ ಅನುಭವಕ್ಕೆ ಬರುವುದಿಲ್ಲ. ನೀವು ಎಲ್ಲೂ ಹೋಗದೇ ಇರುವಾಗ, ನಿಮ್ಮ ಗುರಿಯನ್ನು ಇನ್ನೂ ಹೆಚ್ಚು ಗಾಢವಾಗಿ ಅನುಭವಿಸಬಹುದು. ಎಲ್ಲಿ DOING ಇಲ್ಲವೋ ಅಲ್ಲಿ ನಿಮಗೆ ನಿಮ್ಮ BEING ನ ಅನುಭವವಾಗುತ್ತದೆ. ಯಾವಾಗ ನೀವು doing ನಲ್ಲಿ ಮುಳುಗಿಹೋಗಿಬಿಡುತ್ತೀರೋ, ಆಗ ನೀವು ನಿಮ್ಮ being ನ ಮರೆತುಬಿಡುತ್ತೀರಿ.
“ ನಸ್ರುದ್ದೀನ್, ನೀನು ದಿನಾ ಆಫೀಸ್ ಗೆ ಲೇಟ್ ಆಗಿ ಬರ್ತೀಯಾ. ಆಸೀಫ್ ಮನೆ ಇಲ್ಲಿಂದ 5 ಮೈಲಿ ದೂರ ಆದರೂ ಅವನು ಸರಿಯಾದ ಸಮಯಕ್ಕೆ ಆಫೀಸ್ ಗೆ ಬರ್ತಾನೆ, ನಿನ್ನ ಮನೆ ಪಕ್ಕದ್ದೇ ಆದರೂ ನೀನು ಪ್ರತಿದಿನ ಲೇಟ್. ಇದು ದೊಡ್ಡ ತಮಾಷೆ”
ನಸ್ರುದ್ದೀನ್ ನ ಬಾಸ್ ದಬಾಯಿಸುತ್ತಿದ್ದರು .
“ ಇದರಲ್ಲಿ ತಮಾಷೆ ಏನಿಲ್ಲ ಬಾಸ್. ಆಸೀಫ್ ಗೆ ಲೇಟ್ ಆದರೆ ಅವ ಓಡುತ್ತ ಆಫೀಸ್ ಗೆ ಬರಬಹುದು ಆದರೆ ನನಗೆ ಲೇಟ್ ಆದರೆ ನಾನು ಓಡಲು ಶುರು ಮಾಡುವಷ್ಟರಲ್ಲಿ ಆಫೀಸಿನಲ್ಲಿರುತ್ತೇನೆ. ನನ್ನ ಮನೆ ಪಕ್ಕದೇ. ಇದು ನನ್ನ ಡಿಸ್ಅಡ್ವಾಂಟೇಜ್, ನಾನೇನು ಮಾಡಲಿ? “
ನಸ್ರುದ್ದೀನ್, ತನ್ನ ಸಮಜಾಯಿಷಿ ನೀಡಿದ.

