ವಿವೇಚನೆ ಮುಖ್ಯ : ಥಾಮಸ್ ಎಡಿಸನ್ನನ ದೃಷ್ಟಾಂತ

ಅನಾಗರೀಕರ ಮಾತುಗಳು ಖಡ್ಗದಂತೆ ಇರಿಯುತ್ತವೆ ಆದರೆ ವಿವೇಕವಂತರ ನಾಲಿಗೆ ಎಲ್ಲ ನೋವಿಗೂ ಆರೈಕೆ ಮಾಡುತ್ತದೆ… । ಸಂಗ್ರಹಾನುವಾದ: ಚಿದಂಬರ ನರೇಂದ್ರ

ಒಂದು ದಿನ ಮಗು ಥಾಮಸ್ ಎಡಿಸನ್ ಶಾಲೆಯಲ್ಲಿ ಟೀಚರ್ ಕೊಟ್ಟ ಕಾಗದ ಹಿಡಿದುಕೊಂಡು ಮನೆ ಬಂದ, ತನ್ನ ತಾಯಿಗೆ ಆ ಕಾಗದ ಕೊಟ್ಟು ಹೇಳಿದ, “ಅಮ್ಮ ನನ್ನ ಟೀಚರ್ ನಿನಗೆ ಈ ಕಾಗದ ಕೊಟ್ಟಿದ್ದಾರೆ”. ಆ ಕಾಗದವನ್ನು ಓದುತ್ತಿದ್ದಂತೆಯೇ ಥಾಮಸ್ ನ ತಾಯಿಯ ಕಣ್ಣುಗಳಿಂದ ನೀರು ತುಂಬಿ ಹರಿಯತೊಡಗಿದವು.

“ಕಾಗದದಲ್ಲಿ ಏನು ಬರೆದಿದ್ದಾರೆ ಅಮ್ಮ, ಯಾಕೆ ಅಳ್ತಿದೀಯ?” ಮಗು ಥಾಮಸ್ ಪ್ರಶ್ನೆ ಮಾಡಿದಾಗ, ತಾಯಿ ಆ ಪತ್ರವನ್ನು ಥಾಮಸ್ ಗೆ ಓದಿ ಹೇಳಿದಳು.

“ನಿಮ್ಮ ಮಗ ಒಬ್ಬ ಜಿನೀಯಸ್. ಅವನಿಗೆ ಈ ಶಾಲೆ ತುಂಬ ಚಿಕ್ಕದು. ಅವನಿಗೆ ಪಾಠ ಹೇಳಬಲ್ಲ ಸರಿಯಾದ ಟೀಚರ್ಸ್ ಇಲ್ಲಿ ಇಲ್ಲ. ಅವನಿಗೆ ಬೇರೆ ಎಲ್ಲಾದರೂ ಪಾಠಕ್ಕೆ ವ್ಯವಸ್ಥೆ ಮಾಡಿ ಅಥವಾ ನೀವೇ ಅವನಿಗೆ ಪಾಠ ಹೇಳಿಕೊಡಿ”.

ಮುಂದೆ ಥಾಮಸ್ ನ ತಾಯಿಯೇ ಅತ್ಯಂತ ಶ್ರದ್ಧೆಯಿಂದ ಮಗನಿಗೆ ಪಾಠ ಹೇಳಿಕೊಟ್ಟಳು. ಮುಂದೆ ಎಷ್ಟೋ ದಿನಗಳ ನಂತರ ಥಾಮಸ್ ನ ತಾಯಿ ತೀರಿ ಹೋದಳು, ಅಷ್ಟೊತ್ತಿಗಾಗಲೇ ಥಾಮಸ್ ಪ್ರಸಿದ್ಧ ಸಂಶೋಧಕನೆಂದು ಜಗತ್ತಿನ ತುಂಬ ಹೆಸರುವಾಸಿಯಾಗಿದ್ದ. ಒಮ್ಮೆ ಥಾಮಸ್ ತನ್ನ ತಾಯಿಯ ವಸ್ತುಗಳನ್ನೆಲ್ಲ ತೆಗೆದಿಡುತ್ತಿದ್ದಾಗ, ಅವನ ಕಣ್ಣಿಗೆ ಚಿಕ್ಕಂದಿನಲ್ಲಿ ತಾನು ತಾಯಿಗೆ ಶಾಲೆಯಿಂದ ತಂದು ಕೊಟ್ಟಿದ್ದ ಪತ್ರ ಕಣ್ಣಿಗೆ ಬಿತ್ತು. ಥಾಮಸ್ ಕುತೂಹಲದಿಂದ ಆ ಪತ್ರವನ್ನು ತೆರೆದು ಓದಿದ. ಆ ಪತ್ರದಲ್ಲಿ ಹೀಗೆ ಬರೆದಿತ್ತು,

“ನಿಮ್ಮ ಮಗ ಮಾನಸಿಕವಾಗಿ ಬಹಳ ಹಿಂದುಳಿದಿದ್ದಾನೆ. ಅವನಿಗೆ ಇತರ ಮಕ್ಕಳ ಜೊತೆ ಪಾಠ ಕಲಿಯುವುದು ಸಾಧ್ಯವಾಗುತ್ತಿಲ್ಲ. ಇನ್ನು ಮುಂದು ಅವನು ನಮ್ಮ ಶಾಲೆಗೆ ಬರುವುದು ಬೇಡ. ಅವನಿಗೆ ನೀವೇ ಏನಾದರೂ ಬೇರೆ ವ್ಯವಸ್ಥೆ ಮಾಡಿ”.

ಅದನ್ನು ಓದಿ ಥಾಮಸ್ ನ ಕಣ್ಣು ತುಂಬಿ ಬಂತು. ತಾಯಿ ತನಗಾಗಿ ಮಾಡಿದ ತ್ಯಾಗ ಎಲ್ಲ ಅವನಿಗೆ ನೆನಪಾಗತೊಡಗಿತು. ಥಾಮಸ್ ಎಡಿಸನ್ ತನ್ನ ಡೈರಿಯಲ್ಲಿ ಹೀಗೆ ಬರೆದು ಇಟ್ಟುಕೊಂಡ, “ಥಾಮಸ್ ಎಂಬ ಬುದ್ಧಿ ಮಾಂದ್ಯ ಹುಡುಗ ಶತಮಾನದ ಜಿನೀಯಸ್ ಆಗಿರುವುದಕ್ಕೆ ಕಾರಣ ಅವನ ಹಿರೋ, ಅವನ ಅಮ್ಮ”.

ಅನಾಗರೀಕರ ಮಾತುಗಳು ಖಡ್ಗದಂತೆ ಇರಿಯುತ್ತವೆ ಆದರೆ ವಿವೇಕವಂತರ ನಾಲಿಗೆ ಎಲ್ಲ ನೋವಿಗೂ ಆರೈಕೆ ಮಾಡುತ್ತದೆ. ಅವನ ಟೀಚರ್ ಬರೆದ ಪತ್ರವನ್ನ ಅವನ ತಾಯಿ ಹಾಗೇ ಓದಿ ಹೇಳಿದ್ದರೆ ಮುಂದೆ ಏನಾಗುತ್ತಿತ್ತು? ಎಡಿಸನ್ ನಿಂದ ಆ ಎಲ್ಲ ಸಂಶೋಧನೆಗಳು ಸಾಧ್ಯವಾಗುತ್ತಿದ್ದವೆ? ಅವನ ತಾಯಿಯ ವಿವೇಕಕ್ಕೆ ಧನ್ಯವಾದಗಳು, ಆಕೆ ಥಾಮಸ್ ಗೆ ತನ್ನನ್ನು ಪರಿವರ್ತಿಸಿಕೊಳ್ಳುವ ಸಂದರ್ಭವನ್ನು ಸೃಷ್ಟಿ ಮಾಡಿಕೊಟ್ಟಳು. ಥಾಮಸ್ ನ ತಾಯಿಯ ವರ್ತನೆ ಎಲ್ಲ ತಂದೆ ತಾಯಂದಿರಿಗೂ , ಟೀಚರ್ಸ್ ಗಳಿಗೂ ಪಾಠವಾಗಲಿ. ಮಾತು ಹೇಗೆ ಮಕ್ಕಳ ಮನಸ್ಸಿನ ಮೇಲೆ ಪ್ರಭಾವ ಬೀರುತ್ತದೆ ಎನ್ನುವುದನ್ನ ಎಲ್ಲರೂ ಅರಿತುಕೊಳ್ಳಲಿ.


Source: Titus Durkwa David (FB) page

Unknown's avatar

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

Leave a Reply

This site uses Akismet to reduce spam. Learn how your comment data is processed.