ಭಾವದ್ರವ ಜೀವತುಂಬದೆ ಭಗವಂತ ಕಾಣುವನೇ? : ಅಧ್ಯಾತ್ಮ ಡೈರಿ

ಆಯಾ ಘಳಿಗೆಯ ಆತಂಕ ಹೊತ್ತು ಹಾರುವ ರೆಕ್ಕೆಯೂ ಆಗಬಾರದೇ? ದೇವರೆನ್ನುವ ನಂಬಿಕೆ?
ಅದೊಂದು ಭರವಸೆ. ಅದೊಂದು ನಿರುಮ್ಮಳ. ಅದೊಂದು ನೋವು, ಸಿಟ್ಟು, ಸೋಲು, ದುಃಖವನ್ನೆಲ್ಲ ಬೀಸಿ ಒಗೆಯಬಹುದಾದ ಗೋಡೆ ಕೂಡಾ! ~ ಚೇತನಾ ತೀರ್ಥಹಳ್ಳಿ

ಸೂರ್ಯ ಉರಿಯುತ್ತಿದ್ದಾನೆ. ಮಳೆರಾಯನ ಸುದ್ದಿ ಇಲ್ಲ! ಕಾವೇರಿ ಬತ್ತಿದ್ದಾಳೆ…
ಪ್ರತಿಯೊಂದಕ್ಕೂ ಲಿಂಗ ಹಚ್ಚುತ್ತೇವೆ, ರೂಢಿಯಂತೆ.
ಕೆಲವರು ಪ್ರಯತ್ನ ಮಾಡಿದ್ದುಂಟು; ಸೂರ್ಯದ ತಾಪಮಾನ, ಚಂದ್ರದ ಮೇಲೆ ಎಂದೆಲ್ಲಾ…
ವಿಜ್ಞಾನ ಹೌದು, ಹೃದಯಕ್ಕೆ ಸರಿಯೇ!?
ಭಾವ – ಬೆರಗಿಲ್ಲದ ಬದುಕು ಅದೆಷ್ಟು ಬರಡು!

ಪ್ರೀತಿಯೊಂದು ಹಾರ್ಮೋನಿನ ಹುಚ್ಚಾಟ.
ಪ್ರೀತಿ ದೈವಿಕ ಇತ್ಯಾದಿಯಲ್ಲ, ಅದೊಂದು ಶುದ್ಧ ಲೌಕಿಕ ಬಯಕೆಗೆ ಸಮಜಾಯಿಷಿ…
– ಈ ಅರಿವು ಕಣ್ಣೀರೊರೆಸಲು ಸೀಮಿತವಾದರೆ ಚೆನ್ನ. ಅಳವಡಿಸಿಕೊಂಡರೆ? ಅಂಥವರ ಪಾಲಿಗೆ ಬದುಕಿನುದ್ದಕ್ಕೂ ಪ್ರೀತಿ, ಬರೀ ಮರೀಚಿಕೆಯಷ್ಟೇ.

ವಾಸ್ತವವನ್ನು ಒಳಬಿಟ್ಟುಕೊಳ್ಳುವ ಗೆರೆ ಯಾವುದು?
ಆಪ್ತರು ತೀರಿಕೊಂಡಾಗ ನಾಲ್ಕು ಹನಿ ಕಣ್ಣೀರು ಉದುರಿಸುವಷ್ಟು,
ಪ್ರೀತಿಯ ಚುಂಬನ ಮೈಮರೆತು ಸವಿಯುವಷ್ಟು,
ಹಸಿದಾಗ ಹಸಿದು, ದಣಿವಾದಾಗ ದಣಿದು, ಕುಣಿಯುವಾಗ ಮನಸ್ಸು ಬಿಚ್ಚಿ ಕುಣಿಯುವಷ್ಟು.
ಎಲ್ಲವೂ ಕ್ಷಣಿಕ, ಮರುಕ್ಷಣವೂ ಅನೂಹ್ಯ – ಅನ್ನುವ ಸತ್ಯ ಹುಟ್ಟಿನ ಉದ್ದೇಶಕ್ಕೆ ಹೊರೆಯಾಗಬಾರದು. ವಾಸ್ತವದ ಗಂಟಿನ ಭಾರ ತಗ್ಗಿಸುವ ಹೆಗಲಾಗಬೇಕು. ಅಷ್ಟೇ.

ನೂರಾರು ಚಿತ್ರಗಳಲ್ಲಿ ಮೈದಳೆಯುವ ದೇವರು; ಅಥವಾ ನಿರಾಕಾರ ಪರಮ ಸತ್ಯವೆಂಬೋ ಭಗವಂತ; ಅಥವಾ ಪರಲೋಕದಲ್ಲಿರುವ ಪರಮ ಪಿತ…
ಇವರೆಲ್ಲ ಇದ್ದಾರೆನ್ನುವುದು ಬೆನ್ನು ಬಾಗಿಸುವ ಮೌಢ್ಯದ ಮೂಟೆಯಾಗಬಾರದು – ಸರಿ.
ಆಯಾ ಘಳಿಗೆಯ ಆತಂಕ ಹೊತ್ತು ಹಾರುವ ರೆಕ್ಕೆಯೂ ಆಗಬಾರದೇ? ದೇವರೆನ್ನುವ ನಂಬಿಕೆ?
ಅದೊಂದು ಭರವಸೆ. ಅದೊಂದು ನಿರುಮ್ಮಳ. ಅದೊಂದು ನೋವು, ಸಿಟ್ಟು, ಸೋಲು, ದುಃಖವನ್ನೆಲ್ಲ ಬೀಸಿ ಒಗೆಯಬಹುದಾದ ಗೋಡೆ ಕೂಡಾ!

ಹಾಗಾದರೆ
ನಿನ್ನ ದೇವರಿಗೆ ಮಳೆ ಬರಿಸಲು ಹೇಳು, ಹೊಳೆ ಹರಿಸಲು ಹೇಳು, ಬಡತನ ನೀಗಿಸಲು ಹೇಳು…
ಊಹು! ನನ್ನ ದೇವರು ನಿನ್ನ ಜೀತದಾಳೇ?
ದೇವರೆಂದರೆ ಈ ಎಲ್ಲವನ್ನು ಸಹಿಸುವ ಶಕ್ತಿ. ಹೀಗಾಗುವಲ್ಲಿ ನಮ್ಮ ಪಾತ್ರ ತಡೆಯುವ ನೀತಿ. ಹಸಿದವರಿಗೆ ಅನ್ನ ಕೊಡುವ ನಮ್ಮ ನಿಜಾಯಿತಿ.

ಸರಿಯೇ! ತೋರಿಸು ನಿನ್ನ ದೇವರನ್ನು!
ಕೆಲವರ ಹಟ.
ಬರಿದೇ ಕೊಡದಲ್ಲಿ ಚಂದ್ರನ್ನ ನೋಡಬಹುದೇ?
ಮೊದಲು ನೀರು ತುಂಬಬೇಕು, ಚಂದ್ರನೂ ತೋರುವನು.
ಭಾವದ್ರವ ಜೀವತುಂಬದೆ ಭಗವಂತನನ್ನು ಕಾಣಲಾಗದು.
ಇದು ನನ್ನ ಉತ್ತರ.

ಪ್ರೀತಿ ಇರಲಿ.
ನೀವು ತೋರುವ ಪ್ರೀತಿಯಲ್ಲಿ ಭಗವಂತ ಕಾಣುವನು.

Unknown's avatar

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

Leave a Reply

This site uses Akismet to reduce spam. Learn how your comment data is processed.