ಶರಣಾಗತಿ ಎಂದರೆ ಏನು? ಅದು ಹೇಗೆ ಸಾಧ್ಯವಾಗುತ್ತದೆ? ಅಹಂ ಎನ್ನುವುದು ಮಿಥ್ಯೆ ಎಂದು ಅರ್ಥಮಾಡಿಕೊಳ್ಳುವುದೇ ಶರಣಾಗತಿ. ಈ ತಿಳುವಳಿಕೆ ಪಕ್ಕಾ ಆದಾಗಲೇ ಅಹಂ ಆವಿಯಾಗಿಬಿಡುತ್ತದೆ, ಆಮೇಲೆ ಅದು ಎಲ್ಲೂ ಕಾಣಿಸಿಕೊಳ್ಳುವುದಿಲ್ಲ, ಆಗಲೇ ಶರಣಾಗತಿ ಸಂಪೂರ್ಣ ~ ಓಶೋ ರಜನೀಶ್ । ಕನ್ನಡಕ್ಕೆ: ಚಿದಂಬರ ನರೇಂದ್ರ
ಗೌತಮ ಬುದ್ಧನದು ಬಿಟ್ಟು ಕೊಡುವಿಕೆಯ ಹಾದಿ (way of let go). ಇದನ್ನ ವಿಲ್ ಪಾವರ್ ಇಂದ ಕಂಡುಕೊಳ್ಳುವುದಕ್ಕೆ ಆಗುವುದಿಲ್ಲ. ವಿಲ್ ಪಾವರ್ ಎನ್ನುವುದು ನಮ್ಮ ಅಹಂ ಗೆ ನಾವು ಕೊಟ್ಟುಕೊಂಡು ಸುಂದರ ಹೆಸರು ಅಷ್ಟೇ. ವಿಲ್ ನ ಅಸ್ತಿತ್ವ ಬೇರೇನೂ ಅಲ್ಲ ಅಹಂ ನ ಉಪ ಉತ್ಪನ್ನದ ಅಸ್ತಿತ್ವ. ಅಹಂ ತಾನೇ ಒಂದು ನೆರಳು ಹಾಗಾಗಿ ವಿಲ್ ಪಾವರ್ ಎನ್ನುವುದು ನೆರಳಿನ ನೆರಳು. ಸ್ವಂತದ ವಿಲ್ ಹೊಂದುವ ಐಡಿಯಾ ಎಂದರೇನೇ ಅದು ಅಸ್ತಿತ್ವಕ್ಕೆ ವಿರುದ್ಧವಾದದ್ದು. ಅದು ನಿಮ್ಮ ಮತ್ತು ಬಾಕಿ ಎಲ್ಲ ಸಮಸ್ತದ ನಡುವೆ ಬಿರುಕು ಸೃಷ್ಟಿ ಮಾಡುತ್ತದೆ. ಸಮಸ್ತಕ್ಕೆ ಒಂದು ವಿಲ್ ಇರುವಾಗ, ಅದರ ಭಾಗಕ್ಕೆ ಇನ್ನೊಂದು ವಿಲ್ ಇರುವುದು ಹೇಗೆ ಸಾಧು? ಭಾಗ ಗೆಲ್ಲುವುದು ಸಮಸ್ತದ ವಿರುದ್ದ ಅಲ್ಲ, ಸಮಸ್ತದ ಜೊತೆಯಾಗಿ. ಭಾಗ ಗೆಲ್ಲಬಹುದು ಆದರೆ ಗೆಲುವು ಸಾಧಿಸಿ ಅಲ್ಲ, ಶರಣಾಗತಿಯನ್ನ ಸಾಧಿಸಿ.
ಬುದ್ಧನ ದಾರಿ ಸಂಪೂರ್ಣ ಶರಣಾಗತಿಯ ದಾರಿ : ಧಮ್ಮ ಕ್ಕೆ, ತಾವೋ ಗೆ, ಪ್ರಕೃತಿಯ ನಿಯಮಗಳಿಗೆ, ದೈವಕ್ಕೆ ಸಂಪೂರ್ಣ ಶರಣಾಗತಿ. ಈ ಎಲ್ಲವೂ ಒಂದೇ ವಿದ್ಯಮಾನದ ಬೇರೆ ಬೇರೆ ಹೆಸರುಗಳು. ನಾನು ಬದುಕುತ್ತಿರುವುದು ಬ್ರಹ್ಮಾಂಡ ಎನ್ನುವ ವ್ಯವಸ್ಥೆಯಲ್ಲಿ, ಅವ್ಯವಸ್ಥೆ (chaos) ಯಲ್ಲಿ ಅಲ್ಲ. ಎಲ್ಲವೂ ಎಷ್ಟು ಪರಫೆಕ್ಟ್ ಆಗಿರಬೇಕೋ ಅಷ್ಟು ಪರಫೆಕ್ಟ್ ಆಗಿವೆ, ಇದನ್ನು ಇನ್ನೂ ಉತ್ತಮಪಡಿಸುವುದು ಸಾಧ್ಯವಿಲ್ಲ. ಇನ್ನೂ ಉತ್ತಮಪಡಿಸುವ ಐಡಿಯಾನೇ ಅತ್ಯಂತ ಮೂರ್ಖತನದ್ದು.
ಯಾರಿಗೆ ಗೊತ್ತಿದೆಯೋ ಅವರಿಗೆ ಮಾತ್ರ ಗೊತ್ತಿದೆ ಅಸ್ತಿತ್ವದ ಸಂಪೂರ್ಣ ಪರಿಪೂರ್ಣತೆಯ ಬಗ್ಗೆ.
ಈಗ ಬಾಕಿ ಉಳಿದಿರುವುದು ಏನು? ಸಮಸ್ತದೊಳಗೆ ಒಂದಾಗಿ ಸಂಭ್ರಮಿಸುವುದು. ಇದನ್ನು ನಿಮ್ಮ ಸಂಕಲ್ಪದ ಭಾಗವಾಗಿ ಸಾಧಿಸುವುದು ಸಾಧ್ಯವಿಲ್ಲ. ಏಕೆಂದರೆ ನೀವು ಸಂಕಲ್ಪ ಮಾಡಿದ್ದೀರೆಂದರೆ, ಆ ಸಂಕಲ್ಪದ ಹಿಂದೆ ಮಾರುವೇಷದಲ್ಲಿ ನೀವು ಇದ್ದೀರಿ. ನಿಮ್ಮ ಸಂಕಲ್ಪ ನಿಮ್ಮನ್ನು ಸಮಸ್ತದೊಂದಿಗೆ ಒಂದಾಗಲು ಬಿಡುವುದಿಲ್ಲ ಹೀಗೆ ಸಮಸ್ತಕ್ಕೆ ಶರಣಾಗುವುದು ಸರಿಯಾದ ಶರಣಾಗತಿ ಅಲ್ಲ.
ಹಾಗಾದರೆ ಶರಣಾಗತಿ ಎಂದರೆ ಏನು? ಅದು ಹೇಗೆ ಸಾಧ್ಯವಾಗುತ್ತದೆ? ಅಹಂ ಎನ್ನುವುದು ಮಿಥ್ಯೆ ಎಂದು ಅರ್ಥಮಾಡಿಕೊಳ್ಳುವುದೇ ಶರಣಾಗತಿ. ಈ ತಿಳುವಳಿಕೆ ಪಕ್ಕಾ ಆದಾಗಲೇ ಅಹಂ ಆವಿಯಾಗಿಬಿಡುತ್ತದೆ, ಆಮೇಲೆ ಅದು ಎಲ್ಲೂ ಕಾಣಿಸಿಕೊಳ್ಳುವುದಿಲ್ಲ, ಆಗಲೇ ಶರಣಾಗತಿ ಸಂಪೂರ್ಣ. ಶರಣಾಗತಿ ನಿಮ್ಮಿಂದ ಸಾಧ್ಯವಾಗಿಲ್ಲ, ಅದು ತನ್ನಿಂದ ತಾನೇ ಸಂಭವಿಸಿದೆ. ಆಗ ಮಾತ್ರ ಅದು ನಿಜವಾದದ್ದು, ಸಾಚಾ ಆದದ್ದು. ಆಗ ಆ ಶರಣಾಗತಿಗೆ ಅದ್ಭುತ ಸೌಂದರ್ಯ ಮತ್ತು ಅಪಾರ ಸಾಮರ್ಥ್ಯ ಲಭ್ಯವಾಗುತ್ತದೆ. ಏಕೆಂದರೆ ಈಗ ನೀವು ಸಮಸ್ತದ ವಾಹಕವಾಗಿ ರೂಪಗೊಂಡಿದ್ದೀರಿ. ಈಗ ನೀವು ಭಾಗ ಅಲ್ಲ, ಇಡೀ ಸಮಸ್ತವನ್ನು ಪ್ರತಿನಿಧಿಸುತ್ತಿದ್ದೀರಿ.
ನೀವು ಸಮುದ್ರದ ಅಲೆಗಳ ಹಾಗೆ, ಮತ್ತು ಅಲೆ ಎನ್ನುವುದು ತಾನೇ ಸ್ವತಃ ಸಮುದ್ರವಿದ್ದಂತೆ ! ಹೇಗೆ ಸಮುದ್ರದಲ್ಲಿ ಅಲೆ ಇದೆಯೋ ಹಾಗೆಯೇ ಅಲೆಯಲ್ಲಿ ಸಮುದ್ರವಿದೆ. ಆ ಎರಡನ್ನೂ ಬೇರ್ಪಡಿಸುವುದು ಸಾಧ್ಯವಿಲ್ಲ. ಅಲೆ, ಅನಭಿವ್ಯಕ್ತಿಯ ಅಭಿವ್ಯಕ್ತಿ, ಅನಿರ್ದಿಷ್ಟದ ನಿರ್ದಿಷ್ಟ ಭಾವ. ಹಾಗೆಯೇ ನೀವು ಕೇವಲ ಅಲೆ. ಯಾವ ಕ್ಷಣದಲ್ಲಿ ನೀವು ಬೇರೆ ಎಂದುಕೊಳ್ಳುತ್ತಿರೋ ಆಗ ಸಮಸ್ತದಿಂದ ಹೊರಗಾಗುತ್ತೀರಿ.
Source: Ōshō / The Dhammapada~ Volume 7, Chapter: 3

