ಲೇಬಲ್ ಗಳನ್ನು ಇಗ್ನೋರ್ ಮಾಡಿ

ನಿಮ್ಮ ಬೆನ್ನ ಹಿಂದೆ ನಿಮ್ಮನ್ನು ಡಿಫೆಂಡ್ ಮಾಡಿಕೊಳ್ಳುವ, ನಿಮ್ಮ ಸರಿ ತಪ್ಪುಗಳನ್ನ ತಿಳಿಸಿ ಹೇಳುವ, ನಿಮ್ಮನ್ನು ರಕ್ಷಣೆ ಮಾಡುವ, ನಿಜವಾಗಿಯೂ ನಿಮ್ಮ ಬಗ್ಗೆ  ಕೇರ್ ಮಾಡುವ ಗೆಳೆಯರು ನಿಮಗೆ ಇರದಿದ್ದರೆ, ನೀವು ಒಂಟಿಯಾಗಿರುವುದೇ ಲೇಸು… ~ ಸಂಗ್ರಹಾನುವಾದ: ಚಿದಂಬರ ನರೇಂದ್ರ

ಒಮ್ಮೆ ಒಂದು ಸ್ಕೂಲಿನಲ್ಲಿ ಒಬ್ಬ ಹುಡುಗನ ಬೆನ್ನ ಮೇಲೆ
I am stupid ಎನ್ನುವ ಬರಹ ಅಂಟಿಸಿದ ಕೆಲ ತುಂಟ ವಿದ್ಯಾರ್ಥಿಗಳು, ಅವನಿಗೆ ಈ ವಿಷಯ ಹೇಳದಂತೆ ಬಾಕಿ ಎಲ್ಲರಿಗೂ ತಾಕೀತು ಮಾಡಿದ್ದರು.  ಆ ಹುಡುಗನನ್ನು ನೋಡಿ ಎಲ್ಲರೂ ಮುಸಿಮುಸಿ ನಗುತ್ತಿದ್ದರೂ ಪಾಪ ಅವನಿಗೆ ಯಾಕೆ ಎನ್ನುವುದು ಗೊತ್ತೇ ಇರಲಿಲ್ಲ.

ಮಧ್ಯಾಹ್ನ ಮ್ಯಾಥ್ಸ್ ಕ್ಲಾಸ್ ಶುರುವಾಯಿತು. ಟೀಚರ್ ಗಣಿತದ ಒಂದು ಕಠಿಣ ಲೆಕ್ಕವನ್ನು ಬ್ಲ್ಯಾಕ್ ಬೋರ್ಡ್ ಮೇಲೆ ಬರೆದರು.

ಯಾವ ವಿದ್ಯಾರ್ಥಿಗೂ ಆ ಲೆಕ್ಕವನ್ನು ಬಿಡಿಸುವುದು ಗೊತ್ತಿರಲಿಲ್ಲ, I am stupid ಎಂದು ಬೆನ್ನ ಮೇಲೆ ಅಂಟಿಸಲಾಗಿದ್ದ ವಿದ್ಯಾರ್ಥಿಯನ್ನು ಹೊರತುಪಡಿಸಿ. ಮಕ್ಕಳೆಲ್ಲ ಕಿಸಿಕಿಸಿ ನಗುತ್ತಿರುವಾಗಲೇ ಆ ಹುಡುಗ ಎದ್ದು ಹೋಗಿ ಬೋರ್ಡ ಮೇಲೆ ಆ ಲೆಕ್ಕ ಬಿಡಿಸಿ ಉತ್ತರ ಬರೆದ.

ಟೀಚರ್ ಎಲ್ಲರಿಗೂ ಎದ್ದು ನಿಂತು ಚಪ್ಪಾಳೆ ಹೊಡೆಯುವಂತೆ ಆದೇಶಿಸಿದರು ಮತ್ತು ಆ ಹುಡುಗನ ಬೆನ್ನಿಗೆ ಅಂಟಿಸಲಾಗಿದ್ದ ಕಾಗದವನ್ನು ಕಿತ್ತು ಹಾಕಲು ಹೇಳಿದರು.

ಸರಿ ಉತ್ತರ ಬರೆದ ಹುಡುಗನನ್ನು ಹೊಗಳುತ್ತ ಇಡೀ ಕ್ಲಾಸ್ ನ ಉದ್ದೇಶಿಸಿ ಮಾತನಾಡುತ್ತ ಟೀಚರ್ ಹೀಗೆ ಹೇಳಿದರು ………

“ಬಹುಶಃ ಬೆನ್ನಿಗೆ ಅಂಟಿಸಲಾಗಿದ್ದ ಕಾಗದದ ಬಗ್ಗೆ ಈ ಹುಡುಗನಿಗೆ  ಗೊತ್ತಿರಲಿಕ್ಕಿಲ್ಲ. ನಿಮಗೆಲ್ಲ ಪನಿಶ್ಮೆಂಟ್ ಕೊಡುವುದಕ್ಕಿಂತ ಮೊದಲು ಎರಡು ವಿಷಯ ಹೇಳುತ್ತೇನೆ.

ಮೊದಲನೇಯದು,  ಬದುಕಿನುದ್ದಕ್ಕೂ ಜನ ನಿಮಗೆ ಯಾವುದಾದರೂ ಕೆಟ್ಟ ಲೇಬಲ್ ಅಂಟಿಸುತ್ತಲೇ ಇರುತ್ತಾರೆ, ನಿಮ್ಮ ಬೆಳವಣಿಗೆಗೆ ಅಡ್ಡಿಯುಂಟು ಮಾಡಲು. ಪಾಪ ಈ ಹುಡುಗನಿಗೆ ಅವನ ಬೆನ್ನ ಮೇಲೆ ಅಂಟಿಸಿದ ಕಾಗದದ ಬಗ್ಗೆ ಗೊತ್ತಿದ್ದರೆ, ಬಹುಶಃ ಅವನು ಎದ್ದು ಬಂದು ಬೋರ್ಡ್ ಮೇಲೆ ಲೆಕ್ಕ ಸಾಲ್ವ್ ಮಾಡುತ್ತಿರಲಿಲ್ಲ. ನೀವು ಮಾಡಬೇಕಾದದ್ದು ಏನೆಂದರೆ ಜನ ನಿಮಗೆ ಅಂಟಿಸುವ ಲೇಬಲ್ ಗಳನ್ನು ಇಗ್ನೋರ್ ಮಾಡುತ್ತ ನಿಮಗೆ ಸಿಗುವ ಎಲ್ಲ ಅವಕಾಶಗಳನ್ನು ಧೈರ್ಯದಿಂದ ಬಳಕೆ ಮಾಡುತ್ತ ನಿಮ್ಮನ್ನು ನೀವು ಇಂಪ್ರೂವ್ ಮಾಡಿಕೊಳ್ಳುತ್ತ ಹೋಗಬೇಕು.

ಮತ್ತು ಎರಡನೇಯದಾಗಿ, ಈ ಹುಡುಗನಿಗೆ ಅವನ ಬೆನ್ನ ಹಿಂದೆ ಅಂಟಿಸಲಾಗಿದ್ದ  ಕಾಗದದ ಬಗ್ಗೆ ತಿಳಿಸಿ ಹೇಳುವಂಥ ಯಾವ ಲಾಯಲ್ ಗೆಳೆಯರೂ ಇಲ್ಲ. ನಿಮಗೆ ಎಷ್ಟು ಗೆಳೆಯರಿದ್ದಾರೆ ಎನ್ನುವುದು ಮುಖ್ಯವಲ್ಲ, ಆ ಗೆಳೆಯರಲ್ಲಿ ಎಷ್ಟು ಜನ ನಿಮಗೆ ಲಾಯಲ್ ಆಗಿದ್ದಾರೆ ಎನ್ನುವುದಷ್ಟೇ ಮುಖ್ಯ.

ನಿಮ್ಮ ಬೆನ್ನ ಹಿಂದೆ ನಿಮ್ಮನ್ನು ಡಿಫೆಂಡ್ ಮಾಡಿಕೊಳ್ಳುವ, ನಿಮ್ಮ ಸರಿ ತಪ್ಪುಗಳನ್ನ ತಿಳಿಸಿ ಹೇಳುವ, ನಿಮ್ಮನ್ನು ರಕ್ಷಣೆ ಮಾಡುವ, ನಿಜವಾಗಿಯೂ ನಿಮ್ಮ ಬಗ್ಗೆ  ಕೇರ್ ಮಾಡುವ ಗೆಳೆಯರು ನಿಮಗೆ ಇರದಿದ್ದರೆ, ನೀವು ಒಂಟಿಯಾಗಿರುವುದೇ ಲೇಸು.

ಜನ ನಿಮಗೆ ಅಂಟಿಸುವ ಲೇಬಲ್ ಗಳನ್ನು ಇಗ್ನೋರ್ ಮಾಡುತ್ತ ಧೈರ್ಯದಿಂದ ಮುಂದೆ ಹೆಜ್ಜೆ ಹಾಕಿ.

Unknown's avatar

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

Leave a Reply

This site uses Akismet to reduce spam. Learn how your comment data is processed.