ಪ್ರೀತಿಗಾಗಿ ಬದುಕನ್ನ ತ್ಯಾಗ ಮಾಡುವುದು ಒಂದು ಸಾರ್ಥಕತೆ. ಆದರೆ ನಮಗೆ ಇದಕ್ಕೆ ವಿರುದ್ಧವಾದದ್ದನ್ನ ಕಲಿಸಲಾಗುತ್ತದೆ… ~ ಓಶೋ ರಜನೀಶ್; ಕನ್ನಡಕ್ಕೆ: ಚಿದಂಬರ ನರೇಂದ್ರ
ಪ್ರೀತಿ ಇರುವಾಗಲೆ ಬದುಕು ಸುಂದರವಾಗಿ ತೆರೆದುಕೊಳ್ಳುತ್ತದೆ. ಪ್ರೀತಿ ಬದುಕಿಗಿಂತಲೂ ದೊಡ್ಡದು. ಬದುಕನ್ನ ಪ್ರೀತಿಗಾಗಿ ತ್ಯಾಗ ಮಾಡಬಹುದು ಆದರೆ ಬದುಕಿಗಾಗಿ ಪ್ರೀತಿಯನ್ನ ತ್ಯಾಗ ಮಾಡುವುದು ಸಾಧ್ಯವಿಲ್ಲ.
ಲೆಸ್ಲಿ ವೆದರಹೆಡ್ ಎರಡನೇಯ ಮಹಾಯುದ್ಧದಲ್ಲಿ ನಡೆದ ಘಟನೆಯೊಂದರ ಬಗ್ಗೆ ಹೇಳುತ್ತಾರೆ.
ಇಬ್ಬರು ಸೈನಿಕರು ಅತ್ಯಂತ ಗಾಢ ಗೆಳೆಯರಾಗಿದ್ದರು. ಒಂದು ಸಂಜೆ ಒಬ್ಬ ಸೈನಿಕ ವಾಪಸ್ ತನ್ನ ಟೆಂಟ್ ಗೆ ಬಂದಾಗ ಅವನ ಗೆಳೆಯ ಇನ್ನೂ ಬಂದಿರುವುದಿಲ್ಲ. ಅಂದು ಯುದ್ಧಭೂಮಿಯಲ್ಲಿ ಬಹಳಷ್ಟು ಸೈನಿಕರ ಸಾವು ಸಂಭವಿಸಿರುತ್ತದೆ. ತನ್ನ ಗೆಳೆಯಲ್ಲಿ ಎಲ್ಲಿ ಸತ್ತುಹೋದನೋ ಎಂದು ಸೈನಿಕನಿಗೆ ಗಾಬರಿಯಾಗುತ್ತದೆ.
ಸೈನಿಕ ತನ್ನ ಗೆಳೆಯನ ಬಗ್ಗೆ ಬೇರೆ ಸೈನಿಕರನ್ನು ವಿಚಾರಿಸುತ್ತಾನೆ. ಒಬ್ಬ ಸೈನಿಕ ಹೇಳುತ್ತಾನೆ, “ನಾನು ನೋಡಿದೆ ಅವನನ್ನ. ಆತ ತುಂಬ ಗಾಯಗೊಂಡಿದ್ದ. ವಾಪಸ್ ಬರುವುದು ಅವನಿಗೆ ಅಸಾಧ್ಯವಾಗಿತ್ತು. ಬಹುತೇಕ ಇಷ್ಟು ಹೊತ್ತಿಗಾಗಲೇ ಅವನು ಸತ್ತು ಹೋಗಿರಬೇಕು”.
ಸುತ್ತ ಕತ್ತಲಾಗುತ್ತಿತ್ತು ಮತ್ತು ವೈರಿ ಸೈನಿಕರು ಇನ್ನೂ ಗುಂಡಿನಮಳೆಗರೆಯುತ್ತಿದ್ದರು. ಆದರೂ ಸೈನಿಕ ತನ್ನ ಗೆಳಯನನ್ನು ಹುಡುಕಿಕೊಂಡು ಯುದ್ಧಭೂಮಿಗೆ ಹೋಗಲು ನಿರ್ಧರಿಸಿದ. ಎಲ್ಲರೂ ಇದು ಮೂರ್ಖತನ ಎಂದರೂ ಸೈನಿಕ ಯಾರ ಮಾತೂ ಕೇಳದೆ ಯುದ್ಧಭೂಮಿಗೆ ಹೊರಟ.
ಯುದ್ಧ ಭೂಮಿಯಲ್ಲಿ ಸಾಲು ಸಾಲು ಹೆಣಗಳು ಬಿದ್ದಿದ್ದವು. ಕತ್ತಲಲ್ಲಿ ಗೆಳೆಯನನ್ನು ಹುಡುಕುವುದು ಕಷ್ಟವಾಗುತ್ತಿತ್ತು. ಮಧ್ಯರಾತ್ರಿಯ ವೇಳೆಗೆ ಅವನಿಗೆ ಗೆಳೆಯನ ದೇಹ ಸಿಕ್ಕಿತು. ತನ್ನ ಗೆಳೆಯನ ದೇಹವನ್ನು ಹೊತ್ತುಕೊಂಡು ಸೈನಿಕ ತನ್ನ ಟೆಂಟ್ ನತ್ತ ವಾಪಸ್ ಹೊರಟ. ಅಷ್ಟೋತ್ತಿಗಾಗಲೇ ವೈರಿ ಸೈನಿಕರ ಗುಂಡಿನದಾಳಿಯಲ್ಲಿ ಸೈನಿಕನೂ ತೀವ್ರವಾಗಿ ಗಾಯಗೊಂಡಿದ್ದ. ಆದರೂ ಅವನು ಧೃತಿಗೆಡದೆ ತನ್ನ ಗೆಳೆಯನ ದೇಹವನ್ನು ಹೊತ್ತುಕೊಂಡು ಟೆಂಟ್ ಗೆ ವಾಪಸ್ ಬಂದ. ಟೆಂಟ್ ಗೆ ಬರುತ್ತಲೇ ಗೆಳೆಯನ ದೇಹವನ್ನು ಕೆಳಗಿಳಿಸಿ ಸೈನಿಕ ತಾನೂ ಕುಸಿದುಬಿದ್ದ.
ಸೈನಿಕನನ್ನು ಈ ಸ್ಥಿತಿಯಲ್ಲಿ ನೋಡಿದ ಆಫೀಸರ್ ಹೇಳಿದ, “ ಈ ಸಮಯದಲ್ಲಿ ವಾರ್ ಫ್ರಂಟ್ ಗೆ ಹೋಗುವುದು ಮೂರ್ಖತನ ಎಂದು ನಾನು ಮೊದಲೇ ಹೇಳಿದ್ದೆ. ನಿನ್ನ ಗೆಳೆಯನಂತೂ ಸತ್ತೇ ಹೋಗಿದ್ದಾನೆ, ನೋಡು ಈಗ ನೀನೂ ಸಾಯುವ ಸ್ಥಿತಿ ತಲುಪಿದ್ದೀಯ”.
ತನ್ನ ಕಣ್ಣು ತೆರೆದು ಸೈನಿಕ ಮಾತನಾಡಿದ, “ ಆದರೆ ನಾನು ಯುದ್ಧಭೂಮಿಗೆ ಹೋಗಿದ್ದೂ ಸಾರ್ಥಕವಾಯಿತು. ಏಕೆಂದರೆ ನಾನು ನನ್ನ ಗೆಳೆಯನ ದೇಹದ ಹತ್ತಿರ ತಲುಪಿದಾಗ, ನನ್ನ ಗೆಳೆಯ ಕಣ್ಣು ತೆರೆದು ನನ್ನತ್ತ ನೋಡಿ, ಒಂದು ಮಾತು ಹೇಳಿದ, ನನಗೆ ಗೊತ್ತಿತ್ತು ಜಿಮ್ ನೀನು ಇಲ್ಲಿಗೆ ಬಂದೇ ಬರುತ್ತೀಯ ಎಂದು”.
ಪ್ರೀತಿಗಾಗಿ ಬದುಕನ್ನ ತ್ಯಾಗ ಮಾಡುವುದು ಒಂದು ಸಾರ್ಥಕತೆ. ಆದರೆ ನಮಗೆ ಇದಕ್ಕೆ ವಿರುದ್ಧವಾದದ್ದನ್ನ ಕಲಿಸಲಾಗುತ್ತದೆ. ಬದುಕಿಗಾಗಿ ಎಲ್ಲವನ್ನೂ ತ್ಯಾಗ ಮಾಡುವಂತೆ ಹೇಳಿಕೊಡಲಾಗುತ್ತದೆ. ಪ್ರೀತಿಯನ್ನು ಪಣಕ್ಕಿಟ್ಟು ಬದುಕನ್ನ ಉಳಿಸಿಕೊಳ್ಳುವುದು ನಿರರ್ಥಕ.

