ಕಾಫ್ಕಾ ಪ್ರತಿಬಾರಿ ಭೇಟಿಯಾದಾಗ ಹುಡುಗಿಗೆ ಹೊಸದೊಂದು ಪತ್ರ ಓದಿಹೇಳುತ್ತಿದ್ದ. ಗೊಂಬೆ ತಾನು ನೋಡಿದ ಹೊಸ ಜಗತ್ತಿನ ಕುರಿತು ಮತ್ತು ತನ್ನ ಹೊಸ ಹೊಸ ಅನುಭವಗಳ ಬಗ್ಗೆ, ಸಾಹಸಗಳ ಕುರಿತು ಹುಡುಗಿಗೆ ಇಷ್ಟವಾಗುವ ಭಾಷೆಯಲ್ಲಿ ಪತ್ರ ಬರೆದಿರುತ್ತಿತ್ತು…! ~ ಸಂಗ್ರಹಾನುವಾದ : ಚಿದಂಬರ ನರೇಂದ್ರ
ಒಮ್ಮೆ ಬರ್ಲಿನ್ ನ ಗಾರ್ಡನ್ ನಲ್ಲಿ ಓಡಾಡುತ್ತಿದ್ದಾಗ ನಲವತ್ತರ ಕಾಫ್ಕಾ ನ ಕಣ್ಣಿಗೆ ಒಂದೇ ಸವನೇ ಅಳುತ್ತಿದ್ದ ಒಬ್ಬ ಪುಟ್ಟ ಕಾಣಸಿಗುತ್ತಾಳೆ. ಹತ್ತಿರ ಹೋಗಿ ವಿಚಾರಿಸಿದಾಗ ಆ ಹುಡುಗಿಯ ಗೊಂಬೆ ಕಳೆದುಹೋಗಿರುತ್ತದೆ. ಕಾಫ್ಕಾ ತಾನೂ ಆ ಹುಡುಗಿಯೊಂದಿಗೆ ಗೊಂಬೆ ಹುಡುಕುವ ಕೆಲಸಕ್ಕೆ ಮುಂದಾಗುತ್ತಾನೆ ಆದರೆ ದುರದೃಷ್ಟವಶಾತ್ ಗೊಂಬೆ ಸಿಗುವುದೇ ಇಲ್ಲ.
ಮಗುವನ್ನ ಸಮಾಧಾನ ಮಾಡಿ ನಾಳೆ ತನ್ನನ್ನು ಇಲ್ಲಿಯೇ ಭೇಟಿಯಾಗುವಂತೆ ಹೇಳಿ ಕಾಫ್ಕಾ ಆ ಹುಡುಗಿಯನ್ನು ಬಿಳ್ಕೊಡುತ್ತಾನೆ. ಮರುದಿನ ಗಾರ್ಡನ್ ಲ್ಲಿ ಭೇಟಿಯಾದಾಗ ಕಾಫ್ಕಾ ಆ ಹುಡುಗಿಗೆ ಬೊಂಬೆ ಬರೆದ ಪತ್ರವೊಂದನ್ನು ನೀಡುತ್ತಾನೆ. “ಹುಡುಗಿ ದಯವಿಟ್ಟು ಅಳಬೇಡ, ನಾನು ಒಂದು ಪುಟ್ಟ ವರ್ಲ್ಡ್ ಟೂರ್ ಗೆ ಹೋಗಿದ್ದೇನೆ. ಆದಷ್ಟು ಬೇಗ ವಾಪಸ್ ಬರುತ್ತೇನೆ. ನಾನು ನಿನಗೆ ಆಗಾಗ ನನ್ನ ಸಾಹಸಗಳ ಕುರಿತು ಪತ್ರ ಬರೆಯುತ್ತೇನೆ”. ಎಂದು ಆ ಪತ್ರದಲ್ಲಿ ಬರೆದಿರುತ್ತದೆ.
ಗೊಂಬೆ ಮತ್ತು ಆ ಹುಡುಗಿಯ ನಡುವಿನ ಪತ್ರ ವ್ಯವಹಾರ ಕಾಫ್ಕಾ ಬದುಕಿರುವವರೆಗೂ ಮುಂದುವರೆಯಿತ್ತದೆ.
ಕಾಫ್ಕಾ ಪ್ರತಿಬಾರಿ ಭೇಟಿಯಾದಾಗ ಹುಡುಗಿಗೆ ಹೊಸದೊಂದು ಪತ್ರ ಓದಿಹೇಳುತ್ತಿದ್ದ. ಗೊಂಬೆ ತಾನು ನೋಡಿದ ಹೊಸ ಜಗತ್ತಿನ ಕುರಿತು ಮತ್ತು ತನ್ನ ಹೊಸ ಹೊಸ ಅನುಭವಗಳ ಬಗ್ಗೆ, ಸಾಹಸಗಳ ಕುರಿತು ಹುಡುಗಿಗೆ ಇಷ್ಟವಾಗುವ ಭಾಷೆಯಲ್ಲಿ ಪತ್ರ ಬರೆದಿರುತ್ತಿತ್ತು.
ಒಂದು ದಿನ ಕಾಫ್ಕಾ, ಒಂದು ಗೊಂಬೆ ತಂದು ಹುಡುಗಿಯ ಕೈಯಲ್ಲಿಟ್ಟ. ಗೊಂಬೆ ತನ್ನ ವರ್ಲ್ಡ್ ಟೂರ್ ಮುಗಿಸಿ ಬಂದಿದೆ ಎಂದು ಹೇಳಿದ. ಆದರೆ ಹುಡುಗಿ ಇದು ತನ್ನ ಗೊಂಬೆಯಲ್ಲ ಎಂದು ಹಟ ಹಿಡಿಯಿತು. ಆಗ ಕಾಫ್ಕಾ, ಗೊಂಬೆ ಬರೆದ ಪತ್ರವೊಂದನ್ನು ಹುಡುಗಿಯ ಕೈಯಲ್ಲಿಟ್ಟ. ಆ ಪತ್ರದಲ್ಲಿ ಗೊಂಬೆ ಹೀಗೆ ಬರೆದಿತ್ತು, “ಹುಡುಗಿ ನನ್ನ ನಂಬು. ನಾನೇ ನಿನ್ನ ಗೊಂಬೆ. ಪ್ರವಾಸ ನನ್ನನ್ನು ಬಹಳ ಬದಲಾಯಿಸಿಬಿಟ್ಟಿದೆ.” ಪತ್ರ ಓದಿ ಹುಡುಗಿಗೆ ಬಹಳ ಖುಶಿಯಾಯಿತು. ಹುಡುಗಿ ಗೊಂಬೆಯನ್ನು ತೆಗೆದುಕೊಂಡು ಸಂತೋಷದಿಂದ ತನ್ನ ಮನೆಗೆ ಹೊರಟು ಹೋದಳು.
ನಂತರ ಒಂದು ವರ್ಷದ ಅಂತರದಲ್ಲಿ ಕಾಫ್ಕಾ ತೀರಿಕೊಂಡ. ಎಷ್ಟೋ ವರ್ಷಗಳ ನಂತರ ಆ ಹುಡುಗಿ ಬೆಳೆದು ದೊಡ್ಡವಳಾಗಿ ಕಾಲೇಜಿಗೆ ಹೋಗುತ್ತಿದ್ದಾಗ, ಆ ಗೊಂಬೆಯಲ್ಲಿ ಇದ್ದ ಒಂದು ಸಣ್ಣ ಚೀಟಿ ಹುಡುಗಿಯ ಕಣ್ಣಿಗೆ ಬಿತ್ತು. ಹುಡುಗಿ ಆ ಚೀಟಿ ಬಿಚ್ಚಿ ಓದಿದಳು. ಆ ಚೀಟಿಯಲ್ಲಿ ಹೀಗೆ ಬರೆಯಲಾಗಿತ್ತು.
“ಮುದ್ದಿನ ಹುಡುಗಿ, ಬಹುಶಃ ನೀನು ಪ್ರೀತಿಸುವ ಎಲ್ಲವನ್ನೂ ನೀನು ಕಳೆದುಕೊಳ್ಳಬಹುದು. ಆದರೆ, ಪ್ರೀತಿ ನಿನ್ನನ್ನು ಹುಡುಕಿಕೊಂಡು ಇನ್ನೊಂದು ವೇಷದಲ್ಲಿ ಬರುತ್ತದೆ”.
ಆ ಚೀಟಿಯಲ್ಲಿ ಹೀಗೆ ಬರೆದು ಕಾಫ್ಕಾ ತನ್ನ ಸಹಿ ಹಾಕಿದ್ದ.

