ಕೆಲವು ಸಲ ನಿಮ್ಮ ಬದುಕಿನ ಬಗ್ಗೆ ನಿಮಗೆ ತೃಪ್ತಿ ಇರುವುದಿಲ್ಲ ಆದರೆ ಅದೇ ಸಮಯದಲ್ಲಿ ಜಗತ್ತಿನ ಎಷ್ಟೋ ಜನ ನಿಮ್ಮ ಥರ ಬದುಕ ಬೇಕೆಂದು ಕನಸು ಕಾಣುತ್ತಿರುತ್ತಾರೆ ಗೊತ್ತಾ? ~ ಸಂಗ್ರಹಾನುವಾದ: ಚಿದಂಬರ ನರೇಂದ್ರ
ವಿಂಬಲ್ಡನ್ ದಂತಕಥೆ ಆರ್ಥರ್ ಆ್ಯಶ್, ಏಡ್ಸ್ ಕಾರಣವಾಗಿ ಸಾವಿನ ಹಾಸಿಗೆಯಲ್ಲಿದ್ದ. 1983 ರಲ್ಲಿ ಅವನಿಗೆ ಹೃದಯದ ಶಸ್ತ್ರ ಚಿಕಿತ್ಸೆ ಮಾಡಿದಾಗ ನಡೆದ ರಕ್ತ ಬದಲಾವಣೆಯ ಅವಘಡದಲ್ಲಿ ಈ ಮಾರಣಾಂತಿಕ ಕಾಯಿಲೆ ಅವನಿಗೆ ತಗುಲಿಕೊಂಡಿತ್ತು. ಅವನು ಕಾಯಿಲೆಯಿಂದ ಬಳಲುತ್ತಿದ್ದಾಗ, ಜಗತ್ತಿನಾದ್ಯಂತದ ಅಸಂಖ್ಯಾತ ಅಭಿಮಾನಿಗಳು ಅವನಿಗೆ ಮೆಸೇಜ್ ಮಾಡುತ್ತಿದ್ದರು. ಅವುಗಳಲ್ಲಿ ಒಂದು ಮೆಸೇಜ್ ಹೀಗಿತ್ತು…..
“ದೇವರು ನಿನ್ನನ್ನೇ ಯಾಕೆ ಈ ಕಾಯಿಲೆಗೆ ಆಯ್ಕೆ ಮಾಡಿದ?”
ಆರ್ಥರ್ ಆ್ಯಶ್ ಈ ಮೆಸೇಜ್ ಗೆ ಕೊಟ್ಟ ಉತ್ತರ ಹೀಗಿತ್ತು.
* 50 ಮಿಲಿಯನ್ ಮಕ್ಕಳು ಟೆನಿಸ್ ಆಡಲು ಶುರು ಮಾಡುತ್ತಾರೆ.
* 5 ಮಿಲಿಯನ್ ಜನ ಟೆನಿಸ್ ಕಲಿಯುತ್ತಾರೆ.
* 5 ಲಕ್ಷ ಜನ ಪ್ರೊಫೆಷನಲ್ ಟೆನಿಸ್ ಆಡಲು ಶುರು ಮಾಡುತ್ತಾರೆ.
* 50 ಸಾವಿರ ಜನ ದೊಡ್ಡ ದೊಡ್ಡ ಸರ್ಕೀಟ್ ಗಳಲ್ಲಿ ಆಡುತ್ತಾರೆ.
* 5 ಸಾವಿರ ಜನ ಗ್ರ್ಯಾಂಡ್ ಸ್ಲ್ಯಾಮ್ ಟೆನಿಸ್ ಆಡುತ್ತಾರೆ.
* 50 ಜನ ವಿಂಬಲ್ಡನ್ ಆಡುತ್ತಾರೆ.
* 4 ಜನ ವಿಂಬಲ್ಡನ್ ಸೆಮಿ ಫೈನಲ್ ತಲುಪುತ್ತಾರೆ.
* ಇಬ್ಬರಿಗೆ ಫೈನಲ್ ಆಡುವ ಅವಕಾಶ ಇರುತ್ತದೆ.
ವಿಂಬಲ್ಡನ್ ಫೈನಲ್ ಲ್ಲಿ ಗೆದ್ದು ಟ್ರೊಫಿ ಹಿಡಿದಾಗ ನಾನು ದೇವರನ್ನು ಕೇಳಲಿಲ್ಲ
“ನಾನೇ ಯಾಕೆ?”
ಖುಶಿ …….. ನಿಮ್ಮನ್ನು ಮಧುರವಾಗಿಸುತ್ತದೆ.
ಪರೀಕ್ಷೆ …….. ನಿಮ್ಮನ್ನು ಗಟ್ಟಿಯಾಗಿಸುತ್ತದೆ.
ದುಃಖ …….. ನಿಮ್ಮನ್ನು ಮಾನವೀಯರನ್ನಾಗಿಸುತ್ತದೆ.
ಸೋಲು ……. ನಿಮ್ಮನ್ನ ವಿನಯವಂತರನ್ನಾಗಿಸುತ್ತದೆ.
ಗೆಲುವು …….. ನಿಮ್ಮನ್ನು ಪ್ರಕಾಶಮಾನವಾಗಿಸುತ್ತದೆ
ಆದರೆ ಕೇವಲ ವಿಶ್ವಾಸ ಮಾತ್ರ ನಿಮ್ಮನ್ನು ಕೈ ಹಿಡಿದು ಮುನ್ನಡೆಸುತ್ತದೆ.
ಕೆಲವು ಸಲ ನಿಮ್ಮ ಬದುಕಿನ ಬಗ್ಗೆ ನಿಮಗೆ ತೃಪ್ತಿ ಇರುವುದಿಲ್ಲ ಆದರೆ ಅದೇ ಸಮಯದಲ್ಲಿ ಜಗತ್ತಿನ ಎಷ್ಟೋ ಜನ ನಿಮ್ಮ ಥರ ಬದುಕ ಬೇಕೆಂದು ಕನಸು ಕಾಣುತ್ತಿರುತ್ತಾರೆ.
ಹೊಲದಲ್ಲಿ ಆಟ ಆಡುತ್ತಿರುವ ಮಗು ಆಕಾಶದಲ್ಲಿ ಹಾರುತ್ತಿರುವ ವಿಮಾನ ನೋಡಿ ತಾನು ಪೈಲೆಟ್ ಆಗಬೇಕು ಎಂದು ಕನಸು ಕಾಣುತ್ತಿದ್ದರೆ. ಆ ವಿಮಾನದ ಪೈಲೆಟ್ ಗೆ ಕೆಳಗೆ ಕಾಣುತ್ತಿರುವ ಹೊಲ ಮನೆ ನೋಡಿ ತನ್ನ ಪರಿವಾರದ ನೆನಪಾಗಿ ತನ್ನ ಮನೆಗೆ ತೆರಳಲು ಹಾತೊರೆಯುತ್ತಾನೆ.
ಇದು ಬದುಕು ! ನಿಮ್ಮ ಬದುಕನ್ನ ಆನಂದಿಸಿ.
ಸಂಪತ್ತೇ ಖುಷಿಯ ಕಾರಣವಾಗಿದ್ದರೆ, ಎಲ್ಲ ಶ್ರೀಮಂತರು ರಸ್ತೆಯ ಮೇಲೆ ಕುಣಿದಾಡಬೇಕಿತ್ತು.
ಆದರೆ ಬಡ ಮಕ್ಕಳು ಮಾತ್ರ ಹಾಗೆ ಮಾಡುತ್ತಾರೆ.
ಅಧಿಕಾರ, ರಕ್ಷಣೆಯನ್ನು ಖಾತ್ರಿ ಮಾಡುತ್ತದೆ ಎಂದಾದರೆ ಅಧಿಕಾರಸ್ತರೆಲ್ಲ ಬಾಡಿಗಾರ್ಡ ಗಳಿಲ್ಲದೆ ಓಡಾಡಬೇಕಿತ್ತು.
ಆದರೆ ಸೀದಾ ಸಾದಾ ಜನ ಮಾತ್ರ ರಸ್ತೆಯಲ್ಲಿ ನಿರ್ಭಯವಾಗಿ ಓಡಾಡುತ್ತಾರೆ, ರಾತ್ರಿ ನಿಶ್ಚಿಂತೆಯಿಂದ ಮಲಗುತ್ತಾರೆ.
ಸೌಂದರ್ಯ ಮತ್ತು ಪ್ರಸಿದ್ಧಿ ಮಾತ್ರ ಒಂದು ಆದರ್ಶ ಸಂಬಂಧಕ್ಕೆ ಕಾರಣ ಎನ್ನುವುದಾದರೆ, ಎಲ್ಲ ಸೆಲೆಬ್ರಿಟಿಗಳ ಮದುವೆಯೂ ಇದಕ್ಕೆ ಉದಾಹರಣೆಯಾಗಿರಬೇಕಿತ್ತು.
ಆದರೆ ಬಡ ಪ್ರೇಮಿಗಳ ಸಂಬಂಧದಲ್ಲಿ ಅನ್ಯೋನ್ಯತೆಯನ್ನು ಕಾಣಬಹುದು.
ಸರಳವಾಗಿ ಬದುಕಿ, ಖುಷಿಯಿಂದ ಬಾಳಿ, ವಿನಯವಂತರಾಗಿ ಮುನ್ನಡೆಯಿರಿ, ಪ್ರಾಮಾಣಿಕವಾಗಿ ಪ್ರೀತಿ ಮಾಡಿ.

