ಕ್ವಾಂಟಿಟಿಗಿಂತ ಕ್ವಾಲಿಟಿ ಮುಖ್ಯ ಎನ್ನುವುದು ಗೆಳೆತನದ ವಿಷಯದಲ್ಲಂತೂ ಪರಮಸತ್ಯ! ~ ಸಂಗ್ರಹಾನುವಾದ: ಚಿದಂಬರ ನರೇಂದ್ರ
ಹರೆಯದ ಹುಡುಗಿಯೊಬ್ಬಳು ತನ್ನ ತಾಯಿಯನ್ನ ಪ್ರಶ್ನೆ ಮಾಡಿದಳು,
“ಬದುಕಿನಲ್ಲಿ ನಿಜವಾಗಿಯೂ ನನಗೆ ಗೆಳೆಯರ ಅವಶ್ಯಕತೆ ಇದೆಯಾ?”
ತಾಯಿ ಉತ್ತರಿಸಿದಳು,
“ಹೌದು, ಬದುಕಿನ ದಾರಿ ತೀರ ಕಠಿಣವಾದದ್ದು. ನಿನ್ನ ಜೊತೆ ನಿನ್ನ ಮಾತುಗಳನ್ನ ಗಂಟೆಗಟ್ಟಲೆ ಕೇಳಿಸಿಕೊಳ್ಳಬಲ್ಲ, ಯಾವುದಕ್ಕೂ ನಿನ್ನ ಜಡ್ಜ್ ಮಾಡದ ; ಅವರ ಹೆಗಲ ಮೇಲೆ ನೀನು ಅಳುವುದು ಸಾಧ್ಯವಾಗಬಲ್ಲ, ನಿನಗೆ ಭಾವನಾತ್ಮಕ ಸಹಕಾರ ಕೊಡುವ ಯಾರಾದರೊಬ್ಬರು ಇರಲೇಬೇಕು. ಯಾರೂ ನಿನ್ನ ಜೊತೆ ಇರದಿರುವಾಗ ಯಾರಾದರೊಬ್ಬರು ನಿನ್ನ ಪಕ್ಕ ಇರಲೇಬೇಕು. ನಿನ್ನ ಸುಖದ ದುಃಖದ ಸಂಗತಿಗಳನ್ನು ಹಂಚಿಕೊಳ್ಳಲು ಗೆಳೆಯರ ಅವಶ್ಯಕತೆ ಖಂಡಿತ ಇದೆ.”
ಮಗಳು ಮತ್ತೆ ಪ್ರಶ್ನೆ ಮಾಡಿದಳು,
“ಫೇಕ್ ಗೆಳೆಯರು ವೈರಿಗಳಿಗಿಂತ ಅಪಾಯಕಾರಿಯಂತೆ ನಿಜವಾ?”
ತಾಯಿ ಮತ್ತೆ ಉತ್ತರಿಸಿದಳು,
“ಹೌದು, ಏಕೆಂದರೆ ನಿನ್ನ ವೈರಿ ಯಾರೆಂಬುದು ನಿನಗೆ ಗೊತ್ತಿರುತ್ತದೆ ಮತ್ತು ನೀನು ಅವರನ್ನು ಹತ್ತಿರ ಬಿಟ್ಟುಕೊಳ್ಳುವುದಿಲ್ಲ. ಆದರೆ ಫೇಕ್ ಫ್ರೆಂಡ್ಸ್ ಗೆಳೆತನದ ನಾಟಕ ಮಾಡುತ್ತಿರುವಾಗಲೇ ನೀನು ಅವರ ಮೇಲೆ ವಿಶ್ವಾಸವನ್ನು ಇಟ್ಟಿರುತ್ತಿ. ಅವರು ನಿನ್ನ ದೌರ್ಬಲ್ಯಗಳು, ನಿನ್ನ ರಹಸ್ಯಗಳು ಮತ್ತು ನಿನ್ನ ಕನಸುಗಳನ್ನು ಗೊತ್ತು ಮಾಡಿಕೊಳ್ಳುತ್ತಾರೆ. ನಿನ್ನ ಕಂಟ್ರೋಲ್ ಮಾಡಲು ಯಾವ ಬಟನ್ ಒತ್ತಬೇಕು, ನಿನ್ನ ಇರಿಯಲು ಯಾವ ಜಾಗ ಸೂಕ್ತ ಎನ್ನುವುದು ಅವರಿಗೆ ಗೊತ್ತಿರುತ್ತದೆ.”
“ಹಾಗಾಗರೆ ಫೇಕ್ ಫ್ರೆಂಡ್ಸ್ ಗಳಿಂದ ಸುತ್ತುವರೆಯದಿರುವುದು ಹೇಗೆ?”
“ಸಣ್ಣ ಗಾರ್ಡನ್ ಮತ್ತು ದೊಡ್ಡ ಕಾಡು ಯಾವುದರಲ್ಲಿ ಹೆಚ್ಚು ವಿಷಕಾರಿ ಹಾವು ಚೇಳುಗಳಿರುತ್ತವೆ?”
“ಖಂಡಿತ ದೊಡ್ಡ ಕಾಡಿನಲ್ಲಿ”
ತಾಯಿ ಮುಗುಳ್ನಗುತ್ತ ತನ್ನ ಮಾತು ಮುಂದುವರೆಸಿದಳು,
“ಗುಡ್! ಯಾವಾಗ ನಿನ್ನ ಗೆಳೆಯರ ವಲಯ ಗಾರ್ಡನ್ ನಷ್ಟು ಪುಟ್ಟದಾಗಿರುತ್ತದೋ, ಮಧುರವಾಗಿರುತ್ತದೋ ಆಗ ನೀನು ಹಾವು, ಚೇಳುಗಳ ಬಗ್ಗೆ ಚಿಂತೆ ಮಾಡಬೇಕಿಲ್ಲ, ಇಲಿಗಳ ಬಗ್ಗೆ ಕೂಡ. ಎಷ್ಟು ಕಡಿಮೆ ಜನ ನಿನ್ನ ಸುತ್ತುವರೆದಿರುತ್ತಾರೋ ಅಷ್ಟು ಕಡಿಮೆ ಸಮಸ್ಯೆಗಳನ್ನು ನೀನು ಎದುರಿಸಬೇಕಾಗುತ್ತದೆ. ನನಗೂ ಚಿಕ್ಕವಳಾಗಿದ್ದಾಗ ಬಹಳಷ್ಟು ಜನ ಗೆಳೆಯರಿದ್ದರು, ಆದರೆ ವಯಸ್ಸಾಗುತ್ತ ಹೋದಂತೆ, ಅನುಭವ ಹೆಚ್ಚಾಗುತ್ತ ಹೋದಂತೆ ನನ್ನ ಫ್ರೆಂಡ್ ಸರ್ಕಲ್ ನ ಟ್ರಿಮ್ ಮಾಡಿಕೊಳ್ಳುತ್ತ ಹೋದೆ, ಕ್ವಾಂಟಿಟಿಗಿಂತ ಕ್ವಾಲಿಟಿ ಮುಖ್ಯ ಎನ್ನುವುದು ಗೆಳೆತನದ ವಿಷಯದಲ್ಲಂತೂ ಪರಮಸತ್ಯ. ಪ್ರತಿಯೊಬ್ಬರೂ ನಿನ್ನ ಗೆಳೆಯರೇ ಎನ್ನುವ ಭ್ರಮೆಯಲ್ಲಿ ಇರಬೇಡ. ನಿನ್ನ ವ್ಯವಹಾರ ಸಾಕಷ್ಟು ಜನರೊಡನೆ ಇರಬಹುದು ಆದರೆ ನೀನು ಪ್ರೀತಿಸುವ, ನಂಬುವ ಕೆಳೆಯರು ಕೆಲವರು ಮಾತ್ರ. ಆದ್ದರಿಂದ ನಿನ್ನ ಫ್ರೆಂಡ್ ಸರ್ಕಲ್ ಬಗ್ಗೆ ಸದಾ ಮೈಂಡಫುಲ್ ಆಗಿರು”

