ಸರಿಯಾದ ಜಾಗಕ್ಕೆ ಹೋದರೆ ಮಾತ್ರ ವ್ಯಕ್ತಿಯ ಅಥವಾ ವಸ್ತುವಿನ ಸರಿಯಾದ ಬೆಲೆಯನ್ನ ಜನ ಗುರುತಿಸುತ್ತಾರೆ… ~ ಸಂಗ್ರಹಾನುವಾದ : ಚಿದಂಬರ ನರೇಂದ್ರ
ಅಪ್ಪ, ಮಗಳಿಗೆ ಹೇಳಿದರು, “ನೀನು ಈಗ ಪದವಿಧರೆ, ಪರೀಕ್ಷೆಯಲ್ಲಿ ನೀನು ಮೂರು ಗೋಲ್ಡ್ ಮೆಡಲ್ ಗೆದ್ದಿರುವೆ. ನನ್ನದೊಂದು ಹಳೆಯ ಕಾರ್ ಇದೆ. ಹಲವು ವರ್ಷಗಳ ಹಿಂದೆ ಕೊಂಡಿದ್ದೆ. ನೀನು ಅದನ್ನ ಯೂಸ್ಡ್ ಕಾರ್ ಮಾರಾಟ ಮಾಡುವ ಜಾಗಕ್ಕೆ ತೆಗೆದುಕೊಂಡು ಹೋಗಿ ವಿಚಾರಿಸು, ಆ ಕಾರ್ ಗೆ ಅವರು ಎಷ್ಟು ಬೆಲೆ ಕೊಡುತ್ತಾರೆ ಬಂದು ಹೇಳು”.
ಯೂಸ್ಡ್ ಕಾರ್ ಮಾರಾಟ ಮಾಡುವ ಜಾಗಕ್ಕೆ ಹೋಗಿ ಬಂದ ಮಗಳು ತಂದೆಗೆ ವರದಿ ಒಪ್ಪಿಸಿದಳು, “ ಅಪ್ಪಾ, ಅವರು 1000 ಡಾಲರ್ ಕೊಡಲು ಒಪ್ಪಿದರು. ಕಾರ್ ಬಹಳ ಹಳೆಯದಂತೆ, ಕೆಲವು ಭಾಗಗಳು ಕೆಟ್ಟು ಹೋಗಿವೆಯಂತೆ”.
ಆಮೇಲೆ ಅಪ್ಪ, ಆ ಕಾರನ್ನ ಗಿರವಿ ಅಂಗಡಿಗೆ ತೆಗೆದುಕೊಂಡು ಹೋಗಿ ಅವರು ಅದಕ್ಕೆ ಕಟ್ಟುವ ಬೆಲೆಯನ್ನು ಕೇಳಿಕೊಂಡು ಬರುವಂತೆ ಮಗಳಿಗೆ ಹೇಳಿದರು. ಗಿರವಿ ಅಂಗಡಿಗೆ ಹೋಗಿ ಬಂದ ಮಗಳು ಅಪ್ಪನಿಗೆ ಹೇಳಿದಳು, “ಅಪ್ಪ ಈ ಕಾರ್ ನ ಈಗ ಯಾರೂ ತೆಗೆದುಕೊಳ್ಳುವುದಿಲ್ಲವಂತೆ ಬಹಳ ಹಳೆಯ ಕಾರು. ಕಷ್ಟಪಟ್ಟು 250 ಡಾಲರ್ ಕೊಡಬಹುದು ಅಂತ ಹೇಳಿದರು”.
ನಂತರ ಅಪ್ಪ, ಆ ಕಾರನ್ನ ಕಾರ್ ಕ್ಲಬ್ ಗೆ ತೆಗೆದುಕೊಂಡುಹೋಗಿ ಬೆಲೆ ವಿಚಾರಿಸುವಂತೆ ಮಗಳಿಗೆ ಹೇಳಿದರು. ಕಾರ್ ಕ್ಲಬ್ ಗೆ ಹೋಗಿ ಬಂದ ಮಗಳು, ಕಾರ್ ಕ್ಲಬ್ ನಲ್ಲಿ ನಡೆದ ಮಾತುಕತೆಯನ್ನ ಅಪ್ಪನಿಗೆ ಹೇಳಿದಳು, “ ಅಪ್ಪ, ಕ್ಲಬ್ ನ ಕೆಲವರು ಈ ಕಾರ್ ಗೆ 1 ಲಕ್ಷ ಡಾಲರ್ ಕೊಡಲು ಮುಂದಾದರು. ಇದು Holden Torana ಕಾರ್, ಬಹಳಷ್ಟು ಕಾರ್ ಕಲೆಕ್ಟರ್ಸ್ ಈ ಕಾರನ್ನ ಹುಡುಕುತ್ತಿರುತ್ತಾರಂತೆ. ಇದು ಆ ಕಾಲದ ಐಕಾನಿಕ್ ಕಾರ್ ಅಂತೆ”.
ಅಪ್ಪ, ಮಗಳಿಗೆ ಹೇಳಿದರು, “ನೋಡು ಮಗಳೇ, ಸರಿಯಾದ ಜಾಗಕ್ಕೆ ಹೋದರೆ ಮಾತ್ರ ವ್ಯಕ್ತಿಯ ಅಥವಾ ವಸ್ತುವಿನ ಸರಿಯಾದ ಬೆಲೆಯನ್ನ ಜನ ಗುರುತಿಸುತ್ತಾರೆ. ಜನ ನಿನ್ನ ಮೌಲ್ಯವನ್ನು ಗುರುತಿಸಲಿಲ್ಲ ಎಂದರೆ ಸಿಟ್ಟಿಗೇಳಬೇಡ, ಇದರ ಅರ್ಥ ನೀನು ಸರಿಯಾದ ಜಾಗದಲ್ಲಿ ಇಲ್ಲ ಅಂತ ಅಷ್ಟೇ. ನಿನಗೆ ಗೌರವ ಇಲ್ಲದ ಜಾಗದಲ್ಲಿ ಯಾವತ್ತೂ ಇರಬೇಡ.”.

