ನಾವು ಮೌಲ್ಯವಂತರಾಗಿರೋದು ಮುಖ್ಯ

ಕೆಲವೊಮ್ಮೆ ನಾವು ವೈಯಕ್ತಿಕ ಬದುಕಿನಲ್ಲಿ ತಪ್ಪು ನಿರ್ಧಾರ ಮಾಡುತ್ತೇವೆ, ಕೆಟ್ಟ ಸಂದರ್ಭಗಳೊಂದಿಗೆ ವ್ಯವಹಾರ ಮಾಡುತ್ತೇವೆ. ನಾವು ಯಾರಿಗೂ ತೊಂದರೆ ಮಾಡಿಲ್ಲವಾದರೂ ಈ ತಪ್ಪು ನಿರ್ಧಾರಗಳಿಂದಾಗಿ ಜನ ನಮ್ಮನ್ನು ಒಪ್ಪಲಿಕ್ಕಿಲ್ಲ ಎಂದು ಕುಸಿದು ಹೋಗಿರುತ್ತೇವೆ. ಆದರೆ ನಾವು ನಿಜವಾಗಿಯೂ ಮೌಲ್ಯವಂತರಾಗಿದ್ದರೆ ಈ ಯಾವುದೂ ನಮ್ಮ ಮೌಲ್ಯವನ್ನು ಕಡಿಮೆ ಮಾಡುವುದಿಲ್ಲ… ~ ಸಂಗ್ರಹಾನುವಾದ : ಚಿದಂಬರ ನರೇಂದ್ರ

ಅದು ಒಂದು ಇನ್ನೂರು ಜನ ಸೇರಿದ ಸಭೆ. ಅಲ್ಲಿ ಒಬ್ಬ ಪ್ರಸಿದ್ಧ ಭಾಷಣಕಾರರು ಭಾಷಣ ಮಾಡುವವರಿದ್ದರು. ವೇದಿಕೆಯ ಮೇಲೆ ಏರಿದ ಭಾಷಣಕಾರರು ತಮ್ಮ ಕೈಯಲ್ಲಿ ಹಿಡಿದುಕೊಂಡಿದ್ದ 100 ಡಾಲರ್ ನ ನೋಟು ಎತ್ತಿ ಹಿಡಿದು ಸಭೆಯನ್ನು ಪ್ರಶ್ನೆ ಮಾಡಿದರು,

“ಯಾರಿಗೆ ಬೇಕು ಈ 100 ಡಾಲರ್ ನೋಟು?”

ಸಭೆಯಲ್ಲಿದ್ದ 200 ಜನ ಕೂಡ ತಮಗೆ ಆ ನೋಟು ಬೇಕೆಂದು ಕೈ ಎತ್ತಿದರು.

“ಖಂಡಿತ ನಿಮ್ಮಲ್ಲಿ ಒಬ್ಬರಿಗೆ ಈ ನೋಟು ಕೊಡುತ್ತೇನೆ, ಆದರೆ ಒಂದು ನಿಮಿಷ” ಎನ್ನುತ್ತ ಭಾಷಣಕಾರರು ಆ ನೋಟನ್ನು ಮಡಚಿ ಮುದ್ದೆ ಮಾಡಿದರು. ಮತ್ತೆ ಆ ನೋಟನ್ನು ಎತ್ತಿ ಹಿಡಿದು ಸಭೆಯನ್ನು ಪ್ರಶ್ನಿಸಿದರು.

“ಈಗ ಹೇಳಿ ಯಾರಿಗೆ ಬೇಕು ಈ ನೋಟು?”

ಮತ್ತೆ ಸಭೆಯಲ್ಲಿದ್ದ ಎಲ್ಲರೂ ಆ ನೋಟು ತಮಗೆ ಬೇಕೆಂದು ಕೈ ಮೇಲಕ್ಕೆತ್ತಿದರು

“ಇರಿ ಸ್ವಲ್ಪ” ಎನ್ನುತ್ತ ಭಾಷಣಕಾರರು ಆ ನೋಟನ್ನು ನೆಲದ ಮೇಲೆ ಬಿಸಾಕಿ ತಮ್ಮ ಚಪ್ಪಲಿಯಿಂದ ತುಳಿದು ಗಲೀಜು ಮಾಡಿದರು. ಮತ್ತೆ ಆ ನೋಟನ್ನು ಮೇಲಕ್ಕೆ ಎತ್ತಿ ಹಿಡಿದು ಸಭೆಯನ್ನು ಪ್ರಶ್ನೆ ಮಾಡಿದರು.

“ ಆಗ ಹೇಳಿ ಈ ನೋಟನ್ನು ಸ್ವೀಕರಿಸಲು ಯಾರು ಸಿದ್ಧರಿದ್ದೀರ”

ಮತ್ತೆ ಸಭೆಯಲ್ಲಿದ್ದ 200 ಜನರು ತಾವು ನೋಟನ್ನ ಸ್ವೀಕರಿಸಲು ಸಿದ್ಧ ಎಂದು ಕೈ ಮೇಲಕ್ಕೆತ್ತಿದರು.

ನಂತರ ಭಾಷಣಕಾರರು ಮಾತನಾಡಿದರು.

“ಗೆಳೆಯರೇ, ಇಲ್ಲೊಂದು ಬಹಳ ಮುಖ್ಯವಾದ ಪಾಠವಿದೆ. ನಾನು ಈ 100 ಡಾಲರ್ ನೋಟಿನೊಂದಿಗೆ ಏನೇ ಕೆಟ್ಟ ವ್ಯವಹಾರ ಮಾಡಿದರೂ, ಈ ನೋಟಿಗೆ ಏನೇ ಅಪಮಾನ ಮಾಡಿದರೂ ನೀವು ಆ ನೋಟನ್ನು ಸ್ವೀಕರಿಸಲು ಸಿದ್ಧರಾಗಿದ್ದಿರಿ, ಏಕೆಂದರೆ ನಾನು ಮಾಡಿದ ಯಾವುದೂ ಆ ನೋಟಿನ ಮೌಲ್ಯವನ್ನು ಕಡಿಮೆ ಮಾಡಲಿಲ್ಲ. ನಮ್ಮ ಬದುಕಿನಲ್ಲಿಯೂ ಹೀಗೇ ಆಗುತ್ತದೆ. ಕೆಲವೊಮ್ಮೆ ನಾವು ವೈಯಕ್ತಿಕ ಬದುಕಿನಲ್ಲಿ ತಪ್ಪು ನಿರ್ಧಾರ ಮಾಡುತ್ತೇವೆ, ಕೆಟ್ಟ ಸಂದರ್ಭಗಳೊಂದಿಗೆ ವ್ಯವಹಾರ ಮಾಡುತ್ತೇವೆ. ನಾವು ಯಾರಿಗೂ ತೊಂದರೆ ಮಾಡಿಲ್ಲವಾದರೂ ಈ ತಪ್ಪು ನಿರ್ಧಾರಗಳಿಂದಾಗಿ ಜನ ನಮ್ಮನ್ನು ಒಪ್ಪಲಿಕ್ಕಿಲ್ಲ ಎಂದು ಕುಸಿದು ಹೋಗಿರುತ್ತೇವೆ. ಆದರೆ ನಾವು ನಿಜವಾಗಿಯೂ ಮೌಲ್ಯವಂತರಾಗಿದ್ದರೆ ಈ ಯಾವುದೂ ನಮ್ಮ ಮೌಲ್ಯವನ್ನು ಕಡಿಮೆ ಮಾಡುವುದಿಲ್ಲ. ಇದನ್ನು ಮರೆಯಬೇಡಿ. ಮತ್ತೆ ತಲೆ ಎತ್ತಿ ಬದುಕುತ್ತ ಧೈರ್ಯದಿಂದ ಬಾಳಿ”.

Unknown's avatar

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

Leave a Reply

This site uses Akismet to reduce spam. Learn how your comment data is processed.