ದುಃಖದಲ್ಲಿದ್ದ ಮಗಳಿಗೆ ಅಪ್ಪ ಮಾಡಿದ ಸರಳ ಪಾಠ… ~ ಸಂಗ್ರಹಾನುವಾದ: ಚಿದಂಬರ ನರೇಂದ್ರ
ಒಂದು ದಿನ ಮಗಳು, ಅಪ್ಪನ ಎದುರು ತನ್ನ ದುಃಖ ತೋಡಿಕೊಂಡಳು, “ನನ್ನ ಬದುಕು ಅತ್ಯಂತ ಯಾತನಾಮಯವಾಗಿದೆ, ನನಗೆ ಗೊತ್ತಾಗುತ್ತಿಲ್ಲ ಈ ಬದುಕನ್ನ ಹೇಗೆ ಕಳೆಯುವುದು?” ಬದುಕಿನ ಜೊತೆಗಿನ ಸಂಘರ್ಷ ಅವಳನ್ನು ಸೋಲಿಸಿಬಿಟ್ಟಿತ್ತು. ಒಂದಾದಮೇಲೊಂದರಂತೆ ಕಷ್ಟಗಳು ಅವಳನ್ನು ಸುತ್ತಿಕೊಳ್ಳುತ್ತಿದ್ದವು.
ಶೆಫ್ (ಬಾಣಸಿಗ) ಆಗಿದ್ದ ಅವಳ ಅಪ್ಪ, ಮಗಳನ್ನು ಅಡುಗೆ ಮನೆಗೆ ಕರೆದುಕೊಂಡು ಹೋಗಿ, ಮೂರು ನೀರಿನ ಪಾತ್ರೆಗಳನ್ನ ಒಲೆಯ ಮೇಲಿಟ್ಟ. ನೀರು ಕುದಿಯಲು ಶುರುವಾದ ಮೇಲೆ ಒಂದು ಪಾತ್ರೆಯಲ್ಲಿ ಆಲೂಗಡ್ಡೆ ಹಾಕಿದ, ಇನ್ನೊಂದರಲ್ಲಿ ಮೊಟ್ಟೆ ಹಾಕಿದ ಮತ್ತು ಮೂರನೇಯ ಪಾತ್ರೆಯಲ್ಲಿ ಯಾವುದೋ ಗ್ರೈಂಡ್ ಮಾಡಿದ ಬೀಜಗಳ ಪುಡಿಯನ್ನ. ಮೂರು ಪಾತ್ರೆಗಳನ್ನು ಮತ್ತಷ್ಟು ಕಾಯಲು ಬಿಟ್ಟ. ಅಪ್ಪ ಏನು ಮಾಡುತ್ತಿದ್ದಾನೆ ಎನ್ನುವುದನ್ನ ಮಗಳು ಕುತೂಹಲದಿಂದ ನೋಡುತ್ತಿದ್ದಳು.
ಇಪ್ಪತ್ತು ನಿಮಿಷಗಳ ನಂತರ ಒಲೆಯನ್ನ ಆಫ್ ಮಾಡಿ, ಅಪ್ಪ ಆಲೂಗಡ್ಡೆಯನ್ನು ಹೊರತೆದು ಒಂದು ಪ್ಲೇಟ್ ನಲ್ಲಿ ಇಟ್ಟ, ಇನ್ನೊಂದು ಪ್ಲೇಟಿನಲ್ಲಿ ಮೊಟ್ಟೆ ಹೊರತೆಗೆದು ಇಟ್ಟ. ಮೂರನೇ ಪಾತ್ರೆಯೊಳಗಿನ ದ್ರಾವಣವನ್ನು ಒಂದು ಕಪ್ ನಲ್ಲಿ ಹಾಕಿಟ್ಟ.
“ಮಗಳೇ ನೀನು ಏನು ನೋಡುತ್ತಿದ್ದೀಯ ಈಗ?” ಅಪ್ಪ ಮಗಳನ್ನ ಪ್ರಶ್ನೆ ಮಾಡಿದ. “ಆಲೂಗಡ್ಡೆ, ಮೊಟ್ಟೆ ಮತ್ತು ಕಪ್ಪು ನೀರು ” ಮಗಳು ಉತ್ತರಿಸಿದಳು.
“ಹತ್ತಿರದಿಂದ ನೋಡು, ಟಚ್ ಮಾಡು” ಅಪ್ಪ ಮಗಳಿಗೆ ಹೇಳಿದ. ಮಗಳು ಮುಟ್ಟಿ ನೋಡಿದಳು, ಆಲೂಗಡ್ಡೆ ಬೆಂದು ಮೆತ್ತಗಾಗಿತ್ತು. ನಂತರ ಮಗಳು ಮೊಟ್ಟೆಯನ್ನು ಮುಟ್ಟಿ ನೋಡಿದಳು. ಮೊಟ್ಟೆಯ ಶೆಲ್ ಬಿಚ್ಚಿದಾಗ ಅಲ್ಲಿ ಅವಳಿಗೆ ಗಟ್ಟಿಯಾದ ಬಾಯಿಲ್ಡ್ ಎಗ್ ಕಾಣಿಸಿತು. ಮೂರನೇ ಕಪ್ ನಲ್ಲಿದ್ದ ದ್ರಾವಣ ಕುಡಿಯುವಂತೆ ಅಪ್ಪ ಮಗಳಿಗೆ ಹೇಳಿದ. “ಓಹ್ ಕಾಫೀ! “ ಮಗಳು ಕಣ್ಣರಳಿಸಿದಳು.
“ಈ ಎಲ್ಲದರ ಅರ್ಥ ಏನು?” ಮಗಳು ಅಪ್ಪನನ್ನು ಕೇಳಿದಳು. ಅಪ್ಪ ವಿವರಿಸತೊಡಗಿದ.
“ಆಲೂಗಡ್ಡೆ, ಮೊಟ್ಟೆ ಮತ್ತು ಕಾಫೀ ಬೀಜಗಳು ಮೂರು ಕೂಡ ಒಂದು ರೀತಿಯ ಕುದಿಯುವ ಬಿಸಿ ನೀರನ್ನು ಅನುಭವಿಸಿದವು. ಮೂರರ ಕಷ್ಟ ಕೂಡ ಒಂದೇ ಆಗಿತ್ತು. ಆದರೆ ಗಟ್ಟಿಯಾಗಿದ್ದ ಆಲೂಗಡ್ಡೆ ಮೆತ್ತಗಾಗಿ ಹೊರಗೆ ಬಂತು. ಅದು ತನ್ನ ಗಟ್ಟಿತನವನ್ನ ಕಳೆದುಕೊಂಡಿತು. ಮುಟ್ಟಿದರೆ ಒಡೆಯುವಂತಿದ್ದ ಮೊಟ್ಟೆ ಬಿಸಿನೀರಿನೊಳಗೆ ಬೆಂದು ಗಟ್ಟಿಯಾಗಿ ಹೊರಗೆಬಂತು. ಆದರೆ ಗ್ರೌಂಡ್ ಮಾಡಿದ ಕಾಫೀ ಬೀಜಗಳದ್ದೇ ಒಂದು ವಿಶಿಷ್ಟ ಕಥೆ. ಕಾಫಿ ಪುಡಿ ನೀರಿನೊಳಗೆ ಕುದ್ದ ಮೇಲೆ ಆ ನೀರನ್ನೇ ಬದಲಾಯಿಲಿಬಿಟ್ಟಿತು. ಈಗ ಅದು ನೀರಲ್ಲ ಕಾಫಿ, ಎಲ್ಲರಿಗೂ ಇಷ್ಟವಾದದ್ದು.
ಈಗ ಹೇಳು ಈ ಮೂರು ಸಂಗತಿಗಳಲ್ಲಿ ನೀನು ಯಾರು?”

