ನಾರಾಯಣ ಗುರುಗಳು ಬದುಕಿದ್ದಾಗಲೇ ಪ್ರಕಟವಾದ ಜೀವನ ಚರಿತ್ರೆಗಳಲ್ಲಿ ಎರಡನೆಯದು, ನಟರಾಜ ಗುರುಗಳು ಬರೆದ ‘The Way of the Guru’. ಒಂಬತ್ತು ಅಧ್ಯಾಯಗಳ ಈ ಪುಟ್ಟ ಕೃತಿಯನ್ನು ಕನ್ನಡಕ್ಕೆ ತರುತ್ತಿದ್ದಾರೆ ಎನ್.ಎ.ಎಂ.ಇಸ್ಮಾಯಿಲ್. ಈ ಸರಣಿಯ 7ನೇ ಅಧ್ಯಾಯದ 3ನೆಯ ಭಾಗ ಇಲ್ಲಿದೆ…
ಅಧ್ಯಾಯ 7.3
ಒಮ್ಮೆ ಸುಂದರಿಯಾದ ಯೂರೋಪಿಯನ್ ಯುವತಿಯೊಬ್ಬಳು ಉನ್ನತ ವಿದ್ಯಾಭ್ಯಾಸಕ್ಕಾಗಿ ಅವಳ ದೇಶಕ್ಕೆ ಹೋದ ಭಾರತೀಯ ಯುವಕನನ್ನು ಪ್ರೀತಿಸಿ ಕೇರಳಕ್ಕೆ ಬಂದಿಳಿದಳು. ಇಬ್ಬರೂ ಭೇಟಿಯಾದದ್ದು ಯೂರೋಪಿನಲ್ಲಿ. ಆ ಗೆಳೆತನ ಗಾಢವಾದ ಅನುರಾಗವಾಗಿ ಬದಲಾದದ್ದು ಅಲ್ಲಿಯೇ. ಆ ಯುವತಿಯಂತೂ ತನ್ನ ಮಾತಿಗೆ ಬದ್ಧಳಾಗಿ ಪ್ರಿಯತಮನನ್ನು ಪಡೆಯಲು ಕಡಲು ದಾಟಿ ಬಂದಿದ್ದಳು. ಪ್ರತಿಷ್ಠಿತ ಕುಟುಂಬಕ್ಕೆ ಸೇರಿದ ಯುವಕನ ತಂದೆಯ ಸಮಸ್ಯೆ ಬೇರೆಯೇ. ವಿದೇಶದಿಂದ ಆಮದಾಗಿ ಬಂದಿದ್ದ ಈ ವಧುವನ್ನು ಮದುವೆ ಮಗನಿಗೆ ಮದುವೆ ಮಾಡಿದರೆ ಕುಟುಂಬ ಪಾಲಿಸಿಕೊಂಡ ಬಂದ ಸಂಪ್ರದಾಯಗಳ ಗತಿ ಏನು ಎಂಬ ಭಯ ಆ ತಂದೆಗೆ. ಹಲವು ರಾತ್ರಿಗಳ ಕಾಲ ನಿದ್ದೆಗೆಟ್ಟರೂ ಸಮಸ್ಯೆಗೆ ಅವರಿಗೆ ಪರಿಹಾರ ಹೊಳೆಯಲಿಲ್ಲ. ಕುಟುಂಬದೊಳಗಿನ ವಾತಾವರಣ ಉದ್ವಿಗ್ನಗೊಂಡಿತು. ಈ ಸಂಕರದಿಂದ ನಮ್ಮ ಕುಟುಂಬ ಶಾಶ್ವತವಾಗಿ ಸಂಬಂಧಿಕರ ಮತ್ತು ಸಮಾಜದ ಬಹಿಷ್ಕಾರವನ್ನು ಅನುಭವಿಸಬೇಕೇ? ಊರಿನ ಮೂಲೆ ಮೂಲೆಗಳಲ್ಲಿ ಈ ವಿಚಾರದಲ್ಲಿ ಚರ್ಚೆಗಳು ನಡೆದವು. ಎಲ್ಲಾ ಬಗೆಯ ಅಪಶಕುನಗಳನ್ನು ಊಹಿಸಿಕೊಳ್ಳಲಾಯಿತು. ಆದರೆ ಪರಿಹಾರ ಮಾತ್ರ ಯಾರಿಂದಲೂ ಸಿಗಲಿಲ್ಲ.
ಅಂತಿಮವಾಗಿ ಆ ತಂದೆ ಗುರುಗಳನ್ನು ಭೇಟಿಯಾಗಿ ಸಲಹೆಯನ್ನು ಯಾಚಿಸಿದರು. ಗುರುಗಳಿಗೆ ಈ ಮದುವೆಯಲ್ಲಿ ಯಾವ ತಪ್ಪೂ ಕಾಣಿಸಲಿಲ್ಲ. ಮದುವೆ ಆಶ್ರಮದಲ್ಲೇ ನಡೆಯಲಿ ಎಂದರು. ಕುಟುಂಬದ ಜೊತೆ ಸಾರ್ವಜನಿಕರಿಗೂ ಮದುವೆಗೆ ಆಹ್ವಾನ ನೀಡಲಾಯಿತು. ವಿಶ್ವವಿದ್ಯಾಲಯದ ಪ್ರೊಫೆಸರ್ ಆಗಿದ್ದ ವರನ ಜೊತೆಗೆ ಆ ಧೀರ ಯೂರೋಪಿಯನ್ ಯುವತಿ ಸೀರೆಯುಟ್ಟು ಮಂಟಪವೇರಿದಳು. ಆಶ್ರಮದ ಮಾವಿನ ಮರದಡಿಯಲ್ಲಿ ನಿರ್ಮಿಸಲಾಗಿದ್ದ ಮಂಟಪಕ್ಕೆ ಮಲ್ಲಿಗೆಯ ದಂಡೆಗಳ ಅಲಂಕಾರವಿತ್ತು. ಎಲ್ಲಾ ಧರ್ಮ ಜಾತಿಗಳಿಗೆ ಸೇರಿದ್ದ ಸಾವಿರಾರು ಜನರ ಸಮ್ಮುಖದಲ್ಲಿ ಸರಳ ಔಪಚಾರಿಕತೆಗಳ ಮೂಲಕ ಗುರುಗಳೇ ವಿವಾಹವನ್ನು ಅಧಿಕೃತಗೊಳಿಸಿ ಘೋಷಿಸಿದರು. ವಧುವಿನ ಕಡೆಯ ಸಂಬಂಧಿಕರಾರೂ ಇಲ್ಲದೇ ಇದ್ದುದರಿಂದ ಸಭೆಯಲ್ಲಿದ್ದ ಇಂಗ್ಲೆಂಡಿಗರೊಬ್ಬರನ್ನು ವೇದಿಕೆಗೆ ಆಹ್ವಾನಿಸಿದ ಗುರುಗಳು ಅವರಿಂದಲೇ ವಧುವಿನ ಪರವಾಗಿ ನಾಲ್ಕು ಮಾತುಗಳನ್ನಾಡುವಂತೆ ಕೇಳಿಕೊಂಡರು. ಪರಸ್ಪರ ವಿರೋಧಿಗಳಂತಿದ್ದ ಸಾಮಾಜಿಕ ಮತ್ತು ಧಾರ್ಮಿಕ ಹಿನ್ನೆಲೆಯವರು ಈ ಸಮಾರಂಭದಲ್ಲಿ ಸಂತೋಷದಿಂದ ಭಾಗವಹಿಸಿ ಒಟ್ಟಿಗೆ ಔತಣವುಂಡರು. ಅನಾಹುತದ ಮಳೆ ಸುರಿಸುವವೆಂದು ಭಾವಿಸಲಾಗಿದ್ದ ಮೋಡಗಳು ಹರ್ಷ ವರ್ಷಕ್ಕೆ ಕಾರಣವಾದವು. ಆಶ್ರಮದಿಂದ ಹೊರಡುವಾಗ ಎಲ್ಲರ ಹೃದಯ ಸಂತೋಷದಿಂದ ತುಂಬಿತ್ತು. ಗುರುಗಳು ಪ್ರತಿನಿಧಿಸುತ್ತಿದ್ದ ತತ್ವ ಮತ್ತೊಮ್ಮೆ ಸದ್ದಿಲ್ಲದೆ ಗೆದ್ದಿತ್ತು. ಇದು ಇಂಥ ಅನೇಕ ಗೆಲುವುಗಳಲ್ಲಿ ಒಂದು ಮಾತ್ರ. ಇಂಥ ಘಟನೆಗಳು ಆಶ್ರಮದಲ್ಲಿ ಪ್ರತೀವಾರವೂ ನಿಯತವಾಗಿ ಎಂಬಂತೆ ನಡೆಯುತ್ತಿದ್ದವು.
ಈ ನಡುವೆ ಯುವ ಉತ್ಸಾಹಿಗಳು ಸ್ಥಾಪಿತ ಹಿತಾಸಕ್ತಿಗಳು ಮತ್ತು ಸಂಪ್ರದಾಯವಾದಿಗಳ ವಿರುದ್ಧ ದೊಡ್ಡದೊಂದು ಸಂಘರ್ಷಕ್ಕೆ ಸಿದ್ಧರಾಗುತ್ತಿದ್ದರು. ಈ ಸಂಘರ್ಷಕ್ಕೆ ಬೇಕಾದ ಒತ್ತಡ ಬಹು ಹಿಂದೆಯೇ ಸೃಷ್ಟಿಯಾಗಿತ್ತು. ಪರಿಣಾಮವಾಗಿ ಸಿದ್ಧತೆಗಳು ಬಹುಕಾಲದಿಂದ ಭೂಗತವಾಗಿ ನಡೆಯುತ್ತಿತ್ತು. ಈ ಸಂಘರ್ಷವೀಗ ವೈಕಂ ಸತ್ಯಾಗ್ರಹ ಎಂದು ಪ್ರಸಿದ್ಧವಾಗಿದೆ. ಈ ಆಂದೋಲನದ ಮೂಲಕ ಗುರುಗಳ ಪ್ರಯತ್ನಗಳು ಗಾಂಧೀಜಿಯವರ ತನಕ ತಲುಪಿದವು. ಈ ವಿಚಾರದಲ್ಲಿ ಗುರುಗಳನ ನಿಲುವೇನೆಂದು ನನಗೆ ಸ್ಪಷ್ಟವಾಗಲಿಲ್ಲ ಎಂದು ‘ಯಂಗ್ ಇಂಡಿಯಾ’ದಲ್ಲಿ ಗಾಂಧೀಜಿ ಬರೆದಿದ್ದರು. ಇಂಥದ್ದೊಂದು ಅನಿಸಿಕೆಗೆ ಕಾರಣವಾದ ಅಂಶಗಳು ಮತ್ತು ಬೆಳವಣಿಗೆಗಳನ್ನಿಲ್ಲಿ ಸಂಕ್ಷಿಪ್ತವಾಗಿ ವಿವರಿಸುವುದು ಅಗತ್ಯ ಎನಿಸುತ್ತದೆ.
ಧಾರ್ಮಿಕ ಸಂಸ್ಥೆಗಳು ನ್ಯಾಯ ಮತ್ತು ಸದಾಚಾರದ ಜೀವಂತ ಉದಾಹರಣೆಗಳಾದ ಪವಿತ್ರ ತಾಣಗಳಾಬೇಕಿತ್ತು. ದುರದೃಷ್ಟವಶಾತ್ ಪ್ರಪಂಚದ ಹಲವೆಡೆಗಳಂತೆಯೇ ಭಾರತದಲ್ಲಿಯೂ ಇವು ಅದಃಪತನಕ್ಕೆ ಒಳಗಾಗಿದ್ದವು. ದೇವಾಲಯಗಳ ಗೋಡೆಗಳು ಸ್ಥಾಪಿತ ಹಿತಾಸಕ್ತಿಗಳನ್ನು ರಕ್ಷಿಸುವ ಕೋಟೆಗಳಾಗಿದ್ದವು. ಜನರು ಪಾರಂಪರಿಕವಾಗಿ ಪಾಲಿಸುತ್ತಾ ಬಂದಿದ್ದ ಆಸ್ತಿಕತೆ ಮತ್ತು ದೈವಭಕ್ತಿಯನ್ನು ಬಳಸಿಕೊಂಡೇ ಅವರನ್ನು ಶೋಷಿಸುವ ಅಲ್ಪಸಂಖ್ಯಾತ ವರ್ಗವೊಂದಿತ್ತು. ಸಾರ್ವಜನಿಕರು ನೀಡುವ ಕಾಣಿಕೆಗಳೆಲ್ಲವೂ ಕಾನೂನು ಬಾಹಿರ ಮಾರ್ಗಗಳಲ್ಲಿ ಹೊರಗೆ ಹೋಗುತ್ತಿತ್ತು. ತಮ್ಮ ಪಾವಿತ್ರ್ಯವನ್ನು ಘೋಷಿಸಿಕೊಳ್ಳಲಾಗದ ಜಾತಿಗಳವರು ತಮ್ಮದೇ ಹಣದಲ್ಲಿ ನಡೆಯುತ್ತಿರುವ ದೇಗುಲಗಳ ಹೊರಗೆ ಕಾಯುತ್ತಿರುವಾಗ ಹೊಟ್ಟೆ ತುಂಬಿದವರಿಗೆ ಒಳಗೆ ವಿಶೇಷ ಪಂಕ್ತಿಯಲ್ಲಿ ಊಟ ಬಡಿಸಲಾಗುತ್ತಿತ್ತು. ಈ ಬಗೆಯ ನೀತಿಗೆಟ್ಟ ವರ್ತನೆ ಮತ್ತು ಕೊಳಕುತನಗಳು ಸಾಂಕ್ರಾಮಿಕದಂತೆ ಹರಡಿತ್ತು. ವಾಸ್ತವವನ್ನು ಅಡಗಿಸಿಟ್ಟು ಸ್ವಾರ್ಥವನ್ನು ಪೋಷಿಸಲು ಕಟ್ಟುಕತೆ ಮತ್ತು ಪುರಾಣಗಳನ್ನು ಚಾತುರ್ಯದಿಂದ ಹೆಣೆದಿದ್ದರು. ಸಾರ್ವಜನಿಕ ಸಂಸ್ಥೆಗಳಲ್ಲಿ ಸಮಾನ ಪಾಲು ಪಡೆಯುವ ಹಕ್ಕಿನ ಮಾತನ್ನು ಆಡಲು ಸಾಧ್ಯವೇ ಇರಲಿಲ್ಲ. ಬಹುಮುಖ್ಯವಾದ ಸಾರ್ವಜನಿಕ ರಸ್ತೆಗಳಲ್ಲೂ ಬಹುಜನರ ಸಂಚಾರಕ್ಕೆ ನಿರ್ಬಂಧವಿತ್ತು.
ರಾಷ್ಟ್ರೀಯ ಚಳವಳಿಯ ಆರಂಭದೊಂದಿಗೆ ಜನರಲ್ಲಿ ತಮ್ಮ ಹಕ್ಕುಗಳ ಬಗ್ಗೆ ಅರಿವು ಮೂಡಲಾರಂಭಿಸಿತ್ತು. ರಾಷ್ಟ್ರವೂ ತನ್ನ ಅಂತಃಸ್ಸಾಕ್ಷಿಯನ್ನು ಶೋಧಿಸಲಾರಂಭಿಸಿತ್ತು. ಜಾತಿಯ ಪ್ರಶ್ನೆ ರಾಷ್ಟ್ರೀಯ ಪ್ರಜ್ಞೆಯನ್ನು ಚುಚ್ಚುತ್ತಿದ್ದ ಸಂಗತಿಗಳಲ್ಲೇ ಮುಖ್ಯವಾದುದಾಗಿತ್ತು. ನಿರ್ದಿಷ್ಟ ಜಾತಿಯಲ್ಲಿ ಹುಟ್ಟಿದ್ದಕ್ಕಾಗಿ ಕೆಲವರಿಗೆ ದೊರೆಯುತ್ತಿದ್ದ ಸವಲತ್ತುಗಳನ್ನು ಜನರು ತಮ್ಮ ಸಾಮಾಜಿಕ ಮತ್ತು ಧಾರ್ಮಿಕ ಕರ್ತವ್ಯವೆಂಬಂತೆ ಒಪ್ಪಿಕೊಂಡಿದ್ದರು. ಜಾತಿ ಮೇಲರಿಮೆ ಮತ್ತು ಧಾರ್ಮಿಕ ಆಚರಣೆಗಳು ಪರಸ್ಪರ ರಕ್ಷಿಸುತ್ತಿರುವುದು ಜನರ ಮಟ್ಟಿಗೆ ಸಹಜ ವಿದ್ಯಮಾನವಾಗಿತ್ತು. ಬಹುತೇಕರು ಈ ಎರಡನ್ನೂ ಒಂದೇ ಎಂದು ಭಾವಿಸಿದ್ದರು. ಬಹುಕಾಲದಿಂದ ಇದು ನಡೆದು ಬಂದದ್ದರಿಂದ ಜಾತಿ ಮೇಲರಿಮೆ ಮತ್ತು ಧಾರ್ಮಿಕ ಆಚರಣೆಗಳನ್ನು ಬೇರ್ಪಡಿಸಿ ನೋಡುವುದು ಅವರಿಗೆ ಅಸಾಧ್ಯವಾಗಿತ್ತು. ಸಾಲದ್ದಕ್ಕೆ ಈ ಅನಾಚಾರವನ್ನು ‘ಧರ್ಮ’ (ಕರ್ತವ್ಯ) ಎಂಬ ಕಲ್ಪನೆ ಹುಟ್ಟಿಸುವ ‘ವರ್ಣಾಶ್ರಮ ಧರ್ಮ’ ಎಂಬ ಹೆಸರಿನಿಂದ ಕರೆಯಲಾಗುತ್ತಿತ್ತು. ಅನುವಂಶೀಯವಾಗಿ ಪೌರೋಹಿತ್ಯವನ್ನು ಮಾಡಿಕೊಂಡು ಬಂದವರು ಈ ‘ಧರ್ಮ’ ಯಾವುದು ಎಂದು ನಿರ್ಧರಿಸುವ ಅಧಿಕಾರವನ್ನು ತಮ್ಮಲ್ಲಿ ಇಟ್ಟುಕೊಂಡಿದ್ದರು. ಅವರು ತಮಗೆ ತೋಚಿದಾಗ ತಮಗಿಷ್ಟ ಬಂದಂತೆ ಈ ‘ಧರ್ಮ’ವನ್ನು ನಿರ್ಧರಿಸಿ ವ್ಯಾಖ್ಯಾನಿಸುತ್ತಿದ್ದದ್ದು ಮತ್ತೂ ಶೋಚನೀಯ ಸಂಗತಿ. ನ್ಯಾಯನಿಷ್ಠೆಯಿಲ್ಲದ ಯಾವ ತರ್ಕಕ್ಕೂ ನಿಲುಕದ ಯಾಜಮಾನ್ಯವೊಂದು ಯಾರಿಂದಲೂ ಪ್ರಶ್ನೆಗಳೊಳಗಾಗದೆ ಶತಮಾನಗಳ ಕಾಲ ಉಳಿದುಕೊಂಡು ಬಂತು.
ಭಾರತದ ಸಮಾಜ ಸುಧಾರಕರಲ್ಲಿ ಮೊದಲಿಗರಾದ ದಯಾನಂದ[ಸರಸ್ವತಿ], ಕೇಶವಚಂದ್ರ[ಸೇನ್], [ಸ್ವಾಮಿ] ವಿವೇಕಾನಂದ ಮುಂತಾದವರು ಜಾತಿ ತಾರತಮ್ಯದಿಂದಾಗುವ ಅನ್ಯಾಯದ ವಿರುದ್ಧ ತಮ್ಮದೇ ಆದ ರೀತಿಯಲ್ಲಿ ಪ್ರತಿಭಟಿಸಿದ್ದರು. ಆದರೆ ಈ ಹೋರಾಟದಲ್ಲಿ ಇಡೀ ರಾಷ್ಟ್ರವೇ ತೊಡಗಿಸಿಕೊಳ್ಳುವಂತೆ ಪ್ರೇರೇಪಿಸಿದ್ದು ಮಹಾತ್ಮಾ ಗಾಂಧಿಯವರ ಸಾಧನೆ ಎಂದೇ ಹೇಳಬೇಕಾಗುತ್ತದೆ. ಅಸ್ಪೃಶ್ಯತೆಯ ನಿವಾರಣೆಯನ್ನು ರಾಷ್ಟ್ರೀಯ ಕಾರ್ಯಕ್ರಮದ ಭಾಗವಾಗಿಸುವ ಮೂಲಕ ಅವರು ರಾಷ್ಟ್ರದ ಅಂತಃಸ್ಸಾಕ್ಷಿಯ ಶುದ್ಧೀಕರಣಕ್ಕೆ ಪ್ರಯತ್ನಿಸಿದರು. ಜಾತಿ ತಾರತಮ್ಯವನ್ನು ಮಹಾತ್ಮಾ ಗಾಂಧಿ ನೋಡುತ್ತಿದ್ದದ್ದು ಅವರಂದು ಸಕ್ರಿಯರಾಗಿದ್ದ ಅಖಿಲ ಭಾರತ ರಾಜಕಾರಣದ ದೃಷ್ಟಿಯಲ್ಲಿ ಎಂಬ ಅಂಶವನ್ನೂ ನಾವು ನೆನಪಿಟ್ಟುಕೊಳ್ಳಬೇಕಾಗುತ್ತದೆ.
ಗುರುಗಳ ಕೆಲವು ಯುವ ಅನುಯಾಯಿಗಳು ಫಲಿತಾಂಶಗಳಿಗಾಗಿ ಕಾತುರರಾಗಿದ್ದರು. ಕೆಲಕಾಲದ ಹಿಂದೆಯೇ ಹಿಂದೂ ದೇವಾಲಯಗಳು ಎಲ್ಲಾ ಜಾತಿ ಜನಾಂಗಗಳಿಗೂ ಮುಕ್ತವಾಗಿರಬೇಕು ಎಂಬ ಆಂದೋಲನವೊಂದನ್ನು ಅವರು ಆರಂಭಿಸಿದ್ದರು. ಈ ಯುವಕರು ತಮ್ಮ ಹೋರಾಟವನ್ನು ಮಹಾತ್ಮಾ ಗಾಂಧಿ ಮತ್ತು ಕಾಂಗ್ರೆಸ್‌ನ ಪ್ರಯತ್ನಗಳ ಜೊತೆ ಸಮೀಕರಿಸಿಕೊಂಡು ಮಹಾತ್ಮರನ್ನು ಭೇಟಿಯಾಗಿ ಸಮಸ್ಯೆಯನ್ನು ವಿವರಿಸಿದರು. ಗಾಂಧೀಜಿ ತಮ್ಮ ಆವಿಷ್ಕಾರವಾಗಿದ್ದ ‘ಸತ್ಯಾಗ್ರಹ’ ಮಾರ್ಗವನ್ನು ಈ ಹೋರಾಟಕ್ಕೆ ಬಳಸುವಂತೆ ಸಲಹೆ ಮಾಡಿದರು. ತಮ್ಮ ಜೀವನಾನುಭವಗಳ ಮೂಲಕ ಕಂಡುಕೊಂಡಿದ್ದ ತಾತ್ವಿಕತೆ ಮತ್ತು ನೈತಿಕ ಮೌಲ್ಯಗಳನ್ನು ಒಳಗೊಂಡು ರೂಪಿಸಿದ್ದ ‘ಸಾತ್ವಿಕ ಪ್ರತಿಭಟನೆ’ಯ (Passive ressistance) ಮಾರ್ಗವನ್ನು ಗಾಂಧೀಜಿ ‘ಸತ್ಯಾಗ್ರಹ’ ಎಂದು ಕರೆಯುತ್ತಿದ್ದರು. ಇದನ್ನವರು ದಕ್ಷಿಣ ಆಫ್ರಿಕಾ ಮತ್ತು ಭಾರತಗಳೆರಡರಲ್ಲೂ ಬಳಸಿದ್ದರು. ‘ಆತ್ಮಶಕ್ತಿ’ಯಂಥ ಭಾವನೆಗಳ ಮೇಲೆ ಪರಿಣಾಮ ಬೀರುವ ಆಯುಧಗಳನ್ನು ಬಳಸಿ ಹೋರಾಡುವುದು ಈ ಮಾರ್ಗದ ವಿಶೇಷತೆ. ಆದರೆ ಸತ್ಯಾಗ್ರಹ ಎಂದರೆ ಏನೆಂಬುದನ್ನು ವಿವರಿಸುವಲ್ಲಿ ಗಾಂಧೀಜಿಯ ಅತ್ಯಂತ ಹತ್ತಿರದ ಅನುಯಾಯಿಗಳೂ ಕೂಡಾ ಯಶಸ್ವಿಯಾಗಿಲ್ಲ ಎಂಬುದು ವಾಸ್ತವ. ಹಲವು ಪ್ರಯತ್ನಗಳು ಮತ್ತು ವೈಫಲ್ಯಗಳ ಅನುಭವದಲ್ಲಿ ಗಾಂಧೀಜಿಯವರು ರೂಪಿಸಿದ್ದ ಒಂದು ಸಹನಶೀಲ ಹೋರಾಟದ ಮಾದರಿಯಾಗಿತ್ತು ‘ಸತ್ಯಾಗ್ರಹ.’
(ಮುಂದುವರಿಯುವುದು…)
ಹಿಂದಿನ ಭಾಗ ಇಲ್ಲಿ ನೋಡಿ: https://aralimara.com/2024/08/16/guru-58/


[…] ಭಾಗ ಇಲ್ಲಿ ಓದಿ: https://aralimara.com/2024/08/17/guru-59/ […]
LikeLike