ಕೆಲವು ಸಲ ದೊಡ್ಡ ದೊಡ್ಡ ಚಿಂತನೆ – ತರ್ಕಗಳಿಂದ ಸಿಗದ ಪರಿಹಾರ ಸಾಮಾನ್ಯ ಜ್ಞಾನದಿಂದ ಸಿಕ್ಕುಬಿಡುತ್ತದೆ. ಯಾವುದೇ ಕೆಲಸವಾದರೂ ಸರಿ, ಕಾಮನ್ ಸೆನ್ಸ್ ಇದ್ದಲ್ಲಿ ನಿರ್ವಹಣೆ ಸುಲಭ । ಚಿದಂಬರ ನರೇಂದ್ರ
ಕೆಲವು ಸಲ ಪ್ಯಾಕ್ ನಲ್ಲಿ ಸಾಬೂನೇ ಇರುವುದಿಲ್ಲ ಎಂದು ಒಂದು ಸಾಬೂನು ಕಂಪನಿಗೆ ಮೇಲಿಂದ ಮೇಲೆ ಬಳಕೆದಾರರಿಂದ ದೂರುಗಳು ಬರತೊಡಗಿದವು. ಈ ಸಮಸ್ಯೆಯನ್ನು ತಪ್ಪಿಸಬೇಕೆಂದು ಕಂಪನಿಯ ಹಿರಿಯ ಇಂಜಿನಿಯರ್ ಗಳೆಲ್ಲ ಸೇರಿ ಹತ್ತು ಲಕ್ಷದ ವೆಚ್ಚದಲ್ಲಿ ಒಂದು ವಿಶೇಷ ಸೆನ್ಸರ್ ತಯಾರಿಸಿದರು. ಈ ಸೆನ್ಸರ್ ಸಹಾಯದಿಂದ ಖಾಲಿ ಸಾಬೂನು ಪ್ಯಾಕೆಟ್ ಗಳು ಕಂಪನಿಯಿಂದ ಹೊರಗೆ ಹೋಗುವುದನ್ನು ತಪ್ಪಿಸಬೇಕು ಎನ್ನುವುದು ಅವರ ಯೋಜನೆಯಾಗಿತ್ತು. ಸ್ವಲ್ಪ ದಿನ ಎಲ್ಲ ಸರಿಯಾಗಿತ್ತು ಆದರೆ ಕೆಲದಿನಗಳ ನಂತರ ಮತ್ತೆ ದೂರುಗಳು ಬರಲಾರಂಭಿಸಿದವು.
ಈ ಸಲ ಕಂಪನಿಯ ಮಾಲಿಕ ತನ್ನ ಕಾರ್ಮಿಕರನ್ನೆಲ್ಲ ಕರೆಸಿ ಸಮಸ್ಯೆ ಹೇಳಿಕೊಂಡ. ಕಂಪನಿಯ ಕೆಲಸಗಾರನೊಬ್ಬ ಈ ಸಮಸ್ಯೆಯನ್ನು ತಪ್ಪಿಸಲು ಒಂದು ಅತೀ ಸುಲಭದ ಸಲಹೆ ಕೊಟ್ಟ. ಅವನ ಸಲಹೆಯ ಪ್ರಕಾರ ಸಾಬೂನು ಪ್ಯಾಕೆಟುಗಳು ಹಾಯ್ದು ಹೋಗುವ ಬೆಲ್ಟ್ ಪಕ್ಕ ಜೋರಾಗಿ ತಿರುಗುತ್ತಿರುವ ಒಂದು ಫ್ಯಾನ್ ಇಡಲಾಯಿತು. ಸಾಬೂನು ಇಲ್ಲದ ಖಾಲಿ ಪ್ಯಾಕೆಟ್ ಗಳು ಫ್ಯಾನ್ ಎದುರು ಬಂದಾಗ ಫ್ಯಾನ್ ಗಾಳಿಗೆ ಹಾರಿ ಹೋಗತೊಡಗಿದವು. ನಂತರ ಕಂಪನಿಗೆ ಖಾಲಿ ಪ್ಯಾಕೆಟ್ ಕುರಿತಾದ ದೂರುಗಳು ಎಂದೂ ಬರಲಿಲ್ಲ. ದೊಡ್ಡ ದೊಡ್ಡ ಇಂಜಿನಿಯರ್ ಗಳಿಂದ ಪರಿಹಾರವಾಗದ ಸಮಸ್ಯೆ ಒಬ್ಬ ಸಾಮಾನ್ಯ ಕಾರ್ಮಿಕನ ಕಾಮನ್ ಸೆನ್ಸ್ ನಿಂದಾಗಿ ಅತೀ ಕಡಿಮೆ ಖರ್ಚಿನಲ್ಲಿ ತಪ್ಪುವಂತಾಯಿತು .

