ಜಗತ್ತು ನಮ್ಮನ್ನು ಗುರುತಿಸದೇ ಇರಬಹುದು, ಆದರೆ ಜಗತ್ತಿಗೆ ಒಂದು ಕೊಂಚವಾದರೂ ನಾವು ನಮ್ಮ ಕೆಲಸದಿಂದಾಗಿ ಭರವಸೆಯನ್ನು ತುಂಬಬಲ್ಲೆವಾದರೆ ಅದು ಯಶಸ್ಸು… ~ ಸಂಗ್ರಹಾನುವಾದ। ಚಿದಂಬರ ನರೇಂದ್ರ
ಯಶಸ್ಸನ್ನು ಯಾವ ಮಾನದಂಡದಿಂದ ಅಳೆಯುತ್ತೀರಿ? ಯಶಸ್ಸಿನ ಅಳತೆ ಮತ್ತು ವ್ಯಾಖ್ಯಾನ ಪ್ರತಿಯೊಬ್ಬರಿಗೂ ಬೇರೆ ಬೇರೆ. ಕೆಲವರಿಗೆ ಅಪಾರ ಸಂಪತ್ತು ಗಳಿಸುವುದು ಯಶಸ್ಸಾದರೆ ಇನ್ನೂ ಕೆಲವರಿಗೆ ಪ್ರಸಿದ್ಧಿ ಯಶಸ್ಸಿನ ಮಾನದಂಡ. ಇದರಲ್ಲಿ ಸರಿ ತಪ್ಪು ಎನ್ನುವುದು ಏನೂ ಇಲ್ಲ ಏಕೆಂದರೆ ಪ್ರತಿಯೊಂದೂ ಅವರವರ ಮೌಲ್ಯ ಮತ್ತು ಜಗತ್ತಿನ ಕುರಿತಾದ ಅವರ ದೃಷ್ಟಿಕೋನದ ಮೇಲೆ ಅವಲಂಬಿತವಾಗಿರುತ್ತದೆ.
ಕೆಲವರಿಗೆ ನಿಜವಾದ ಯಶಸ್ಸು ಅವರು ಬದುಕನ್ನು ಹೇಗೆ ಬದುಕಿದರು ಎನ್ನುವುದರ ಮೇಲೆ ಡಿಪೆಂಡ್ ಆಗಿರುತ್ತದೆ. ಉದಾಹರಣೆಗೆ ಮದರ್ ತೆರೆಸಾ, ನಂಬಿಕೆಯ ಹೆಣ್ಣುಮಗಳು ಇನ್ನೊಬ್ಬರ ಒಳಿತನ್ನ ಆಕೆ ಎಲ್ಲಕ್ಕಿಂತ ಮುಖ್ಯ ಎಂದುಕೊಂಡಿದ್ದಳು ಮತ್ತು ಜಗತ್ತಿಗೆ ಕರುಣೆ ಮತ್ತು ಅಂತಃಕರಣದ ಮಾದರಿ ಎನ್ನುವಂತೆ ಬದುಕಿದಳು. ಆಕೆಯ ನೆನಪು ಇಂದಿನ ಎಲ್ಲ ಶ್ರೀಮಂತರಿಗಿಂತ, ಪ್ರಸಿದ್ಧ ವ್ಯಕ್ತಿಗಳಿಗಿಂತ ಹೆಚ್ಚುಕಾಲ ಬಾಳುವಂಥದು.
ಹಾಗಾದರೆ ಯಶಸ್ಸು ಎಂದರೇನು? “ನಮ್ಮ ಕಾರಣವಾಗಿ ಕೊನೆಪಕ್ಷ ಒಂದು ಜೀವಿಯ ಬದುಕು ಈ ಜಗತ್ತಿನಲ್ಲಿ ಸುಗಮವಾಗಿದೆಯಾದರೆ ಅದು ಯಶಸ್ಸು” ಅನ್ನುತ್ತಾನೆ ರಾಲ್ಫ್ ವಾಲ್ದೋ ಎಮರ್ಸನ್.
ಯಶಸ್ಸಿನ ಕುರಿತಾದ ಎಮರ್ಸನ್ ನ ಮಾತು ಬಹಳ ಮುಖ್ಯ. ಯಾವುದೇ ಅರ್ಥರಹಿತ ಸಂಗತಿಗಿಂತ ನಮ್ಮ ಮೌಲ್ಯಗಳಿಗಾಗಿ, ನಮ್ಮ ನೈತಿಕತೆಗಾಗಿ ನಾವು ಗೌರವಿಸಲ್ಪಡುವುದು ಒಳ್ಳೆಯದಲ್ಲವೆ? ಇನ್ನೊಬ್ಬರನ್ನು ಟೀಕೆ ಮಾಡುತ್ತ ಅವರನ್ನು ನಾಶ ಮಾಡುವುದಕ್ಕಿಂತ ಅವರಲ್ಲಿನ ಒಳ್ಳೆಯದನ್ನ, ಸಕಾರಾತ್ಮಕತೆಯನ್ನು ಪೋಷಿಸುತ್ತ ಬೆಳೆಸುವುದು ಒಳ್ಳೆಯದಲ್ಲವೆ?
ನಾವು ಈ ಜಗತ್ತನ್ನು ನಮ್ಮ ಯಾವುದೆ ಸಣ್ಣ ಕೆಲಸದಿಂದಾಗಿ ನಾವು ಇರುವುದಕ್ಕಿಂದ ಕೊಂಚ ಉತ್ತಮ ಜಾಗೆಯನ್ನಾಗಿ ಮಾಡಿ ಬಿಟ್ಟು ಹೋಗುವುದು ನಿಜವಾದ ಯಶಸ್ಸು ಅಲ್ಲವೆ? ಅಪಾರ ಹಣ ಗಳಿಸಿರುವ ವಾರೆನ್ ಬಫೆಟ್ ನ ಯಶಸ್ಸಿನಿಂದ, ಜಗತ್ತಿನಲ್ಲಿ ಸತ್ಯ, ಅಹಿಂಸೆ, ಸಮಾನತೆಗಾಗಿ ಹೋರಾಡಿದ ಗಾಂಧಿ – ಅಂಬೆಡ್ಕರ್ ಅಂಥವರ ಬದುಕು ಹೆಚ್ಚು ಯಶಸ್ವಿ ಅಲ್ಲವೆ?
ಜಗತ್ತು ನಮ್ಮನ್ನು ಗುರುತಿಸದೇ ಇರಬಹುದು, ಆದರೆ ಜಗತ್ತಿಗೆ ಒಂದು ಕೊಂಚವಾದರೂ ನಾವು ನಮ್ಮ ಕೆಲಸದಿಂದಾಗಿ ಭರವಸೆಯನ್ನು ತುಂಬಬಲ್ಲೆವಾದರೆ ಅದು ಯಶಸ್ಸು. ನಮ್ಮಿಂದ ಮಹಾ ಮಹಾ ಸಂಗತಿಗಳು ಸಾಧ್ಯವಾಗದೇ ಇರಬಹುದು ಆದರೆ ನಮಗೆ ಸಾಧ್ಯವಾಗುವಂಥ ಸಣ್ಣ ಸಣ್ಣ ಸಂಗತಿಗಳನ್ನೇ ನಾನು ಹೆಚ್ಚು ಪ್ರೀತಿಯಿಂದ ಹೆಚ್ಚು ಅಂತಃಕರಣದಿಂದ ಮಾಡುತ್ತ ಇನ್ನೊಂದು ಜೀವಿಗೆ ಒಂದು ದೀಪದಷ್ಟಾದರೂ ಬೆಳಕಾಗಬಲ್ಲೆವಾದರೆ ಅದು ಯಶಸ್ಸು.

