ಸೆಮೆಟಿಕ್ ಧರ್ಮಗಳ ಪ್ರಕಾರ ಅಜ್ರಾಯಿಲ್ ಸಾವಿನ ದೇವತೆ. ಅವನಿಗೆ ಆಯಾ ಪಟ್ಟ ಸಿಕ್ಕಿದ್ದು ಹೇಗೆ? ಕತೆ ಇಲ್ಲಿದೆ… | ಚೇತನಾ ತೀರ್ಥಹಳ್ಳಿ
“ಭೂಮಿಯಿಂದ ಒಂದು ಹಿಡಿ ಮಣ್ಣು ತಾ” ಭಗವಂತ ಗೇಬ್ರಿಯಲ್ಲನಿಗೆ ಆದೇಶ ನೀಡಿದ.
“ಕೊಡೋದಿಲ್ಲ ಹೋಗು” ಭೂಮಿ ಅವನನ್ನು ಮರಳಿ ಕಳಿಸಿತು. ಅದಕ್ಕೆ ಭಗವಂತ ಆದಮನನ್ನು ಸೃಷ್ಟಿ ಮಾಡೋದೇ ಬೇಡವಾಗಿತ್ತು!
ನಂತರ ಭಗವಂತ ಮೈಕೇಲನನ್ನು ಕಳಿಸಿದ.
ಭೂಮಿ ಮತ್ತೆ ನಿರಾಕರಿಸಿತು.
ಈ ಸಲ ಭಗವಂತ ಅಜ್ರಾಯೀಲನನ್ನು ಕಳಿಸಿದ.
ಕಿಲಾಡಿ ಅಜ್ರಾಯೀಲ್ ಭೂಮಿಯ ಜೊತೆ ಮಾತಿಗೆ ಶುರು ಹಚ್ಚಿಕೊಂಡ. ಮಾತು ಮಾತಲ್ಲೆ ಮೈಮರೆಸಿ ಭೂಮಿಯಿಂದ ಹಿಡಿ ಮಣ್ಣು ಕಸಿದೇಬಿಟ್ಟ!
ಭೂಮಿಗೆ ಸಿಟ್ಟೇ ಬಂತು. ಆದರೇನು ಮಾಡೋದು? ಮಾತಲ್ಲಿ ಮೈಮರೆತಿದ್ದು ತನ್ನದೇ ತಪ್ಪು.
“ಹೇಳಿದ ಕೆಲಸ ಮಾಡಿದ್ದಕ್ಕೆ ನಿನಗೆ ಬಹುಮಾನ ಉಂಟು. ಇನ್ನುಮೇಲಿಂದ ನೀನು ಸಾವಿನ ದೇವತೆ” ಭಗವಂತ ಅಜ್ರಾಯೀಲನ ಭುಜ ತಟ್ಟಿದ.
“ಅಯ್ಯೋ ಬೇಡ. ಜನ ನನ್ನನ್ನ ಕಂಡು ಹೆದರ್ತಾರೆ, ನನ್ನನ್ನ ದ್ವೇಷಿಸ್ತಾರೆ” ಅಜ್ರಾಯೀಲ್ ಅಂಗಲಾಚಿದ.
“ಚಿಂತೆ ಬೇಡ, ನಾನು ಕಾಯಿಲೆಗಳನ್ನೂ ಆಯುಧಗಳನ್ನೂ ಸೃಷ್ಟಿಸ್ತೀನಿ. ನರಳಾಟ ಮತ್ತು ಯುದ್ಧಗಳಿಂದ ಜನಕ್ಕೆ ಸತ್ತರೆ ಸಾಕು ಅನಿಸುತ್ತೆ, ಆಪಾದನೆ ಎಲ್ಲ ಅವುಗಳ ಮೇಲೇ ಹೋಗುತ್ತೆ. ನೀನು ನಿರಾಳವಾಗಿರು” ಭಗವಂತ ಭರವಸೆ ಕೊಟ್ಟ.

